ಸರ್ಕಾರಿ ನೌಕರರ ರಜಾ ದಿನಗಳನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಹುತೇಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಿರ್ಧಾರದಿಂದ ಸರ್ಕಾರಿ ನೌಕರರ ತೃಪ್ತಿಯ ಮಟ್ಟ ಹೆಚ್ಚಲಿದೆ ಎಂಬುದು ಸರ್ಕಾರದ ಆಶಯ. ಆದರೆ, ಇನ್ನೊಂದೆಡೆ, ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯಡಿ ಸದ್ಯಕ್ಕೆ ರಾಜ್ಯದ ಕೇವಲ 62 ಕಚೇರಿಗಳು ಹಾಜರಾತಿಯನ್ನು ಸರ್ವರ್‌ಗೆ ಒದಗಿಸುತ್ತಿವೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಈ ಹಾಜರಾತಿ ವಿವರ ನೌಕರರು ಕೆಲಸಕ್ಕೆ ಹಾಜರಾಗುವ ಸಮಯ, ಕಚೇರಿಯಿಂದ ಹೊರಡುವ ಸಮಯ ಹಾಗೂ ಕಚೇರಿಯಲ್ಲಿ ಇರುವ ಸಮಯದ ಸರಾಸರಿ ಒದಗಿಸುತ್ತದೆ.
ರಾಜ್ಯದಲ್ಲಿ ಒಟ್ಟು 5.20 ಲಕ್ಷ ಸರ್ಕಾರಿ ನೌಕರರು ಹಾಗೂ 73,000 ನೌಕರರು ಸರ್ಕಾರದ ಧನ ಸಹಾಯದೊಂದಿಗೆ ನಡೆಯುವ ಸಂಸ್ಥೆಗಳಲ್ಲಿದ್ದಾರೆ. ಈಗ ರಾಜ್ಯ ಸರ್ಕಾರ ಕಡಿತಗೊಳಿಸಿರುವ ರಜೆಗಳು ಮತ್ತು ಹೆಚ್ಚಿಸಿರುವ 4ನೇ ಶನಿವಾರದ ಒಂದು ರಜೆಯನ್ನೂ ಸೇರಿಸಿದರೆ, ವರ್ಷವೊಂದರಲ್ಲಿ ಸರ್ಕಾರಿ ನೌಕರರು ಕೆಲಸ ಮಾಡುವ ದಿನಗಳು ಸರಿ ಸುಮಾರು 257 ದಿನಗಳು. ಸರ್ಕಾರಿ ನೌಕರರು ಸರಾಸರಿ 6.5 ಗಂಟೆ (405 ನಿಮಿಷ) ನಿತ್ಯ ದುಡಿಯುತ್ತಿದ್ದಾರೆ ಅಂತ ಅಂದುಕೊಂಡರೂ, ರಾಜ್ಯದ ಸರ್ಕಾರಿ ನೌಕರರ ಸಂಬಳ ಪ್ರತಿ ನಿಮಿಷಕ್ಕೆ ರೂ. 30 ಲಕ್ಷವಾಗುತ್ತದೆ. 2018-19 ರ ಬಜೆಟ್‌ನಲ್ಲಿ ಸರ್ಕಾರ ನೌಕರರ ಸಂಬಳ ವೆಚ್ಚಕ್ಕೆಂದು ರೂ. 31,698 ಕೋಟಿ, ನಿವೃತ್ತಿ ಪಿಂಚಣಿ ಹಂಚಿಕೆಗಾಗಿ ರೂ. 17,801 ತೆಗೆದಿರಿಸಿದೆ. ಹೀಗಿರುವಾಗ, ಸರ್ಕಾರಿ ನೌಕರರು ಕಚೇರಿಯಲ್ಲಿ ಕೆಲಸ ಮಾಡುವ ಅವಧಿ ದಿನದಿಂದ ದಿನಕ್ಕೆ ಕಡಿಮೆಯಾಗಬಾರದಲ್ಲ.
ಬಯೊಮೆಟ್ರಿಕ್ ಹಾಜರಾತಿಯನ್ನು ಮುಖ್ಯ ಸರ್ವರ್ ಗೆ ಸಂಪರ್ಕಿಸಿ ನೌಕರರ ಸರಾಸರಿ ಕಾರ್ಯದ ಬಗ್ಗೆ ವಿವರ ಜನತೆಗೆ ತಿಳಿಯುವಷ್ಟು ಪಾರದರ್ಶಕ ಮಾಡುವುದು ಕೇಂದ್ರ ಸರ್ಕಾರದ ಯೋಜನೆ. 2014ರಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳು ಇದನ್ನು ಮೊತ್ತಮೊದಲು ಅನುಷ್ಠಾನಕ್ಕೆ ತಂದಿದ್ದವು. ನಂತರದ ದಿನಗಳಲ್ಲಿ ಕೆಲವು ರಾಜ್ಯ ಸರ್ಕಾರಗಳೂ ಕೂಡ ಯೋಜನೆಯನ್ನು ಅನುಷ್ಟಾನಗೊಳಿಸಿವೆ (ಉದಾ: attendance.jharkand.gov.in). ಮೊದಲ ಹಂತದಲ್ಲಿ 150 ಇಲಾಖೆಗಳ 40,000 ಕೇಂದ್ರ ಸರ್ಕಾರಿ ನೌಕರರ ಹಾಜರಾತಿ ಸವಿವರ ದಾಖಲಾಗಲು ಆರಂಭವಾಗಿತ್ತು. 2018 ರ ಹೊತ್ತಿಗೆ 7,440 ಕೇಂದ್ರ ಸರ್ಕಾರಿ ಕಚೇರಿಗಳು (9 ಲಕ್ಷ ನೌಕರರು) ಹಾಗೂ ಕೆಲವು ರಾಜ್ಯ ಸರ್ಕಾರಿ ಕಚೇರಿಗಳ (17 ಲಕ್ಷ ನೌಕರರು) ಹಾಜರಾತಿ ದಾಖಲೆಗಳು ಜನತೆಗೂ ದೊರೆಯುವಂತೆ ಪಾರದರ್ಶಕ ಮಾಡಲಾಯಿತು. ಕೇಂದ್ರ ಸರ್ಕಾರಿ ನೌಕರರ ಹಾಜರಾತಿ ಅಂಕಿ ಅಂಶಗಳನ್ನು – attendance.gov.in – ಲಿಂಕ್‌ನಲ್ಲಿ ಪಡೆಯಬಹುದು.
ಈ ವ್ಯವಸ್ಥೆಯನ್ನು (Biometric Attendance System – BAS) ಅಳವಡಿಸುವುದರಿಂದ ನೌಕರರ ಕೆಲಸದ ಬಗ್ಗೆ ಹಲವು ಅಂಕಿ ಅಂಶಗಳನ್ನು ಪಡೆಯಬಹುದು. ಅವುಗಳೆಂದರೆ, ಪ್ರತಿಯೊಬ್ಬ ನೌಕರ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ ಒಟ್ಟು ಅವಧಿ, ಇದನ್ನು 4 ಗಂಟೆಗಳ ಕಾಲವಷ್ಟೇ ಕೆಲಸ ನಿರ್ವಹಿಸುವ, 4-8.5 ಗಂಟೆಗಳ ಕೆಲಸ ಮಾಡುವ ಹಾಗೂ 8.5 ಗಂಟೆಗಿಂತಲೂ ಹೆಚ್ಚಿನ ಸಮಯ ಕಚೇರಿಯಲ್ಲಿರುವ ನೌಕರರ ವಿವರ ವರದಿ ಸಿದ್ಧಪಡಿಸಬಹುದು.
ಸರ್ಕಾರಿ ರಜೆಗಳನ್ನು ಕಡಿತಗೊಳಿಸುವ ಮತ್ತು 4ನೇ ಶನಿವಾರವನ್ನು ರಜಾ ದಿನವಾಗಿ ಘೋಷಿಸುವ ನಿರ್ಣಯ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇದರಂತೆ, ಸಾಂದರ್ಭಿಕ ರಜೆಗಳನ್ನು 15 ದಿನಗಳಿಂದ 12 ದಿನಗಳಿಗೆ ಇಳಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಮಹಾವೀರ ಜಯಂತಿ, ಬಸವ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ ಮತ್ತು ಕಾರ್ಮಿಕರ ದಿನಾಚರಣೆಯ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸಲಾಗಿದೆ. ಇದಲ್ಲದೇ ಗುಡ್ ಫ್ರೈಡೇ, ಮಹಾಲಯ ಅಮಾವಾಸ್ಯೆ ಮತ್ತು ಈದ್-ಮಿಲಾದ್ ರಜೆಗಳನ್ನೂ ರದ್ದುಪಡಿಸಲಾಗಿದೆ. ಈ ಎಲ್ಲಾ ದಿನಗಳನ್ನು ನಿರ್ಬಂಧಿತ ರಜೆಗಳ (Restricted Holidays) ಸಾಲಿಗೆ ಸೇರಿಸಲಾಗಿದೆ. ಈ ಕಡಿತದ ಜೊತೆಗೆ ನೌಕರರಿಗೆ ಇನ್ನು ತಿಂಗಳ 4ನೇ ಶನಿವಾರನ್ನು ರಜೆಯೆಂದು ಘೋಷಿಸಲಾಗಿದೆ. ಈಗಾಗಲೇ 2ನೇ ಶನಿವಾರ ರಜಾ ದಿನವಾಗಿದೆ. ತಿಂಗಳ 4ನೇ ಶನಿವಾರದ ರಜೆಯಿಂದ ನೌಕರರು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಬಹುದು ಹಾಗೂ ಇದರಿಂದ ನೌಕರರ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂಬುದು ಸರ್ಕಾರದ ಆಶಯ.
ಈಗ BAS ಅನುಷ್ಠಾನ ಸಂಬಂಧ ರಾಜ್ಯದ ಇಲಾಖೆಗಳ ಪ್ರಗತಿ ನೋಡೋಣ. ರಾಜ್ಯದ ವಿವಿಧ ಕಚೇರಿಗಳ ನೌಕರರ ಹಾಜರಾತಿ ಆನ್‌ಲೈನ್ ವಿವರ ದೊರಕುವುದು – karnataka.attendance.gov.in – ಲಿಂಕ್‌ನಲ್ಲಿ. ಇಂದು (30-05-2019) ನೋಡಿದಾಗ ಒಟ್ಟು 62 ಕಚೇರಿಗಳು BAS ವ್ಯವಸ್ಥೆಯನ್ನು ಅಳವಡಿಸಿವೆ. ಸರಾಸರಿ ಹಾಜರಾತಿ ಸಾಕಷ್ಟು ತೃಪ್ತಿದಾಯಕವಾಗಿದ್ದರೂ, ಕೆಲವು ಕಚೇರಿಗಳ ನೌಕರರು ಕಚೇರಿ ಪ್ರವೇಶಿಸುವ ಸಮಯ ಹಾಗೂ ಕೆಲಸ ಮುಗಿಸಿ ಹೊರಡುವ ಸಮಯ ಆತಂಕಕಾರಿಯಾಗಿದೆ. ಉದಾಹರಣೆಗೆ, ವೆಬ್‌ಸೈಟ್‌ನಲ್ಲಿ ನಮೂದಿಸಿರುವಂತೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನೌಕರರ ಸರಾಸರಿ ಕೆಲಸ ಆರಂಭವಾಗುವ ಸಮಯ ಮಧ್ಯಾಹ್ನ 12.29. ಈ ಇಲಾಖೆಯ ನೌಕರರ ಸರಾಸರಿ ಕಚೇರಿ ಕೆಲಸ ಮುಗಿಯುವ ಸಮಯ ಮಧ್ಯಾಹ್ನ 2.06. ದಿನದಲ್ಲಿ ಇಲಾಖೆಯ ನೌಕರರು ಕೆಲಸ ನಿರ್ವಹಿಸುವ ಒಟ್ಟು ಸಮಯ 2 ಗಂಟೆ 36 ನಿಮಿಷ!
ಇದರ ಜೊತೆಗೆ, ಕೆಲವು ಇಲಾಖೆಗಳಲ್ಲಿ ನೌಕರರು ನಿರ್ವಹಿಸುವ ಕೆಲಸದ ಒತ್ತಡಕ್ಕೆ ರಾಜ್ಯ ಸರ್ಕಾರ ವಿಶೇಷ ಸೌಲಭ್ಯ ಒದಗಿಸಲೇಬೇಕು. ಈ 62 ಇಲಾಖೆಗಳ ಪೈಕಿ ಪೊಲೀಸ್ ಪ್ರಧಾನ ಕಚೇರಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯೂ ಇದೆ. ಪೊಲೀಸ್ ಪ್ರಧಾನ ಕಚೇರಿಯ ನೌಕರರ ಸರಾಸರಿ ಕೆಲಸದ ಅವಧಿ 7 ಗಂಟೆ 37 ನಿಮಿಷ, ಆದರೆ, ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ನೌಕರರ ಸರಾಸರಿ ಕೆಲಸದ ಅವಧಿ 9 ಗಂಟೆ 22 ನಿಮಿಷ. ಈ ಅವಧಿ ಪೊಲೀಸ್ ಸ್ಟೇಷನ್‌ಗಳಲ್ಲಿ ಇನ್ನೂ ಹೆಚ್ಚಿಗೆ ಇದ್ದೇ ಇರುತ್ತದೆ. ಅಂದಹಾಗೆ, ಪೊಲೀಸ್ ಇಲಾಖೆಯ ನೌಕರರಿಗೆ 2ನೇ ಹಾಗೂ 4ನೇ ಶನಿವಾರದ ರಜೆಯ ಸೌಕರ್ಯವೂ ಇರುವುದಿಲ್ಲ.
ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ (BAS) ಹಾಗೂ ಹಾಜರಾತಿಯ ಪಾರದರ್ಶಕ ಮಾಹಿತಿ ರಾಜ್ಯದ ಎಲ್ಲ ಕಚೇರಿಗಳಲ್ಲೂ ಅಳವಡಿಸಬೇಕಿದೆ. ಆಗ ಮಾತ್ರ ರಜೆಯಂತೆ, ಕೆಲಸದ ಅವಧಿಯ ಬಗ್ಗೆಯೂ ಆಧಾರಸಹಿತ ದಾಖಲೆಗಳೊಂದಿಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಸುಲಭ.