2019ರ ಆಗಸ್ಟ್‌ನಲ್ಲಿ ಎದುರಾದ ಭಾರೀ ಪ್ರವಾಹಕ್ಕೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿದ್ದವು. ಕೇಂದ್ರ ಸರ್ಕಾರ ತಕ್ಷಣಕ್ಕೆ ಯಾವುದೇ ಪರಿಹಾರ ನೀಡದಿದ್ದರೂ ರಾಜ್ಯ ಸರ್ಕಾರದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು. ಕೂಡಲೇ 10 ಸಾವಿರ ಕೋಟಿ ರೂಪಾಯಿ ಹಣ ಕೊಡ್ತೇವೆ ಎಂದು ಘೋಷಣೆ ಮಾಡಿತ್ತು. ಆ ಬಳಿಕ ಸರ್ಕಾರ ಕೊಟ್ಟಿದ್ದ ಚೆಕ್‌ಗಳು ಹಲವು ಕಡೆ ಬೌನ್ಸ್ ಆಗಿದ್ದವು. ಸರ್ಕಾರ ಆಗಲೂ ಪ್ರತಿಕ್ರಿಯೆ ಕೊಡದೆ ಜಾಣ ಕಿವುಡುತನ ಪ್ರದರ್ಶನ ಮಾಡಿತ್ತು. ಮನೆಗಳು ಕುಸಿದು ಹೋಗಿದ್ದರೂ ಸರ್ಕಾರ ಪರಿಹಾರ ಕೊಡುವಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದೀಗ ಸರ್ಕಾರದಿಂದ ಪರಿಹಾರ ಪಡೆದು ಸೂರು ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಅಸಹಾಯಕ ಅಂಗವಿಕಲ ಯುವತಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ.
ಧಾರವಾಡ ಜಿಲ್ಲೆ ದಬ್ಬನಮರಡಿ ಗ್ರಾಮದಲ್ಲಿ ಅಂಗವಿಕಲ ಯುವತಿ ಮಂಜುಳಾ ಕಲ್ಲೂರ ಎಂಬುವರ ಮನೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಅಂದಿನಿಂದ ನಿರಂತರವಾಗಿ ಪರಿಹಾರಕ್ಕಾಗಿ ಅಲೆದಾಡಿದರೂ ಹೆಚ್ಚಿನ ಪರಿಹಾರ ಸಿಗಲಿಲ್ಲ. ಮೊದಲು ಸುರಿದ ಮಳೆಗೆ ಭಾಗಶಃ ಮನೆ ಕುಸಿದಿತ್ತು. ಆ ಲೆಕ್ಕಾಚಾರದ ಮೇಲೆ ಸರ್ಕಾರ C ಕೆಟಗರಿಗೆ ಸೇರಿಸಿ ಕೇವಲ 50 ಸಾವಿರ ರೂಪಾಯಿ ಪರಿಹಾರ ಕೊಟ್ಟಿತ್ತು. ಆದರೆ ಪರಿಹಾರ ಬರುವ ಮೊದಲೇ ಸುರಿದ ಜೋರು ಮಳೆಗೆ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಆದರೂ C ಕೆಟಗರಿ ಮಾನದಂಡ ಬದಲು ಮಾಡಿ A ಕೆಟಗರಿಗೆ ಸೇರಿಸಿ 5 ಲಕ್ಷ ಪರಿಹಾರ ಕೊಡಲು ಅಧಿಕಾರಿಗಳು ಮನಸ್ಸು ಮಾಡಲಿಲ್ಲ. ಶೆಡ್ಡು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದ ಇಡೀ ಕುಟುಂಬ, ಕೇವಲ 50 ಸಾವಿರದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಗೋಗರೆದರೂ ಅಧಿಕಾರಿಗಳಿಗೆ ಮನಸ್ಸು ಕರಗಿಲ್ಲ.
ಇಡೀ ಕುಟುಂಬವೇ ಅಂಗವೈಕಲ್ಯಕ್ಕೆ ಒಳಗಾಗಿದ್ದು ಕಣ್ಣೀರಲ್ಲಿ ಕೈ ತೊಳೆಯುತ್ತಿತ್ತು. ದಿನನಿತ್ಯ ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿತ್ತು. ಅಂತಿಮವಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದರೆ ಅನುಕೂಲ ಆಗಲಿದೆ ಎನ್ನುವ ಕಾರಣಕ್ಕೆ ಕಳೆದ 20 ದಿನಗಳ ಹಿಂದೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದಳು. A ಕೆಟಗರಿಗೆ ಸೇರಿಸಿ ಹೆಚ್ಚಿನ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಿದ್ದಳು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮತ್ತೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದಾಗ, ಕೋಪಗೊಂಡ ಜಿಲ್ಲಾಧಿಕಾರಿ ಒಮ್ಮೆ ಪರಿಹಾರ ಕೊಟ್ಟ ಮೇಲೆ ಮುಗೀತು. ಮತ್ತೆ ಮತ್ತೆ ಕೊಡಲು ಸಾಧ್ಯವಿಲ್ಲ ಎಂದು ಕರುಣೆ ಇಲ್ಲದೆ ಕೋಪದಲ್ಲಿ ಹೇಳಿ ಕಳುಹಿಸಿದ್ದಾರೆ. ಇದರಿಂದ ಮನನೊಂದ ಅಂಗವಿಕಲ ಯುವತಿ ಮಂಜುಳಾ ಕಲ್ಲೂರ, ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್‌ನಲ್ಲಿ ಕುಳಿತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯಲ್ಲಿ ವಯಸ್ಸಾದ ತಂದೆ, ತಮ್ಮ, ತಂಗಿಯೊಂದಿಗೆ ವಾಸ ಮಾಡುತ್ತಿದ್ದ ಮಂಜುಳಾ ಕಲ್ಲೂರ ಜೀವನ ನರಕವಾಗಿತ್ತು. ವಯಸ್ಸಾದ ತಂದೆಗೆ ದೇಹದ ಬಲಭಾಗ ಸ್ವಾಧೀನ ಕಳೆದುಕೊಂಡಿತ್ತು. ತಮ್ಮ, ತಂಗಿಗೂ ಅಂಗವೈಕಲ್ಯವಿದ್ದು, ದುಡಿಯುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಇದ್ದಿದ್ದರಲ್ಲಿ ಮಂಜುಳಾ ಕಲ್ಲೂರ ಕುಬ್ಜ ದೇಹದಲ್ಲೇ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲು ಸವೆಸಿದ್ದಳು. ಆದರೆ ಜಿಲ್ಲಾಧಿಕಾರಿ ದೀಪಾ ಚೋಳನ್, ಓರ್ವ ಹೆಣ್ಣಾಗಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಕ್ಕೆ ಮನನೊಂದು ಅಸಹಾಯಕ ಹೆಣ್ಣುಮಗಳೊಬ್ಬಳು ಪ್ರಾಣ ಬಿಟ್ಟಿದ್ದಾಳೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಂಗವಿಕಲ ಹೆಣ್ಣು ಮಕ್ಕಳು ಕಷ್ಟವೆಂದು ಬಂದಾಗ ಸಹಾಯ ಹಸ್ತ ಚಾಚಿದನ್ನು ನೋಡಿದ ಇದೇ ಕರ್ನಾಟಕ, ಇದೀಗ ಅಂಗವಿಕಲ ಹೆಣ್ಣು ಮಗಳೊಬ್ಬಳು ಕಷ್ಟ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಬಳಿಗೆ ಹೋಗಿದ್ದಕ್ಕೆ ಸಾವಿನ ಮನೆ ಸೇರಿದ್ದಾಳೆ. ಜನರ ಪಾಲಿಗೆ ಸರ್ಕಾರ ಸತ್ತು ಹೋಗಿದೆ. ವಿರೋಧ ಪಕ್ಷಗಳು ಸರ್ಕಾದ ಕಿವಿ ಹಿಂಡುವ ಕೆಲಸ ಮಾಡದೆ ನಿದ್ದೆ ಮಾಡುತ್ತಿವೆ.