ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸರ್ಕಾರಕ್ಕೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದೆ. ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಐದು ವಲಯಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಗ್ರಂಥಾಲಯಗಳನ್ನು ನಡೆಸಲು ನಾವೇ ಮುಂದಾಗುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿದೆ.
ಇದರ ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೂ ಸಹ ತನ್ನ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಬಿಬಿಎಂಪಿ ನಿರ್ವಹಣೆಯಲ್ಲಿ 155 ಶಾಲೆ–ಕಾಲೇಜುಗಳಿದ್ದು, ಅವುಗಳ ಮೂಲ ಸೌಕರ್ಯ ಮತ್ತು ಆಡಳಿತ ನಿರ್ವಹಣೆಗೆ ಕಷ್ಟವಾಗಿರುವ ಸಂದರ್ಭದಲ್ಲಿ, ನಗರದಲ್ಲಿರುವ 203 ಗ್ರಂಥಾಲಯ, 1599 ಸರ್ಕಾರಿ ಶಾಲೆಗಳು ಹಾಗೂ 40ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. 2019-20ನೇ ಸಾಲಿನಲ್ಲಿ ಬಿಬಿಎಂಪಿಯ ಕೆಲ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕಗಳು ಸರಿಯಾಗಿ ವಿತರಣೆಯಾಗಿಲ್ಲ. ಅಲ್ಲದೇ ಕಂಪ್ಯೂಟರ್ ಲ್ಯಾಬ್ ಗಳಲ್ಲಿ ಸಾಕಷ್ಟು ಕಂಪ್ಯೂಟರ್ ಗಳು ಕೆಟ್ಟು ಹೋಗಿವೆ ಎಂದು ಅನೇಕ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಿಬಿಎಂಪಿಯ ನಿರ್ವಹಣೆಯಲ್ಲಿರುವ 155 ಶಾಲಾ-ಕಾಲೇಜುಗಳು ಸ್ಥಿತಿ ಇಷ್ಟು ಗಂಭೀರವಾಗಿರುವಾಗ, ಇನ್ನೂ ನಗರದ ಶಾಲಾ-ಕಾಲೇಜುಗಳು ಸೇರಿದಂತೆ ಗ್ರಂಥಾಲಯ, ಆರೋಗ್ಯ ಕೇಂದ್ರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ, ಯಾವ ರೀತಿ ಇದನ್ನೆಲ್ಲಾ ನಿರ್ವಹಿಸಬಹುದು ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ. “ಶಾಲೆ, ಆಸ್ಪತ್ರೆ, ಗ್ರಂಥಾಲಯಗಳಿಗೆ ಎಂದು ಸಂಗ್ರಹಿಸುವ ಸೆಸ್ ಹಣವನ್ನು ಸರ್ಕಾರಕ್ಕೆ ಸಲ್ಲಿಸಿ, ನಂತರ ಸರ್ಕಾರದಿಂದ ಈ ಇಲಾಖೆಗಳಿಗೆ ಕಳುಹಿಸುವುದಕ್ಕಿಂತ, ನೇರವಾಗಿ ನಮ್ಮ ಸುಪರ್ದಿಗೆ ಬಂದರೆ ಇಲ್ಲೆ ನೇರವಾಗಿ ವೆಚ್ಚ ಮಾಡಬಹುದು” ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಪ್ರತಿ ವರ್ಷ ಬಿಬಿಎಂಪಿಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಫಲಿತಾಂಶವು ಸಮಾಧಾನಕರವಾಗಿರುವುದಿಲ್ಲ. 2018ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 1335 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಅದರಲ್ಲಿ ಉತ್ತೀರ್ಣರಾಗಿದ್ದು 592 ವಿದ್ಯಾರ್ಥಿಗಳು ಮಾತ್ರ. ಅಂತೆಯೇ 2019ರಲ್ಲಿ 1663 ವಿದ್ಯಾರ್ಥಿಗಳಲ್ಲಿ 625 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಶೇಕಡ 60ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣವಾಗುವುದಕ್ಕೆ ಹಲವು ಕಾರಣಗಳಿವೆ. ವಿದ್ಯಾರ್ಥಿಗಳು ರಜೆ ಹಾಕದಂತೆ ನೋಡಿಕೊಳ್ಳುವುದು ಶಿಕ್ಷಕರಿಗೆ ಒಂದು ದೊಡ್ಡ ಸವಾಲು. ಸರ್ಕಾರಿ ರಜೆ ಬಂದರೆ ಸಾಕು ಅದರ ಮರುದಿನ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಇದರ ಜೊತೆಗೆ ಶಿಕ್ಷಕರು ಕೂಡ ಮೂರ್ನಾಲ್ಕು ದಿನ ರಜೆ ಹಾಕುವುದು ದುರಂತ. ಅಲ್ಲದೇ ಸಾಕಷ್ಟು ಶಾಲೆಗಳಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳಿಗೆ ಶಿಕ್ಷಕರು ಇಲ್ಲದಿರುವುದರಿಂದ ಹಾಗೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಣೆ ಆಗದಿರುವುದರಿಂದ ಮತ್ತು ಮಕ್ಕಳಿಗೆ ಸರಿಯಾಗಿ ಅಭ್ಯಾಸದ ಪುನರಾವರ್ತನೆ ಮಾಡದಿರುವುದರಿಂದ ಬಿಬಿಎಂಪಿ ಶಾಲೆಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣುವುದು ಅಸಾಧ್ಯ.

ಪಾಲಿಕೆಯು ಕೊನೆಯದಾಗಿ ಶಿಕ್ಷಕರ ಖಾಯಂ ನೇಮಕಾತಿ ಮಾಡಿಕೊಂಡಿದ್ದು 1995ರಲ್ಲಿ. ಅಂದಿನಿಂದ 25 ವರ್ಷಗಳ ಕಳೆದರೂ, ಇದೂವರೆಗೂ ಶಿಕ್ಷಕರ ಹುದ್ದೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ಹೆಚ್ಚಾಗಿ ಅತಿಥಿ ಶಿಕ್ಷಕರು ಹಾಗೂ ಹೊರ ಗುತ್ತಿಗೆ ಶಿಕ್ಷಕರನ್ನು ಮಾತ್ರ ಪಾಲಿಕೆ ನೇಮಕ ಮಾಡಿಕೊಳ್ಳುತ್ತಿದೆ. ಈಗಾಗಲೇ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ 450ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಪಾಲಿಕೆಯು ಯಾವ ಕಾಲಕ್ಕೆ ಭರ್ತಿ ಮಾಡುವುದು? ಇನ್ನು ಮೂರು ವರ್ಷಗಳಲ್ಲಿ ಶೇಕಡ 25ರಷ್ಟು ಖಾಯಂ ಉಪನ್ಯಾಸಕರು ನಿವೃತ್ತಿ ಹೊಂದುವ ಹಂತದಲ್ಲಿದ್ದಾರೆ.
ಅತಿಥಿ ಹಾಗೂ ಹೊರ ಗುತ್ತಿಗೆ ಶಿಕ್ಷಕರ ವೇತನ ಸಹ ಸರಿಯಾಗಿ ನೀಡದೆ ಇರುವುದು ಮತ್ತೊಂದು ದೊಡ್ಡ ಸಮಸ್ಯೆ. ಕಳೆದ ವರ್ಷ ಸಾಕಷ್ಟು ಹೊರಗುತ್ತಿಗೆ ಶಿಕ್ಷಕರು “ನಮಗೆ ಸರಿಯಾದ ವೇತನ ಹಾಗೂ ಸೇವಾ ಭದ್ರತೆಯನ್ನು ನೀಡಿ” ಎಂದು ಪ್ರತಿಭಟನೆ ಮಾಡಿದ್ದರು. ಆದರೆ ಇದುವರೆಗೂ ಅವರ ಬೇಡಿಕೆಯನ್ನು ಪಾಲಿಕೆ ಈಡೇರಿಸಿಲ್ಲ. “ಪೌರ ಕಾರ್ಮಿಕರಿಗೆ ನಮಗಿಂತ ಹೆಚ್ಚು ವೇತನ ಮತ್ತು ಸೇವಾ ಭದ್ರತೆ ದೊರೆಯುತ್ತಿದೆ. ಅವರಿಗೆ 18 ಸಾವಿರದಿಂದ 20 ಸಾವಿರವರೆಗೂ ವೇತನವನ್ನು ನಿಗದಿಪಡಿಸಿದ್ದಾರೆ. ಆದರೆ ಹೊರ ಗುತ್ತಿಗೆ ಶಿಕ್ಷಕರಿಗೆ 12 ಸಾವಿರ ವೇತನ ಸಿಗುತ್ತಿರುವುದು ನಿಜಕ್ಕೂ ದುರಂತ. ನಮ್ಮನ್ನು ಖಾಯಂಗೊಳಿಸುವುದಕ್ಕಿಂತ, ಸೇವಾ ಭದ್ರತೆಯನ್ನು ಕೊಟ್ಟರೆ ಸಾಕು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಾಯ್ತು ರೋಶಿನಿ ಯೋಜನೆ:
ಕಳೆದ ವರ್ಷ ಸರ್ಕಾರದಿಂದ, ನಗರದ 155 ಬಿಬಿಎಂಪಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ದೊರೆಯುವ ರೀತಿಯಲ್ಲಿಯೇ, ಗುಣಮಟ್ಟದ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ, ವ್ಯಕ್ತಿತ್ವ ವಿಕಸನ, ಕಂಪ್ಯೂಟರ್ ಕೌಶಲ್ಯದ ತಿಳುವಳಿಕೆ ಮೂಡಲೆಂದು ‘ರೋಶಿನಿ (ಬೆಳಕು) ಯೋಜನೆ’ಯನ್ನು ಜಾರಿಗೆ ತರಲಾಯಿತು. ಆದರೆ ಇವತ್ತಿನವರೆಗೂ ಎಲ್ಲಾ ಶಾಲೆಗಳಲ್ಲಿ ಅನುಷ್ಠನಾಗೊಳಿಸುವುದರಲ್ಲಿ ಪಾಲಿಕೆ ವಿಫಲವಾಗಿದೆ. ಮತ್ತು ಪ್ರತಿವರ್ಷ ಶಾಲಾ-ಕಾಲೇಜುಗಳ ನಿರ್ವಹಣೆಯ ವೆಚ್ಚ ಹಾಗೂ ಕೆಲವೊಮ್ಮೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹಣದ ಅಭಾವ ಬಂದಾಗ, ಶಿಕ್ಷಕರೇ ತಮ್ಮ ವೇತನ ಹಣದಲ್ಲಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಪಾಲಿಕೆಯಿಂದ ಶಾಲೆಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಮಧ್ಯವರ್ತಿಗಳಾಗಿ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುವ ಸಾಧ್ಯತೆಯಂತೂ ಹೆಚ್ಚಿದೆ.
ಒಂದು ಕಡೆ ಪಾಲಿಕೆ ಶಾಲಾ-ಕಾಲೇಜುಗಳ ನಿರ್ವಹಣೆ ಹೀಗಿದ್ದರೆ, ಮತ್ತೊಂದೆಡೆ ಬಿಬಿಎಂಪಿಯು ಗ್ರಂಥಾಲಯ ಇಲಾಖೆಗೆ 350 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದ ಪುಸ್ತಕ ಖರೀದಿಗೆ, ಗ್ರಂಥಾಲಯದ ಆಡಳಿತ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಗ್ರಂಥಾಲಯ ಇಲಾಖೆಯ ಅಧಿಕಾರಿಗಳು “ಬಿಬಿಎಂಪಿಯು ಸಂಗ್ರಹಣೆ ಮಾಡಿರುವ ಸೆಸ್ ಹಣವನ್ನು ಇದುವರೆಗೂ ನಮ್ಮ ಇಲಾಖೆಗೆ ಪಾವತಿಸಿಲ್ಲ. ಅಲ್ಲದೇ ಸರಿಯಾದ ಸಮಯಕ್ಕೆ ಹಣ ನಮಗೆ ಪಾವತಿಯಾದರೆ, ನಾವೇ ಇನ್ನೂ ಉತ್ತಮ ರೀತಿಯಲ್ಲಿ ಗ್ರಂಥಾಲಯಗಳನ್ನು ಅಭಿವೃದ್ಧಿ ಪಡಿಸುತ್ತೇವೆ” ಎಂದು ಹೇಳುತ್ತಾರೆ. ಬಿಬಿಎಂಪಿಯ ಹೊಸ ಪ್ರಸ್ತಾಪಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಿದೆ.