ಮೇ 23 ಬಂದರೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡು ಬರೋಬ್ಬರಿ ಒಂದು ವರ್ಷವಾಗುತ್ತದೆ. ಈ ಸರ್ಕಾರದ ಇದುವರೆಗಿನ ಅವಧಿಯಲ್ಲಿ ಅತ್ಯಂತ ಹೆಚ್ಚು ಸುದ್ದಿಯಾಗಿದ್ದು ಎರಡು ಸಂಗತಿಗಳು: ಮೈತ್ರಿ ಉಳಿಯುತ್ತದೋ ಉರುಳುತ್ತದೋ ಮತ್ತು ರೈತರ ಸಾಲ ಮನ್ನಾ. ಇವೆರಡರಲ್ಲಿ ಮೊದಲ ಸಂಗತಿ ಆಳುವವರಿಗೆ ಮತ್ತು ಮುಖ್ಯವಾಹಿನಿ ಮಾಧ್ಯಮಗಳಿಗೆ ಎಷ್ಟು ಪ್ರಿಯ ಎಂದರೆ, ಸಾಲ ಮನ್ನಾದ ಅಸಲಿ ಚಿತ್ರಣಗಳು ಯಾರಿಗೂ ಗೊತ್ತಾಗಲೇ ಇಲ್ಲ!
ಹೆಚ್ಚೂಕಡಿಮೆ ಇದೇ ಅವಧಿಯಲ್ಲಿ (2018-19ರ ಆರ್ಥಿಕ ವರ್ಷದಲ್ಲಿ) 845 ಮಂದಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 551 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹ ಎಂದು ಪರಿಗಣಿಸಿರುವ ಸಮಿತಿ, ಪರಿಹಾರ ನೀಡಲು ಅರ್ಹವಲ್ಲವೆಂದು 158 ಪ್ರಕರಣಗಳನ್ನು ತಿರಸ್ಕರಿಸಿದೆ. ಇದುವರೆಗೂ 517 ಪ್ರಕರಣಗಳಲ್ಲಿ ಪರಿಹಾರ ವಿತರಿಸಿದ್ದು, ಇನ್ನೂ 136 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಇವೆಲ್ಲ ಸರ್ಕಾರದ್ದೇ ಅಂಕಿ-ಅಂಶಗಳು. ಅಂದರೆ, ದಾಖಲಾಗದ ಅಥವಾ ವರದಿಯಾಗದ ಪ್ರಕರಣಗಳು ಇನ್ನಷ್ಟು ಇರಬಹುದು ಎಂದೇ ಅರ್ಥ.
2018-19ರ ಅಂಕಿ-ಅಂಶಗಳ ಕುರಿತು ಚರ್ಚಿಸುವ ಮುನ್ನ ಒಮ್ಮೆ ಹಿಂದಕ್ಕೆ ತಿರುಗಿ ನೋಡುವ. 2013-14ರಲ್ಲಿ ದಾಖಲಾದ ರೈತರ ಆತ್ಮಹತ್ಯೆ ಪ್ರಕರಣಗಳು104. ಇನ್ನು, 2014-15ರಲ್ಲಿ 129, 2015-16ರಲ್ಲಿ 1,486, 2016-17ರಲ್ಲಿ 1,192, 2017-18ರಲ್ಲಿ 1,338 ರೈತರ ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ದಾಖಲೆಗಳಲ್ಲಿ ದಾಖಲಾಗಿವೆ. ಹಾಗೆಯೇ, ಈ ವರ್ಷ 845 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಸರ್ಕಾರಿ ದಾಖಲೆಗಳು. ಇಷ್ಟು ಅಂಕಿ-ಅಂಶವನ್ನು ನೋಡುವಾಗ ಮೇಲ್ನೋಟಕ್ಕೆ ಪಕ್ಕಾ ಆಗುವ ಪ್ರಮುಖ ಸಂಗತಿ ಎಂದರೆ, ರೈತರ ಸಾಲಗಳಿಗೂ ಮತ್ತು ರೈತರ ಆತ್ಮಹತ್ಯೆಗಳಿಗೂ ನೇರ ಸಂಬಂಧ ಇಲ್ಲ ಅಥವಾ ರೈತರ ಆತ್ಮಹತ್ಯೆಗಳಿಗೆ ಅವರು ಮಾಡಿದ ಸಾಲವೊಂದೇ ಕಾರಣವೂ ಅಲ್ಲ.
ಆದರೆ, ಸಾಲ ಕೂಡ ರೈತರು ಹೈರಾಣಾಗುವ ಬಹುದೊಡ್ಡ ಕಾರಣ ಎಂಬುದನ್ನು ಸ್ವತಃ ರೈತರು, ರೈತನಾಯಕರು, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರೂ ಒಪ್ಪುತ್ತಾರೆ. ಈ ಹಿನ್ನೆಲೆಯಲ್ಲಿ, ಸಾಲ ಮನ್ನಾ ಮಾಡಿದಾಗ ರೈತರ ತಾಪತ್ರಯ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಬೇಕಿತ್ತು, ಹಾಗೆ ಆಗಿದೆಯಾ ಎಂದು ನೋಡಿದರೆ ಅದಕ್ಕೂ ತೃಪ್ತಿಕರ ಉತ್ತರ ಸಿಗುವುದಿಲ್ಲ. ಹಾಗಾಗಿ ಎರಡು ತೀರ್ಮಾನಗಳಿಗೆ ಬರಬೇಕಾಗುತ್ತದೆ. ಒಂದು, ರೈತರ ಹೆಸರಿನಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಇರುವ ಸಾಲ ರೈತರು ಮಾಡಿದ್ದೇ ಅಲ್ಲ. ಎರಡು, ಸರ್ಕಾರ ಮಾಡಿದ ಸಾಲ ಮನ್ನಾ ಇನ್ನೂ ರೈತರನ್ನು ತಲುಪಿಲ್ಲ.
ರಾಜಕಾರಣಿಗಳ ಲಾಬಿ?

ಸಾಲ ಮನ್ನಾ ಇನ್ನೂ ಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಪ್ರತಿಪಕ್ಷ ಬಿಜೆಪಿಯ ಪ್ರಶ್ನೆಗಳಿಗೆ ಉತ್ತರಿಸುತ್ತ, ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಹೇಳಿದ್ದಾಗಿದೆ. ಇನ್ನು ಉಳಿದದ್ದು, ರೈತರ ಹೆಸರಿನಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಇರುವ ಸಾಲಗಳೆಲ್ಲ ನಿಜವಾಗಲೂ ರೈತರೇ ಮಾಡಿದ್ದೇ ಎಂಬ ಪ್ರಶ್ನೆ. ಸಹಕಾರಿ ಬ್ಯಾಂಕುಗಳೆಲ್ಲ ಸಾಲದಲ್ಲಿ ಮುಳುಗಿಹೋಗಿ, ವಹಿವಾಟುಗಳೆಲ್ಲ ಹಳಿತಪ್ಪಿ, ಸಿಕ್ಕಾಪಟ್ಟೆ ನಷ್ಟದಲ್ಲಿವೆ ಎಂದು ಲೆಕ್ಕ ತೋರಿಸುತ್ತ ಬರಲಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಂತೂ, ‘ಇದು ನಿತ್ಯದ ಸುದ್ದಿ’ ಎಂಬಂತೆ ಪಕ್ಕಕ್ಕೆ ಇಟ್ಟುಬಿಟ್ಟಿವೆ. ಆದರೆ, ಇದೇ ಸಹಕಾರಿ ಬ್ಯಾಂಕುಗಳ ಜಿಲ್ಲಾ ಮಟ್ಟದ ಗದ್ದುಗೆ ಹಿಡಿಯಲು ರಾಜಕಾರಣಿಗಳು ರಂಪಾಟ ಮಾಡುತ್ತಲೇ ಇದ್ದಾರೆ! ಇತ್ತೀಚೆಗೆ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವೇಳೆ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಪೈಪೋಟಿ ಇದಕ್ಕೆ ತಾಜಾ ಉದಾಹರಣೆ. ಈ ಬೆಳವಣಿಗೆಗಳ ಆಧಾರದಲ್ಲಿ ಸಾಲ ಮನ್ನಾದ ನೈಜ ಫಲಾನುಭವಿಗಳ ಬೆನ್ನು ಹತ್ತಿದರೆ ರೋಚಕ ಕತೆಗಳು ಬಯಲಿಗೆ ಬರಬಹುದು.
ಕಾಡುವ ಕೆಲವು ಪ್ರಶ್ನೆಗಳು
- ರೈತರ ಬಹುತೇಕ ಸಾಲ ಇರುವುದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಎಂಬ ಸತ್ಯ ಗೊತ್ತಿರುವಾಗ ಸರ್ಕಾರವು ಸಹಕಾರಿ ಬ್ಯಾಂಕುಗಳ ಸಾಲವನ್ನು ಮಾತ್ರವೇ ಆತುರದಲ್ಲಿ ಮನ್ನಾ ಮಾಡಿದ್ದು ಏಕೆ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನೇ ಹಂತಹಂತವಾಗಿ ಮನ್ನಾ ಮಾಡಬಹುದಿತ್ತಲ್ಲವೇ?
- ಸಹಕಾರ ಇಲಾಖೆಯಲ್ಲಿ ನಷ್ಟದಲ್ಲಿವೆ ಎಂದು ಪಟ್ಟಿ ಮಾಡಲಾದ ಸಹಕಾರಿ ಬ್ಯಾಂಕುಗಳಿಗೆ ಚುನಾವಣೆ ನಡೆಯುವಾಗ ರಾಜಕಾರಣಿಗಳು ಪ್ರತಿಷ್ಠೆಯ ಪೈಪೋಟಿ ನಡೆಸುವುದು ಏಕೆ?
- ಈಗಿನ ಸಾಲ ಮನ್ನಾ ಯೋಜನೆಯು ಅಂದಾಜು ಶೇ.75ರಷ್ಟು ರೈತರನ್ನು ಒಳಗೊಳ್ಳದೆ ಇರುವಾಗ, ಸರ್ಕಾರದ ಪಾಲಿಗೆ ಇದು ‘ರೈತರ ಕ್ಷೇಮಾಭಿವೃದ್ಧಿಯ ಅದ್ವಿತೀಯ ಘನಕಾರ್ಯ’ವಾಗಿದ್ದು ಹೇಗೆ?
- ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡುವ ಹೊರತಾಗಿ ಈ ವಿಷಯದಲ್ಲಿ ಸರ್ಕಾರ ಗಂಭೀರವಾಗಿ ಏನನ್ನಾದರೂ ಯೋಚಿಸಿದೆಯೇ?
ಸರ್ಕಾರದ ವೈಫಲ್ಯ
ಇನ್ನು, ಸದ್ಯದ ಸಾಲ ಮನ್ನಾ ಯೋಜನೆಯಿಂದ ರೈತರ ಆತ್ಮಹತ್ಯೆ ಕಡಿಮೆಯಾಗದು ಎಂಬುದು ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ. “ಈಗಿನ ಸಾಲ ಮನ್ನಾ ಶೇಕಡ ಇಪ್ಪತ್ತೈದರಷ್ಟು ರೈತರಿಗೂ ಅನ್ವಯವಾಗೋಲ್ಲ. ಏಕೆಂದರೆ, ರೈತರು ಹೆಚ್ಚಾಗಿ ಸಾಲ ಮಾಡಿರುವುದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಾಗೂ ಖಾಸಗಿ ವ್ಯಕ್ತಿಗಳ ಬಳಿ. ಬ್ಯಾಂಕಿನವರಾದರೂ ಪರವಾಗಿಲ್ಲ, ಆದರೆ ಸಾಲ ಕಟ್ಟದಿದ್ದರೆ ಖಾಸಗಿಯವರು ಹಾಕುವ ಒತ್ತಡ ತಾಳಲಾಗದು. ಇದು ರೈತರನ್ನು ಸಾವಿಗೆ ದೂಡುತ್ತೆ,” ಎಂಬುದು ಕೋಡಿಹಳ್ಳಿ ಅವರ ವಿವರಣೆ. “ಸಾಲ ಕೊಡುವ ಜೊತೆಗೆ ರೈತರಿಗೆ ನ್ಯಾಯಯುತ ಆದಾಯ ಕೂಡ ಸಿಕ್ಕರೆ ಆತ್ಮಹತ್ಯೆ ತಪ್ಪಿಸಬಹುದು. ಅದನ್ನು ಸರ್ಕಾರ ಮಾಡುತ್ತಿಲ್ಲ. ಹಾಗಾಗಿಯೇ ರೈತರ ಆತ್ಮಹತ್ಯೆಗಳನ್ನು ತಹಬದಿಗೆ ತರಲು ಸಾಧ್ಯವಾಗಿಲ್ಲ,” ಎನ್ನುತ್ತಾರವರು.
ಹೊಗಳಿಕೆಯಿಂದ ಹೊಟ್ಟೆ ತುಂಬೋಲ್ಲ
“ಸರ್ಕಾರದ ಮಟ್ಟದಲ್ಲಿ ಕೃಷಿ ಎಂಬುದು ನಿರ್ಲಕ್ಷಿತ ವಿಷಯವಾಗಿ ತುಂಬಾ ಕಾಲವಾಗಿದೆ. ಅದೇ ರೀತಿಯಲ್ಲಿ ಕೃಷಿ ವಿಜ್ಞಾನ ಕೂಡ ನಿರ್ಲಕ್ಷಕ್ಕೆ ತುತ್ತಾಗಿದೆ. ‘ಅನ್ನದಾತ ದೇವರು’ ಮುಂತಾಗಿ ಎಲ್ಲರೂ ಬಾಯಿತುಂಬಾ ಹೊಗಳುತ್ತಾರೆಯೇ ವಿನಾ ಕೃಷಿ ಕ್ಷೇತ್ರವನ್ನು ವೈಜ್ಞಾನಿಕವಾಗಿ ಮೇಲೆತ್ತಲು ಕಾರ್ಯಯೋಜನೆಗಳನ್ನು ರೂಪಿಸುವ ಆಸಕ್ತಿ ಇಲ್ಲ. ರೈತರಿಗೆ ಮಾತಿನಲ್ಲಿ, ಭಾಷಣಗಳಲ್ಲಿ ಕೊಡುವ ಬೆಲೆ ಅವರು ಬೆಳೆದ ಬೆಳೆಗೆ ಸಿಕ್ಕಿದರೂ ಸಾಕು. ಆದಾಯದ ಕೊರತೆ ಜೊತೆಗೆ ಕೃಷಿಕರನ್ನು ದೈನೇಸಿ ಸ್ಥಿತಿಗೆ ದೂಡಿರುವ ಸಂಗತಿ ಕೂಡ ರೈತರ ಸ್ಥೈರ್ಯ ಕಡಿಮೆ ಆಗುವಂತೆ, ಹೊಸ ಪ್ರಯೋಗಗಳತ್ತ ಆಸಕ್ತಿ ಕುಂದುವಂತೆ ಮಾಡಿದೆ,” ಎನ್ನುತ್ತಾರೆ ವಿಜ್ಞಾನಿ ಚನ್ನೇಶ್ ಟಿ ಎಸ್.
ಆತ್ಮಹತ್ಯೆ ತಪ್ಪಿಸಬಹುದು

ಹಾಗಾದರೆ, ರಾಜಕಾರಣಿಗಳು ಅಥವಾ ಸರ್ಕಾರದ ಹಣಕಾಸು ನೆರವಿನ ಹೊರತಾಗಿ ರೈತರ ಆತ್ಮಹತ್ಯೆಯನ್ನು ತಹಬದಿಗೆ ತರಲು ಸಾಧ್ಯವೇ ಎಂಬ ಪ್ರಶ್ನೆಗೆ ಹೌದೆನ್ನುತ್ತದೆ ಭಾರತೀಯ ಮನೋವೈದ್ಯಕೀಯ ಸಂಘ. ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ದಾಖಲಾಗಿರುವ ಮಹಾರಾಷ್ಟ್ರದ ವಿದರ್ಭದಲ್ಲಿ ಈ ಸಂಘವು ನಡೆಸಿದ ಅಧ್ಯಯನ ಮತ್ತು ಕಾರ್ಯಾಗಾರಗಳಿಂದ ಇದು ಸಾಬೀತಾಗಿದೆ. ಸದ್ಯ, ಆ ಪ್ರದೇಶದಲ್ಲಿ ಆತ್ಮಹತ್ಯೆ ತಗ್ಗಿರುವುದನ್ನು ಗುರುತಿಸಲಾಗಿದೆ. ಹಾಗೆಯೇ, ಇದೇ ಸಂಘದ ದಕ್ಷಿಣ ವಲಯ ಕೂಡ ಮಂಡ್ಯದಲ್ಲಿ ಕೆಲವು ಜಾಗೃತಿ ಕಾರ್ಯಾಗಾರಗಳನ್ನು ನಡೆಸಿದೆ.
“ವಿದರ್ಭದಲ್ಲಿ ನಡೆಸಿದ ಅಧ್ಯಯನಗಳಲ್ಲಿ ಆತ್ಮಹತ್ಯೆಗೆ ಶರಣಾಗುವ ರೈತರಲ್ಲಿ ಬಹುಪಾಲು ಮಂದಿ ಸಣ್ಣ ರೈತರು ಮತ್ತು ಸಣ್ಣಪುಟ್ಟ ವಾಣಿಜ್ಯ ಬೆಳೆ ಬೆಳೆಯುವವರು ಎಂಬುದು ಗೊತ್ತಾಗಿದೆ. ಸಾಲ, ದೀರ್ಘಕಾಲೀನ ಅನಾರೋಗ್ಯ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು, ಇದೆಲ್ಲದರ ಒಟ್ಟಾರೆ ಪರಿಣಾಮವಾಗಿ ಉಂಟಾಗುವ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ. ಈ ಖಿನ್ನತೆಯ ಹಂತ ತಲುಪಿದಾಗ ಅವರನ್ನು ಅದರಿಂದ ಪಾರು ಮಾಡುವುದು ಹೇಗೆಂದು ಯುವಜನರಿಗೆ ಅರಿವು ಮೂಡಿಸುವ ಕೆಲಸವನ್ನು ಭಾರತೀಯ ಮನೋವೈದ್ಯಕೀಯ ಸಂಘ ಮಾಡುತ್ತಿದೆ. ಆದರೆ, ನಿಜ ಹೇಳಬೇಕೆಂದರೆ ರೈತರಿಗೆ ಸಾಲ ಮನ್ನಾದಂಥ ಯೋಜನೆಗಳಿಂದ ಏನೂ ಪ್ರಯೋಜನವಾಗದು. ಏಕೆಂದರೆ, ಆತ ಮತ್ತೆ ಬೆಳೆ ಬೆಳೆಯಬೇಕೆಂದರೆ ಮತ್ತೆ ಸಾಲ ಮಾಡಲೇಬೇಕಾಗುತ್ತದೆ. ಅದರ ಬದಲು, ಸರ್ಕಾರಗಳು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಲು ಪ್ರಯತ್ನಿಸಬೇಕು,” ಎಂಬುದು ಮನೋವೈದ್ಯರಾದ ಶುಭ್ರತಾ ಕೆ ಎಸ್ ಅವರ ಅಭಿಪ್ರಾಯ. ಕೃಷಿಕರು ನಿಜಕ್ಕೂ ಎಷ್ಟೊಂದು ಉತ್ಸಾಹಿಗಳಾಗಿರುತ್ತಾರೆ ಎಂಬುದಕ್ಕೆ ಅವರು ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ರೈತರು ಆಡಿದ ಈ ಮಾತುಗಳನ್ನು ಮೆಲುಕು ಹಾಕುತ್ತಾರೆ: “ಎರಡು ಕೆರೆ ತುಂಬಿಸಿಕೊಡಿ ಸಾಕು, ನಾವೇ ಸಾಲ ತೀರಿಸುತ್ತೇವೆ.”
ಒಟ್ಟಾರೆ, ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಲಾಗಿದೆ ಎಂಬುದು ಸರ್ಕಾರದ ಸಾಧನೆ ಎನಿಸಿಕೊಳ್ಳುವುದು ಆ ಯೋಜನೆ ಫಲಾನುಭವಿಗಳನ್ನು ತಲುಪಿದ ಮೇಲೆಯೇ. ಇನ್ನು, ನೈಜ ಫಲಾನುಭವಿಗಳು ರೈತರೋ ಅಥವಾ ರೈತರ ಹೆಸರಿನಲ್ಲಿ ಸ್ಥಳೀಯ ಪ್ರಭಾವಿಗಳು ಸಾಲ ಪಡೆದುಕೊಂಡಿದ್ದಾರೆಯೋ ಎಂಬ ಸತ್ಯ ಬಹಿರಂಗವಾದರೆ, ರೈತರಿಗೆ ಹೆಚ್ಚು ಅನುಕೂಲ ಆದೀತು. ಸರ್ಕಾರಕ್ಕೆ ನಿಜವಾಗಿಯೂ ರೈತರ ಸಾಲ ಮನ್ನಾ ಮಾಡಬೇಕಿದ್ದರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲಿ ಎಂಬ ಕೂಗಿನೆಡೆಗೆ ಗಮನ ಹರಿಸಲಿ. ಇದೆಲ್ಲ ಚರ್ಚೆಯ ನಡುವೆ, 2018-19ರ ಆರ್ಥಿಕ ವರ್ಷದಲ್ಲಿ 845 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಸಾಲ ಮನ್ನಾದಂಥ ನಾಟಕೀಯ ಯೋಜನೆಗಳನ್ನು ಬಿಟ್ಟು, ರೈತರಿಗೆ ನೀರಿನ ಮೂಲಗಳನ್ನು ಸರಿಪಡಿಸಿಕೊಡುವ, ಬೆಳೆಗಳಿಗೆ ಬೆಂಬಲ ಬೆಲೆ ದೊರಕಿಸುವ, ಮಾರುಕಟ್ಟೆಯನ್ನು ರೈತಸ್ನೇಹಿ ಮಾಡುವ ಕ್ರಮಗಳಿಗೆ ಮೊರೆಹೋಗಬೇಕಿದೆ.