ಅಧಿಕಾರಸ್ಥರ ಗುಂಡಿಗೆ ನಡುಗುವಂಥ ಪ್ರಶ್ನೆಗಳನ್ನು ಅವರ ಮುಖಕ್ಕೆ ಎಸೆಯಬಲ್ಲ, ಅಧಿಕಾರದ ಮದ, ಜಾತೀಯತೆ, ಮತಾಂದತೆ, ಅನ್ಯಾಯ, ಅಕ್ರಮ ಸೇರಿದಂತೆ ಸಮಾಜವನ್ನು ಬಾಧಿಸುತ್ತಿರುವ ಸಾಮಾಜಿಕ ಅನಿಷ್ಟಗಳಿಂದ ನಮಗೆ ಸ್ವಾತಂತ್ರ್ಯ ಬೇಕಿದೆ ಎಂಬ ಗೀತೆಯ ಮೂಲಕ ಕೋಟ್ಯಂತರ ಭಾರತೀಯರ ಮನದಲ್ಲಿ ಕ್ರಾಂತಿಯ ಜ್ವಾಲೆ ಎಬ್ಬಿಸುವಲ್ಲಿ ಯಶಸ್ವಿಯಾಗಿರುವ, ಅದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ಬೆಂಬಲಿಗರಿಂದ ತುಕಡೇ-ತುಕಡೇ ಗ್ಯಾಂಗ್ ನಾಯಕ ಎಂದು ಕರೆಸಿಕೊಂಡಿರುವ ಪ್ರತಿಷ್ಠಿತ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯಾ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಗೆ ನೇರ ಸವಾಲು ಎಸೆದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ದದ ಹೋರಾಟದಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕ ಸಂಘಟನೆಗಳಿಗೆ ಬೆಂಬಲವಾಗಿ ನಿಂತ ಹಲವು ನಾಯಕರು ಹಾಗೂ ವಿದ್ಯಾರ್ಥಿಗಳನ್ನು ಮೋದಿ ಸರ್ಕಾರ ಹಾಗೂ ಅವರ ಪಕ್ಷದ ಸರ್ಕಾರಗಳಿರುವ ರಾಜ್ಯಗಳು ಬಂಧಿಸಿವೆ. ಅಸ್ಸಾಂ ರೈತ ನಾಯಕ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಅಖಿಲ್ ಗೊಗೊಯ್ ಹಾಗೂ ಉತ್ತರ ಪ್ರದೇಶದ ಯುವ ದಲಿತ ಮುಖಂಡ, ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಜಾದ್ ಬಂಧಿತರಲ್ಲಿ ಪ್ರಮುಖ ಯುವ ನಾಯಕರು. ಇವರ ಬಂಧನವನ್ನು ಅಕ್ರಮ ಎಂದಿರುವ ಕನ್ಹಯಾ ಕುಮಾರ್ “ಇದು ಹೇಡಿ ಸರ್ಕಾರ. ಮೋದಿ-ಶಾ ಅವರೇ ನೀವು ಹೋರಾಟ ಹತ್ತಿಕ್ಕಿರುವುದನ್ನು ನೋಡಿದ್ದೇವೆ ಮತ್ತು ಮುಂದೆಯೂ ನೋಡುತ್ತೇವೆ. ಹಾಗೆಯೇ ನಿಮ್ಮ ಜೈಲುಗಳಲ್ಲಿ ಅದೆಷ್ಟು ಜಾಗವಿದೆ ಎಂಬುದನ್ನೂ ನೋಡುತ್ತೇವೆ” ಎನ್ನುವ ಮೂಲಕ ನಿರ್ಣಾಯಕ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನು ಕನ್ಹಯಾ ನೀಡಿದ್ದಾರೆ.
CAA-NRC-NPR का विरोध करने के कारण इस “कायर और लायर” सरकार ने अखिल गोगोई,चन्द्रशेखर आज़ाद,सदफ ज़फ़र,दीपक कबीर व हजारों अन्य नागरिकों को झूठी धाराएँ लगाकर गिरफ़्तार किया है।
सुनिए साहेब,
दम है कितना दमन में तेरे, देख लिया है देखेंगे
जगह है कितनी जेल में तेरे, देख लिया है देखेंगे— Kanhaiya Kumar (@kanhaiyakumar) December 26, 2019
ಯುವಕನೊಬ್ಬ ಭಾರತದ ಇಬ್ಬರು ಪ್ರಬಲ ನಾಯಕರಾದ ಮೋದಿ-ಶಾ ಅವರಿಗೆ ಇಷ್ಟೊಂದು ಮಹತ್ವದ ಸವಾಲು ಎಸೆಯುತ್ತಿರುವುದು ಒಂದೆಡೆಯಾದರೆ ದೇಶದ ಉದ್ದಗಲಕ್ಕೂ ಪಕ್ಷದ ನೆಲೆ ಹೊಂದಿರುವ ಕಾಂಗ್ರೆಸ್ ನಾಯಕರಾಗಲಿ, ನಿರ್ದಿಷ್ಟ ಪ್ರದೇಶಗಳಲ್ಲಿ ತಮ್ಮದೇ ಪ್ರಭುತ್ವ ಹೊಂದಿರುವ ಇತರೆ ಪ್ರಾದೇಶಿಕ ಪಕ್ಷಗಳ ನೇತಾರರು ‘ಮಾಡು ಇಲ್ಲವೇ ಮಡಿ’ ಮಾದರಿಯಲ್ಲಿ ಹೋರಾಡುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತು ಅಧಿಕಾರಸ್ಥರು ಕಂಪಿಸುವಂತೆ ಮಾಡುವಲ್ಲಿ ವಿಫಲವಾಗುವ ಮೂಲಕ ದೇಶದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿವೆ ಎಂಬ ಮಾತನ್ನು ಸತ್ಯವಾಗಿಸಿದ್ದಾರೆ.
ಸಿಎಎ ವಿರುದ್ಧದ ಜನಾಕ್ರೋಶವನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಲ್ಲ ನಾಯಕತ್ವ ಪ್ರಸ್ತುತಪಡಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಹೊರತುಪಡಿಸಿ ಕಾಂಗ್ರೆಸ್ ಒಳಗೊಂಡ ಬಹುತೇಕ ವಿರೋಧ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂಬುದು ವಾಸ್ತವ. ಮುಖ್ಯಮಂತ್ರಿ ಪದವಿಯನ್ನೂ ಲೆಕ್ಕಿಸದೇ ರಾಜ್ಯದ ವಿವಿಧೆಡೆ ಪಾದಯಾತ್ರೆ ಮಾಡುವ ಮೂಲಕ ಮೋದಿ-ಶಾ ಗ್ಯಾಂಗ್ ಬೆಚ್ಚುವಂತೆ ಮಾಡುವಲ್ಲಿ ಮಮತಾ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಅಮಾಯಕ ಮುಸ್ಲಿಮರು ಹಾಗೂ ಹಿಂದೂಗಳ ಮೇಲೆ ಬಿಜೆಪಿ ಸರ್ಕಾರಗಳಿರುವ ಕಡೆ ಆಡಳಿತಗಾರರ ಪಿತೂರಿಗೆ ಒಳಗಾಗಿ ಪೊಲೀಸರು ನಡೆಸಿರುವ ಘೋರ ಹಿಂಸೆಗಳನ್ನು ಮುಂದಿಟ್ಟು ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿಯನ್ನು ಕಟೆಕಟೆಯಲ್ಲಿ ನಿಲ್ಲಿಸುವ ಅದ್ಭುತ ಅವಕಾಶವನ್ನು ಬಹುತೇಕ ವಿರೋಧ ಪಕ್ಷಗಳು ಮಣ್ಣು ಪಾಲು ಮಾಡಿವೆ.

ಬಿಜೆಪಿ ವಿರುದ್ಧದ ಹೋರಾಟವನ್ನು ಗಾಂಧಿ ಕುಟುಂಬವೇ ಮಾಡಬೇಕು ಎಂದು ಬಯಸಿದಂತಿರುವ ಇತರೆ ಕಾಂಗ್ರೆಸ್ ನಾಯಕರು ತಮ್ಮ ಅಸ್ತಿತ್ವವನ್ನೇ ಮರೆತಿರುವುದು ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಿತ್ರಾರ್ಜಿತ ಆಸ್ತಿ ಎಂಬಂತೆ ಭಾವಿಸುವ ಇವರು ಜನರು ಅನುಭವಿಸುತ್ತಿರುವ ಯಾತನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕಿವಿಯಾಗಿಲ್ಲ ಎಂಬುದೂ ಅಷ್ಟೇ ಸತ್ಯ. ಇಂಥ ದುರ್ಬಲ ಹಾಗೂ ಬದ್ಧತೆ ಇಲ್ಲದ ವಿರೋಧ ಪಕ್ಷಗಳು, ಸರ್ವಾಧಿಕಾರಿ ಮನೋಭಾವದ ಆಡಳಿತ ಪಕ್ಷಕ್ಕಿಂತಲೂ ಹೆಚ್ಚಿನ ಅಪಾಯಕಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಲೋಪ-ದೋಷಗಳನ್ನು ಎತ್ತಿಹಿಡಿಯುವುದು ವಿರೋಧ ಪಕ್ಷಗಳ ಕೆಲಸ. ಇದಕ್ಕೂ ಸರ್ಕಾರ ಬಗ್ಗದಿದ್ದಾಗ ಹೋರಾಟವನ್ನು ಜನರ ಬಳಿಗೆ ಕೊಂಡೊಯ್ಯಬೇಕಾಗುತ್ತದೆ. ಆದರೆ, ಸಿಎಎ ವಿರುದ್ಧದ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಜನರೇ ಹೋರಾಟದ ಮುಂಚೂಣಿಯಲ್ಲಿದ್ದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಇಚ್ಛಾಶಕ್ತಿಯನ್ನು ವಿರೋಧ ಪಕ್ಷಗಳು ಪ್ರದರ್ಶಿಸದಿರುವುದು ಅವುಗಳ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಮಾಧ್ಯಮಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲು ನಾಯಿ ಎನ್ನಲಾಗುತ್ತದೆ. ಆದರೆ, ಮುಖ್ಯವಾಹಿನಿಯಲ್ಲಿರುವ ಕಾವಲು ನಾಯಿಗಳು ಎಂಜಲು ನಾಯಿಗಳಾಗಿವೆ ಎಂಬರ್ಥದ ಭಿತ್ತಿಪತ್ರಗಳನ್ನು ಹಲವು ಪ್ರತಿಭಟನಾಕಾರರು ಎತ್ತಿ ಹಿಡಿಯುವ ಮೂಲಕ ಅವುಗಳಿಗೂ ಛೀಮಾರಿ ಹಾಕಿದ್ದಾರೆ. ಪ್ರತಿಭಟನಾಕಾರರ ಪೈಕಿ ಕೆಲವರು ಬಹಿರಂಗವಾಗಿ ಮಾಧ್ಯಮ ಪ್ರತಿನಿಧಿಗಳನ್ನು ಛೇಡಿಸುವ ಮೂಲಕ ಪೌರತ್ವ ಕಾಯ್ದೆಯ ವಿರುದ್ಧದ ಚಾರಿತ್ರಿಕ ಹೋರಾಟದ ಮಹತ್ವವನ್ನು ಸಾರಿದ್ದಾರೆ. ಹೊಸ ರಾಜಕೀಯ ಸಮೀಕರಣಕ್ಕೆ ದಿಕ್ಸೂಚಿಯಾಗಬಲ್ಲ ಹೋರಾಟದಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸಲು ನೈತಿಕವಾಗಿ ಸೋತಿರುವ ವಿರೋಧ ಪಕ್ಷಗಳು ಹಾಗೂ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ತಮ್ಮೊಳೆಗೆ ಊತು ಹೋಗಿರುವ ಕನ್ನಯ್ಯಾ ಕುಮಾರ್ ರಂಥವರನ್ನು ಈಗಲಾದರೂ ಹುಡುಕಬೇಕಿದೆ. ಅದು ಅರೋಗ್ಯವಂತ ಪ್ರಜಾಪ್ರಭುತ್ವಕ್ಕೆ ಅವಶ್ಯ.