ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಬಿಜೆಪಿ ಹಾಗೂ ಮಾಧ್ಯಮಗಳು ಎಚ್ ಡಿ ಕುಮಾರಸ್ವಾಮಿ ಅವರು ಇದ್ದಾಗ್ಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಅವರ ಹಿರಿಯ ಪುತ್ರ ಎಚ್ ಡಿ ರೇವಣ್ಣ ಅವರನ್ನು ಸೂಪರ್ ಸಿಎಂ (ಮುಖ್ಯಮಂತ್ರಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದವರು) ಎಂದು ಆಗಾಗ್ಗೆ ಬಿಂಬಿಸುತ್ತಿದ್ದವು. ಪ್ರಭಾವ, ರಾಜಕೀಯ ಒತ್ತಡಗಳನ್ನು ಮುಂದಿಟ್ಟುಕೊಂಡು ಸೂಪರ್ ಸಿಎಂ ಎಂಬ ಗುಮ್ಮವನ್ನು ಚಲಾವಣೆಗೆ ತರಲಾಯಿತು. ಹಿಂದಿನಿಂದಲೂ ಇದು ಇದೆಯಾದರೂ ಇತ್ತೀಚಿನ ರಾಜಕಾರಣದಲ್ಲಿ ಸೂಪರ್ ಸಿಎಂ ಬಳಕೆ ವ್ಯಾಪಕವಾಗಿದೆ. ಕರ್ನಾಟಕದ ಮಟ್ಟಿಗಂತು ತುಸು ಹೆಚ್ಚೇ ಎನ್ನುವಷ್ಟಿದೆ.
ಬದಲಾದ ಕಾಲಮಾನದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈ ಸೂಪರ್ ಸಿಎಂ ಗುಮ್ಮ ಮೈತ್ರಿ ಸರ್ಕಾರಕ್ಕಿಂತ ಹೆಚ್ಚಾಗಿ ಹಾಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ವ್ಯಾಪಕವಾಗಿ ಕಾಡುತ್ತಿರುವುದನ್ನು ಇತ್ತೀಚಿನ ವಿದ್ಯಮಾನಗಳು ಅಧಿಕೃತಗೊಳಿಸಿವೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಿ ಎಲ್ ಸಂತೋಷ್ ರೂಪದಲ್ಲಿ ಯಡಿಯೂರಪ್ಪ ಬೆನ್ನಿಗೆ ಬಿದ್ದಿರುವ ಸೂಪರ್ ಸಿಎಂ ಭೂತವು ಅವರನ್ನು ಕಂಗೆಡಿಸಿದೆ.
ಸಾಮಾನ್ಯವಾಗಿ ಶಾಸಕಾಂಗ ಪಕ್ಷದಲ್ಲಿ ಆಯ್ಕೆಯಾಗುವವರು ಮುಖ್ಯಮಂತ್ರಿಯಾಗುತ್ತಾರೆ. ಇದು ಸಂವಿಧಾನ ಬದ್ಧ ಪ್ರಕ್ರಿಯೆ. ಆದರೆ, ಕಾಲಕ್ರಮೇಣ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಅಷ್ಟೇ ಏಕೆ ಗ್ರಾಮ ಪಂಚಾಯಿತಿಯಲ್ಲೂ ಚುನಾಯಿತರಾದವರ ಬದಲಿಗೆ ಸಂವಿಧಾನೇತರ ಶಕ್ತಿಗಳು ಅಧಿಕಾರ ಚಲಾಯಿಸುವುದು ವಾಡಿಕೆ ಎಂಬಂತಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿ ಸಹ ಇದೇ. ತನ್ನ ನಿರ್ದೇಶನದ ಮೂಲಕ ಸರ್ಕಾರ ಹಾಗೂ ಪಕ್ಷ ನಡೆಸುವುದನ್ನು ಕಾಂಗ್ರೆಸ್ ದಶಕಗಳಿಂದ ಪಾಲಿಸಿಕೊಂಡು ಬಂದಿತ್ತು. ಇತ್ತೀಚೆಗೆ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಕಳೆಗುಂದಿದೆ. ಆದರೆ, ಅದರ ಆಡಳಿತಾತ್ಮಕ ಕಾರ್ಯವೈಖರಿಯಲ್ಲಿ ಅಷ್ಟೇನು ಬದಲಾವಣೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ದೇಶದ ಉದ್ದಗಲಕ್ಕೂ ವಿಸ್ತರಿಸಿದ ಬಿಜೆಪಿ ಈಗ ಅದೇ ಸಂಸ್ಕೃತಿಯನ್ನು ನಕಲು ಮಾಡಿದೆ.

ಅಧಿಕಾರದ ವಿಕೇಂದ್ರೀಕರಣವೇ ಪ್ರಜಾಪ್ರಭುತ್ವದ ಆಶಯ. ಆದರೆ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದು ಪ್ರತಿಪಾದಿಸುವ ಸಿದ್ಧಾಂತ ಮತ್ತು ನಡವಳಿಗೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ ಎಂಬುದು ಕೇಂದ್ರ ಮತ್ತು ರಾಜ್ಯ ಬಿಜೆಪಿಯನ್ನು ನೋಡಿದರೆ ಸ್ಪಷ್ಟವಾಗುತ್ತದೆ.
ಯಡಿಯೂರಪ್ಪನವರ ವಿಷಯಕ್ಕೆ ಮರಳುವುದಾದರೆ ಒಂದು ಕಾಲದಲ್ಲಿ ಕರ್ನಾಟಕ ಬಿಜೆಪಿಯ ಪ್ರಶ್ನಾತೀತ ನಾಯಕ ಎಂದು ಗುರುತಿಸಿಕೊಂಡಿದ್ದ ಬಿ ಎಸ್ ವೈ ಅವರ ರೆಕ್ಕೆಪುಕ್ಕಗಳನ್ನೆಲ್ಲಾ ಬಿ ಎಲ್ ಸಂತೋಷ್ ಕತ್ತರಿಸಿ ಬಿಸಾಡಿದ್ದಾರೆ. ರಾಜ್ಯದಲ್ಲಿ ಯುವ ನಾಯಕತ್ವ ಬೆಳೆಸುವ ವಿಚಾರವನ್ನು ಮುಂದಿಟ್ಟುಕೊಂಡು, ಜಾತಿ ರಾಜಕಾರಣ ವಿರೋಧಿಸುತ್ತಲೇ ಜಾತಿ ಸಮೀಕರಣ ತೂಗಿಸುವ ಕೆಲಸಕ್ಕೆ ಕೈಹಾಕಿರುವ ಬಿಜೆಪಿ ಒಟ್ಟೊಟ್ಟಿಗೆ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವ ಮೂಲಕ ಪಕ್ಷದ ಶ್ರೇಣಿಯಲ್ಲೇ ಕುದಿಮೌನಕ್ಕೆ ಕಾರಣವಾಗಿದೆ.

ಎಸ್ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಜೆ ಎಚ್ ಪಾಟೀಲ್ ನಂತರ ಲಿಂಗಾಯತ ಸಮುದಾಯದ ಪ್ರಬಲ ನಾಯಕನಾಗಿ ಬೆಳೆದಿರುವ ಯಡಿಯೂರಪ್ಪ ತಮ್ಮ ಸುತ್ತಲೂ ತಮ್ಮದೇ ಜಾತಿಯ ನಾಯಕರ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ. ಬಿ ಎಸ್ ವೈ ಅಧಿಕಾರದಲ್ಲಿದ್ದಾಗ ಸಾಮಾನ್ಯವಾಗಿ ಅವರ ಪುತ್ರರಾದ ಸಂಸದ ಬಿ ವೈ ರಾಘವೇಂದ್ರ, ಬಿ ವೈ ವಿಜಯೇಂದ್ರ ಹಾಗೂ ಅವರ ಆಪ್ತರಾದ ಶೋಭಾ ಕರಂದ್ಲಾಜೆ ಪರ್ಯಾಯ ಶಕ್ತಿ ಕೇಂದ್ರಗಳಾಗಿದ್ದರು. ಈಗ ಇದಕ್ಕೆ ಸಂಪೂರ್ಣವಾಗಿ ತಡೆಯೊಡ್ಡಿರುವ ಸಂತೋಷ್, ಮೂವರು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಿ ಯಡಿಯೂರಪ್ಪಗೆ ಚೆಕ್ ಮೇಟ್ ನೀಡಿದ್ದಾರೆ.
ಇದೇ ಮೊದಲಲ್ಲ:
ಅಂದಹಾಗೆ, ಬಿ ಎಸ್ ವೈ ಸಂತೋಷ್ ಶಾಕ್ ಕೊಡುತ್ತಿರುವುದು ಇದು ಮೊದಲೇನಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗಿಂತಲೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಚ್ಚು ಭರವಸೆ ಇಟ್ಟಿದ್ದು ಸಂತೋಷ್ ಮೇಲೆ. ಆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿ ಎಸ್ ವೈ ಎರಡನೇ ಪುತ್ರ ಬಿ ವೈ ವಿಜಯೇಂದ್ರ ಸ್ಪರ್ಧೆಗೆ ಕತ್ತರಿ ಹಾಕಿದವರ ಪೈಕಿ ಸಂತೋಷ್ ಒಬ್ಬರು ಎಂಬ ಪುಕಾರು ಎದ್ದಿತ್ತು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುತ್ತಲೇ ಸಂತೋಷ್, ಆರ್ ಎಸ್ ಎಸ್ ನಲ್ಲಿ ತಮ್ಮ ಪ್ರಭಾವ ಬಳಸಿ ಬಿಜೆಪಿಯಲ್ಲಿ ಹಿಡಿತ ಸಾಧಿಸುವ ಕೆಲಸ ಆರಂಭಿಸಿದ್ದರು. ತಮ್ಮದೇ ಆದ ಶಿಷ್ಯ ಬಳಗ ಸೃಷ್ಟಿಸಲು ಕೈಹಾಕಿದ್ದ ಸಂತೋಷ್, ರಾಜ್ಯ ಬಿಜೆಪಿ ಬಲವರ್ಧನೆಗೆ ಶ್ರಮಿಸಿದ ಮಾಜಿ ಸಚಿವ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿಸಿ, ತಮ್ಮದೇ ಸಮುದಾಯದ 28 ವರ್ಷದ ಕಟ್ಟರ್ ಹಿಂದುತ್ವ ಪ್ರತಿಪಾದಕ ತೇಜಸ್ವಿ ಸೂರ್ಯ ಆಯ್ಕೆಯ ಮೂಲಕ ಪಕ್ಷದ ವಲಯದಲ್ಲಿ ಸಣ್ಣ ಹೃದಯ ಸ್ತಂಭನಕ್ಕೆ ಕಾರಣರಾಗಿದ್ದರು.
ತೇಜಸ್ವಿ ಸೂರ್ಯ ಅವರ ಆಯ್ಕೆ ಯಡಿಯೂರಪ್ಪಗೆ ಶಾಕ್ ನೀಡಿತ್ತು. “ಕೇಂದ್ರೀಯ ಕೋರ್ ಕಮಿಟಿಗೆ ತೇಜಸ್ವಿನಿ ಹೆಸರು ಶಿಫಾರಸು ಮಾಡಿದ್ದೆವು. ವರಿಷ್ಠರು ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ” ಎಂದು ಪ್ರತಿಕ್ರಿಯಿಸಿ ನಿಟ್ಟುಸಿರು ಬಿಟ್ಟಿದ್ದರು ಯಡಿಯೂರಪ್ಪ. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಆಯ್ಕೆ ಸಮರ್ಥಿಸಿದ್ದ ಸಂತೋಷ್, “ವಂಶವಾಹಿಯ (ಡಿಎನ್ ಎ) ಆಧಾರದಲ್ಲಿ ಟಿಕೆಟ್ ನೀಡಲಾಗದು” ಎನ್ನುವ ಮೂಲಕ ತೇಜಸ್ವಿನಿ ಅವರ ಬಾಯಿ ಮುಚ್ಚಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಸಂತೋಷ್, ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದರಿಂದ ಒಳಗೊಳಗೆ ಕುದಿಯುತ್ತಿದ್ದ ಆ ಕ್ಷೇತ್ರದ ವಿಧಾನಸಭಾ ಶಾಸಕರಾದ ವಿ. ಸೋಮಣ್ಣ, ಆರ್. ಅಶೋಕ್, ಸತೀಶ್ ರೆಡ್ಡಿ ಅವರಿಗೆ ಎಚ್ವರಿಕೆ ರವಾನಿಸುವ ಉದ್ದೇಶದಿಂದ ಅಮಿತ್ ಶಾ ಕರೆಸಿ ಬಸವನಗುಡಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಹೈಕಮಾಂಡ್ ನಲ್ಲಿ ತನ್ನ ಪ್ರಭಾವ ಎಷ್ಟಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ತೇಜಸ್ವಿ ಸೂರ್ಯ ಸಂಸದರಾಗಿ ಆಯ್ಕೆಯಾಗಿರುವುದು ಈಗ ಇತಿಹಾಸ.
ಆನಂತರ, ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವಲ್ಲಿಯೂ ಸಂತೋಷ್ ಕೈವಾಡ ಸ್ಪಷ್ಟವಾಗಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿರುವ ಸಂತೋಷ್, ರಾಜ್ಯ ಬಿಜೆಪಿಯನ್ನು ಅಧಿಕೃತವಾಗಿ ತಮ್ಮ ತೆಕ್ಕೆಗೆ ಪಡೆದಿದ್ದಾರೆ. ವೈಯಕ್ತಿಕವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಂಥ ಮಹತ್ವದ ಸ್ಥಾನಕ್ಕೇರುವ ಮೂಲಕ ಸಂತೋಷ್ ಬಿಜೆಪಿಯ ಪ್ರಧಾನ ಭೂಮಿಕೆಗೆ ಬಂದು ನಿಂತಿದ್ದಾರೆ. ಬಿಜೆಪಿಯ ನಂಬರ್ 1 ಮತ್ತು 2 ಸ್ಥಾನಗಳಾದ ಮೋದಿ-ಶಾ ಪಕ್ಕದಲ್ಲಿ ಕಾಣಿಸಿಕೊಳ್ಳುವ ಸಂತೋಷ್ ವಿರುದ್ಧ ಮಾತನಾಡಲಾಗದ ಸ್ಥಿತಿಯಲ್ಲಿ ಬಿಜೆಪಿಯ ಹಿರಿಯ ನಾಯಕರಿದ್ದಾರೆ. ಅಸಮಾಧಾನ, ಅವಮಾನಗಳನ್ನು ಸಹಿಸುವುದು ಅನಿವಾರ್ಯ ಎಂಬಂತಾಗಿದೆ.
ಪಕ್ಷ ಹಾಗೂ ಸರ್ಕಾರವನ್ನು ಕುಣಿಸುತ್ತಿರುವ ಸಂತೋಷ್, ಡಿಸಿಎಂಗಳ ನೇಮಕದ ಮೂಲಕ ಪರ್ಯಾಯ ಶಕ್ತಿಕೇಂದ್ರಗಳನ್ನು ಸೃಷ್ಟಿಸಿದ್ದಾರೆ. ಕುಟುಂಬ, ಆಪ್ತೇಷ್ಟರಿಂದ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವ ಒತ್ತಡಕ್ಕೆ ಸಿಲುಕಿರುವ ಯಡಿಯೂರಪ್ಪ ಬೆಂದು ಬಸವಳಿಯುತ್ತಿರುವುದು ಸ್ಪಷ್ಟವಾಗಿದೆ. ಹೀಗೆ ಮಾಡದಿದ್ದಲ್ಲಿ ಅವರ ಕುರ್ಚಿಗೇ ಕಂಟಕ ಎದುರಾಗುವ ಸಾಧ್ಯತೆ ಇದೆ. ಅಧಿಕಾರ ಪಡೆದು ‘ಸಂತೋಷ’ ಪಡುವ ಬದಲು ಆ ಹೆಸರು ಕೇಳಿ ಬೆಚ್ಚುತಿದ್ದಾರಂತೆ ಬಿ ಎಸ್ ವೈ.