ಕಳೆದ ವಾರ ಗೋವಾದ ಆಸ್ತಿ ಸಂಬಂಧಿತ ವಿಷಯವೊಂದರ ವಿಚಾರಣೆ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆಯ ಹೊಳೆಯುವ ಉದಾಹರಣೆ ಎಂದು ಗೋವಾ ರಾಜ್ಯವನ್ನು ಸುಪ್ರೀಂ ಕೋರ್ಟು ಬಣ್ಣಿಸಿತು. ಇಡೀ ದೇಶಕ್ಕೆ ಸಮಾನ ನಾಗರಿಕ ಸಂಹಿತೆ ಜಾರಿಯಾಗುವ ನಿರೀಕ್ಷೆ ಭರವಸೆಗಳನ್ನು ವ್ಯಕ್ತಪಡಿಸಿತು. ಇಷ್ಟು ಕಾಲ ಇಂತಹ ಪ್ರಯತ್ನವೇ ಯಾಕೆ ನಡೆದಿಲ್ಲ ಎಂದಿತು.
ಎಲ್ಲ ಧಾರ್ಮಿಕ ಸಮುದಾಯಗಳಿಗೆ ವಿವಾಹ, ವಿಚ್ಛೇದನ, ಪಿತ್ರಾರ್ಜಿತ, ದತ್ತು ಸ್ವೀಕಾರ ಮುಂತಾದ ವೈಯಕ್ತಿಕ ವಿಷಯಗಳ ಕುರಿತು ಇಡೀ ದೇಶಕ್ಕೆ ಒಂದು ಕಾನೂನು ಅನ್ವಯ ಆಗುವಂತೆ ಮಾಡುವುದೇ ಸಮಾನ ನಾಗರಿಕ ಸಂಹಿತೆ. ದೇಶದ ಉದ್ದಗಲಕ್ಕೆ ತನ್ನ ನಾಗರಿಕರಿಗೆ ಸಮಾನ ನಾಗರಿಕ ಸಂಹಿತೆಯನ್ನು ಲಾಗು ಮಾಡಲು ಸರ್ಕಾರವು ಪ್ರಯತ್ನಿಸಬೇಕು ಎಂದು ಸಂವಿಧಾನದ 44ನೆಯ ಅನುಚ್ಛೇದವು ಹೇಳಿದೆ.
ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಉದ್ದೇಶ ಸಂವಿಧಾನ ರಚಿಸಿದವರಿಗೆ ಇದ್ದಿದ್ದಲ್ಲಿ, ಈ ವಿಷಯವನ್ನು ಕೇಂದ್ರ ವಿಷಯಗಳ ಪಟ್ಟಿಗೆ ಸೇರಿಸಿ, ವೈಯಕ್ತಿಕ ಕಾನೂನುಗಳ ಕುರಿತು ಸಂಸತ್ತಿಗೆ ಪ್ರತ್ಯೇಕ ಅಧಿಕಾರವ್ಯಾಪ್ತಿ ಕಲ್ಪಿಸುತ್ತಿದ್ದರು. ಆದರೆ ವೈಯಕ್ತಿಕ ಕಾನೂನುಗಳನ್ನು ಕೇಂದ್ರ ಮತ್ತು ರಾಜ್ಯಗಳೆರಡರ ಅಧಿಕಾರವೂ ಇರುವ ಸಮಾನ ಪಟ್ಟಿಗೆ ಸೇರಿಸಲಾಗಿದೆ. ಸಮಾನ ನಾಗರಿಕ ಸಂಹಿತೆಯು ಇತ್ತ ಅಪೇಕ್ಷಣೀಯವೂ ಅಲ್ಲ, ಅತ್ತ ಕಾರ್ಯಸಾಧ್ಯವೂ ಅಲ್ಲ ಎಂದು ಭಾರತೀಯ ಕಾನೂನು ಆಯೋಗವು ಕಳೆದ ವರ್ಷ ಹೇಳಿದ್ದು ಗಮನಾರ್ಹ.
44ನೆಯ ಅನುಚ್ಛೇದವು ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ್ದು. 37ನೆಯ ಅನುಚ್ಛೇದವು ಹೇಳಿರುವ ಪ್ರಕಾರ ಈ ತತ್ವಗಳನ್ನು ಯಾವುದೇ ನ್ಯಾಯಾಲಯ ಜಾರಿ ಮಾಡಲು ಬರುವುದಿಲ್ಲ. ಆದರೆ ಇವುಗಳು ಆಡಳಿತಕ್ಕೆ ಮೂಲಭೂತ ಸ್ವರೂಪದವು. ಮೂಲಭೂತ ಹಕ್ಕುಗಳು ನ್ಯಾಯಾಲಯ ಜಾರಿ ಮಾಡಬಲ್ಲಂತಹವು. ರಾಜ್ಯ ಪ್ರಯತ್ನ ಪಡಬೇಕು ಎಂಬ ಮಾತುಗಳನ್ನು 44ನೆಯ ಅನುಚ್ಛೇದ ಬಳಸಿದೆ. ಇತರೆ ಅನುಚ್ಛೇದಗಳಲ್ಲಿ ಬಳಸಲಾಗಿರುವ ಸೂಕ್ತ ಶಾಸನವನ್ನು ತಂದು ಜಾರಿ ಮಾಡಬೇಕು ಎಂಬ ಮಾತುಗಳು 44ನೆಯ ಅನುಚ್ಛೇದದಲ್ಲಿ ಬಳಕೆಯಾಗಿಲ್ಲ. ಅಂದರೆ, ಸಂವಿಧಾನ ನಿರ್ದೇಶಕಾಂಗ ತತ್ವಗಳ ಪೈಕಿ 44ನೆಯ ಅನುಚ್ಛೇದವೊಂದನ್ನು ಬಿಟ್ಟು ಉಳಿದೆಲ್ಲವುಗಳಲ್ಲಿ ಸರ್ಕಾರದ ಕರ್ತವ್ಯ ಹಿರಿದಾದದ್ದು ಎಂದು ಅರ್ಥ. ಮೂಲಭೂತ ಹಕ್ಕುಗಳು ಮತ್ತು ರಾಜ್ಯಾಂಗ ನಿರ್ದೇಶಕ ತತ್ವಗಳ ಪೈಕಿ ಮೂಲಭೂತ ಹಕ್ಕುಗಳೇ ಹೆಚ್ಚು ಮಹತ್ವ ಉಳ್ಳವು ಎಂಬುದಾಗಿ ಸಂವಿಧಾನ ವ್ಯವಹಾರಗಳ ಪರಿಣಿತ ಪ್ರೊ.ಫೈಜನ್ ಮುಸ್ತಫಾ ವ್ಯಾಖ್ಯಾನಿಸಿದ್ದಾರೆ.

ಬಹಳಷ್ಟು ಸಿವಿಲ್ ವಿಷಯಗಳಲ್ಲಿ ಭಾರತೀಯ ಕಾನೂನು ಈಗಾಗಲೆ ಸಮಾನ ಸಂಹಿತೆಯನ್ನು ಅನುಸರಿಸುತ್ತಿದೆ. ಭಾರತೀಯ ಕಾಂಟ್ರ್ಯಾಕ್ಟ್ ಕಾಯಿದೆ, ನಾಗರಿಕ ಪ್ರಕ್ರಿಯಾ ಸಂಹಿತೆ (ಸಿವಿಲ್ ಪ್ರೊಸೀಜರ್ ಕೋಡ್), ಸರಕು ಮಾರಾಟ ಕಾಯಿದೆ, ಆಸ್ತಿ ವರ್ಗಾವಣೆ ಕಾಯಿದೆ, ಪಾಲುದಾರಿಕೆ ಕಾಯಿದೆ, ಸಾಕ್ಷ್ಯಾಧಾರ ಕಾಯಿದೆಗಳು ಈ ಮಾತಿಗೆ ಉದಾಹರಣೆ. ಆದರೆ ರಾಜ್ಯಗಳು ಕೆಲವು ವಿಷಯಗಳಲ್ಲಿ ನೂರಾರು ತಿದ್ದುಪಡಿ ತಂದಿರುವ ಕಾರಣ ಜಾತ್ಯತೀತ ನಾಗರಿಕ ಕಾನೂನುಗಳಲ್ಲೂ ವೈವಿಧ್ಯತೆ ಇದೆ.
ದೇಶದ ಎಲ್ಲ ಹಿಂದುಗಳಿಗೆ ಒಂದೇ ಕಾನೂನು ಅನ್ವಯಿಸುವುದಿಲ್ಲ. ಮುಸಲ್ಮಾನರು ಮತ್ತು ಕ್ರೈಸ್ತರಿಗೂ ಈ ಮಾತು ಅನ್ವಯಿಸುತ್ತದೆ. ಜಮ್ಮು ಕಾಶ್ಮೀರದಲ್ಲಿ 2019ರ ಆಗಸ್ಟ್ 5ರ ತನಕ ಹಿಂದೂ ಕಾನೂನುಗಳು ಕೇಂದ್ರದ ಕಾನೂನುಗಳಿಗಿಂತ ಭಿನ್ನವಾಗಿದ್ದವು. 1937ರ ಷರಿಯತ್ ಕಾಯಿದೆಯನ್ನು ಕೆಲವು ವರ್ಷಗಳ ಹಿಂದೆ ಜಮ್ಮು ಕಾಶ್ಮೀರಕ್ಕೆ ವಿಸ್ತರಿಸಲಾಯಿತು. ಇದೀಗ ರದ್ದುಗೊಳಿಸಲಾಗಿದೆ. ದೇಶದ ಇತರೆ ಭಾಗಗಳ ಮುಸಲ್ಮಾನರಿಗೆ ಅನ್ವಯ ಆಗುವ ಮುಸ್ಲಿಂ ವೈಯಕ್ತಿಕ ಕಾನೂನಿಗಿಂತ ಭಿನ್ನವಾದ, ವಾಡಿಕೆಯ ಕಾನೂನು ಕಾಶ್ಮೀರದ ಮುಸಲ್ಮಾನರಿಗೆ ಅನ್ವಯಸುತ್ತದೆ. ವಾಸ್ತವವಾಗಿ ಈ ವಾಡಿಕೆಯ ಕಾನೂನು ಹಿಂದೂ ಕಾನೂನಿಗೆ ಸಮೀಪವಾದದ್ದು.
ಈಶಾನ್ಯ ಭಾರತದಲ್ಲಿ 200ಕ್ಕೂ ಹೆಚ್ಚು ಪರಿಶಿಷ್ಟ ಪಂಗಡಗಳಿವೆ. ಅವುಗಳಿಗೆ ಅವುಗಳದೇ ಆದ ವಾಡಿಕೆಯ ಕಾನೂನುಗಳಿವೆ. ನಾಗಾಲ್ಯಾಂಡಿನ ಸ್ಥಳೀಯ ಸಂಪ್ರದಾಯಗಳಿಗೆ ಸಂವಿಧಾನದ ರಕ್ಷಣೆಯಿದೆ. ಮೇಘಾಲಯ ಮತ್ತು ಮಿಜೋರಾಂ ಕೂಡ ಇಂತಹುದೇ ರಕ್ಷಣೆಯನ್ನು ಪಡೆದಿವೆ. ಸುಧಾರಿತ ಹಿಂದೂ ಕಾನೂನು ಕೂಡ ವಾಡಿಕೆಯ ಆಚರಣೆಗಳನ್ನು ರಕ್ಷಿಸುತ್ತದೆ.
ಸಂವಿಧಾನದ 25ನೆಯ ಅನುಚ್ಛೇದವು ವ್ಯಕ್ತಿಯೊಬ್ಬನ ಮೂಲಭೂತ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸುತ್ತದೆ. 26(ಬಿ) ಅನುಚ್ಛೇದವು ಪ್ರತಿಯೊಂದು ಧರ್ಮವೂ ತನ್ನ ಧಾರ್ಮಿಕ ವ್ಯವಹಾರಗಳನ್ನು ತಾನೇ ನಿರ್ವಹಿಸುವ ಹಕ್ಕನ್ನು ಎತ್ತಿ ಹಿಡಿಯುತ್ತದೆ. ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹಕ್ಕನ್ನು 29ನೆಯ ಅನುಚ್ಛೇದ ನೀಡುತ್ತದೆ. ಅನುಚ್ಛೇದ 25ರ ಅಡಿಯ ಧಾರ್ಮಿಕ ಹಕ್ಕು ಸಾರ್ವಜನಿಕ ಸುವ್ಯವಸ್ಥೆ ಆರೋಗ್ಯ ಹಾಗೂ ನೈತಿಕತೆಗೆ ಷರತ್ತಿಗೆ ಒಳಪಟ್ಟಿರುತ್ತದೆ. ಆದರೆ 26ನೆಯ ಅನುಚ್ಛೇದದ ಅಡಿಯಲ್ಲಿ ನೀಡಲಾಗಿರುವ ಗುಂಪಿನ ಸ್ವಾತಂತ್ರ್ಯವು ಇತರೆ ಮೂಲಭೂತ ಹಕ್ಕುಗಳ ಷರತ್ತುಗಳಿಗೆ ಒಳಪಡುವುದಿಲ್ಲ.
ಸಮಾನ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕುಗಳ ಅಧ್ಯಾಯದಲ್ಲಿ ಇರಿಸುವ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ಮತದಾನ ನಡೆಯಿತು. ಸರ್ದಾರ್ ವಲ್ಲಭಬಾಯಿ ನೇತೃತ್ವದ ಮೂಲಭೂತ ಹಕ್ಕುಗಳ ಉಪಸಮಿತಿಯು ಸಮಾನ ನಾಗರಿಕ ಸಂಹಿತೆಯನ್ನು ಮೂಲಭೂತ ಹಕ್ಕುಗಳಿಂದ ಹೊರಗಿರಿಸಬೇಕು ಎಂದು 5:4ರ ಬಹುಮತದಿಂದ ತೀರ್ಮಾನಿಸಿತು. ಹೀಗಾಗಿ ಸಮಾನ ನಾಗರಿಕ ಸಂಹಿತೆಗೆ ಧಾರ್ಮಿಕ ಹಕ್ಕಿಗಿಂತ ಕಡಿಮೆ ಪ್ರಾಮುಖ್ಯತೆ ದೊರೆಯಿತು.

ಹಿಂದೂ ವೈಯಕ್ತಿಕ ಕಾನೂನಿನಲ್ಲಿ ಮೂಲಭೂತ ಬದಲಾವಣೆಗಳನ್ನು ತರುವ ಕ್ರಮವು, ಕೆಲವೇ ಮಂದಿಯ ‘ಪ್ರಗತಿಪರ ವಿಚಾರಗಳನ್ನು’ ಇಡೀ ಹಿಂದೂ ಸಮುದಾಯದ ಮೇಲೆ ಹೇರಿದಂತಾಗುತ್ತದೆ ಎಂದು ಸಂವಿಧಾನರಚನಾ ಸಭೆಯ ಅಧ್ಯಕ್ಷರಾಗಿದ್ದ ಬಾಬೂ ರಾಜೇಂದ್ರ ಪ್ರಸಾದ್ ಅವರು 1948ರಲ್ಲಿ ಎಚ್ಚರಿಕೆ ನೀಡಿದ್ದರು. ಹಿಂದೂ ಕಾನೂನಿನಲ್ಲಿ ಸುಧಾರಣೆಗಳನ್ನು ತರುವ ನಡೆಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ, ಎಂ. ಎ. ಅಯ್ಯಂಗಾರ್, ಕೈಲಾಶನಾಥ ಕಾಟ್ಜು ಹಾಗೂ ಮದನಮೋಹನ ಮಾಳವೀಯ ಅವರು ವಿರೋಧಿಸಿದ್ದರು.
1949ರ ಡಿಸೆಂಬರ್ ತಿಂಗಳಿನಲ್ಲಿ ಹಿಂದು ಸಂಹಿತೆ ವಿಧೇಯಕ (ಹಿಂದು ಕೋಡ್ ಬಿಲ್) ಕುರಿತು ಚರ್ಚೆ ನಡೆಯಿತು. ಮಾತನಾಡಿದ 28 ಮಂದಿ ಸದಸ್ಯರ ಪೈಕಿ 23 ಮಂದಿ ವಿಧೇಯಕವನ್ನು ವಿರೋಧಿಸಿದರು. ವಿಧೇಯಕವನ್ನು ಸಂಸತ್ತಿಗೆ ವಾಪಸು ಕಳಿಸುವ ಇಲ್ಲವೇ ಅದರ ವಿರುದ್ಧ ‘ವಿಟೋ’ ಅಧಿಕಾರ ಚಲಾಯಿಸುವುದಾಗಿ ಅಂದಿನ ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಅವರು 1951ರ ಸೆಪ್ಟಂಬರ್ 15ರಂದು ಬೆದರಿಕೆ ಹಾಕಿದರು. ತರುವಾಯ ಅಂಬೇಡ್ಕರ್ ಅವರು ರಾಜಿನಾಮೆ ನೀಡಬೇಕಾಯಿತು. ಸಂಹಿತೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಪ್ರತ್ಯೇಕ ಕಾಯಿದೆಗಳನ್ನಾಗಿಸಲು ಮತ್ತು ಅವುಗಳ ಹಲವಾರು ಅಂಶಗಳನ್ನು ತೆಳುವಾಗಿಸಲು ನೆಹರೂ ಸಮ್ಮತಿಸಿದರು.
ಮುಸ್ಲಿಂ ವೈಯಕ್ತಿಕ ಕಾನೂನನ್ನು ಸರ್ಕಾರಿ ನಿಯಂತ್ರಣದಿಂದ ಹೊರಗಿಡಬೇಕು. ಜಾತ್ಯತೀತ ದೇಶವು ಜನರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಸಂವಿಧಾನ ರಚನಾ ಸಭೆಯಲ್ಲಿ ಕೆಲ ಮುಸ್ಲಿಂ ಸದಸ್ಯರು ವಾದಿಸಿದರು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ವೈಯಕ್ತಿಕ ಕಾನೂನುಗಳಲ್ಲಿ ಸಮಾನತೆ ತರುವುದು ಎಂದಾದರೂ ಸಾಧ್ಯವಾದೀತೇ ಎಂಬ ಸಂದೇಹ ವ್ಯಕ್ತವಾಯಿತು. ಮುಸ್ಲಿಮರು ಅನಿವಾರ್ಯವಾಗಿ ಬಂಡೇಳುವಂತೆ ಅವರನ್ನು ಬಲವಂತಪಡಿಸುವ ಮಟ್ಟಿಗೆ ತನ್ನ ಕಾನೂನುಗಳನ್ನು ಯಾವ ಸರ್ಕಾರವೂ ಬಳಸುವಂತಿಲ್ಲ ಎಂದು ಬಿ. ಆರ್. ಅಂಬೇಡ್ಕರ್ ಹೇಳಿದರು. ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದ ಅಲ್ಲಾಡಿ ಕೃಷ್ಣಸ್ವಾಮಿ ಅವರು ಹಲವು ಸಮುದಾಯಗಳ ಬಲವಾದ ವಿರೋಧವನ್ನು ನಿರ್ಲಕ್ಷಿಸಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಅವಿವೇಕದ ನಡೆ ಎಂದಿದ್ದರು.