ಸರ್ಕಾರ ಪತನಕ್ಕೆ ಹೇಳದೆ ಉಳಿದ ಕಾರಣ ಯಾವುದು?

ಕರ್ನಾಟಕದ ಮೈತ್ರಿ ಸರಕಾರ ಪತನವಾಗಲು ಭಾರತೀಯ ಜನತಾ ಪಾರ್ಟಿಯ ಅಪರೇಶನ್ ಕಮಲ ಎಷ್ಟು ಕಾರಣವೊ ಅಂತಹ ಪರಿಸ್ಥಿತಿಗೆ ವೇದಿಕೆ ಒದಗಿಸಿಕೊಟ್ಟ ಮೈತ್ರಿ ಸರಕಾರದ ಮುಖಂಡರು ಕೂಡ ಸಮಾನವಾಗಿ ಕಾರಣಕರ್ತರಾಗುತ್ತಾರೆ. ಮಾತ್ರವಲ್ಲದೆ, ಇಂತಹದೊಂದು ರಾಜಕೀಯ ವಿಡಂಬನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾತ್ರ ಕೂಡ ಬಹು ದೊಡ್ಡದಿದೆ.

ಮೈತ್ರಿ ಸರಕಾರ ರಚಿಸಿದಾಗ ಮುಖ್ಯಮಂತ್ರಿ ಸ್ಥಾನವನ್ನು ಸಣ್ಣ ಪಕ್ಷವಾದ ಜೆಡಿಎಸ್ ಗೆ ನೀಡಿರುವುದೇನೊ ಸರಿ. ಆದರೆ, ಸಕಲ ಅಧಿಕಾರವನ್ನು ಆ ಪಕ್ಷಕ್ಕೆ ನೀಡಬೇಕಾಗಿರಲಿಲ್ಲ. ಕಾಂಗ್ರೆಸ್ ಮಾತ್ರ ತಮ್ಮ ಸರ್ವಸ್ವವನ್ನು ಮೈತ್ರಿ ಹೆಸರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಪಾದ ಕಮಲಕ್ಕೆ ಸಮರ್ಪಿಸಿತ್ತು.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸಹೋದರ ಸಚಿವರಾಗಿದ್ದ ಎಚ್. ಡಿ. ರೇವಣ್ಣ ಅವರ ಹಸ್ತಕ್ಷೇಪ ಸರಕಾರದ ಅಗತ್ಯಕ್ಕಿಂತ ಹೆಚ್ಚೇ ಇತ್ತು ಎಂಬುದು ಇದೀಗ ಜನಜನಿತ. ಅದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಇಬ್ಬರು ಹಿರಿಯ ಸಚಿವರು ತಮ್ಮ ಪಕ್ಷದ ಹಿತಾಸಕ್ತಿಗಳನ್ನು ರಕ್ಷಿಸುವ ಬದಲು ಅವರು ಕೂಡ ದೇವೇಗೌಡ ಕುಟುಂಬದ ಸದಸ್ಯರಾಗಿಯೇ ಬದಲಾದರು. ಅಲ್ಲಿಗೆ ಸರಕಾರದಲ್ಲಿ ಸಿಎಂ ಅವರ `ಬ್ರದರ್’ ಗಳ ಸಂಖ್ಯೆ ಮೂರಕ್ಕೇರಿತ್ತು.

ಸರಕಾರದ ಪತನದ ನಂತರ ಈಗ ಸಂತೃಪ್ತರಾಗಿರುವ ಅತೃಪ್ತ ಕಾಂಗ್ರೆಸ್ ಶಾಸಕರಲ್ಲಿ ಬಹುತೇಕ ಮಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚಾಗಿ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ ಮತ್ತು ಟಿ. ವಿ. ಚಾನಲ್ ಗಳ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ಬಗ್ಗೆ ಹೆಚ್ಚಿನ ಅಸಮಾಧಾನವಿತ್ತು ಎಂಬುದು ರಹಸ್ಯವಾಗಿ ಉಳಿದಿಲ್ಲ. ಮೈತ್ರಿ ಸರಕಾರದ ಶಕ್ತಿ ಕೇಂದ್ರಗಳು ರೇವಣ್ಣ, ಶಿವಕುಮಾರ್, ಪರಮೇಶ್ವರ್ ಆಗಿದ್ದರು. ಈ ತ್ರಿಮೂರ್ತಿಗಳದ್ದು ಸಾಮಾನ್ಯ ಶಕ್ತಿ ಕೇಂದ್ರವಾಗಿರದೆ ದೈತ್ಯ ಶಕ್ತಿ ಕೇಂದ್ರವಾಗಿತ್ತು ಎನ್ನುತ್ತಾರೆ ಸರಕಾರದ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲವರು.

ಬಹಳಷ್ಟು ಮಂದಿ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಅವರು ಈಗಲೂ ಒಂದು ರಾಜಕೀಯ ಗುಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಕಾಂಗ್ರೆಸ್ ಮುಖಂಡರ ರಕ್ತದಲ್ಲಿ ಹಾಸುಹೊಕ್ಕಾಗಿರುವ ಕಿವಿ ಊದುವ ಕಾರ್ಯ ಈ ಬಾರಿ ಸ್ವಲ್ಪ ಹೆಚ್ಚೇ ನಡೆಯಿತು. ಹೈಕಮಾಂಡಿನ ದಾರಿ ತಪ್ಪಿಸಲು ಬೇರೆನು ಬೇಕಾಗಿಲ್ಲ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕುವ ಭರದಲ್ಲಿ ಪಕ್ಷವನ್ನೇ ಬಲಿ ಕೊಡಲು ಹೇಸುವವರಲ್ಲ ಕಾಂಗ್ರೆಸ್ ಮುಖಂಡರು. ಸಿದ್ದರಾಮಯ್ಯರನ್ನು ಬದಿಗೆ ಸರಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮಾತ್ರವಲ್ಲದೆ ಅವರ ಬೆಂಬಲಿಗ ಶಾಸಕ, ಸಚಿವರನ್ನು ನಿರಂತರವಾಗಿ ಕಡೆಗಣಿಸಲಾಗಿತ್ತು. ಅಲ್ಲಿಗೆ ಭಿನ್ನಮತೀಯರಿಗೆ ಭೀಮಬಲ ದೊರೆತಿತ್ತು.

ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಆಗಬೇಕೆಂಬ ಹಂಬಲ ಹೊಂದಿರುವ ಶಿವಕುಮಾರ್ ಸಹಜವಾಗಿ ತಮ್ಮ ಸಾಮ್ರಾಜ್ಯವನ್ನು ಹಳೇ ಮೈಸೂರು ಜಿಲ್ಲೆಗಳು ಹೊರತಾಗಿ ಬಳ್ಳಾರಿ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ವಿಸ್ತರಿಸಲು ಹೆಜ್ಜೆ ಇರಿಸಿದ್ದರು. ಇದು ರಾಜಕೀಯವಾಗಿ ತಪ್ಪಲ್ಲ. ಆದರೆ, ಸಮಸ್ಯೆ ಉದ್ಭವ ಆಗುವುದು ಸ್ಥಳೀಯವಾಗಿ ಮತ್ತೊಂದು ಶಕ್ತಿ ಕೇಂದ್ರ ಪ್ರಭಾವಗೊಂಡಾಗ ಸ್ಥಾಪಿತ ಹಿತಾಸಕ್ತಿಗಳು ಅದನ್ನು ಒಪ್ಪುವುದಿಲ್ಲ. ಬೆಳಗಾವಿಯಲ್ಲಿ ನಡೆದಿರುವುದು ಕೂಡ ಇದೇ ಆಗಿದೆ.

ಕಳೆದ ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ ತನಗೆ ಅವಮಾನ ಆಗಿದೆ ಎಂದುಕೊಂಡಿರುವ ಪರಮೇಶ್ವರ ಒಂದು ರೀತಿಯ ಜಿದ್ದಾಜಿದ್ದಿಯಲ್ಲೇ ಇದ್ದರು ಎಂದರೂ ತಪ್ಪಾಗಲಾರದು. ಸಿದ್ದರಾಮಯ್ಯ ಆಪ್ತರು ಎನ್ನಲಾದ ಶಾಸಕರ ಗುಂಪು ಪರಮೇಶ್ವರ್ ತಮ್ಮ ನಗರಾಭಿವೃದ್ಧಿ ಇಲಾಖೆ ಮೂಲಕ ಸಹಾಯ ಮಾಡಲು ಸಿದ್ಧರಾಗಲಿಲ್ಲ ಎಂಬ ವಿಚಾರದಲ್ಲಿ ತೀವ್ರ ಅಸಮಾಧಾನದಿಂದ ಬೆಂದು ಹೋಗಿತ್ತು ಎಂಬುದು ಇದುವರೆಗೆ ಬೆಳಕಿಗೆ ಬಾರದ ವಿಚಾರ.

ಈ ನಡುವೆ ಭಿನ್ನಮತದ ರೂವಾರಿಯಾಗಿ ರಮೇಶ್ ಜಾರಕಿಹೊಳಿ ಕಾಣಿಸಿಕೊಳ್ಳುತ್ತಾರೆ. ಅವರು ಸೃಷ್ಟಿಸಿದ ಭಿನ್ನಮತೀಯ ಚಟುವಟಿಕೆಯನ್ನು ದಡ ಸೇರಿಸಲು ಎಚ್. ವಿಶ್ವನಾಥ್ ಅವರ ರಾಜಕೀಯ ಸೃಜನಶೀಲತೆ ಅನಿವಾರ್ಯವಾಯ್ತು. ಇದೊಂದು ರಾತೋರಾತ್ರಿ ನಡೆದ ಕ್ಷಿಪ್ರ ಕ್ರಾಂತಿ ಆಗಿರಲಿಲ್ಲ. ಅಪರೇಶನ್ ಕಮಲದ ಚಟುವಟಿಕೆಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಭಿನ್ನಮತ, ಅತೃಪ್ತಿ, ಅಸಮಾಧಾನ, ಸಾಮಾಜಿಕ ನ್ಯಾಯದ ಲೋಪ, ಕೇಂದ್ರೀಕೃತ ಅಧಿಕಾರ ವಿರುದ್ಧದ ಅಸಹನೆ ಸ್ಪೋಟಗೊಳ್ಳಲು ಅವಕಾಶಕ್ಕಾಗಿ ಕಾಯುತಿತ್ತು. ಆದರೆ, ಅದನ್ನು ತಣಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಅಪರೇಶನ್ ಕಮಲ ನಡೆಸಿ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ಹಲುಬಿ ಈಗ ಯಾವ ಪ್ರಯೋಜನವೂ ಇಲ್ಲ. ಪ್ರಜಾಪ್ರಭುತ್ವವಾದಿ ಸರಕಾರದಲ್ಲಿ ನೀವು ಮಾಡಿದ್ದಾದರು ಏನು ಎಂಬುದನ್ನು ಆತ್ಮಸಾಕ್ಷಿಯಾಗಿ ಕೇಳಿಕೊಂಡಾಗ ಉತ್ತರ ಸಿಗಬಹುದು.

ಜಾರಕಿಹೊಳಿ ಮತ್ತು ಉತ್ತರ ಕನ್ನಡದ ಶಿವರಾಮ್ ಹೆಬ್ಬಾರ್ ಅವರ ಕಾರಣ ಒಂದಾದರೆ, ಎಚ್. ವಿಶ್ವನಾಥ್ ಅವರದ್ದು ಮತ್ತೊಂದು ಅಸಮಾಧಾನ. ಸಿದ್ದರಾಮಯ್ಯ ಬೆಂಬಲಿಗರ ತಿಕ್ಕಾಟ ಮೇಲೆ ವಿವರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮೂರು ಸಕ್ಕರೆ ಕಾರ್ಖಾನೆ ಹೊಂದಿರುವ ಶ್ರೀಮಂತ ಪಾಟೀಲರದ್ದು ರಾಜ್ಯದ ಕಾರ್ಖಾನೆಯ ಸಮಸ್ಯೆ. ಇಂತಹ ವಿಭಿನ್ನ ಗುರಿಗಳ ಅತೃಪ್ತ ಗುಂಪು ಒಂದೇ ಕಡೆ ಸೇರಿಕೊಂಡು ಸರಕಾರವನ್ನು ಕೆಡಹುವಲ್ಲಿ ಸಫಲರಾಗಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಿ ಮುಂಬಯಿಗೆ ಹಾರುವ ಮುನ್ನ ಮತ್ತು ಹಾರಿದ ಅನಂತರ ಉಂಟಾದ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಮೈತ್ರಿ ಪಕ್ಷದಲ್ಲಿ ಸಂಘಟಿತ ಪ್ರಯತ್ನ ನಡೆಯಲೇ ಇಲ್ಲ. ಒಗ್ಗಟ್ಟಿನ ತಂತ್ರಗಾರಿಕೆಯಾಗಲಿ, ಪ್ರಯತ್ನವಾಗಲಿ ಕಾಂಗ್ರೆಸ್ ಪಾಳಯದಲ್ಲಿ ಕಾಣಸಿಗಲಿಲ್ಲ. ಡಿ. ಕೆ. ಶಿವಕುಮಾರ್ ಪಕ್ಷದ ಇನ್ನಿತರ ಮುಖಂಡರಿಗೆ ಮಾಹಿತಿ ನೀಡದೆ ಅತೃಪ್ತರ ಮನವೊಲಿಸಲು ಮುಂಬಯಿಗೆ ಹಾರಿರುವುದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿರುವುದು ಇದಕ್ಕೊಂದು ಉದಾಹರಣೆ.

ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕೆ ತಕ್ಕುದಾಗಿ ಹಿರಿಯ ರಾಜಕಾರಣಿ, ದೀರ್ಘಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರ ನಡೆಗಳು ಇರಲಿಲ್ಲ ಎಂದು ಅವರ ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನವಿದೆ. ತಮ್ಮ ಪಕ್ಷದ ಸಚಿವ, ಶಾಸಕರಿಗೆ ನ್ಯಾಯ ಒದಗಿಸುವ ನಾಯಕತ್ವವನ್ನು ಡಿಸಿಎಂ ಮಾಡಿದ್ದರೇ ಎಂಬುದು ಪ್ರಶ್ನಾರ್ಹ.

ಮೈತ್ರಿ ಸರಕಾರ ಮತ್ತು ಮೈತ್ರಿ ವ್ಯವಸ್ಥೆಯ ಆರಂಭ ಚೆನ್ನಾಗಿಯೇ ಆಗಿತ್ತು. ಆದರೆ, ಅನಂತರದ ವ್ಯವಹಾರ ಮತ್ತು ವಿದ್ಯಮಾನಗಳು ಈ ಸರಕಾರ ತುಂಬಾ ಕಾಲ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಲೋಕಸಭಾ ಚುನಾವಣೆ ಮೈತ್ರಿಯ ಬಹುದೊಡ್ಡ ಗುರಿ ಆಗಿತ್ತು.

ಸರಕಾರ ರಚನೆಯಾದ ಮೇಲೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸಂಪುಟ ಸಚಿವನ ದರ್ಜೆ ಸ್ಥಾನಮಾನ ನೀಡಲಿಲ್ಲ. ಶಿಕ್ಷಣ ಸಚಿವನಾಗುವ ಆಕಾಂಕ್ಷೆ ಹೊಂದಿದ್ದ ಎಚ್. ವಿಶ್ವನಾಥ್ ಅವರಿಗೆ ಮಂತ್ರಿ ಮಾಡದೆ ಜೆಡಿಎಸ್ ರಾಜ್ಯಾಧ್ಯಕ್ಷ ಮಾಡಲಾಯಿತು. ಅದವರಿಗೆ ತೀರ ಇಷ್ಟವಿಲ್ಲದ ಕೆಲಸ. ಹೋತಗಳ ಮಂದೆಗೆ ಕುರಿಯನ್ನು ಲೀಡರ್ ಮಾಡಿದಂತಾಗಿತ್ತು. ಕಾಲೇಜು ಮೆಟ್ಟಿಲು ತುಳಿಯದ ಜಿ. ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ನೀಡಲಾಯಿತು. ಇಂತಹ ನೂರಾರು ವಿದ್ಯಮಾನಗಳು ಮೈತ್ರಿ ಸರಕಾರವನ್ನೇ ಸಾಂದರ್ಭಿಕ ಶಿಶುವನ್ನಾಗಿ ಮಾಡಿತ್ತು.

ಲೋಕಸಭಾ ಚುನಾವಣೆಯ ಅನಂತರ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಕಾಂಗ್ರೆಸ್ ಸಿದ್ಧವಾಗುತ್ತಿದ್ದರೆ ಕನಿಷ್ಟ ಕೆಲವು ಸಂಪನ್ಮೂಲ ವ್ಯಕ್ತಿಗಳನ್ನು ಪಕ್ಷದಲ್ಲಿ ಉಳಿಸಿಕೊಳ್ಳಬಹುದಿತ್ತು. ಅಂತಹದೊಂದು ನಡೆಗೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ ನೀಡಲು ಈಗ ಕಾಂಗ್ರೆಸ್ ಪಕ್ಷಕ್ಕೆ ಸದ್ಯಕ್ಕೆ ಹೈಕಮಾಂಡೇ ಇಲ್ಲ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...