ಕರ್ನಾಟಕದ ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದ ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಮುಖ್ಯಮಂತ್ರಿ ಪದವಿಗಿಂತಲೂ ಮಹತ್ವದ ಸ್ಥಾನ ದೊರೆತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನಂತರದ ಪ್ರಮುಖ ಸ್ಥಾನ ಎಂದೇ ಪರಿಗಣಿತವಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ನೇಮಕಗೊಂಡಿರುವುದು ಹಲವರ ಹುಬ್ಬೇರಿಸಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 13 ವರ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ನಡುವಿನ ಕೊಂಡಿಯಾಗಿದ್ದ ರಾಮ್ ಲಾಲ್ ಅವರ ಸ್ಥಾನಕ್ಕೆ ಸಂತೋಷ್ ಅವರನ್ನು ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ನೇಮಿಸಿದ್ದಾರೆ.
2006ರಿಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ರಾಮ್ ಲಾಲ್ ಮರಳಿ ಮಾತೃಸಂಸ್ಥೆ ಆರ್ ಎಸ್ ಎಸ್ ಗೂಡು ಸೇರಿದ್ದಾರೆ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಹೊರತುಪಡಿಸಿ ಉಳಿದ ಕಡೆ ಬಿಜೆಪಿಯು ಉಚ್ಛ್ರಾಯ ತಲುಪಿದೆ. ಹಾಗಾಗಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿರುವ ದಕ್ಷಿಣ ಭಾರತದವರೇ ಆದ ಬಿ ಎಲ್ ಸಂತೋಷ್ ಅವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎನ್ನಲಾಗುತ್ತಿದೆ.
ಸಂತೋಷ್ ಅವರನ್ನು 2014ರಲ್ಲಿ ದಕ್ಷಿಣ ಭಾರತದ ರಾಜ್ಯಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಇದಕ್ಕೂ ಮುನ್ನ ಎಂಟು ವರ್ಷಗಳ ಕಾಲ ಸಂತೋಷ್ ಕರ್ನಾಟಕ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಕಾರ್ಯತಂತ್ರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡುವಲ್ಲಿ ಸಂತೋಷ್ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳ ಗಡಿ ದಾಟುವ ಯಾವುದೇ ಭರವಸೆ ಹೊಂದಿರದ ಬಿಜೆಪಿಯನ್ನು ಅಧಿಕಾರದ ಸಮೀಪಕ್ಕೆ ತಂದು ನಿಲ್ಲಿಸುವಲ್ಲಿ ಅಮಿತ್ ಶಾ ಹೆಗಲಿಗೆ ಹೆಗಲು ಕೊಟ್ಟು ಕಾರ್ಯತಂತ್ರ ಹೆಣೆದವರು ಸಂತೋಷ್. ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದಲ್ಲಿ 25 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಐತಿಹಾಸಿಕ ಸಾಧನೆ ಮಾಡುವಲ್ಲಿ ಸಂತೋಷ್ ಪಾತ್ರ ಮಹತ್ತರವಾಗಿದೆ. ಬಿಜೆಪಿಯಲ್ಲಿ ಸಂತೋಷ್ ಅವರ ಸಾಮರ್ಥ್ಯವೇನು ಎಂಬುದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸ್ಪಷ್ಟವಾಗಿತ್ತು.
ಕರ್ನಾಟಕ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ, ಕಾರ್ಯತಂತ್ರ ರೂಪಿಸುವುದು, ಸಮಾವೇಶ ಆಯೋಜನೆ ಸೇರಿದಂತೆ ಹಲವು ವಿಚಾರಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ತಿಳಿಸದೇ ಸಂತೋಷ್ ಕಾರ್ಯರೂಪಕ್ಕೆ ತಂದಿದ್ದರು. ಬಿಜೆಪಿಯ ಕಟ್ಟಾಳುಗಳಲ್ಲಿ ಒಬ್ಬರಾಗಿದ್ದ ದಿವಂಗತ ಎಚ್ ಎನ್ ಅನಂತಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಅವರ ಪತ್ನಿ ತೇಜಸ್ವಿನಿ ಅವರ ಬದಲಿಗೆ 28 ವರ್ಷದ ಯುವಕ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಡಿಸುವ ಮೂಲಕ ಸಂತೋಷ್ ಸುದ್ದಿಯ ಕೇಂದ್ರಬಿಂದುವಾಗಿದ್ದರು. ತೇಜಸ್ವಿ ಸೂರ್ಯ ಅವರ ಆಯ್ಕೆ ಯಡಿಯೂರಪ್ಪ ಅವರಿಗೂ ಶಾಕ್ ನೀಡಿತ್ತು. ಈ ಸಂದರ್ಭದಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದ ಸಂತೋಷ್ “ವಂಶವಾಹಿಯ (ಡಿಎನ್ಎ) ಆಧಾರ ಮೇಲೆ ಪಕ್ಷದ ಟಿಕೆಟ್ ನೀಡುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ” ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಹಾಗೂ ತೇಜಸ್ವಿನಿ ಅನಂತ್ ಕುಮಾರ್ ಗೆ ಛಾಟಿ ಬೀಸಿದ್ದರು. ತೇಜಸ್ವಿ ಸೂರ್ಯ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕರನ್ನು ಹದ್ದುಬಸ್ತಿನಲ್ಲಿಡಲು ಅಮಿತ್ ಶಾ ಅವರನ್ನೇ ಕರೆತಂದು ರೋಡ್ ಶೋ ನಡೆಸುವ ಮೂಲಕ ಬಿ ಎಲ್ ಸಂತೋಷ್ ತಮ್ಮ ಶಕ್ತಿ ಪ್ರದರ್ಶಿಸಿದ್ದರು.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದ ಯಡಿಯೂರಪ್ಪ ಅವರ ದ್ವಿತೀಯ ಪುತ್ರ ವಿಜಯೇಂದ್ರ ಅವರಿಗೆ ಅಡ್ಡಗಾಲು ಹಾಕಿದ್ದವರಲ್ಲಿ ಸಂತೋಷ್ ಸಹ ಸೇರಿದ್ದರು ಎಂಬ ಪುಕಾರುಗಳಿವೆ. ಸಂಘಟನಾ ಸಾಮರ್ಥ್ಯದಿಂದ ಪಕ್ಷದಲ್ಲಿ ಪ್ರಭಾವಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸಂತೋಷ್ ಪದೋನ್ನತಿಯ ಹಿಂದೆ ಬಿಜೆಪಿಗೆ ಹಲವು ಲೆಕ್ಕಾಚಾರಗಳಿವೆ. ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಹೋರಾಟ ನಡೆಸಿ ರಾಜಕೀಯ ಲಾಭ ಎತ್ತುವ ಕನಸು ಕಂಡಿದ್ದ ಬಿಜೆಪಿಗೆ ನಿರೀಕ್ಷಿತ ಯಶಸ್ಸು ದೊರೆತಿಲ್ಲ. ಈ ಹೋರಾಟದಲ್ಲಿ ಸಂತೋಷ್ ಅವರ ಪಾತ್ರ ಪ್ರಮುಖವಾಗಿತ್ತು. ಈಗ ದಕ್ಷಿಣ ರಾಜ್ಯಗಳಲ್ಲಿ ಮಿಷನ್ ಯಶಸ್ವಿಯಾಗಿಸುವ ಉದ್ದೇಶದಿಂದ ಸಂತೋಷ್ ಅವರ ಅನುಭವದ ಲಾಭ ಪಡೆಯಲು ಅವರಿಗೆ ಜವಾಬ್ದಾರಿ ನೀಡಲಾಗಿದೆ ಎನ್ನಲಾಗುತ್ತಿದೆ. ಈ ನಡುವೆ, 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನ ಬಿ ಎಲ್ ಸಂತೋಷ್ ಅವರು “ದೇಶ ಗೆದ್ದಿದ್ದೇವೆ ಎಂದು ಬೀಗುವ ಅಗತ್ಯವಿಲ್ಲ. ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡುವವರೆಗೆ ಬಿಜೆಪಿ ಕಾರ್ಯಕರ್ತರು ವಿರಮಿಸಬಾರದು” ಎಂದು ಟ್ವೀಟ್ ಮಾಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
ಕೆಮಿಕಲ್ ಎಂಜಿನಿಯರ್ ಆದ ಸಂತೋಷ್ ಅವರ ಬೆಳವಣಿಗೆಯೂ ಕುತೂಹಲಕರವಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ದಿವಂಗತ ಅನಂತ್ ಕುಮಾರ್ ಬಣದ ಆಟಾಟೋಪ ಕುಗ್ಗಿಸಲು ಯಡಿಯೂರಪ್ಪ ಅವರು ಅನಂತ್ ಕುಮಾರ್ ಪ್ರತಿನಿಧಿಸುತ್ತಿದ್ದ ಬ್ರಾಹ್ಮಣ ಸಮುದಾಯದವರೇ ಆದ ಸಂತೋಷ್ ಅವರನ್ನು ಅಸ್ತ್ರವಾಗಿ ಬಳಸಲಾರಂಭಿಸಿದ್ದರು. ಆದರೆ, 2008-13ರ ಬಿಜೆಪಿ ಆಡಳಿತದಲ್ಲಿ ನಡೆದ ಹಲವು ನಾಟಕೀಯ ಬೆಳವಣಿಗೆಗಳು ಬಿಎಸ್‌ವೈ ಅವರ ಒಂದು ಕಾಲದ ಆಪ್ತರಾಗಿದ್ದ ಸಂತೋಷ್ ಅವರೇ ಬಿಎಸ್ ವೈಗೆ ಶತ್ರುವಾಗಿ ಬದಲಾಗಿದ್ದರು ಎನ್ನುವ ಆರೋಪವಿದೆ. ಇದೇ ಕಾರಣಕ್ಕಾಗಿ 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷ ಕಟ್ಟಿದ್ದ ಯಡಿಯೂರಪ್ಪ ಅವರು ಸಂತೋಷ್ ಅವರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಬಿಜೆಪಿ ತೊರೆಯಲು ಸಂತೋಷ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದರು. ಯಡಿಯೂರಪ್ಪ ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಲು ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗಿತ್ತು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಎಸ್‌ವೈ ಅವರ ಒಂದು ಕಾಲದ ಆಪ್ತಮಿತ್ರ ಕೆ ಎಸ್ ಈಶ್ವರಪ್ಪ ಅವರನ್ನು ಮುಂದಿಟ್ಟಿಕೊಂಡು ಸಂತೋಷ್ ಅವರು ಯಡಿಯೂರಪ್ಪರನ್ನು ಅಣಿಯಲು ಯಶಸ್ವಿಯಾಗಿದ್ದರು ಎನ್ನುವ ಆರೋಪ ಪ್ರಬಲವಾಗಿ ಕೇಳಿಬಂದಿತ್ತು. ಆನಂತರ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದರೂ ಸಂತೋಷ್ ಜೊತೆಗೆ ಮುಸುಕಿನ ಗುದ್ದಾಟ ಮುಂದುವರಿದಿತ್ತು. ಪಕ್ಷದಲ್ಲಿ ಯಡಿಯೂರಪ್ಪ ಆಪ್ತರಿಗೆ ಸ್ಥಾನಮಾನ ದೊರೆಯುತ್ತಿದೆ ಎಂದು ಆರೋಪಿಸಿ ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಯಡಿಯೂರಪ್ಪಗೆ ಮುಗ್ಗುಲ ಮುಳ್ಳಾಗಿ ಪರಿಣಮಿಸಿದ್ದರು. ಇದರ ಹಿಂದಿನ ಸೂತ್ರದಾರ ಸಂತೋಷ್ ಎಂಬ ಆರೋಪ ಬಿಜೆಪಿ ವಲಯದಿಂದಲೇ ಕೇಳಿಬಂದಿತ್ತು.
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಬಿಜೆಪಿಯ ನಾಯಕತ್ವದ ವಿರುದ್ಧ ಸಂತೋಷ್ ಟ್ವೀಟಾಸ್ತ್ರ ಪ್ರಯೋಗಿಸಿದ್ದರು. “ತಂಡಸ್ಫೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದವರು ಎಂದಿಗೂ ಗೆಲುವು ಸಾಧಿಸಲಾರರು” ಎಂಬ ಚಾಣಕ್ಯನ ಉಕ್ತಿಯನ್ನು ಉಲ್ಲೇಖಿಸಿ ಯಡಿಯೂರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು.
ವರ್ಷದ ಆರಂಭದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ನಡೆದ ಕೆಲವು ಅಹಿತರ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ್ದ ಸಂತೋಷ್ “ಧಾರವಾಡ ಸಾಹಿತ್ಯ ಸಂಭ್ರಮದ ಚಟುವಟಿಕೆ ಸಾಹಿತ್ಯಕ್ಕೆ ಸೀಮಿತಗೊಳಿಸದಿದ್ದರೆ ಸಂಭ್ರಮವೂ ಇರುವುದಿಲ್ಲ, ಸಾಹಿತಿಗಳೂ ಇರುವುದಿಲ್ಲ” ಎಂದು ಬೆದರಿಕೆ ಹಾಕಿದ್ದರು. ಕಿಡಿನುಡಿಗಳಿಗೆ ಹೆಸರಾದ ಸಂತೋಷ್ ಅವರು ಸರಳ ಜೀವನ ರೂಢಿಸಿಕೊಂಡಿದ್ದಾರೆ. ಕಾರ್ಯಕರ್ತರ ಜೊತೆ ಆಪ್ತವಾಗಿ ನಡೆದುಕೊಳ್ಳುವುದರಿಂದ ಅವರ ಬಗ್ಗೆ ಕಾರ್ಯಕರ್ತರಲ್ಲಿ ವಿಶೇಷ ಅಭಿಮಾನವಿದೆ. “ಭ್ರಷ್ಟಾಚಾರ ಚಟುವಟಿಕೆಗಳಿಂದ ದೂರ ಇರುವ ಸಂತೋಷ್ ತಮ್ಮ ನೀತಿ-ನಿಲುವುಗಳೇ ಸರಿ ಎಂದು ವಾದಿಸುತ್ತಾರೆ. ಇದು ಸಂತೋಷ್ ವ್ಯಕ್ತಿತ್ವದಲ್ಲಿ ಸರಿಪಡಿಸಲಾರದ ಲೋಪ” ಎನ್ನುತ್ತಾರೆ ಅವರ ನಿಕಟವರ್ತಿಗಳು. ಇನ್ನು ಸಭೆ-ಸಮಾರಂಭ, ಮಾಧ್ಯಮಗಳಿಂದ ದೂರವೇ ಉಳಿದಿರುವ ಅವರು ಪಕ್ಷ ಸಂಘಟನೆಯಲ್ಲಿ ಎತ್ತಿದ ಕೈ. ಆರ್ ಎಸ್ ಎಸ್ ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅವಿವಾಹಿತರಾದ ಸಂತೋಷ್ ಅವರನ್ನು ಪಕ್ಷದ ವಲಯದಲ್ಲಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹೋಲಿಕೆ ಮಾಡಲಾಗುತ್ತದೆ.
ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹುದ್ದೆಗೇರಿರುವ ಸಂತೋಷ್ ಅವರು ತವರು ರಾಜ್ಯವಾದ ಕರ್ನಾಟಕದಲ್ಲಿ ತಮ್ಮ ಬೆಂಬಲಿಗರಿಗೆ ಮಹತ್ವದ ಸ್ಥಾನಮಾನ ಕಲ್ಪಿಸುವುದ ಜೊತೆಗೆ ರಾಜ್ಯ ಬಿಜೆಪಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಬಹುತೇಕ ನಿಚ್ಚಳವಾಗಿದೆ. ಬಿಜೆಪಿಯ ಆಪರೇಷನ್ ಸಕ್ಸಸ್ ಆಗಿ ಮೈತ್ರಿ ಸರ್ಕಾರ ಉರುಳಿ, ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾದರೂ ಅವರಿಗೆ ಮುಕ್ತವಾಗಿ ಅಧಿಕಾರ ನಡೆಸುವ ಅವಕಾಶ ಸಿಗುವ ಸಾಧ್ಯತೆ ಕ್ಷೀಣ ಎನ್ನಲಾಗುತ್ತದೆ. ರಾಜಕೀಯ ಬದುಕಿನ ಸಂಧ್ಯಾಕಾಲದಲ್ಲಿರುವ ಯಡಿಯೂರಪ್ಪ ಅವರು ತಮ್ಮ ಹಿತಶತ್ರು ಪಕ್ಷದಲ್ಲಿ ಮೇಲುಗೈ ಸಾಧಿಸಿರುವುದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ. ಸಂತೋಷ್ ಪದೋನ್ನತಿಯು ಯಡಿಯೂರಪ್ಪ ಬೆಂಬಲಿಗರಲ್ಲಿ ಆತಂಕ ಮೂಡಿಸಿದ್ದರೆ ಆಶ್ಚರ್ಯವಿಲ್ಲ.