ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಗಾದೆ ಮಾತಿನಂತೆ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಗಾದೆ ಹುಟ್ಟಿಕೊಂಡಿದೆ. ಅದೆಂದರೆ, ಲಾಬಿ, ಒತ್ತಡಗಳಿಗೆ ವಿಳಂಬವೇ ಮದ್ದು ಎಂಬುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ರಚನೆಯಲ್ಲಿ ತೋರಿದ ವಿಳಂಬದಂತೆ ಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆಗೂ ಅದೇ ಮಾರ್ಗ ಅನುಸರಿಸುತ್ತಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ತಮ್ಮ ನೇತೃತ್ವದ ಅಲ್ಪಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನಕ್ಕೆ ತೀವ್ರ ಲಾಬಿ, ಒತ್ತಡ ಬಂದಿತ್ತು. ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಬೇಕು ಎಂದು ಕೆಲವರು ಪಟ್ಟುಹಿಡಿದಿದ್ದರು. ಆಗ ಸಂಪುಟ ವಿಸ್ತರಣೆ ವಿಳಂಬದ ಮೂಲಕ ಈ ಒತ್ತಡವನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಿದ್ದ ಯಡಿಯೂರಪ್ಪ ಸಂಪುಟ ರಚನೆ ಮಾಡಿ ಅದರಿಂದ ಸರ್ಕಾರಕ್ಕೆ ಅಪಾಯವಾಗದಂತೆ ನೋಡಿಕೊಂಡಿದ್ದರು. ಆಗ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಈ ವಿಳಂಬಕ್ಕೆ ನೆಪವಾಗಿತ್ತು. ಈಗಲೂ ಅದೇ ಪರಿಸ್ಥಿತಿ ಎದುರಾಗಿದೆ.
15 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ 11 ಮಂದಿ ಅನರ್ಹ ಶಾಸಕರು ಗೆದ್ದು ಬಂದಿದ್ದಾರೆ. ಇವರೆಲ್ಲರಿಗೂ ಸಚಿವ ಸ್ಥಾನ ನೀಡಬೇಕು. ಜತೆಗೆ ಸೋತ ಇಬ್ಬರಿಗೂ ಸಚಿವ ಸ್ಥಾನಕ್ಕಾಗಿ ಒತ್ತಡ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಕಳೆದ ಬಾರಿ ಸಚಿವ ಸ್ಥಾನ ಸಿಗದೇ ಇರುವವರು ಕೂಡ ಲಾಬಿ ಮಾಡುತ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಸಂಪುಟ ರಚನೆಗಿಂತಲೂ ವಿಸ್ತರಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರೊಂದಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ಕೂಡ ಅವರ ಮೇಲಿದೆ. ಹೀಗಾಗಿ ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆಯಿಂದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಿಗುತ್ತಿಲ್ಲ ಎಂಬ ನೆಪವೊಡ್ಡಿ ಸಂಪುಟ ವಿಸ್ತರಣೆ ವಿಳಂಬ ಮಾಡುತ್ತಿದ್ದಾರೆ. ಇದರ ಜತೆ ಜತೆಗೆ ಸಚಿವ ಸ್ಥಾನ ವಂಚಿತರಿಂದ ಅಸಮಾಧಾನ ಸ್ಫೋಟಗೊಳ್ಳದಂತೆ ಏನು ಮಾಡಬೇಕು ಎಂಬ ಬಗ್ಗೆಯೂ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಸಂಪುಟ ವಿಸ್ತರಣೆ ಕಸರತ್ತು ಕಠಿಣವಾಗಲು ಕಾರಣ
ಮುಖ್ಯಮಂತ್ರಿ ಸೇರಿದಂತೆ 34 ಸದಸ್ಯಬಲದ ಸಚಿವ ಸಂಪುಟ ಹೊಂದಲು ಅವಕಾಶವಿದೆ. ಈ ಪೈಕಿ 18 ಸ್ಥಾನಗಳು ಈಗಾಗಲೇ ಭರ್ತಿಯಾಗಿದ್ದು, 16 ಸ್ಥಾನ ಬಾಕಿ ಉಳಿದಿದೆ. ಈ 16 ಸ್ಥಾನಗಳಲ್ಲಿ 2 ಸ್ಥಾನಗಳನ್ನು ಉಳಿಸಿಕೊಂಡು 14 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಬೇಕಿದೆ. ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಎಂದಾದರೆ 11 ಮಂದಿಗೆ ಸಚಿವಗಿರಿ ನೀಡಬೇಕಾಗುತ್ತದೆ. ಉಳಿದೆರಡು ಹುದ್ದೆಗಳಿಗೆ ಯಾರನ್ನು ಆಯ್ಕೆ ಮಾಡುವುದು ಎಂಬುದೇ ದೊಡ್ಡ ಸಮಸ್ಯೆ.
ಇದರೊಂದಿಗೆ ಸಚಿವ ಸ್ಥಾನಗಳ ಹಂಚಿಕೆ ವಿಚಾರದಲ್ಲಿ ಪ್ರದೇಶವಾರು ನ್ಯಾಯ ಒದಗಿಸಲು ಸಾಧ್ಯವಾಗದೇ ಇದ್ದರೂ ಸ್ವಲ್ಪ ಮಟ್ಟಿಗಾದರೂ ಅವಕಾಶ ನೀಡದೇ ಇದ್ದಲ್ಲಿ ಭವಿಷ್ಯದಲ್ಲಿ ಪಕ್ಷ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಅಂದುಕೊಂಡಂತೆ ಸಂಪುಟ ವಿಸ್ತರಣೆ ಮಾಡಿದರೆ ರಾಜಧಾನಿ ಬೆಂಗಳೂರಿಗೆ ಒಟ್ಟು ಏಳು ಸ್ಥಾನ ಸಿಕ್ಕಂತಾಗುತ್ತದೆ. ಈಗಾಗಲೇ ಬೆಂಗಳೂರಿನಿಂದ ಡಾ.ಸಿ.ಎನ್.ಅಶ್ವತ್ಥನಾರಾಯಣ (ಉಪಮುಖ್ಯಮಂತ್ರಿ), ಆರ್.ಅಶೋಕ್, ಎಸ್.ಸುರೇಶ್ ಕುಮಾರ್, ವಿ.ಸೋಮಣ್ಣ ಮಂತ್ರಿಗಳಾಗಿದ್ದಾರೆ. ಈಗ ಗೆದ್ದಿರುವ ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಮತ್ತು ಎಸ್.ಗೋಪಾಲಯ್ಯ ಅವರಿಗೂ ಸಚಿವ ಸ್ಥಾನ ನೀಡಬೇಕು. ಇನ್ನು ರಾಜ್ಯದಲ್ಲಿ ಬಾಕಿ ಇರುವ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದು ಅದರಲ್ಲಿ ರಾಜರಾಜೇಶ್ವರಿ ನಗರದ ಮುನಿರತ್ನ ಮತ್ತು ಮಸ್ಕಿಯ ಪ್ರತಾಪ ಗೌಡ ಪಾಟೀಲ ಗೆದ್ದರೆ ಅವರಿಗೂ ಸಚಿವ ಸ್ಥಾನ ನೀಡಬೇಕಾಗುತ್ತದೆ. ಆಗ ಬೆಂಗಳೂರಿನ ಸಚಿವ ಸಂಖ್ಯೆ 8ಕ್ಕೇರುತ್ತದೆ.
ಅದೇ ರೀತಿ ಬೆಳಗಾವಿ ಜಿಲ್ಲೆಯಿಂದ ಈಗ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದಿರುವ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮುಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಿದಾಗ ಆ ಜಿಲ್ಲೆಯಿಂದ ಮೂವರು ಸಚಿವರಾದಂತಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಉಮೇಶ್ ಕತ್ತಿ ಅವರಿಗೆ ದೊಡ್ಡ ಹುದ್ದೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಲು ಈ ಹಿಂದೆಯೇ ಘೋಷಿಸಿದ್ದು, ಅದರಂತೆ ಅವರಿಗೆ ಸಚಿವ ಸ್ಥಾನ ಸಿಕ್ಕಿದರೆ ಒಟ್ಟು ನಾಲ್ಕು ಸಚಿವರು ಬೆಳಗಾವಿ ಜಿಲ್ಲೆಯವರಾಗುತ್ತಾರೆ.
ಅಂದರೆ, ಈ ಎರಡೂ ಜಿಲ್ಲೆಗಳಲ್ಲಿ ಒಟ್ಟು 11 ಮಂದಿ ಸಚಿವರಾದಂತಾಗಲಿದ್ದು, ಇದು ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಕೊಟ್ಟರೂ ಸಚಿವ ಸ್ಥಾನ ಸಿಗದೇ ಇರುವ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲಿ ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಬೀರುವುದು ಖಚಿತ. ಈ ಕಾರಣಕ್ಕಾಗಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಾರ್ಯತಂತ್ರಗಳನ್ನು ರೂಪಿಸಿಯೇ ಸಂಪುಟ ವಿಸ್ತರಣೆಗೆ ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಕ್ಕೆ ನೆಪಗಳನ್ನು ಹೇಳುತ್ತಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆಯೂ ಸವಾಲು
ಇನ್ನು ಉಪಮುಖ್ಯಮಂತ್ರಿ ಹುದ್ದೆ ಕೂಡ ಯಡಿಯೂರಪ್ಪ ಅವರ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ಸಚಿವ ಸಂಪುಟ ರಚನೆಗೆ ವರಿಷ್ಠರು ತಮಗೆ ಪೂರ್ಣ ಸ್ವಾತಂತ್ರ್ಯ ನೀಡಿದರು ಎಂಬ ಒಂದೇ ಕಾರಣಕ್ಕೆ 17 ಮಂದಿ ಪೈಕಿ ಮೂವರನ್ನು ಉಪಮುಖ್ಯಮಂತ್ರಿ ಮಾಡಿದ್ದ ಅವರಿಗೆ ಈಗ ಮತ್ತೆ ಕನಿಷ್ಠ ಎರಡು ಉಪಮುಖ್ಯಮಂತ್ರಿಗಳನ್ನು ಮಾಡುವ ಒತ್ತಡವಿದೆ. ಹೇಗಾದರೂ ಮಾಡಿ ಮತ್ತೆರಡು ಉಪಮುಖ್ಯಮಂತ್ರಿ ಹುದ್ದೆಗಳಿಗೆ ವರಿಷ್ಠರನ್ನು ಒಪ್ಪಿಸಬಹುದಾದರೂ ಅದನ್ನು ಯಾರಿಗೆ ಹಂಚುವುದು ಎಂಬುದು ದೊಡ್ಡ ಪ್ರಶ್ನೆ.
ಏಕೆಂದರೆ, ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಬಯಸಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಆ ಸ್ಥಾನ ನೀಡಲೇ ಬೇಕಾಗುತ್ತದೆ. ಇನ್ನು ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿ.ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ನೀಡಿದ ಭರವಸೆಯನ್ನೂ ಈಡೇರಿಸಬೇಕಾಗಿದೆ. ಅವರಿಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಅಸಮಾಧಾನಗೊಳ್ಳಬಹುದು. ಜತೆಗೆ ರಮೇಶ್ ಜಾರಕಿಹೊಳಿ ಮತ್ತು ಬಿ.ಶ್ರೀರಾಮುಲು ಇಬ್ಬರೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುವುದರಿಂದ ಒಂದೇ ಜಾತಿಗೆ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ದಲಿತ, ಒಕ್ಕಲಿಗ ಸೇರಿದಂತೆ ಇತರೆ ಸಮುದಾಯಗಳಿಗೆ ಒಂದು ಸ್ಥಾನ ಮಾತ್ರ ನೀಡಲಾಗಿದೆ ಎಂಬ ಆರೋಪವನ್ನೂ ಎದುರಿಸಬೇಕಾಗಬಹುದು. ಈ ಗೊಂದಲ ಬಗೆಹರಿಸುವುದು ಕೂಡ ಸವಾಲಿನ ಕೆಲಸವಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೆ?
ಪ್ರಸ್ತುತ ಬೆಂಗಳೂರು ನಗರದಿಂದ ಸಚಿವ ಆರ್.ಅಶೋಕ್ ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಸಂಪುಟ ರಚನೆ ವೇಳೆ ಇವರಿಬ್ಬರ ಮಧ್ಯೆ ಸಂಘರ್ಷ ಉಂಟಾಗಬಾರದು ಎಂಬ ಕಾರಣಕ್ಕೆ ಈ ಖಾತೆಯನ್ನು ಇಬ್ಬರಿಗೂ ನೀಡದೆ ಮುಖ್ಯಮಂತ್ರಿಗಳು ತಮ್ಮಲ್ಲೇ ಉಳಿಸಿಕೊಂಡಿದ್ದರು. ಈ ಮಧ್ಯೆ ಹೊಸದಾಗಿ ಆಯ್ಕೆಯಾಗಿರುವ ಭೈರತಿ ಬಸವರಾಜು ಕೂಡ ಈ ಹುದ್ದೆ ಮೇಲೆ ಕಣ್ಣಿಟ್ಟು ಲಾಬಿ ಆರಂಭಿಸಿದ್ದಾರೆ. ಎಸ್.ಟಿ.ಸೋಮಶೇಖರ್ ಮತ್ತು ಮುನಿರತ್ನ ಅವರೂ ಭೈರತಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಮೂವರು ಬಿಜೆಪಿಗೆ ಸೇರಲು ಬೆಂಗಳೂರು ನಗರಾಭಿವೃದ್ಧಿ ಖಾತೆ ಕೂಡ ಪ್ರಮುಖ ಕಾರಣವಾಗಿತ್ತು.
ಅದರಂತೆ ಭೈರತಿ ಬಸವರಾಜು ಅವರಿಗೆ ಬೆಂಗಳೂರು ನಗರಾಭಿವೃದ್ಧಿ ನೀಡಿದರೆ ಅಶ್ವತ್ಥನಾರಾಯಣ ಮತ್ತು ಆರ್.ಅಶೋಕ್ ಮುನಿಸಿಕೊಳ್ಳುವುದು ಖಚಿತ. ಬೆಂಗಳೂರು ನಗರದ ಮೇಲೆ ತಮ್ಮ ಹಿಡಿ ಸಾಧಿಸಲು ಇಬ್ಬರೂ ಪ್ರಯತ್ನಿಸುತ್ತಿದ್ದು, ಈ ಹುದ್ದೆ ಭೈರತಿ ಬಸವರಾಜು ಪಾಲಾದರೆ ಹಿಡಿತ ಕೈತಪ್ಪಿಹೋಗುವುದು ಖಚಿತ. ಇನ್ನೊಂದೆಡೆ ಅಶೋಕ್ ಅಥವಾ ಅಶ್ವತ್ಥನಾರಾಯಣ ಪೈಕಿ ಯಾರಾದರೂ ಒಬ್ಬರಿಗೆ ಈ ಹುದ್ದೆ ನೀಡಿದರೆ ಆಗ ಭೈರತಿ ಸೇರಿದಂತೆ ಹೊಸದಾಗಿ ಆಯ್ಕೆಯಾಗಿರುವ ಮೂವರು ಬೆಂಗಳೂರಿನ ಶಾಸಕರು ತಿರುಗಿಬೀಳುವ ಆತಂಕವಿದೆ.
ಈ ಎಲ್ಲಾ ಕಾರಣಗಳಿಂದ ಸಂಪುಟ ವಿಸ್ತರಣೆ ಎಂಬುದು ಯಡಿಯೂರಪ್ಪ ಅವರ ಪಾಲಿಗೆ ಸವಾಲಿನ ಕೆಲಸವಾಗಿದೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲವಾದರೂ ಹೆಚ್ಚು ಮಂದಿ ಅಸಮಾಧಾನಗೊಳ್ಳದಂತೆ ನೋಡಿಕೊಳ್ಳಬೇಕು. ಅದನ್ನು ಹೇಗೆ ನಿಭಾಯಿಸುವುದು ಎಂಬ ಯೋಚನೆಯಲ್ಲೇ ಸಂಪುಟ ವಿಸ್ತರಣೆಗೆ ದಿನ ಮುಂದೂಡಲಾಗುತ್ತಿದೆ.