ಸಚಿವ ಸಂಪುಟ ರಚನೆ ಮತ್ತು ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಅಸಮಾಧಾನ ನಿಧಾನವಾಗಿ ತಣ್ಣಗಾಗುವ ಲಕ್ಷಣ ಕಾಣಿಸುತ್ತಿದೆ. ಅಸಾಮಾಧಾನಿತರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೂ ಸಾಕಷ್ಟು ಸಮಯಾವಕಾಶ ಇರುವುದರಿಂದ ಸದ್ಯಕ್ಕಂತೂ ಸರ್ಕಾರಕ್ಕೆ ಯಾವುದೇ ಅಪಾಯವಾಗುವ ಸಾಧ್ಯತೆಗಳು ಇಲ್ಲ. ಆದರೆ, ಸರ್ಕಾರ ರಚನೆ ಪ್ರಕ್ರಿಯೆ ಬಿಜೆಪಿಯನ್ನು ಇನ್ನಷ್ಟು ಶಕ್ತಿಯುತಗೊಳಿಸುವ ಬದಲು ಶಕ್ತಿ ಕುಂದಿಸುವ ಕೆಲಸ ಮಾಡಿದೆ ಎಂಬುದಂತೂ ಸ್ಪಷ್ಟ.
ಸಚಿವರ ಆಯ್ಕೆ, ಖಾತೆಗಳ ಹಂಚಿಕೆ ಮತ್ತು ಮೂರು ಉಪಮುಖ್ಯಮಂತ್ರಿಗಳ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ವರಿಷ್ಠರ ನಡುವಿನ ಹೊಂದಾಣಿಕೆಯಿಂದಾಗಿ ಪಕ್ಷದ ಬುಡಕ್ಕೆ ಪೆಟ್ಟು ಬಿದ್ದಿದೆ. ಮುಖಂಡರಿಗಿಂತ ಹೆಚ್ಚಾಗಿ ಕಾರ್ಯಕರ್ತರಲ್ಲಿ ನೋವು, ಬೇಸರ ತರಿಸಿದೆ. ಅದರಲ್ಲೂ ಸಚಿವ ಸ್ಥಾನ ಹಂಚಿಕೆಯಲ್ಲಿ ಪ್ರಾದೇಶಿಕವಾರು ಆದ್ಯತೆ ನೀಡದೇ ಇರುವುದು ಸಚಿವ ಸ್ಥಾನ ವಂಚಿತ ಜಿಲ್ಲೆಗಳ ಕಾರ್ಯಕರ್ತರಲ್ಲಿ ಪಕ್ಷದ ಬಗ್ಗೆ ಆಕ್ರೋಶ ಮೂಡಿಸಿದೆ. ಸಚಿವ ಸಂಪುಟ ರಚನೆ ಅಥವಾ ಪುನಾರಚನೆ ಸಂದರ್ಭದಲ್ಲಿ ಈ ರೀತಿಯ ಅಸಮಾಧಾನಗಳು ಸಾಮಾನ್ಯ ಹೌದಾದರೂ ಪ್ರಾದೇಶಿಕವಾರು ಮತ್ತು ಸಮುದಾಯವಾರು ಆದ್ಯತೆ ನೀಡಿದರೆ ಈ ಅಸಮಾಧಾನ ಬೇಗ ಶಮನವಾಗುತ್ತದೆ. ಆದರೆ, ಇವರೆಡನ್ನೂ ಕಡೆಗಣಿಸಿದರೆ ಪರಿಣಾಮ ದೀರ್ಘ ಕಾಲ ಉಳಿಯುತ್ತದೆ. ಸದ್ಯ ಬಿಜೆಪಿ ಸರ್ಕಾರದಲ್ಲಿ ಪ್ರಾದೇಶಿಕವಾರು ಮತ್ತು ಸಮುದಾಯವಾರು ಪ್ರಾತಿನಿಧ್ಯ ಸರಿಯಾಗಿ ಸಿಗದೇ ಇರುವುದು ಪಕ್ಷದ ಮೇಲೆ ಪರಿಣಾಮ ಬೀರಬಹುದು.

ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಕರಾವಳಿ, ಹಳೇ ಮೈಸೂರು ಭಾಗ (ಬೆಂಗಳೂರು ಹೊರತುಪಡಿಸಿ) ಮತ್ತು ಮುಂಬೈ ಕರ್ನಾಟಕ ಪ್ರದೇಶಗಳಿಗೆ ಆದ್ಯತೆ ಸಿಕ್ಕಿಲ್ಲ ಎಂಬ ಆಕ್ರೋಶವಿದೆ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ರಾಜೂಗೌಡ ಅವರಿಗೆ ಸಚಿವ ಸ್ಥಾನ ಸಿಗದೇ ಇರುವುದು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳವರ ಬೇಸರಕ್ಕೆ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಯಕರ್ತರನ್ನು ಸಮಾಧಾನಪಡಿಸಬೇಕಾದ ಕೆಲಸವನ್ನು ಬಿಜೆಪಿ ಮಾಡಬೇಕಾಗುತ್ತದೆ. ಪ್ರಸ್ತುತ ಪಕ್ಷಕ್ಕೆ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರಾದರೂ ರಾಜ್ಯಾದ್ಯಂತ ಅವರ ಪ್ರಭಾವ ಇಲ್ಲದೇ ಇರುವುದರಿಂದ ಈ ಕೆಲಸ ಕಷ್ಟಸಾಧ್ಯವಾಗಬಹುದು.

ಕರಾವಳಿಯಲ್ಲಿ ಏನಾಯಿತು?
ಉದಾಹರಣೆಗೆ 2008ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಭಾಗ, ಅದರಲ್ಲೂ ಮುಖ್ಯವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನ ಬಿಜೆಪಿಯನ್ನು ಬೆಂಬಲಿಸಿದ್ದರು. ಆಗ ಡಿ. ವಿ. ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡಿದರೂ ಹೆಚ್ಚು ಕಾಲ ಅವಕಾಶ ನೀಡದೇ ಇರುವುದು, ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡಿದ್ದು, ಹಿಂದೂಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದಾಗಿ 2013ರ ಚುನಾವಣೆಯಲ್ಲಿ ಆ ಭಾಗದ ಜನ ಬಿಜೆಪಿಯನ್ನು ಸಾರಾಸಗಾಟಾಗಿ ತಿರಸ್ಕರಿಸಿದ್ದರು. 2018ರಲ್ಲಿ ಮತ್ತೆ ಆ ಭಾಗದ ಜನ ಬಿಜೆಪಿಯ ಕೈಹಿಡಿಯಲು ಕಾರಣವಾಗಿದ್ದು ಹಿಂದುತ್ವ ಹಾಗೂ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಆದರೆ, ಜಿಲ್ಲೆಗೆ ಅನ್ಯಾಯವಾದರೆ ಅಥವಾ ಸ್ಥಾನಮಾನ ಸಿಗದೇ ಇದ್ದರೆ ಅದನ್ನು ಸಹಿಸುವವವರಲ್ಲ ಎಂಬುದನ್ನು ಆ ಭಾಗದ ಜನತೆ ಅನೇಕ ಬಾರಿ ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆಯಾದರೂ ವಿಧಾನಸಭೆಗೆ ಆಯ್ಕೆಯಾದವರನ್ನು ನಿರ್ಲಕ್ಷಿಸಿದ್ದು ಆ ಭಾಗದ ಜನರಲ್ಲಿ ಸಿಟ್ಟು ತರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಅಭಿಯಾನ ಜೋರಾಗಿದೆ.
ಇನ್ನು ಹಳೇ ಮೈಸೂರು ಭಾಗದಲ್ಲಿ ಬೆಂಗಳೂರು ಹೊರತುಪಡಿಸಿ ಮೈಸೂರು, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಅದರಲ್ಲೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮೈಸೂರಿನ ಎಸ್. ಎ. ರಾಮದಾಸ್ ಅವರನ್ನು ನಿರ್ಲಕ್ಷಿಸಿದ್ದು ಆ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಅದೇ ರೀತಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರೂ ಬೀದರ್ ಹೊರತುಪಡಿಸಿ ಇತರೆ ಭಾಗಕ್ಕೆ ಹೆಚ್ಚಿನ ಸ್ಥಾನಮಾನ ಸಿಕ್ಕಿಲ್ಲ. ಸಹಜವಾಗಿಯೇ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ.
ಇದು ಪ್ರಾದೇಶಿಕತೆ ವಿಚಾರವಾದರೆ ಇನ್ನು ಸಮುದಾಯಕ್ಕೆ ಸಂಬಂಧಿಸಿದಂತೆ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಇರುವುದು ಮತ್ತು ರಾಜೂಗೌಡ ಅವರಿಗೆ ಸಚಿವ ಸ್ಥಾನ ಸಿಗದೇ ಇರುವುದು ವಾಲ್ಮೀಕಿ ನಾಯಕ ಸಮುದಾಯ ಸೇರಿದಂತೆ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೇನಾದರೂ ಕೈಕೊಟ್ಟರೆ ಬಿಜೆಪಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಈ ಮಧ್ಯೆ ಸಚಿವ ಶ್ರೀರಾಮುಲು ಅವರು ತಾವು ಆಯ್ಕೆಯಾದ ಚಿತ್ರದುರ್ಗ ಜಿಲ್ಲೆಗಿಂತ ತಮ್ಮ ತವರು ಜಿಲ್ಲೆ ಬಳ್ಳಾರಿ (ಮೊಳಕಾಲ್ಮೂರು ಕ್ಷೇತ್ರ) ಕಡೆ ಹೆಚ್ಚು ಗಮನಹರಿಸಲು ಮುಂದಾಗಿದ್ದಾರೆ. ಶ್ರೀರಾಮುಲು ಬೆಂಬಲಿಗರ ಆಕ್ರೋಶ ಶಮನವಾಗದೇ ಇದ್ದರೆ ಬಳ್ಳಾರಿ, ಚಿತ್ರದುರ್ಗ ಮಾತ್ರವಲ್ಲದೆ, ಸುತ್ತಲಿನ ಇನ್ನೂ ಒಂದೆರಡು ಜಿಲ್ಲೆಗಳಲ್ಲಿ ಬಿಜೆಪಿಗೆ ಕಷ್ಟದ ದಿನಗಳು ಬರಲಿವೆ.
ಇದೆಲ್ಲದರ ಮಧ್ಯೆ ಬೆಳಗಾವಿ ಜಿಲ್ಲೆಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನದ ಜತೆಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡಿರುವುದರಿಂದ ಸಹಜವಾಗಿಯೇ ಉಮೇಶ್ ಕತ್ತಿ ಸೇರಿದಂತೆ ಜಿಲ್ಲೆಯ ಅನೇಕ ಬಿಜೆಪಿ ಶಾಸಕರು ತಿರುಗಿ ಬಿದ್ದಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಅನರ್ಹತೆ ರದ್ದಾಗಿ ಸರ್ಕಾರದಲ್ಲಿ ಭಾಗಿಯಾದರೆ ಈಗಾಗಲೇ ನೀಡಿದ ಭರವಸೆಯಂತೆ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ. ಆಗ ಬೆಳಗಾವಿ ಜಿಲ್ಲೆಯೊಂದಕ್ಕೆ ಎರಡು ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದಂತಾಗುತ್ತದೆ. ಇದು ಬೆಳಗಾವಿ ಮಾತ್ರವಲ್ಲದೆ, ಇತರೆ ಜಿಲ್ಲೆಗಳ ಮುಖಂಡರು, ಕಾರ್ಯಕರ್ತರ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಲಿದ್ದು, ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ನೂತನ ಅಧ್ಯಕ್ಷರಿಗಿದೆ ಸವಾಲುಗಳ ಸರಮಾಲೆ
ರಾಜ್ಯ ಬಿಜೆಪಿಗೆ ನಳಿನ್ ಕುಮಾರ್ ಕಟೀಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ರಾಜ್ಯ ಸಂಘಟನೆಯನ್ನು ಪುನಾರಚಿಸುವುದರೊಂದಿಗೆ ಜಿಲ್ಲಾ ಘಟಕಗಳಲ್ಲೂ ಮಾರ್ಪಾಡು ಮಾಡಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ಇದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಆ ಮೂಲಕ ಜಿಲ್ಲೆಗೆ ನ್ಯಾಯ ಒದಗಿಸಲಾಗಿದೆ ಎಂದು ಪಕ್ಷ ಹೇಳಿಕೊಳ್ಳಬಹುದಾದರೂ ನೂತನ ಅಧ್ಯಕ್ಷರು ಸ್ವಂತ ಜಿಲ್ಲೆಯಲ್ಲೇ ಪ್ರಭಾವಿಯಾಗಿ ಉಳಿದಿಲ್ಲ. ಇನ್ನು ಅನೇಕ ಜಿಲ್ಲೆಗಳವರಿಗೆ ಅವರ ಪರಿಚಯವೇ ಇಲ್ಲ. ಹೀಗಿರುವಾಗ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಗೊಳಿಸಲು ನೂತನ ಅಧ್ಯಕ್ಷರು ಸಾಕಷ್ಟು ಪರದಾಡಬೇಕಾಗುತ್ತದೆ. ಏಕೆಂದರೆ, ಸಚಿವ ಸ್ಥಾನ ವಂಚಿತ ಶಾಸಕರು, ಖಾತೆ ಹಂಚಿಕೆ ಕುರಿತಂತೆ ಅಸಮಾಧಾನಗೊಂಡಿರುವ ಸಚಿವರು, ಅವರ ಬೆಂಬಲಿಗರು ಸದ್ಯಕ್ಕಂತೂ ಪಕ್ಷ ಸಂಘಟನೆಗೆ ಸಹಕರಿಸುವ ಪರಿಸ್ಥಿತಿಯಲ್ಲಿ ಇಲ್ಲ.
ಈ ಮಧ್ಯೆ ಸರ್ಕಾರ ರಚನೆ ಗೊಂದಲದ ಕಾರಣಕ್ಕೆ ಒಂದೆರಡು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪಕ್ಷದ ಪದಾಧಿಕಾರಿಗಳು ಪದತ್ಯಾಗಕ್ಕೆ ಮುಂದಾಗಿದ್ದಾರೆ. ಅವರನ್ನು ಸಮಾಧಾನಪಡಿಸುವ ಕೆಲಸವನ್ನೂ ನೂತನ ಅಧ್ಯಕ್ಷರು ಮಾಡಬೇಕಾಗಿದೆ. ಇವೆಲ್ಲಾ ಕಾರಣಗಳಿಂದಾಗಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರಿಗೆ ಸರ್ಕಾರವನ್ನು ಮುಂದುವರಿಸಿಕೊಂಡು ಹೋಗುವುದು ಹೇಗೆ ಸವಾಲಿನ ಪ್ರಶ್ನೆಯಾಗಿದೆಯೋ, ನೂತನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪಕ್ಷ ಬಲವರ್ದನೆಯೂ ದೊಡ್ಡ ಸವಾಲೇ ಆಗಲಿದೆ.