ಭೂತಾಯಿಯ ರಕ್ಷಣೆಗೆ ಮರ ಬೆಳೆಸಲು ಜಾಗೃತಿ ಮೂಡಿಸಲಾಗುತ್ತಿದೆ. ಬಿಸಿ ಭೂಮಿಗೆ ಹಸಿರುಡೆಗೆ ತೊಡಿಸಲು ಪ್ರಯತ್ನ ನಡೆಯುತ್ತಿದೆ. ಜಮಖಂಡಿಯ ಕಲ್ಲಹಳ್ಳಿಯ ಬಡ ಕೂಲಿಕಾರ ಮಹಿಳೆ ಶ್ರೀಮಂತ್ಯವ್ವ ತಾಯಿ ರತ್ನವ್ವ (95) ನಿಗೆಂದು ಒಬ್ಬಂಟಿಯಾಗಿ ಗುಡಿಸಲು ಕಟ್ಟಿ ಬೋಳುಗುಡ್ಡದ ಬಿಸಿಲು ತಾಗದಂತೆ ಮರ ಗಿಡಗಳನ್ನು ನೀರುಣಿಸಿ ಪೋಷಿಸುತ್ತಿದ್ದಾಳೆ. ತಾಯಿಯ ಜೊತೆ ಭೂತಾಯಿಯ ವೃಕ್ಷಾರಾಧನೆಗೆ ನಿಂತಿದ್ದಾಳೆ.
‘ಅವ್ವ ರತ್ನವ್ವಗ ವಯಸ್ಸು ನೂರಕ್ಕೆ ಐದು ಕಮ್ಮಿ, ಕಲ್ಲಳ್ಳಿಯ ಮೂಲ ಮನೆಯಿಂದ ನನ್ನ ಜೊತೆ ನಾಲ್ಕು ದಿನ ಇದ್ದು ಹೋಗೋಣು ಅಂತ ಬರ್ತಾಳ. ಹತ್ತಾರು ಎಕರೆ ತೋಟದ ಮಧ್ಯೆ ಆರಾಮ ಬೆಳದಾಕಿ, ಇಲ್ಲಿ ಏಲ್ಲಿ ನೋಡಿದ್ರಲ್ಲಿ ಬೋಳು ಗುಡ್ಡ ಕಾಣ್ತಾವ, ಮುಪ್ಪಿನ ಜೀವಕ್ಕ ಬಿಸಿಲು ತಾಗ್ತಾವ…. ಅವ್ವ ಆರಾಮಿಲ್ರೀ ಅಂಥ ಮನೆ ಕಟ್ಟೀನಿ, ಮರ ಬೆಳಸೀನಿ’ ಶ್ರೀಮಂತ್ಯವ್ವ (54) ಬೇಲಿ ಸಾಲಿನ ಬೇವಿನಡಿ ನಿಂತು ಮಾತಾಡತೊಡಗಿದಳು.
ಜಮಖಂಡಿಯ ಕಲ್ಲಳ್ಳಿಯ ಸತ್ಯಕಾಮರ ತೋಟದಲ್ಲಿ ಜಲ ಸಂರಕ್ಷಣೆ ಕುರಿತು ಮಾತುಕತೆಗೆ ಸಹೋದರಿ ವೀಣಾ ಬನ್ನಂಜೆ ಆಹ್ವಾನಿಸಿದ್ದರು. ಕಲ್ಲಳ್ಳಿಯ ಕಲ್ಲುಗುಡ್ಡ ಓಡಾಡುತ್ತಿದ್ದೆವು. ತುಗಲಿ, ಮುಶವಾಳ, ಒಡೆಯನಕಂಟಿ, ಕಾರೆ, ಗುಂಡಗೋಳಿ ಗಿಡ ಮಾತಾಡಿಸುತ್ತ ಒಂದಿಷ್ಟು ದೂರ ನಡೆದೆವು. ಸಂಜೆಯ ಸುತ್ತಾಟ ಮುಗಿಸಿ ಮರಳುವಾಗ ಸನಿಹದ ಪುಟ್ಟ ಗುಡಿಸಲು ತೋರಿಸಿದರು. ಒಂಟಿ ಹೆಣ್ಮಗಳು ಶ್ರೀಮಂತ್ಯವ್ವ ಕಟ್ಟಿದ ಕಲ್ಲು, ಕಂಟಿಯ ನಡುವಿನ ಪರಿಸರ ದರ್ಶನ ಮಾಡಿಸಿದರು.
ಒಂಟಿ ಮಹಿಳೆಯ ಕೌಶಲ:
ಕಲ್ಲಹಳ್ಳಿಯ ಶ್ರೀಮಂತ್ಯವ್ವ ಲಗ್ನವಾಗಿ ಎಲ್ಲರಂತೆ ಗಂಡನ ಮನೆ ಸೇರಿದ್ದರು. ಸಾಂಸಾರಿಕ ಸಮಸ್ಯೆ ಎದುರಾಗಿ ತವರಿಗೆ ಮರಳಿದವರು, ಸತ್ಯಕಾಮರ ತೋಟದ ಕೆಲಸ , ಮನೆಗೆಲಸ ಮಾಡುತ್ತ ಬದುಕು ಆರಂಭಿಸಿದರು. ಸುಮಾರು 35 ವರ್ಷಗಳಿಂದ ಇಲ್ಲಿ ದುಡಿಮೆ. ಆಗಾಗ ಮಗಳ ಆರೋಗ್ಯ ವಿಚಾರಿಸಲು ತಾಯಿ ರತ್ನವ್ವ ಬರುತ್ತಿದ್ದರು. ಸತ್ಯಕಾಮರ ಮನೆಯಲ್ಲಿ ಊಟ, ತಿಂಡಿ ಮಾಡಿ ಅಲ್ಲಿಯೇ ವಿಶ್ರಾಂತಿ ವ್ಯವಸ್ಥೆ. ವಯಸ್ಸಾದ ಅವ್ವ ಇನ್ನಷ್ಟು ಆರಾಮಿರಲು ತಮ್ಮದೇ ಪುಟ್ಟ ಮನೆ ಕಟ್ಟುವ ಸಹಜ ಕನಸು. ತೋಟದಂಚಿನ ಕಲ್ಲು ಭೂಮಿಯಲ್ಲಿ ಜಾಲಿ, ಕಾರೇ ಕಂಟಿಗಳಿದ್ದ ಪುಟ್ಟ ಜಾಗ ಸ್ವಚ್ಛಗೊಳಿಸಿ ಕೆಲಸ ಆರಂಭಿಸಿದರು. ಸತ್ಯಕಾಮರ ಮನೆಯಲ್ಲಿ ಕಿತ್ತೆಸೆದ ಕಟ್ಟಿಗೆ, ತಗಡು, ಬಿದಿರು, ಬಳ್ಳಿ, ಕಲ್ಲು, ಟೈಲ್ಸ್ ಚೂರುಗಳೇ ನಿರ್ಮಾಣ ಸಾಮಗ್ರಿ. ಬೆಳಗ್ಗೆ ಏಳರಿಂದ ಸಂಜೆಯವರೆಗೆ ಕೂಲಿ ಕೆಲಸ ಮಾಡಿ ರಾತ್ರಿ ತಿಂಗಳ ಬೆಳಕಿನಲ್ಲಿ ಒಬ್ಬಂಟಿಯಾಗಿ ಮನೆ ಕಟ್ಟುವ ಕಾರ್ಯ ಆರಂಭಿಸಿದರು. ಈಗ ಆರು ವರ್ಷ ಹಿಂದೆ ಮನೆಯ ಕನಸು ನನಸಾಯ್ತು. ಊರಿನಿಂದ ಬಂದ ಅಮ್ಮ ಬೋಳು ಗುಡ್ಡದ ಕಲ್ಲಿನ ನೆಲೆಯ ತಗಡಿನ ಗುಡಿಸಿಲಿನಲ್ಲಿ ವಾಸಿಸಲು ಆರಂಭಿಸಿದಳು. ಬಿದಿರಿನ ತಟ್ಟಿಯ ಗೋಡೆ. ಸುತ್ತ ಎತ್ತ ನೋಡಿದರೂ ಬಯಲು ಕಾಣುತ್ತಿತ್ತು. ಬೇಸಿಗೆಯ ಉರಿಬಿಸಿಲಿನಲ್ಲಿ ಬಯಲು ಮನೆಯಲ್ಲಿ ಹಿರಿಯ ಜೀವ ಬೆವರಬೇಕಾಯ್ತು. ಮನೆಯ ಸುತ್ತ ಮರ ಗಿಡ ಬೆಳೆಸಿದರೆ ವಾತಾವರಣ ಕೊಂಚ ಬದಲಾಗುತ್ತದೆಂದು ಸದಾ ಮರದಡಿಯಿರುವ ಶ್ರೀಮಂತ್ಯವ್ವ ಸಸ್ಯ ನಾಟಿ ಶುರುಮಾಡಿದರು.
ತಿಪ್ಪೆಯಲ್ಲಿ ಬಿದ್ದು ಹುಟ್ಟಿದ ಹುಣಸೆ, ಹೊಂಗೆ, ಸೂಬಾಬುಲ್, ಬೇವು, ಗೊಬ್ಬರದ ಗಿಡಗಳನ್ನು ತಂದು ಬೇಲಿಯಂಚಿನಲ್ಲಿ ನೆಟ್ಟಳು. ಮನೆಯ ಪಕ್ಕದಲ್ಲಿ ಕಲ್ಲಳ್ಳಿಯ ಅಣ್ಣಪಣ್ಣನ ತೋಟವಿದೆ. ಅಲ್ಲಿಂದ ನಿತ್ಯ ಹತ್ತಾರು ಬಿಂದಿಗೆ ನೀರು ಹೊತ್ತು ತಂದು ಅಕ್ಕರೆಯಲ್ಲಿ ಗಿಡಗಳಿಗೆ ಉಣಿಸಿದರು. ದನಕರು ಬರದಂತೆ ತೆಂಗಿನ ಗರಿಗಳ ಬೇಲಿ ಕಟ್ಟಿದಳು. ಬಿಡುವಿನ ಸಮಯದಲ್ಲಿ ಏನಾದರೊಂದು ಕೆಲಸ ಮಾಡುತ್ತ ಹಸಿರು ಹೆಚ್ಚಿಸುವ ಕೆಲಸದಲ್ಲಿ ತಲ್ಲೀನಳಾದಳು.

ಗಿಡಕ್ಕೊಂದು ಕಥೆಯಿದೆ:
ಸಸಿಗಳಿಗೆ ನೀರು ತರಲು ಹೋದಾಗ ನೀರಿನ ಟ್ಯಾಂಕ್ ಬುಡದಲ್ಲಿ ಹಕ್ಕಿಯ ಹಿಕ್ಕೆಯಲ್ಲಿ ಪುಟ್ಟ ಅಶ್ವತ್ಥ ಗಿಡ ಕಾಣಿಸಿತು. ಮನೆಯ ಆವರಣದಲ್ಲಿ ನೆಡಲು ನಿರ್ಧರಿಸಿದಳು. ನಿತ್ಯ ನೀರುಣಿಸುತ್ತ ಪೋಷಿಸಿದಳು. ನಾಲ್ಕು ವರ್ಷಕ್ಕೆ ಈಗ ಇಪ್ಪತ್ತು ಅಡಿ ಎತ್ತರ ಬೆಳೆದಿದೆ. ಅದರ ಜೊತೆಗೆ ಬೇವಿನ ಗಿಡವೊಂದು ನೈಸರ್ಗಿಕವಾಗಿ ಎದ್ದು ನಿಂತಿದೆ. ಯಾರೋ ತಿಂದೆಸೆದ ಮಾವಿನ ಒರಟೆ, ಎಲ್ಲೋ ಬಿದ್ದು ಹುಟ್ಟಿದ ಲಿಂಬೆ, ಸೀಬೆ, ಸೀತಾಫಲ, ಮಲ್ಲಿಗೆ, ಕನಕಾಂಬರಗಳನ್ನು ಶ್ರೀಮಂತ್ಯವ್ವ ಪೋಷಿಸಿದ್ದಾಳೆ. ದೇವರ ಮನೆಯಲ್ಲಿಟ್ಟ ತೆಂಗಿನ ಕಾಯಿ ಮೊಳಕೆಯಾದಾಗ ಪರಿಚಯಸ್ಥರು ನೀಡಿದ್ದು ಮರವಾಗಿ ಫಲ ಕೊಡಲು ಸನ್ನದ್ದವಾಗುತ್ತಿದೆ.
ಅವ್ವ ಇಲ್ಲಿ ಸ್ನಾನ ಮಾಡ್ತಾಳ, ಸ್ನಾನದ ನೀರಲ್ಲಿ ಮಾವಿನ ಸಸಿ ಮರವಾಗುತ್ತಿದೆಯೆಂದು ಪರಿಚಯಿಸುವಾಗ ಸ್ವತಃ ಅಮ್ಮನೇ ಮರವಾಗಿ ನಿಂತ ಖುಷಿ ಶ್ರೀಮಂತವ್ವನ ಕಣ್ಣಲ್ಲಿ ಕಾಣಿಸುತ್ತಿದೆ. ಹಣ ಖರ್ಚು ಮಾಡದೇ ಮನೆ ನಿರ್ಮಿಸಿದಂತೆ ಸಸ್ಯಗಳನ್ನು ಅಲ್ಲಿಂದ ಇಲ್ಲಿಂದ ತಂದು ಬೆಳೆಸಿದ್ದಾಳೆ. ಕಲ್ಲು ಗುಡ್ಡದ ನಲವತ್ತು ಐವತ್ತು ಅಡಿ ಚೌಕದ ಪುಟ್ಟ ಜಾಗ ಆರು ವರ್ಷಗಳ ಪರಿಶ್ರಮದಿಂದ ಸಸ್ಯ ವೈವಿಧ್ಯದ ನೆಲೆಯಾಗಿ ಬದಲಾಗಿದೆ. ಹಸಿರು ಬೇಲಿಯ ಆವರಣ ದಾಟಿದ ತಕ್ಷಣ ಮನೆಯ ಸರಹದ್ದು ಶುರು. ಹೆಚ್ಚಿನ ಸಮಯ ಶ್ರೀಮಂತ್ಯವ್ವ ಗಿಡ ಮರಗಳ ಆರೈಕೆಯಲ್ಲಿ ತೊಡಗುತ್ತಾಳೆ. ಸವತೆ, ಹೀರೆ ಮುಂತಾದ ಬಳ್ಳಿ ತರಕಾರಿಗಳನ್ನು ಬೆಳೆಸುತ್ತಾಳೆ. ಒಂದು ಟಗರು ಖರೀದಿಸಿ ಬೇಲಿಯ ಸೊಪ್ಪಿನ ಮೇವು ನೀಡುತ್ತ ಒಂಬತ್ತು ತಿಂಗಳು ಸಾಕಿದ್ದಳು. ನಾಲ್ಕು ಸಾವಿರ ರೂಪಾಯಿ ತೆತ್ತು ಅದನ್ನು ಹತ್ತು ಸಾವಿರಕ್ಕೆ ಮಾರಿದಳು. ಈಗ ಎರಡೂವರೆ ಸಾವಿರ ರೂಪಾಯಿಗೆ ಒಂದು ಕುರಿ ಖರೀದಿಸಿ ಸಾಕುತ್ತಿದ್ದಾಳೆ. ಬೇಲಿಯ ಹಸಿರು ಸೊಪ್ಪು, ತೋಟದ ಕಳೆ ಗಿಡದಲ್ಲಿ ಸಲಹುತ್ತಿದ್ದಾಳೆ. ಕೆಲವು ದಿನಗಳ ಹಿಂದೆ 95 ವರ್ಷದ ರತ್ವವ್ವನಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯಾಗಿದೆ, ಅವಳು ಗಿಡ ನೋಡಿ ಖುಷಿ ಅನುಭವಿಸಿದ್ದಾಳೆ.
ಶ್ರೀಮಂತ್ಯವ್ವ ಶಾಲೆ ಓದಿಲ್ಲ, ಕೂಲಿ ಬಿಟ್ಟರೆ ಬೇರೆ ಗೊತ್ತಿಲ್ಲ. ವಿಶೇಷವೆಂದರೆ, ನಮ್ಮ ಖಗೋಳ ವಿಜ್ಞಾನಿಗಳಿಗಿಂತ ಹೆಚ್ಚು ಕಾಲ ನಕ್ಷತ್ರ ನೋಡುತ್ತಿರುವ ದಾಖಲೆ ಇವಳದು ! ಪ್ರತಿ ದಿನ ನಕ್ಷತ್ರ ನೋಡುತ್ತ ಮರದಡಿ ಮಲಗುತ್ತಾಳೆ. ಕಳೆದ ಸುಮಾರು 35 ವರ್ಷಗಳಿಂದ ನಕ್ಷತ್ರ ನೋಡುತ್ತ ಮಲಗದಿದ್ದರೆ ಇವಳಿಗೆ ನಿದ್ದೆ ಬರುವುದಿಲ್ಲವಂತೆ! ಬಯಲಿನಲ್ಲಿ ಹಾಸಿಗೆ ಹಾಸಿಕೊಂಡು ಮಲಗುತ್ತಾಳೆ. ಇರುವೆ, ಹಾವು, ಚೇಳು, ಚಿರತೆ ಬರಬಹುದಲ್ಲವೇ? ಆವಾಸದ ನೆಲೆ ನೋಡಿದ ತಕ್ಷಣ ಪ್ರಶ್ನೆ ಹುಟ್ಟುತ್ತದೆ. ‘ಇಷ್ಟು ವರ್ಸ್‍ದಿಂದ ಆರಾಮ ಅದೀನಿ’ ನಗುತ್ತಾಳೆ. ಮಳೆ ಸುರಿದರೆ? ಮೋಡದಲ್ಲಿ ನಕ್ಷತ್ರ ಕಾಣಿಸದಿದ್ದರೆ? ಅವತ್ತಾದರೂ ಗುಡಿಸಲಲ್ಲಿ ಮಲಗುತ್ತಾಳೆಯೇ? ಇಲ್ಲ….ಶ್ರೀಮಂತ್ಯವ್ವ ಚಾದರ ಹೊದ್ದು ಆಕಾಶ ನೋಡುತ್ತ ರಾತ್ರಿಯಿಡೀ ಕೂತು ನಿದ್ದೆಗೆಡುತ್ತಾಳೆ ! ನಿತ್ಯ ಗುಡಿಸಲ ಎದುರಿನ ಪೇರಲ ಗಿಡ ಶ್ರೀಮಂತ್ಯವ್ವನ ನಿದ್ದೆ ನೆಲ, ಅಲ್ಲಿಂದ ಚೆಂದದ ಚುಕ್ಕಿಗಳ ನೋಟ. ಸಂಜೆ ಮೂಡಿ ರಾತ್ರಿ ಹನ್ನೆರಡಕ್ಕೆ ಮುಳುಗುವ ಚುಕ್ಕಿ, ನಾಗರ ಹೆಡಿ, ಬೆಳ್ಳಿಯೆಂದು ನಕ್ಷತ್ರ ಗುರುತಿಸುತ್ತಾಳೆ. ಕಗ್ಗತ್ತಲ ರಾತ್ರಿಗಳಲ್ಲಿ ಒಂಟಿಯಾಗಿ ವಿಶಾಲ ಆಗಸ ನೋಡುತ್ತ ಶ್ರೀಮಂತ್ಯವ್ವ ಲೋಕ ಮರೆಯುವ ರೀತಿಯಲ್ಲಿ ಬದುಕಿನ ವಿಸ್ಮಯವಿದೆ.
ಅವ್ವನ ಮನೆಗೆ ಬಾಗಿಲಿದೆ, ಬೀಗವಿಲ್ಲ. ಅವ್ವನಿಗೆ ಕಟ್ಟಿದ ಹಸಿರು ಮನೆಯಲ್ಲಿ ವರ್ಷದಿಂದ ವರ್ಷಕ್ಕೆ ನೆರಳು ಶ್ರೀಮಂತವಾಗುತ್ತಿದೆ. ಬೇಲಿ ಮರಗಳಲ್ಲಿ ಪಕ್ಷಿಗಳ ಕಲರವ ದಿನವಿಡೀ ಕೇಳುತ್ತಿದೆ. ಪುಟಾಣಿ ಅಳಿಲುಗಳು ಅಡುಗೆ ಮನೆಯನ್ನೂ ಆಟದ ಅಂಗಳವಾಗಿಸಿಕೊಂಡಿದೆ. ಹಕ್ಕಿಯ ಹಿಕ್ಕೆಯಲ್ಲಿ ಶ್ರೀಗಂಧದ ಗಿಡಗಳು ಮೊಳೆಯುತ್ತಿವೆ. ನಿಜ, ಬಿಸಿಲುತಾಗದಂತೆ ಅವ್ವನಿಗೆ ಖುಷಿಯ ಆವರಣ ಕಟ್ಟಿದ ಶ್ರೀಮಂತ್ಯವ್ವ ಕಾಸುಳ್ಳ ಶ್ರೀಮಂತಳಲ್ಲ, ಬಿಸಿಲಿಗೆ ಹೆತ್ತಮ್ಮ ಬಾಡದಂತೆ ಹಿತಕಾಯ್ದ ಅಪ್ಪಟ ಕಾಯಕ ಜೀವಿ.