ಇಸ್ರೋ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಿದ್ಧಪಡಿಸಿದ್ದು, ಕರಡನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಸದ್ಯ ಚಾಲ್ತಿಯಲ್ಲಿರುವ ಶಿಕ್ಷಣದ ಸ್ವರೂಪವನ್ನು ಬದಲಿಸುವ ಆಕರ್ಷಕ ಹೊಸ ಸಂಗತಿಗಳು ಕರಡಿನಲ್ಲಿ ವಿಜೃಂಭಿಸಿವೆಯೇ ವಿನಾ ಶಿಕ್ಷಣದ ಜೀವ ಹಿಂಡುತ್ತಿರುವ ಸಮಸ್ಯೆಗಳನ್ನು ಆಧರಿಸಿ ಸರ್ಕಾರಕ್ಕೆ ನಿರ್ದಾಕ್ಷಿಣ್ಯ ಶಿಫಾರಸುಗಳನ್ನು ರವಾನಿಸುವಲ್ಲಿ ಸಮಿತಿ ಸಂಪೂರ್ಣವಾಗಿ ಸೋತಿದೆ.
ಹಣದುಬ್ಬರಕ್ಕೆ ತಕ್ಕಂತೆ ಖಾಸಗಿ ಶಾಲೆಗಳ ಶುಲ್ಕ ಏರಿಕೆ, ಬಡ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ನಿಧಿ ಆರಂಭ, ನಾಲ್ಕು ವರ್ಷಗಳ ಪದವಿ ಶಿಕ್ಷಣ, ತಾಯ್ನುಡಿಯಲ್ಲೇ ಪ್ರಾಥಮಿಕ ಶಿಕ್ಷಣ, ಇಂಗ್ಲಿಷ್ ಕಲಿಕೆ ಕುರಿತ ಒತ್ತು ಕಡಿತ, ಭಾರತೀಯ ಪರಂಪರೆ ಮತ್ತು ಜ್ಞಾನ ಕುರಿತ ಪಠ್ಯಗಳ ಆರಂಭ, ಎನ್‌ಸಿಇಆರ್‌ಟಿ ಪಠ್ಯದ ಬದಲಾವಣೆ, ವಿಶ್ವವಿದ್ಯಾಲಯಗಳ ಮುಖ್ಯಸ್ಥರ ನೇಮಕದಲ್ಲಿ ಸರ್ಕಾರಗಳ ಪಾತ್ರಕ್ಕೆ ಸಂಪೂರ್ಣ ಕತ್ತರಿ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಆಮಂತ್ರಣ, ಪದವಿ ಹಂತದಲ್ಲಿ ಭಾಷೆ, ಸಾಹಿತ್ಯ, ಕಲೆ, ಕ್ರೀಡೆ, ಸಂಗೀತ ವಿಷಯಗಳಿಗೆ ಒತ್ತು, ರಾಷ್ಟ್ರೀಯ ಶಿಕ್ಷಣ ಆಯೋಗದ ಸ್ಥಾಪನೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯವೆಂದು ಬದಲಿಸುವುದು… ಇವಿಷ್ಟು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನ ಪ್ರಮುಖ ಶಿಫಾರಸುಗಳು.
ಈಗ ಇನ್ನೊಂದು ಮಗ್ಗುಲನ್ನು ನೋಡೋಣ. ಸದ್ಯ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ, ಪ್ರಾಥಮಿಕ ಶಿಕ್ಷಣದ ಭಾಷಾ ಮಾಧ್ಯಮ, ಖಾಸಗಿ ಶಾಲೆಗಳ ಅನಿಯಂತ್ರಿತ ಸಂಖ್ಯೆ, ಖಾಸಗಿ ಶಾಲೆಗಳ ಶುಲ್ಕ ಭರಾಟೆ, ಸರ್ಕಾರದ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಪಠ್ಯವನ್ನು ನಿಯಂತ್ರಿಸುವುದು, ಮೂಲಸೌಕರ್ಯ ಕೊರತೆ ಇದ್ದರೂ ಶಾಲೆಗಳ ಆರಂಭಕ್ಕೆ ಅನುಮತಿ, ನಕಲಿ ಶಾಲೆಗಳ ಹಾವಳಿ, ಶಿಕ್ಷಣೇತರ ಕಾರ್ಯಗಳಿಗೆ ಶಿಕ್ಷಕರ ಬಳಕೆ ಇತ್ಯಾದಿ.
ಮೇಲೆ ಪಟ್ಟಿ ಮಾಡಲಾದ ಜ್ವಲಂತ ಸಮಸ್ಯೆಗಳ ಪೈಕಿ, ಪ್ರಾಥಮಿಕ ಶಿಕ್ಷಣದ ಭಾಷಾ ಮಾಧ್ಯಮ ಮತ್ತು ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಕುರಿತು ಸಮಿತಿ ಮಾತನಾಡಿದೆಯಾದರೂ, ಈ ಕುರಿತ ಶಿಫಾರಸುಗಳು ಪರಿಣಾಮಕಾರಿ ಎನಿಸುವಂತಿಲ್ಲ ಅಥವಾ ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಸಮಿತಿ ಮಾಡಿರುವ ಶಿಫಾರಸಿನಲ್ಲಿ ಹೊಸತೇನೂ ಇಲ್ಲ. “ಕನಿಷ್ಠಪಕ್ಷ ಐದನೇ ತರಗತಿಯವರೆಗೆ, ಸಾಧ್ಯವಾದರೆ ಎಂಟನೇ ತರಗತಿಯವರೆಗೆ ಮನೆಯ ಭಾಷೆ ಅಥವಾ ತಾಯಿಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ದೊರೆಯಬೇಕು,” ಎಂಬುದು ಭಾಷಾ ಮಾಧ್ಯಮ ಕುರಿತ ಶಿಫಾರಸು.
ಇನ್ನು, ಖಾಸಗಿ ಶಾಲೆಗಳ ಶುಲ್ಕ ಹಾವಳಿ ಕುರಿತು ಮಾತನಾಡಿರುವ ಸಮಿತಿಯು, ಶಾಲಾಭಿವೃದ್ಧಿ ಶುಲ್ಕ, ಶಾಲಾ ಮೂಲಸೌಕರ್ಯ ನಿಧಿ ಇತ್ಯಾದಿ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂಬ ಕಟ್ಟಪ್ಪಣೆ ವಿಧಿಸುವಂತೆ ಶಿಫಾರಸು ಮಾಡಿದೆ. ಆದರೆ, ಈಗಲೂ ಮತ್ತು ಹಿಂದಿನಿಂದಲೂ ಇಂಥ ಕಾರಣಗಳ ನೆಪದಲ್ಲಿ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂಬ ನಿಯಮಗಳಿವೆ. ಇನ್ನು, ಹೆಚ್ಚುವರಿ ಶುಲ್ಕ ಪಡೆಯುವುದು ಅಥವಾ ಶುಲ್ಕ ಏರಿಸುವುದಾದರೆ ಅದು ಹಣದುಬ್ಬರವನ್ನು ಮಾತ್ರವೇ ಆಧರಿಸಿರಬೇಕು ಎಂಬ ಶಿಫಾರಸು ಕರಡಿನಲ್ಲಿದೆ. ಇಂಥ ವಿಷಯಗಳ ಉಸ್ತುವಾರಿಗಾಗಿ ಸ್ಟೇಟ್ ಸ್ಕೂಲ್ ರೆಗ್ಯುಲೇಟರಿ ಅಥಾರಿಟಿ (ಎಸ್‌ಎಸ್‌ಆರ್‌ಎ) ಸ್ಥಾಪನೆಯಾಗಬೇಕು. ಶುಲ್ಕ ಪರಿಷ್ಕರಣೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯಬೇಕು ಎಂದಿದೆ ಸಮಿತಿ. ಆದರೆ, ಯಾವುದೇ ಮೂಲಸೌಲಭ್ಯ ಇಲ್ಲದಿದ್ದರೂ ಶಾಲೆಗಳ ಆರಂಭಕ್ಕೆ ಅನುಮತಿ ಕೊಡುವ ದೊಡ್ಡ ಮನಸ್ಸಿನ ಅಧಿಕಾರಿಗಳು ಇರುವಾಗ ಅಥವಾ ಪ್ರಾಮಾಣಿಕ ಅಧಿಕಾರಿಗಳಿಗೆ ಮಣ್ಣು ಮುಕ್ಕಿಸುವ ಶಿಕ್ಷಣೋದ್ಯಮಿಗಳು ಇರುವಾಗ ಈ ದಾರಿಯಲ್ಲಿ ಶುಲ್ಕ ಏರಿಕೆ ನಿಯಂತ್ರಣ ಸಾಧ್ಯವೇ ಎಂಬುದು ಪ್ರಶ್ನೆ.
ಇಂಗ್ಲಿಷ್ ಭಾಷಾ ವ್ಯಾಮೋಹಕ್ಕೆ ಕತ್ತರಿ ಹಾಕಬೇಕೆಂಬುದು ಈ ಕರಡು ನೀತಿಯ ಪ್ರಮುಖ ಶಿಫಾರಸುಗಳಲ್ಲಿ ಒಂದು. ಆದರೆ, ಇದನ್ನು ಜನಪ್ರಿಯ ಸಿನಿಮಾ ಮಾದರಿಯಲ್ಲಿ ಮಂಡಿಸಿರುವ ಸಮಿತಿ, ಇದಕ್ಕೆ ವ್ಯತಿರಿಕ್ತ ಎನಿಸುವ ಶಿಫಾರಸುಗಳನ್ನೂ ಮಾಡಿದೆ; ಒಂದನೇ ತರಗತಿಯಿಂದ ಮಕ್ಕಳು ಕನಿಷ್ಠ ಮೂರು ಅಥವಾ ನಾಲ್ಕು ಭಾಷೆಗಳನ್ನು ಕಲಿಯಲು ಅವಕಾಶ ಒದಗಿಸಬೇಕು, ವಿದೇಶಿ ಭಾಷೆಗಳನ್ನು ಕಲಿಯಲು ದಾರಿ ಮಾಡಿಕೊಡಬೇಕು ಮತ್ತು ಭಾರತದಲ್ಲಿ ಕ್ಯಾಂಪಸ್ ಸ್ಥಾಪಿಸಲು ವಿದೇಶಿ ವಿಶ್ವವಿದ್ಯಾಲಯಗಳನ್ನು ಆಹ್ವಾನಿಸಬೇಕು ಎಂಬುದು ಅಂಥ ಶಿಫಾರಸುಗಳು. ಈ ಮೂರೂ ಶಿಫಾರಸುಗಳ ಅನುಷ್ಠಾನ ಇಂಗ್ಲಿಷ್ ಹೊರತಾಗಿ ನಡೆದೀತೇ ಎಂಬುದು ಯಕ್ಷಪ್ರಶ್ನೆ.
ಇಡೀ ಕರಡನ್ನು ಜಾಲಾಡಿದರೆ, ಇದ್ದುದರಲ್ಲಿ ಪ್ರಾಥಮಿಕ ಶಿಕ್ಷಣದ ಭಾಷಾ ಮಾಧ್ಯಮ ಕುರಿತ ಶಿಫಾರಸು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲೆಂದು ರಾಷ್ಟ್ರೀಯ ವಿದ್ಯಾರ್ಥಿವೇತನ ನಿಧಿ ಸ್ಥಾಪಿಸುವ ಶಿಫಾರಸು ಮತ್ತು ವಿಶ್ವವಿದ್ಯಾಲಯಗಳ ಮುಖ್ಯಸ್ಥರ ನೇಮಕದಲ್ಲಿ ಸರ್ಕಾರಗಳ ಪಾತ್ರಕ್ಕೆ ಸಂಪೂರ್ಣ ಕತ್ತರಿ ಹಾಕುವ ಶಿಫಾರಸು ಮಾತ್ರವೇ ಸಮಾಧಾನಕರ. ಮಿಕ್ಕಿದ್ದೆಲ್ಲವೂ ಕ್ಷೇತ್ರಕಾರ್ಯ ಮತ್ತು ವಾಸ್ತವ ಅವಲೋಕನದ ಗಂಭೀರ ಕೊರತೆ ಎದುರಿಸುವಂಥ ಶಿಫಾರಸುಗಳೇ ಆಗಿವೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜಾಲತಾಣದಲ್ಲಿ ಲಭ್ಯವಿದ್ದು, ಈ ನೀತಿ ಕುರಿತ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸಾರ್ವಜನಿಕರು ಜೂನ್ 30ರ ಒಳಗಾಗಿ [email protected] ವಿಳಾಸಕ್ಕೆ ಸಲ್ಲಿಸಬಹುದಾಗಿದೆ.