ಸಕ್ರೆಬೈಲು ಶಿವಮೊಗ್ಗದಿಂದ ಇಪ್ಪತ್ತು ಕಿಲೋಮೀಟರ್ ಅಂತರದಲ್ಲಿರುವ ಆನೆಗಳ ಶಿಬಿರ. ಇಲ್ಲಿ ಪ್ರಶಸ್ತವಾದ ಕಾಡು, ಪಳಗಿಸಲು ಅಗತ್ಯ ಸಿಬ್ಬಂದಿ, ಆನೆಗಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಿರುವ ತುಂಗಾ ನದಿ, ಹೀಗೆ ಪ್ರಕೃತಿ ದತ್ತವಾಗಿ ಆನೆಗಳಿಗೆ ಪೂರಕವಾದ ವಾತಾವರಣವಿದೆ. ಆದರೂ ಎರಡು ವರ್ಷಗಳಲ್ಲಿ ಎಂಟು ಆನೆಗಳು ಮೃತಪಟ್ಟಿವೆ ಎಂಬುದನ್ನು ಅರಗಿಸಿಕೊಳ್ಳಲಾಗದು.
ಎರಡು ವರ್ಷಕ್ಕೆ ಎಂಟು ಆನೆ ಮೃತ
ಸಕ್ರೆಬೈಲು ಈಗ ಜನಸಂದಣಿಯಿಂದ ಕಿಕ್ಕಿರಿಯುತ್ತಿರುವ ಪ್ರವಾಸಿತಾಣ. ಹಿರಿ-ಕಿರಿ ಆನೆಗಳೆಲ್ಲಾ ಸೇರಿ ಶಿಬಿರದಲ್ಲಿರುವ ಆನೆಗಳ ಸಂಖ್ಯೆ ಇಪ್ಪತ್ತೈದು ದಾಟುತ್ತದೆ. ಉಪಟಳ ನೀಡುವ ಯಾವುದೇ ಆನೆಯನ್ನು ಯಾವುದೇ ಭಾಗದಲ್ಲಿ ಸೆರೆಹಿಡಿದರೂ ಸಕ್ರೆಬೈಲು ಆನೆಬಿಡಾರಕ್ಕೆ ತರುವ ಯೋಚನೆ ಮಾಡುತ್ತಾರೆ. ಇದಕ್ಕೆ ಬಹಳ ಮುಖ್ಯವಾದ ಕಾರಣ ಎರಡು ಮೂರು ದಶಕಗಳಿಂದ ಆನೆಯ ಒಡನಾಟ ಇಟ್ಟುಕೊಂಡಿರುವ ಸಿಬ್ಬಂದಿ, ಹಾಗೂ ಪಳಗಿಸಲು ಬೇಕಿರುವ ಪರಿಸರ. ಇಷ್ಟೆಲ್ಲಾ ಇದ್ದರೂ ಎರಡು ವರ್ಷಕ್ಕೆ ಎಂಟು ಹಾಗೂ ಎರಡು ತಿಂಗಳಲ್ಲಿ ಎರಡು ಆನೆಗಳು ಹೇಗೆ ಮೃತಪಟ್ಟವು?

ಚೆನ್ನಾಗಿಯೇ ಇತ್ತು ಆದರೆ..!
ಶುಕ್ರವಾರ ಮಧ್ಯಾಹ್ನದ ವೇಳೆಗೆ ನೆಲಕ್ಕೆ ಒರಗಿದ್ದ ನಾಗಣ್ಣ ಎಂಬ ಗಂಡಾನೆ ( 35) ದಷ್ಟ ಪುಷ್ಟವಾಗಿ ಆರೋಗ್ಯವಾಗಿಯೇ ಇತ್ತು. ಸಾಲದು ಎಂಬಂತೆ ಸಿನಿಮಾ ಶೂಟಿಂಗ್‌ಗೂ ಭಾಗಿಯಾಗಿತ್ತು. ಕಾವಾಡಿಗ ಹೇಳುವಂತೆ ಮೇವು ತಿಂದು, ನೀರು ಕುಡಿದು ಚೆನ್ನಾಗಿಯೇ ಇತ್ತು ಸ್ವಾಮಿ, ಆದರೆ ಮೇಲೇಳಲೇ ಇಲ್ಲ ಎಂದರೆ ಏನಾಯ್ತು..? ಈ ಆನೆ ನೆನಪಿರಬಹುದು. ಎರಡು ವರ್ಷದ ಹಿಂದೆ ಚನ್ನಗಿರಿ ಭಾಗದಲ್ಲಿ ವಿಪರೀತ ಉಪಟಳ ನೀಡಿ ವಾರಗಟ್ಟಲೇ ಅಧಿಕಾರಿಗಳನ್ನ ಗೋಳಾಡಿಸಿತ್ತು. ಬಿಡಾರದ ಆನೆಗಳ ಸಹಯೋಗದಿಂದ ಕಷ್ಟಪಟ್ಟು ಇಲ್ಲಿಗೆ ತಂದು ಒಂದೇ ವರ್ಷದಲ್ಲಿ ಪಳಗಿಸಿದ್ದ ಸಿಬ್ಬಂದಿ, ಕಾಡಿನಲ್ಲಿ ನಿರರ್ಗಳವಾಗಿ ಓಡಾಡಿಕೊಂಡು ಬರುವಂತೆ ಮಾಡಿದ್ದರು.
ಹೀಗೆ ಆಶ್ಚರ್ಯವೆನಿಸುವ ತರಹ ಸಾವಿಗೀಡಾಗುವ ಲಕ್ಷಣಗಳೇನು ಇರಲಿಲ್ಲ. ಶನಿವಾರ ಮಧ್ಯಾಹ್ನದವರೆಗೂ ಕೆಳಸ್ತರದ ಅಧಿಕಾರಿಗಳು ಬೆಂಗಳೂರಿನ ಪರಿಣತರಿಗಾಗಿ ಕಾಯುತ್ತಿದ್ದರು. ಅವರು ಬಂದು ಹೋದ ಮೇಲೂ ಗೊತ್ತಾಗಿದ್ದಿಷ್ಟೇ. ಆನೆ ಉದರ ಸಂಬಂಧಿ ( ಪಚನಕ್ರಿಯೆ) ಕಾಯಿಲೆಯಿಂದ ಬಳಲುತ್ತಿತ್ತು. ಮರಣೋತ್ತರ ಪರೀಕ್ಷೆಯ ಅಧಿಕೃತ ವರದಿ ಬರುವುದು ತಡವಾಗಬಹುದು ಅಥವಾ ಅದ್ಯಾರಿಗೂ ತಿಳಿಯದೇ ಇರಬಹುದು. ಆದರೆ ಬಿಡಾರದಲ್ಲಿ ಹಾಗೂ ಇಲಾಖೆಯಲ್ಲಿ ಆನೆಗಳ ಬಗ್ಗೆ ಕಾಳಜಿ ಇಲ್ಲ, ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ.

ಪರಿಣತ ವೈದ್ಯರಿಲ್ಲ
ಸಕ್ರೆಬೈಲು ಬಿಡಾರಕ್ಕೆ ಸಂಬಂಧಿಸಿದಂತೆಯೂ ಚಿಕಿತ್ಸೆ ಲೋಪವೇ ಎದ್ದು ಕಾಣುತ್ತಿದೆ. ರಾಜ್ಯದ ಎಲ್ಲಾ ಬಿಡಾರಗಳಿಸೂ ಸೇರಿ ಮೂವರು ವೈದ್ಯರಿದ್ದಾರೆ. ಇಲ್ಲಿಗೆ ಡೆಪ್ಯುಟೇಷನ್ ಮೇಲೆ ಕರೆತಂದು ಕಾರ್ಯ ನಿರ್ವಹಿಸುತ್ತಾರೆ. ಅವರು ನಾಯಿ, ಕೋಳಿ, ಹಸುಗಳಂತೆ ಆನೆಗಳನ್ನು ಕಂಡರೂ ಆಶ್ಚರ್ಯವಿಲ್ಲ, ಇಡೀ ರಾಜ್ಯದಲ್ಲಿ ಪರಿಣತ ಆನೆ ಪಂಡಿತರಿಲ್ಲ. ಆದರೆ, ಬಿಡುಗಡೆಯಾದ ಹಣವಂತೂ ವಿನಿಯೋಗವಾಗುತ್ತಲೇ ಇದೆ. ಆನೆ ಮುಟ್ಟದೇ ಟ್ರೀಟ್ ಮೆಂಟ್ ಕೊಡ್ತಾರೆ. ಅಧಿಕಾರಿಗಳು ಹಾಗೂ ವೈದ್ಯರು ಆಸುಪಾಸಿನಲ್ಲೇ ಇರಬೇಕು. ಆದರೆ ನಗರವಾಸಿಗಳೇ ಅಧಿಕ ಎಂದು ಮರುಕಪಡುತ್ತಾರೆ ವನ್ಯಜೀವಿ ಸಂರಕ್ಷಣಾ ಹೋರಾಟಗಾರರ ಅಜಯ್ ಶರ್ಮಾ. ಸಕ್ರೆಬೈಲು ಆನೆಬಿಡಾರ ಪ್ರವಾಸಿ ತಾಣವಾಗಿರುವುದೂ ಕೂಡ ಆಘಾತಕಾರಿ. ಹಣ ನೀಡಿದರೆ ಸಾಕು ಆನೆ ತಲೆ ಮೇಲೂ ಕೂರಿಸ್ತಾರೆ. ಅನೆಗಳ ಕ್ರಮಬದ್ಧ ಜೀವನಕ್ಕೆ ಇದೂ ಮಾರಕ. ವೀಕೆಂಡ್ ಬಂದರೆ ಸಾಕು ಸಕ್ರೆಬೈಲ್ ಬಿಡಾರ ಸರ್ಕಸ್ ತಾಣವಾಗಿಬಿಡುತ್ತದೆ. ಬ್ರಿಟಿಷರ ಕಾಲದಲ್ಲಿ ಆನೆಗಳನ್ನು ಕೆಲಸಕ್ಕೆ ಬಳಸುತ್ತಿದ್ದರು. ಈಗ ಮನರಂಜನೆ, ಅಂಬಾರಿಗೆ ಸೀಮಿತವಾದ ಬದುಕೂ ಕೂಡ ಆನೆಗಳಿಗೆ ಬೇಸರವಾಗುತ್ತದೆ. ಕೆಲವೊಮ್ಮೆ ಎಲ್ಲೋ ಹಿಡಿದುಕೊಂಡು ಬಂದ ಆನೆಗಳ ಸಂಬಂಧ ಬೇರ್ಪಡಿಸುವುದೂ ಕೂಡ ಸಾವಿಗ ಕಾರಣವಾಗಬಹುದು.
ಇದು ಸರ್ಕಾರವೇ ನೀಡಿದ ಮಾಹಿತಿ
2018ರ ಮೇನಿಂದ 2019ರ ಮಾರ್ಚ್ ವರೆಗೆ ಕೇವಲ ಹನ್ನೆರಡು ತಿಂಗಳಲ್ಲಿ ಒಟ್ಟು 11 ಆನೆಗಳು ಶಿಬಿರಗಳಲ್ಲಿ ಮೃತಪಟ್ಟಿರುವುದಾಗಿ ಸರ್ಕಾರವೇ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು. ಅದರಲ್ಲಿ ರೌಡಿ ರಂಗ ಆನೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿತ್ತು. ಅದಾದ ಬಳಿಕ ಸಕ್ರೆಬೈಲ್ ನಲ್ಲಿ ಒಂದು ಮರಿ ಆನೆ ಹಾಗೂ ಇನ್ನೊಂದು ಬಲಿಷ್ಠವಾಗಿದ್ದ 35ರ ಪ್ರಾಯದ ಗಂಡು ಆನೆ ಸೇರಿದರೆ ಪಟ್ಟಿ ಬೆಳೆಯುತ್ತಿದೆ. ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದಲ್ಲಿ ಎಂಟು ಶಿಬಿರಗಳಿವೆ. ಅದರಲ್ಲಿ ಸುಮಾರು ನೂರಕ್ಕೂ ಅಧಿಕ ಆನೆಗಳಿವೆ. ಎಲ್ಲಾ ಕಡೆ ಒಂದೇ ಸಮಸ್ಯೆ. ಕಳೆದ ವರ್ಷ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ ನೀಡಿದ ಮಾಹಿತಿ ಪ್ರಕಾರ ಎಂಟು ವರ್ಷದಲ್ಲಿ 655 ಆನೆಗಳು ಸಾವನ್ನಪ್ಪಿವೆ, ಅಂದರೆ ದೇಶದಾದ್ಯಂತ ಆನೆಗಳಿಗೆ ಆರೈಕೆ ಇಲ್ಲದಂತಾಗಿದೆ.