ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭಾರತೀಯ ನಾಗರಿಕ ಸೇವೆಗೆ (ಐಎಎಸ್) ರಾಜಿನಾಮೆ ನೀಡಿದ್ದಾರೆ. ಕಳೆದ 15 ದಿನಗಳಲ್ಲಿ ಐಎಎಸ್ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ಎರಡನೇ ಪ್ರಕರಣವಿದು. ದಾದ್ರಾ ಮತ್ತು ನಾಗರ್ ಹವೇಲಿಯಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಕಣ್ಣನ್ ಗೋಪಿನಾಥನ್ ಆಗಸ್ಟ್ ಕೊನೇ ವಾರದಲ್ಲಿ ಇದೇ ರೀತಿ ರಾಜಿನಾಮೆ ನೀಡಿದ್ದರು. ಈ ಪೈಕಿ ಕಣ್ಣನ್ ಕೇರಳದವರು, ಸೆಂಥಿಲ್ ತಮಿಳುನಾಡಿನವರು. ಇಬ್ಬರೂ ತಮಗೆ ವಹಿಸಿದ ಜವಾಬ್ದಾರಿಯನ್ನು ಜನ ಮೆಚ್ಚುವಂತೆ ನಿರ್ವಹಿಸಿದವರು. ದೇಶದಲ್ಲಿ ಸಾವಿರಾರು ಐಎಎಸ್ ಅಧಿಕಾರಿಗಳಿರುವಾಗ ಇಬ್ಬರು ಹುದ್ದೆ ತ್ಯಜಿಸಿದರೆ ಹೆಚ್ಚು ಪ್ರಾಮುಖ್ಯ ಅಲ್ಲದೇ ಇರಬಹುದು. ಆದರೆ, ಅವರಿಬ್ಬರ ರಾಜಿನಾಮೆ ಹಿಂದಿರುವುದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಸೇರಿದಂತೆ ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ.
ವ್ಯವಸ್ಥೆಯನ್ನು ಬದಲಾಯಿಸಲೆಂದೇ ಈ ಮಂದಿ ಭಾರತೀಯ ನಾಗರಿಕ ಸೇವಾ ವಿಭಾಗಕ್ಕೆ ಆಯ್ಕೆಯಾಗಿರುತ್ತಾರೆ. ಅದಕ್ಕೆ ಬೇಕಾದ ಅವಕಾಶಗಳೂ ಅವರಿಗೆ ಇದೆ. ತಮ್ಮ ವ್ಯಾಪ್ತಿಯಲ್ಲಿ ಏನೇ ಸುಧಾರಣೆಗಳನ್ನು ತರಲು ಅವರಿಗೆ ಅಧಿಕಾರವೂ ಇದೆ. ಅಷ್ಟೇ ಅಲ್ಲ, ಐಎಎಸ್ ಹುದ್ದೆಗೆ ಆಯ್ಕೆಯಾಗುವುದು ಎಷ್ಟು ಕಷ್ಟ ಎಂಬುದು ಆಯ್ಕೆಯಾದವರು ಮತ್ತು ಅದಕ್ಕಾಗಿ ಪ್ರಯತ್ನಿಸುವವರಿಗೆ ಗೊತ್ತು. ಹೀಗಿದ್ದರೂ ವ್ಯವಸ್ಥೆಯನ್ನು ಸರಿಪಡಿಸಬೇಕಾದವರೇ ಆ ಕೆಲಸಕ್ಕೆ ಹೆದರಿ ಹಿಂದೆ ಸರಿದರೆ, ರಾಜಿನಾಮೆ ನೀಡಿರುವವರು ಹೇಳಿದಂತೆ ಹಾಳಾಗಿರುವ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು?
ಇಲ್ಲಿ ಆಡಳಿತ ವ್ಯವಸ್ಥೆಯ ಲೋಪವೂ ಇದೆ. ಪ್ರಜಾಪ್ರಭುತ್ವ ಭಾರತದಲ್ಲಿ ಬಹುಪಕ್ಷಗಳ ರಾಜಕೀಯ ವ್ಯವಸ್ಥೆ ಜಾರಿಯಲ್ಲಿದೆ. ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತದೋ ಆ ಪಕ್ಷದ ನೀತಿ, ಸಿದ್ಧಾಂತಗಳಡಿ ಆಡಳಿತ ವ್ಯವಸ್ಥೆ ಬದಲಾಗುತ್ತಲೇ ಇರುತ್ತದೆ. ಹಾಗೆಂದು ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ನೀತಿ, ಸಿದ್ಧಾಂತಗಳನ್ನು ಜಾರಿಗೆ ತರುವಾಗ ಅದರಿಂದ ದೇಶದ ವ್ಯವಸ್ಥೆಗೆ ಏನು ಧಕ್ಕೆಯಾಗುತ್ತದೆ ಎಂಬುದನ್ನು ನೋಡಿಕೊಳ್ಳಬೇಕು. ಇವರ ಜತೆಗೆ ಅಂತಹ ರಾಜಕಾರಣಿಗಳ ಜತೆಗಿರುವ ಹಿರಿಯ ಐಎಎಸ್ ಅಧಿಕಾರಿಗಳು ಕೂಡ ಭವಿಷ್ಯದ ಬಗ್ಗೆ ಯೋಚಿಸಿ ನೇರವಾಗಿ ಅಭಿಪ್ರಾಯ ಹೇಳುವ ಗಟ್ಟಿತನ ಬೆಳೆಸಿಕೊಳ್ಳಬೇಕು. ಇಲ್ಲದೇ ಇದ್ದರೆ ಕಣ್ಣನ್ ಗೋಪಿನಾಥನ್, ಸಸಿಕಾಂತ್ ಸೆಂಥಿಲ್ ಅವರಂತಹ ಐಎಎಸ್ ಅಧಿಕಾರಿಗಳು ರಾಜಿನಾಮೆ ನೀಡುತ್ತಲೇ ಇರುತ್ತಾರೆ. ಇಬ್ಬರೂ ಅತ್ಯುತ್ತಮ ಆಡಳಿತಗಾರರಾಗಿದ್ದವರು. ಇಂತಹ ಅಧಿಕಾರಿಗಳು ವ್ಯವಸ್ಥೆಯ ಕಾರಣಕ್ಕಾಗಿ ಹುದ್ದೆ ತ್ಯಜಿಸಿದರೆ ಅದರ ಪರಿಣಾಮ ಎದುರಿಸಬೇಕಾದವರು ಸಾಮಾನ್ಯ ಪ್ರಜೆಗಳು.

ಸೈದ್ಧಾಂತಿಕ ಭಿನ್ನಾಭಿಪ್ರಾಯ ಅಧಿಕಾರಶಾಹಿಗೂ ಕಾಲಿಟ್ಟಿತೇ?
ಕಣ್ಣನ್ ಗೋಪಿನಾಥ್ ಐಎಎಸ್ ಹುದ್ದೆಗೆ ನೀಡಿದ ರಾಜಿನಾಮೆಯಲ್ಲಿ ಏನನ್ನೂ ಹೇಳದೇ ಇದ್ದರೂ ಅದಕ್ಕೆ ಕಾರಣ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಎಂಬುದು ಸ್ಪಷ್ಟ. ಅದನ್ನು ಅವರೇ ನಂತರ ಹೇಳಿದ್ದಾರೆ ಕೂಡ. ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವುದು ಚುನಾಯಿತ ಸರ್ಕಾರದ ಹಕ್ಕು. ಆದರೆ, ಪ್ರಜಾಪ್ರಭುತ್ವದಲ್ಲಿ ಜನರಿಗೆ ಪ್ರತಿಕ್ರಿಯಿಸುವ ಹಕ್ಕಿದೆ. ಕಾಶ್ಮೀರದ ಬಗ್ಗೆ ನಿರ್ಧಾರ ತೆಗೆದುಕೊಂಡು 20 ದಿನಗಳು ಕಳೆದಿದ್ದರೂ ಅಲ್ಲಿನ ಜನರಿಗೆ ಪ್ರತಿಕ್ರಿಯಿಸುವ ಅವಕಾಶವೂ ಇಲ್ಲ. ಅದು ಪ್ರಜಾಪ್ರಭುತ್ವ ವ್ಯವನಸ್ಥೆಯಲ್ಲಿ ಸ್ವೀಕಾರಾರ್ಹವಲ್ಲ ಎಂದು ಕಣ್ಣನ್ ಹೇಳಿದ್ದರು.
ಇಲ್ಲಿ ಕಣ್ಣನ್ ಗೋಪಿನಾಥ್ ಅವರಿಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದು ಸ್ಪಷ್ಟವಾಗುತ್ತದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದನ್ನು ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಬೆರಳೆಣಿಕೆಯ ರಾಜಕೀಯ ಪಕ್ಷಗಳು ಮತ್ತು ಆ ಸಿದ್ಧಾಂತವನ್ನು ಒಪ್ಪಿಕೊಂಡಿರುವವರು ವಿರೋಧಿಸಿದ್ದರೆ, ಬಹುತೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ. ದೇಶದ ಬಹುಜನರೂ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿದ್ದಾರೆ. ಜಮ್ಮು-ಕಾಶ್ಮೀರದ ಜನರಿಗೆ ಪ್ರತಿಕ್ರಿಯಿಸುವ ಅವಕಾಶವೂ ಸಿಗಲಿಲ್ಲ ಎಂದು ಕಣ್ಣನ್ ಹೇಳಿದ್ದಾರಾದರೂ ಅದೊಂದೇ ವಿಚಾರ ಕಾರಣವಾಗಿದ್ದರೆ ಸ್ವಲ್ಪ ಕಾದು ನೋಡಬಹುದಿತ್ತು.
ಇನ್ನು ಸಸಿಕಾಂತ್ ಸೆಂಥಿಲ್ ಅವರು ತಮ್ಮ ರಾಜಿನಾಮೆಗೆ ನೀಡಿದ ಕಾರಣ ವ್ಯವಸ್ಥೆ. ವೈವಿಧ್ಯಮಯ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದ ಮೂಲಭೂತ ವ್ಯವಸ್ಥೆಯಲ್ಲಿ ಅನಿರೀಕ್ಷಿತ ರೀತಿಯಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದಲ್ಲಿ ನಾಗರಿಕ ಸೇವಕನಾಗಿ ಮುಂದುವರಿಯುವುದು ಅನೈತಿಕ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಮುಂಬರುವ ದಿನಗಳು ರಾಷ್ಟ್ರದ ಮೂಲಭೂತ ವ್ಯವಸ್ಥೆಗೆ ಕಷ್ಟಕರ ಸವಾಲುಗಳನ್ನು ನೀಡಲಿವೆ ಎಂದಿದ್ದಾರೆ. ಅದಕ್ಕೂ ಮೊದಲು ಜಿಲ್ಲೆಯ ಜನಪ್ರತಿನಿಧಿಗಳು, ಜನರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ ವ್ಯವಸ್ಥೆಯಲ್ಲಿ ಅನಿರೀಕ್ಷಿತ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದೆದಂದರೇನು ಎಂಬುದು ಗೊತ್ತಾಗುತ್ತಿಲ್ಲ. ಮೇಲ್ನೋಟಕ್ಕೆ ಇವರಿಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಜತೆ ಅವರಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವಂತೆ ಕಾಣಿಸುತ್ತದೆ. ಒಟ್ಟಿನಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ಇರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದೀಗ ಅಧಿಕಾರಶಾಹಿಗಳಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದು ಆಡಳಿತ ವ್ಯವಸ್ಥೆಗೆ ಮಾರಕವಾಗಬಹುದು.

ರಾಜಕಾರಣಿಗಳ ಮೂಗಿನ ನೇರಕ್ಕೆ ನಡೆಯುವ ಐಎಎಸ್ ಅಧಿಕಾರಿಗಳು
ಇಂತಹ ಸಂದರ್ಭಗಳಲ್ಲಿ ಆಡಳಿತ ನಡೆಸುವವರು ಮತ್ತು ಅವರಿಗೆ ಸಲಹೆಗಳನ್ನು ನೀಡುವ ಸ್ಥಾನದಲ್ಲಿರುವ ಹಿರಿಯ ಐಎಎಸ್ ಅಧಿಕಾರಿಗಳು ಕೂಡ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಅವರು ಸರ್ಕಾರಿ ಅಧಿಕಾರಿಯೇ ಆಗಿರಲಿ, ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ನೀಡಬೇಕಾಗುತ್ತದೆ. ಅದರಲ್ಲೂ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಐಎಎಸ್ ನಂತಹ ಅಧಿಕಾರಿಗಳಿಗೆ ಸರ್ಕಾರದ ನಿರ್ಧಾರಗಳ ಬಗ್ಗೆ ಅಪಸ್ವರ ಇದ್ದರೆ ಅದನ್ನು ಹೇಳಿಕೊಳ್ಳಲು ಮುಕ್ತ ಸ್ವಾತಂತ್ರ್ಯ ಕೊಡಬೇಕು. ನಾವು ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿರುವುದರಿಂದ ನಮ್ಮ ಮೂಗಿನ ನೇರಕ್ಕೇ ಎಲ್ಲವೂ ಇರಬೇಕು ಎಂದು ಬಯಸಿದರೆ ಅದು ಅಧಿಕಾರಶಾಹಿ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆಡಳಿತಕ್ಕೂ ಧಕ್ಕೆಯಾಗುತ್ತದೆ.
ಸಾಮಾನ್ಯವಾಗಿ ಕೇಂದ್ರ ಸರ್ಕಾರದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಅಂದರೆ ನೀತಿ, ನಿರೂಪಣೆಗಳನ್ನು ರೂಪಿಸುವ ಸ್ಥಾನದಲ್ಲಿ ಇರುವ ಹಿರಿಯ ಐಎಎಸ್ ಅಧಿಕಾರಿಗಳು ಸರ್ಕಾರ ನಡೆಸುವ ರಾಜಕಾರಣಿಗಳಿಗೆ ಬೇಕಾದಂತೆ ನಡೆದುಕೊಳ್ಳುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ನೀತಿಗಳನ್ನು ರೂಪಿಸುತ್ತಾರೆ. ಆಂತರಿಕವಾಗಿ ಆ ಬಗ್ಗೆ ಅಸಮ್ಮತಿ ಇದ್ದರೂ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಅದನ್ನು ಬಹಿರಂಗಗೊಳಿಸದೆ ರಾಜಕಾರಣಿಗಳು ಹೇಳಿದಂತೆ ಕೇಳುತ್ತಾರೆ. ಇದರ ಪರಿಣಾಮ ನಿರ್ಧಾರಗಳನ್ನು ಕೈಗೊಳ್ಳುವಾಗ ಅದು ಆಳುವವರ ಮೂಗಿನ ನೇರಕ್ಕೆ ಇರುತ್ತದೆಯೇ ಹೊರತು ಅದನ್ನು ಜಾರಿಗೊಳಿಸುವ ಅಧಿಕಾರಿಗಳಿಗೆ ಸಮ್ಮತವಾಗಿರುವುದಿಲ್ಲ. ಕೆಳ ಹಂತದ ಅಧಿಕಾರಿಗಳೇನಾದರೂ ಆ ಬಗ್ಗೆ ತಮ್ಮ ಅಸಮ್ಮತಿ ತೋರಿದರೆ ಅಂಥವರಿಗೆ ಭವಿಷ್ಯದಲ್ಲಿ ಒಳ್ಳೆಯ ಹುದ್ದೆ ಸಿಗುವುದಿಲ್ಲ. ಈ ಕಾರಣಕ್ಕಾಗಿ ಬಹುತೇಕ ಕೆಳ ಹಂತದ ಅಧಿಕಾರಿಗಳು ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಸಸಿಕಾಂತ್ ಸೆಂಥಿಲ್, ಕಣ್ಣನ್ ಗೋಪಿನಾಥನ್ ಅವರಂಥವರು ಅಸಮ್ಮತಿ ತೋರಿಸಲೂ ಸಾಧ್ಯವಾಗದೆ, ಮೌನವಾಗಿ ಸಹಿಸಿಕೊಳ್ಳಲೂ ಆಗದೆ ರಾಜಿನಾಮೆ ನೀಡುತ್ತಾರೆ. ಹೀಗಾಗಿ ರಾಜಕಾರಣಿಗಳ ಅಕ್ಕ ಪಕ್ಕ ಇರುವ ಹಿರಿಯ ಐಎಎಸ್ ಅಧಿಕಾರಿಗಳು ಕೂಡ ನಿಷ್ಠಾವಂತ ಮತ್ತು ಕೆಲಸಗಾರ ಅಧಿಕಾರಿಗಳ ರಾಜಿನಾಮೆಗೆ ಕಾರಣರಾಗುತ್ತಾರೆ.
ಹಾಗೆಂದು ಭಾರತೀಯ ನಾಗರಿಕ ಸೇವೆ ಎಂದರೆ ಅದು ಸರ್ಕಾರ ನಡೆಸುತ್ತಿರುವ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತಗಳ ಆಡಳಿತಕ್ಕಿಂತ ಬೇರೆಯದ್ದೇ ಆಗಿರುತ್ತದೆ. ಒಂದು ಪಕ್ಷದ ಸರ್ಕಾರ ಜಾರಿಗೊಳಿಸುವ ಕಾರ್ಯಕ್ರಮಗಳು ಆ ಪಕ್ಷದ ನೀತಿ, ಸಿದ್ಧಾಂತವನ್ನು ಒಪ್ಪದೇ ಇರುವವರಿಗೆ ಸಮ್ಮತ ಆಗುವುದಿಲ್ಲ. ಆದರೆ, ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಸರ್ಕಾರ ತೆಗೆದುಕೊಳ್ಳುವ ಬಹುಮತದ ನಿರ್ಧಾಗಳನ್ನು ದೇಶದ ಜನ ಒಪ್ಪಲೇ ಬೇಕು. ಇದು ಅಧಿಕಾರಿಗಳಿಗೂ ಅನ್ವಯವಾಗುತ್ತದೆ. ಐಎಎಸ್ ನಂತಹ ಉನ್ನತ ಮತ್ತು ಜವಾಬ್ದಾರಿಯುತ ಹುದ್ದೆಗೆ ಬರುವಾಗ ಇದನ್ನೆಲ್ಲಾ ಅರಿತೇ ಬರಬೇಕಾಗುತ್ತದೆ. ಇಲ್ಲವಾದಲ್ಲಿ ಸಸಿಕಾಂತ್ ಸಂಥಿಲ್, ಕಣ್ಣನ್ ಗೋಪಿನಾಥ್ ಅವರಂತೆ ತಾವು ಜನಸೇವಕರಾಗಿ ಮಾಡಬೇಕಾದ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೊರನಡೆಯಬೇಕಾಗುತ್ತದೆ. ಅಧಿಕಾರದಲ್ಲಿರುವವರು ಎಚ್ಚೆತ್ತು ಇಂತಹ ರಾಜಿನಾಮೆಗಳು ಸಮೂಹ ಸನ್ನಿಯಾಗದಂತೆ ನೋಡಿಕೊಳ್ಳಬೇಕು.