ರಾಜಕೀಯ ಶಾಸ್ತ್ರದಲ್ಲಿ ಹಾರ್ಸ್ ಶೂ ಸಿದ್ಧಾಂತ ಎಂಬುದೊಂದಿದೆ. ಕುದುರೆ ಲಾಳ ಸಿದ್ಧಾಂತ ಎನ್ನಬಹುದೇನೋ. ಈ ಸಿದ್ಧಾಂತವನ್ನು ಸರಳವಾಗಿ ಹೇಳುವುದಾದರೆ ತೀವ್ರ ಎಡ ಪಂಥೀಯ ಮತ್ತು ತೀವ್ರ ಬಲ ಪಂಥೀಯ ವಿಚಾರಧಾರೆಗಳು ಸರಳ ರೇಖೆಯೊಂದರ ಎರಡು ವಿರುದ್ಧ ಬಿಂದುಗಳಲ್ಲ. ಬದಲಾಗಿ ಅವರೆಡು ಕುದುರೆ ಲಾಳದ ಎರಡು ತುಟ್ಟ ತುದಿಗಳು. ಅಂದರೆ ಉಗ್ರ ಬಲ ಪಂಥೀಯರು ಮತ್ತು ಎಡಪಂಥೀಯರು ವಿರುದ್ಧ ಸಾಗುತ್ತಿರುವುದಿಲ್ಲ. ಬದಲಾಗಿ ಪ್ರತ್ಯೇಕ ಬಿಂದುಗಳಾಗಿದ್ದರು, ಕುದುರೆನಾಳದ ಎರಡು ತುದಿಗಳಂತೆ ಪರಸ್ಪರ ತೀರಾ ಹತ್ತಿರವಾಗಿರುತ್ತಾರೆ. ಈ ಸಿದ್ಧಾಂತ ಒಂದಷ್ಟು ಟೀಕೆಗೆ ಒಳಗಾದ ಕಾರಣ ಈಗ ಹೆಚ್ಚು ಚಾಲ್ತಿಯಲ್ಲಿಲ್ಲ, ಆದರೆ, ಇತಿಹಾಸದ ಪುಟಗಳನ್ನು ತಿರುವಿದರೆ ಹಾಗು ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಇದು ಪ್ರತಿಪಾದಿಸುವ ಸಿದ್ಧಾಂತ ಹಲವು ನಿಟ್ಟಿನಲ್ಲಿ ನಿಜ ಎನಿಸಿ ಬಿಡುತ್ತದೆ.
ಇದು ಈಗ ನೆನಪಾಗಲು ಸಾಕಷ್ಚು ಕಾರಣಗಳಿವೆ. ದೇಶ ಚುನಾವಣೆಗೆ ಸಿದ್ಧವಾಗುತ್ತಿರುವಂತೆ ಎಡ ಮತ್ತು ಬಲಗಳ ಅಥವಾ ಬಲ ಮತ್ತು ಬಲ ವಿರೋಧಿ ಬಣಗಳ ನಡುವಣ ಯುದ್ಧ ತಾರಕಕ್ಕೇರಿದೆ. ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಬಲಪಂಥೀಯ ಹಿನ್ನೆಲೆಯ ಬಿಜೆಪಿ ಮತ್ತು ಹೇಗಾದರೋ ಬಿಜೆಪಿಯನ್ನು ಆಡಳಿತದಿಂದ ದೂರ ಇಡಬೇಕೆಂದು ಶ್ರಮಿಸುತ್ತಿರುವ ಇತರ ಪಕ್ಷಗಳ ನಡುವೆ ಸೈದ್ಧಾಂತಿಕವಾಗಿ ಸಾವಿರಾರು ವ್ಯತ್ಯಾಸಗಳಿರಬಹುದು. ಆದರೆ, ಅವುಗಳ ವರ್ತನೆಯಲ್ಲಿ. ಹಲವಾರು ಸಾಮ್ಯತೆಗಳನ್ನು
ಬಲಪಂಥೀಯರ ಫ್ಯಾಸಿಸ್ಟ್ ನಿಲುವುಗಳನ್ನು ವಿರೋಧಿಸಿ, ಮೂಲಭೂತವಾದದ ವಿರುದ್ಧ ಹೋರಾಡುತ್ತಿರುವ ಸಮೂಹವನ್ನು ಪ್ರಗತಿಪರ ಗುಂಪೆಂದು ಗುರುತಿಸಲಾಗುತ್ತಿದೆ. ಎಡ ಪಂಥೀಯ ವಿಚಾರಧಾರೆಗಳ ಬಗ್ಗೆ ಒಲವಿರುವ ಈ ಸಮುದಾಯ ಭಾರತದ ರಾಜಕೀಯ ಸನ್ನಿವೇಶದ ಮಟ್ಟಿಗೆ ಬಿಜೆಪಿ ವಿರೋಧಿಗಳೆಂದೇ ಗುರುತಿಸಲ್ಪಟ್ಟಿದೆ. ವ್ಯಕ್ತಿ ಸ್ವಾತಂತ್ರ್ಯ, ಮಹಿಳಾ ಪರ ನಿಲವು, ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸಮಾನತೆ ಮುಂತಾದ ವಿಷಯಗಳನ್ನು ಬೆಂಬಲಿಸುವ ಪ್ರಗತಿಪರರು ತಮ್ಮ ಪ್ರಗತಿಪರ ನಿಲುವುಗಳಿಂದಾಗಿಯೇ ಬಲಪಂಥೀಯರ ತೀವ್ರ ಟ್ರಾಲ್ ಗೆ, ಎಲ್ಲಾ ರೀತಿಯಲ್ಲೂ ಸಭ್ಯತೆಯ ಎಲ್ಲೆ ಮೀರಿದ ವಾಗ್ಧಾಳಿಗಳಿಗೆ ಗುರಿಯಾಗುತ್ತಲೇ ಇರುತ್ತಾರೆ. ಆದರೆ, ಸಿದ್ಧಾಂತಗಳ ನಡುವೆ ಅಜಗಜಾಂತರ ವ್ಯತ್ಯಾಸವಿರುವ ಪ್ರಗತಿಪರರು ಮತ್ತು ಬಲಪಂಥೀಯರು ಎಷ್ಟೋ ವೇಳೆ ಒಂದೇ ರೀತಿಯ ನಡವಳಿಕೆ ತೋರುವುದು ಮಾತ್ರ ಆಶ್ಚರ್ಯಕರ ಮತ್ತು ಆಘಾತಕಾರಿ ಸಂಗತಿ.
ತಮಗೆ ಬೇಕಾದ ಸಂದರ್ಭಗಳಲ್ಲಿ ಮಹಿಳೆ ಎಂದರೆ ದೇವತೆ ಎಂದು ಬಿಂಬಿಸುವ ಬಲಪಂಥೀಯರು ತಮ್ಮ ವಿಚಾರಗಳನ್ನು ಒಪ್ಪದ ಮಹಿಳೆಯರ ವಿರುದ್ಧ ಸಾಮಾಜಿಕ ಜಾಲಾತಾಣಗಳಲ್ಲಿ ಮಾಡುವ ಧಾಳಿ ಅಶ್ಲೀಲತೆಯ ಎಲ್ಲ ಗೆರೆಗಳನ್ನೂ ದಾಟಿರುತ್ತದೆ. ಸಂಸ್ಕೃತಿ ರಕ್ಷಕರ, ಅಸಂಸ್ಕೃತ ನಡವಳಿಕೆ ಅವರ ಬಗ್ಗೆ ಸಾಕಷ್ಚು ಹೇಳುವಂತೆಯೇ, ಮಹಿಳಾ ಪರರೆಂದು ಕರೆದುಕೊಳ್ಳುವ ಪ್ರಗತಿಪರರಲ್ಲೂ ಇಂತಹ ಪ್ರವೃತ್ತಿ ಆಗೀಗ ಹೊರಬರುತ್ತದೆ. ಹೀಗಾಗಿಯೇ, ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಮ್ಯ ಟ್ರಾಲ್ ಗೆ ಒಳಗಾದಷ್ಟೇ ಕೀಳುಮಟ್ಟದಲ್ಲಿ, ಬಿಜೆಪಿಯ ಶೋಭಾ ಕರಂದ್ಲಾಜೆ, ಸೃತಿ ಇರಾನಿ ಟ್ರಾಲ್ ಗೆ ಒಳಗಾಗುತ್ತಾರೆ. ಈ ಮಹಿಳಾ ವಿರೋಧಿ ಧೋರಣೆ ಇನ್ನೂ ಕೆಲವು ಕಡೆ ಬಿಡುಬೀಸಾಗಿ ಪ್ರಕಟಗೊಳ್ಳದಿದ್ದರೂ ಮುಸುಕು ಹೊದ್ದು, ಸೂಕ್ಷ್ಮವಾಗಿ ಹೊರಬರುತ್ತದೆ. ಹೆಣ್ಣಿಗೇನು ಗೊತ್ತು, ಹೆಣ್ಣಿಂದೇನು ಸಾಧ್ಯ ಎಂಬ ಲೇವಡಿಯ ಭಾವ, ಆಳವಾಗಿ ಬೇರು ಬಿಟ್ಟಿರುವ ಪುರುಷ ಪ್ರಧಾನ ವ್ಯವಸ್ಥೆ ಪ್ರಗತಿಪರರನ್ನೂ ಪೂರ್ತಿಯಾಗಿ ಬಿಟ್ಟಿಲ್ಲ ಎಂಬುದನ್ನು ಹೇಳುತ್ತದೆ.
ಪ್ರಜಾಪ್ರಭುತ್ವ ದೇಶದಲ್ಲಿ ರಾಜಕೀಯವಾಗಿ ಜಾಗೃತ ಸಮುದಾಯದ ಅಗತ್ಯ ತುಂಬಾ ಇದೆ. ಇಂತಹ ರಾಜಕೀಯ ಚರ್ಚೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಕೂಡ. ತಮ್ಮ ರಾಜಕೀಯ ತೊಡಗುವಿಕೆಯನ್ನು ಕೇವಲ ಮತ ಚಲಾವಣೆಗಷ್ಟೇ ಸೀಮಿತಗೊಳಿಸುವ ಅಗತ್ಯವಿಲ್ಲ ಮತ್ತು ಅದು ಅಪೇಕ್ಷಣೀಯವೂ ಅಲ್ಲ. ಸರ್ಕಾರವನ್ನು, ಜೊತೆಗೆ ಇತರ ರಾಜಕೀಯ ಪಕ್ಷಗಳನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಈ ಹಕ್ಕಿನ ವಿಷಯ ಬಂದಾಗ ಮತ್ತೆ ಎರಡೂ ಗುಂಪುಗಳು ಒಂದೇ ರೀತಿಯಲ್ಲಿ ವರ್ತಿಸುವುದನ್ನು ಕಾಣಬಹುದು.
ಪ್ರಕಾಶ್ ರೈ, ಕಮಲ್ ಹಾಸನ್, ನಾಸಿರುದ್ದೀನ್ ಶಾ ಸೇರಿದಂತೆ ಬಹಳಷ್ಟು ನಟರು, ಹಲವು ಪತ್ರಕರ್ತರು ತಮ್ಮ ರಾಜಕೀಯ ನಿಲುವುಗಳಿಂದಾಗಿ ತೀರಾ ಕೆಳಮಟ್ಟದ ವಾಗ್ಧಾಳಿಗೆ ಗುರಿಯಾಗುತ್ತಲೇ ಇದ್ದಾರೆ. ಇವರ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಸಭ್ಯವಾಗಿ ಟೀಕಿಸುವವರಲ್ಲಿ ಜನರಿಂದ ಅರಿಸಿ ಬಂದ ಪ್ರಜಾಪ್ರತಿನಿಧಿಗಳು ಕೂಡ ಸೇರಿದ್ದಾರೆ. ಇಂತಹ ಕೆಟ್ಟ ನಡವಳಿಕೆಯನ್ನು ಖಂಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ಹಲವು ಪ್ರಗತಿಪರರು, ಬಲಪಂಥೀಯ ವಿಚಾರಧಾರೆಗಳನ್ನು ಪ್ರದರ್ಶಿಸುವ ಇತರ ಕಲಾವಿದರು ಹಾಗು ಸಾಹಿತಿಗಳನ್ನು ಮಾತ್ರ ತೀವ್ರ ಲೇವಡಿ ಮಾಡುವುದು ವಿಚಿತ್ರ. ಬಲಪಂಥೀಯರ ನಿಲುವುಗಳನ್ನು ಟೀಕಿಸುವುದು ಮತ್ತು ಒಪ್ಪದಿರುವುದು ಖಂಡಿತಾ ತಪ್ಪಲ್ಲ. ಆದರೆ, ತೀವ್ರತರವಾದ ವೈಯಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲ. ಇತ್ತೀಚೆಗೆ, ಶತಾವಧಾನಿ ಗಣೇಶ್ ಹಾಗು ಸೇತೂರಾಂ ಇವರ ವಿರುದ್ಧ ಕೇಳಿ ಬರುತ್ತಿರುವ ಸಭ್ಯತೆ ಮೀರಿದ ಟೀಕೆಗಳು ಇದಕ್ಕೆ ಉದಾಹರಣೆ. ಅವರ ಅಭಿಪ್ರಾಯಗಳು ನೇರವಾದ ರಾಜಕೀಯ ಪ್ರಚಾರದಂತೆ ಕಂಡರೂ ಅಷ್ಟೇ. ನೇರವಾದ ದ್ವೇಷಭಾವ, ಕೋಮುವಾದ ಅಥವಾ ವೈಯಕ್ತಿಕ ನಿಂದನೆಗಳಿಗೆ ಇಳಿಯದ ಯಾವುದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವಾಗಬೇಕು.
“ನಾನು ನಿನ್ನ ಅಭಿಪ್ರಾಯಗಳನ್ನು ಒಪ್ಪದೇ ಇರಬಹುದು. ಆದರೆ, ಅದನ್ನು ವ್ಯಕ್ತಪಡಿಸುವ ನಿನ್ನ ಸ್ವಾತಂತ್ರ್ಯವನ್ನು ಕಾಪಾಡಲು ಕೊನೆ ಉಸಿರಿರುವರೆಗೂ ಹೋರಾಡುತ್ತೇನೆ “ ಎಂಬಂತಹ ಘೋಷಾವಾಕ್ಯಗಳನ್ನು ಹೇಳುವವರು ಅದಕ್ಕೆ ಬದ್ಧರಾಗಿ ನಡೆಯಲೂ ಬೇಕಾಗುತ್ತದೆ. ಬಲಪಂಥೀಯರನ್ನು ಅವರ ವಿಚಾರಗಳಿಗಾಗಿ, ಕಟುವಾಗಿ ಟೀಕಿಸುವ ತಮ್ಮ ಹಕ್ಕನ್ನು ಕಾಯ್ದುಕೊಳ್ಳುತ್ತಲೇ, ಸಭ್ಯತೆಯ ಎಲ್ಲೆಯ ಬಗ್ಗೆಯೂ ಗಮನವಹಿಸಬೇಕಾಗುತ್ತದೆ. ಹೀಗಾಗಿಯೇ, ಅಸಹಿಷ್ಣುತೆಯ ವಿರುದ್ಧ ದನಿ ಎತ್ತಿದ ಹಲವರು ತಾವೇ ತೀರಾ ಅಸಹಿಷ್ಣುಗಳಂತೆ ವರ್ತಿಸುವುದು ಆಗಾಗ ಕಂಡುಬರುತ್ತದೆ. ಅಂದರೆ ಇದರರ್ಥ ತಮ್ಮ ಸೈದ್ಧಾಂತಿಕ ನಿಲುವುಗಳನ್ನು ವಿಮರ್ಶೆಗೆ ಒಳಪಡಿಸಲು ಪ್ರಗತಿಪರರೂ ಸಿದ್ಧರಿಲ್ಲ ಎಂಬುದೇ ಆಗಿದೆ. ಇದು ಲಿಬರಲ್ ಮನೋಭಾವ ಹೊಂದಿರಬೇಕಾದ ಪ್ರಗತಿಪರರ ಹಿಪೋಕ್ರಸಿಯಂತೆ ಕಾಣುತ್ತದೆ. ಎರಡೂ ಪಂಗಡದವರು ತಮ್ಮ ತಮ್ಮ ಸಿದ್ಧಾಂತಗಳಿಗೆ ಪೂರ್ತಿಯಾಗಿ ಅಂಟಿಕೊಂಡಾಗ, ಅದರಲ್ಲಿರುವ ಕೊರತೆಗಳ ಬಗ್ಗೆ ಯಾವುದೇ ಗಮನಹರಿಸಲು ಸಿದ್ಧರಿಲ್ಲದೇ ಇದ್ದಾಗ, ನನ್ನ ನಿಲುವನ್ನು ಒಪ್ಪದವರೆಲ್ಲಾ ಮೂರ್ಖರು ಎಂಬಂತೆ ನಡೆದುಕೊಂಡಾಗ ತೀವ್ರತರವಾದ ಅಸಹಿಷ್ಣುತೆ ಸಹಜ. ಅದರಲ್ಲೂ, ಪ್ರಗತಿಪರರೇ ಈ ರೀತಿಯಲ್ಲಿ ನಡೆದುಕೊಂಡಾಗ ಅರ್ಥಪೂರ್ಣವಾದ ಚರ್ಚೆ, ಅದು ಉಂಟುಮಾಡಬಹುದಾದ ಬದಲಾವಣೆ ಎರಡೂ ಸಾಧ್ಯವಾಗುವುದಿಲ್ಲ.
ಎರಡೂ ಬಣಗಳಲ್ಲಿರುವ ಇನ್ನೊಂದು ಪ್ರಮುಖ ತೊಂದರೆಯೆಂದರೆ ಪ್ರತಿಯೊಬ್ಬರಿಗೂ ಒಂದೊಂದು ಲೇಬಲ್ ಅಂಟಿಸಿ, ಆ ಬಣ್ಣದ ಕನ್ನಡಕದ ಮೂಲಕವೇ ಅವರ ಹೇಳಿಕೆಗಳನ್ನು ಗ್ರಹಿಸುವ ಬುದ್ಧಿ. ಆರೋಗ್ಯಕರ ಚರ್ಚೆಯಲ್ಲಿ ವಿಷಯಾಧಾರಿತ ಬೆಂಬಲ ಅಥವಾ ಟೀಕೆ ಇರುತ್ತದೆ. ಆದರೆ, ಈಗ ನಡೆಯುತ್ತಿರುವುದು ವ್ಯಕ್ತಿ ಆಧಾರಿತ ಬೆಂಬಲ ಮತ್ತು ಟೀಕೆ. ಒರ್ವನನ್ನು ಒಂದು ಪಂಥಕ್ಕೆ ಸೇರಿಸಿದ ಮೇಲೇ ಮುಗಿಯಿತು, ವಿರೋಧಿ ಪಂಗಡದ ವ್ಯಕ್ತಿ ಎನಿಸಿದರೆ ಸಾರಾಸಗಟಾಗಿ ವಿರೋಧವನ್ನು, ತಮ್ಮ ಪಂಗಡದವನಾದರೆ ಬೇಷರತ್ ಬೆಂಬಲವನ್ನೂ ಸೂಚಿಸಲಾಗುತ್ತದೆ. ಈ ರೀತಿಯ ಪೂರ್ವಾಗ್ರಹಗಳೊಂದಿಗೆ ಆರಂಭವಾಗುವ ಚರ್ಚೆಯಿಂದ ಯಾವುದೇ ಲಾಭವಿಲ್ಲ.
ಭಾರತ ಈಗ ಒಂದು ವಿಚಿತ್ರ ಘಟ್ಟದಲ್ಲಿ ಬಂದು ನಿಂತಿದೆ. ಮೊದಲಿನಿಂದಲೂ ಧರ್ಮ ನಮ್ಮ ದೇಶದ ರಾಜಕೀಯದಲ್ಲಿ ಹಾಸುಹೊಕ್ಕಾಗಿಯೇ ಇದ್ದದ್ದು ನಿಜವಾದರೂ, ಖುಲ್ಲಂಖುಲ್ಲಾ ಧರ್ಮವನ್ನೇ ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿರುವುದು ಮತ್ತು ಅಂತಹ ಒಂದು ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಇತ್ತೀಚಿನ ವಿದ್ಯಮಾನ. ಇದು, ದೇಶದ ಬಹುಸಂಖ್ಯಾತರ ಮನಸ್ಥಿತಿ ಬದಲಾಗುತ್ತಿರುವುದರ ಸಂಕೇತ. ದೇಶದಲ್ಲಿ ಮೂಲಭೂತವಾದಿಗಳು ಬಲಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಗತಿಪರರ ನಡೆ ತುಂಬಾ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ತಾವು ಮೂಲಭೂತವಾದಿಗಳಿಗಿಂತ ಉತ್ತಮ ಆಯ್ಕೆ ಎಂಬುದನ್ನು ತಮ್ಮ ಪ್ರಬುದ್ಧ ನಿಲುವು ಮತ್ತು ನಡವಳಿಕೆಗಳಿಂದ ಪ್ರಗತಿಪರರು ಮನವರಿಕೆ ಮಾಡಿಕೊಡದೇ ಹೋದಲ್ಲಿ, ಮುಂದೆ ದೇಶದ ಭವಿಷ್ಯ ತೆಗೆದುಕೊಳ್ಳಬಹುದಾದ ಅಪಾಯಕಾರಿ ತಿರುವುಗಳಿಗೆ ಅವರೂ ಕೂಡ ನೇರ ಹೊಣೆಯಾಗಲಿದ್ದಾರೆ.
ಅಂಕಣಕಾರರು ಹವ್ಯಾಸಿ ಪತ್ರಕರ್ತರು