ಬೆಂಗಳೂರಿನಲ್ಲಿ ಪಾವತಿಸಿ ಬಳಸುವ ಶೌಚಾಲಯಗಳನ್ನು ನೋಡಿಕೊಳ್ಳುವವರು ಬಹುತೇಕ ಉತ್ತರ ಭಾರತೀಯರು. ಸ್ಥಳೀಯ ಕರ್ಮಚಾರಿಗಳು ಕಾಣುವುದೇ ಇಲ್ಲ. ಇದರ ಜೊತೆಗೆ ಉತ್ತರ ಭಾರತೀಯರು ನಿರ್ವಹಣೆ ಮಾಡುತ್ತಿರುವ ಸಾಕಷ್ಟು ಶೌಚಾಲಯಗಳಲ್ಲಿ ಶುಚಿತ್ವ ಇರುವುದಿಲ್ಲ. ಅಲ್ಲದೆ, ಇವರು ಮನಬಂದಂತೆ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುತ್ತಿರುವುದು ದಿನನಿತ್ಯ ಕಂಡು ಬರುತ್ತಿದ್ದರೂ, ಬಿಬಿಎಂಪಿ ಮಾತ್ರ ಮೌನವಹಿಸಿದೆ.
ಶೌಚಾಲಯಗಳ ನಿರ್ವಹಣೆಗೆ ನಿಯಮ ಹಾಕಿಕೊಳ್ಳದ ಬಿಬಿಎಂಪಿ
ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ, 530 ಪಾಲಿಕೆ ಹಾಗೂ 150 ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಸೇರಿ ಒಟ್ಟು 680 ಶೌಚಾಲಯಗಳಿವೆ. ಬಿಬಿಎಂಪಿ ಇಲಾಖೆ ಸಾರ್ವಜನಿಕ ಶೌಚಾಲಯ ನಿರ್ವಹಣೆಯನ್ನು ಹೊತ್ತುಕೊಂಡ ದಿನದಿಂದಲೂ ಟೆಂಡರ್ ಪ್ರಕ್ರಿಯೆಯಲ್ಲಾಗಲಿ, ಶುಚಿತ್ವವನ್ನು ಕಾಪಾಡುವುದಕ್ಕಾಗಲಿ, ಅಥವಾ ದರ ವಸೂಲಿಯಲ್ಲಿ ಯಾವ ನಿಯಮವನ್ನೂ ರೂಪಿಸಿಲ್ಲ. ಅಲ್ಲದೆ, 3 ವರ್ಷಗಳಿಗೊಮ್ಮ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂಬ ನಿಯಮವಿದ್ದರೂ, ದಶಕ ಕಳೆದರೂ, ಬಿಬಿಎಂಪಿ ಟೆಂಡರ್ ಪ್ರಕ್ರಿಯೆಯನ್ನೇ ನಡೆಸಿಲ್ಲ. ನಗರದ ಬಹುತೇಕ ಶೇಕಡ 90ರಷ್ಟು ಶೌಚಾಲಯಗಳನ್ನು ಉತ್ತರ ಭಾರತೀಯರೇ ನಿರ್ವಹಣೆ ಮಾಡುತ್ತಿದ್ದು, ಮನಬಂದಂತೆ ಹಣ ವಸೂಲಿ ಮಾಡಿದರೂ, ಶುಚಿತ್ವವನ್ನು ಮಾತ್ರ ಕಾಪಾಡುತ್ತಿಲ್ಲ. ಇದಲ್ಲದೇ ಶೌಚಾಲಯ ನಿರ್ವಹಿಸುವ ಜನರು ಶೌಚಾಲಯದಲ್ಲೇ ಅಡುಗೆ ಮಾಡಿಕೊಂಡು, ಅಲ್ಲೇ ವಾಸಿಸುತ್ತಿರುವುದು ಸಹ ಬೆಳಕಿಗೆ ಬಂದಿದೆ. ಆದರೆ ಬಿಬಿಎಂಪಿ ಮಾತ್ರ ಇದನ್ನು ನಿಯಂತ್ರಿಸುವುದಕ್ಕೆ ಯಾವುದೇ ಸೂಕ್ತವಾದ ಕ್ರಮ ಕೈಗೊಳ್ಳದೆ, ನಿಯಮ ರೂಪಿಸದೆ ಇರುವುದು ವಿಷಾದನೀಯ.

ಮಲ ಹೊರುವವರಿಗೆ (Manual Scavengers) ಪ್ರಥಮ ಆದ್ಯತೆ ನೀಡಬೇಕು:
2013ರಲ್ಲಿ ರಾಷ್ಟ್ರೀಯ ಕರ್ಮಚಾರಿಗಳ ಆಯೋಗ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ, ಶೌಚಾಲಯಗಳ ನಿರ್ವಹಣೆಯನ್ನು ಮಲವನ್ನು ಕೈಯಿಂದ ಎತ್ತಿ ಶುಚಿಗೊಳಿಸುವವರು (Manual Scavengers) ಮತ್ತು ಚರಂಡಿ ಶುಚಿಗೊಳಿಸುವವರಿಗೆ ನೀಡಬೇಕು. ನಂತರ ಪೌರಕಾರ್ಮಿಕರ ಮಕ್ಕಳು, ಹಾಗೂ ಅವರ ರಕ್ತ ಸಂಬಂಧಿಗಳು ಸಹ ನಿರ್ವಹಣೆ ಮಾಡಬಹುದು ಎಂಬ ಕಾಯ್ದೆಯನ್ನು ರೂಪಿಸಿದೆ. ಆದರೆ ಇಂತಹವರು ನಗರದ ನೂರು ಶೌಚಾಲಯಗಳಲ್ಲಿ ಒಬ್ಬರು ಅಥವಾ ಇಬ್ಬರು ಬಿಟ್ಟರೆ, ಇನ್ಯಾವ ಶೌಚಾಲಯಗಳಲ್ಲೂ ಕಾಣುವುದೇ ಇಲ್ಲ.
ಸೆಪ್ಟಂಬರ್ 11ರಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹೀರೇಮನಿ, ನಗರದ ಆರು ಶೌಚಾಲಯಗಳಿಗೆ ದಿಢೀರ್ ಬೇಟಿ ಕೊಟ್ಟು ಶುಚಿತ್ವದ ಕೊರತೆ ಮತ್ತು ಅವ್ಯವಸ್ಥೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಶೌಚಾಲಯಗಳ ಸರಿಯಾದ ದಾಖಲೆಗಳಿಲ್ಲದೆ, ನಿರ್ವಹಣೆಯ ಗುತ್ತಿಗೆಯನ್ನು ಟೆಂಡರ್ ಆಹ್ವಾನಿಸದೆಯೇ ನೀಡಿರುವುದಕ್ಕೆ, ಮಂತ್ರಿಮಾಲ್ ಸಮೀಪದ ಸಾರ್ವಜನಿಕ ಶೌಚಾಲಯ, ಮಲ್ಲೇಶ್ವರ ಮೈದಾನ ಮತ್ತು ರಾಜಾಜಿನಗರದ ಗಾಯಿತ್ರಿದೇವಿ ಉದ್ಯಾನವನದ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಿಸಿ, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

“ಬಿಬಿಎಂಪಿ 20 ವರ್ಷದ ಹಿಂದೆ ಒಂದು ಬಾರಿ ಮಾತ್ರ ಟೆಂಡರ್ ಪ್ರಕ್ರಿಯೆ ನಡೆಸಿದ್ದಾರೆ. ನಂತರ ಯಾವ ಟೆಂಡರನ್ನು ಕರೆದಿಲ್ಲ. ಹೀಗಾಗಿ ಅವತ್ತಿನ ದಿನಗಳಲ್ಲಿ ಬಹುತೇಕ ಉತ್ತರ ಭಾರತೀಯರೇ ಟೆಂಡರ್ ಪಡೆದುಕೊಳ್ಳುತ್ತಿದ್ದರು. ಅವರೇ ಸ್ವಂತ ಖರ್ಚಿನಿಂದ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ನಂತರ ಬಿಬಿಎಂಪಿ ನಿರ್ಮಾಣ ಮಾಡಿದ ಶೌಚಾಲಯಗಳು ಸಹ ಶೇಕಡ 90ರಷ್ಟು ಉತ್ತರ ಭಾರತೀಯರಿಗೆ ನಿರ್ವಹಣೆಗೆ ಕೊಟ್ಟಿದ್ದಾರೆ.
ಉತ್ತರ ಭಾರತದ ಮಾಲೀಕನೊಬ್ಬ, ಹುಡುಗರಿಗೆ ಕಡಿಮೆ ಸಂಬಳ ಕೊಟ್ಟು ಅಲ್ಲಿಂದಲೇ ಒಟ್ಟು 300ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ವಹಣೆ ಮಾಡುತ್ತಿದ್ದಾನೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ರಾಷ್ಟ್ರೀಯ ಕರ್ಮಚಾರಿಗಳ ಆಯೋಗ ಸಮೀಕ್ಷೆ ನಡೆಸಿದ ಪ್ರಕಾರ, ನಗರದಲ್ಲಿ ಮಲವನ್ನು ಕೈಯಿಂದ ಎತ್ತುವ 700 ಕರ್ಮಚಾರಿಗಳು ಇದ್ದಾರೆ. ರಾಜ್ಯಾದ್ಯಂತ 3000ಕ್ಕೂ ಹೆಚ್ಚು ಕರ್ಮಚಾರಿಗಳು ಇದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಇವರಿಗೆ ಪರ್ಯಾಯ ಉದ್ಯೋಗ ನೀಡಿ, ಇವರೇ ಶೌಚಾಲಯಗಳ ನಿರ್ವಹಣೆ ಮಾಡುವುದಕ್ಕೆ ಆದ್ಯತೆ ಕೊಡಬೇಕು ಎಂದು ನಿಯಮ ರೂಪಿಸಲಾಗಿದೆ. ಸೆಪ್ಟಂಬರ್ 12ರಂದು ನಡೆದ ಸಭೆಯಲ್ಲಿ ಬಿಬಿಎಂಪಿ ಆಯುಕ್ತರು ಮತ್ತು ವಿಶೇಷ ಆಯುಕ್ತರು ಶೀಘ್ರದಲ್ಲಿ ನಿರ್ವಹಣೆಗೆ ಹೊಸ ನಿಯಮ ರೂಪಿಸುತ್ತೇವೆ, ಮಲ ಎತ್ತುವವರಿಗೆ (Manual Scavengers) ಶೇಕಡ 30ರಷ್ಟು ಕೆಲಸವನ್ನು ಖಾತ್ರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರದಿಂದ ಬಿಬಿಎಂಪಿ ಹೊಸ ನಿಯಮ ರೂಪಿಸಲು ಸಾಧ್ಯವಾಯಿತು”
-ಜಗದೀಶ್ ಹೀರೇಮನಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ
ಬಿಬಿಎಂಪಿ, ಎರಡು ದಶಕಗಳಿಂದಲೂ ಯಾವುದೇ ನಿಯಮ ರೂಪಿಸದೇ, ಸಾಕಷ್ಟು ಕರ್ಮಚಾರಿಗಳು ಅವಕಾಶ ವಂಚಿತರಾಗಿಯೇ ಇದ್ದಾರೆ. ಇನ್ಮುಂದೆ ಶೌಚಾಲಯಗಳ ನಿರ್ವಹಣೆಯನ್ನು ಶೇಕಡ 50ರಷ್ಟು ಮಲ ಎತ್ತುವವರಿಗೆ ಕೊಡುವ ಅವಕಾಶವನ್ನು ಕಾದು ನೋಡಬೇಕಿದೆ.