ಭಾರೀ ಕುತೂಹಲ ಮೂಡಿಸಿರುವ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇನ್ನೇನು ಹೊರಬೀಳಲಿದ್ದು, ಎರಡೂ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರೀ ಮುನ್ನಡೆ ಸಾಧಿಸಿದ್ದು, 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನ ಕಡೆಗೆ ದಾಪುಗಾಲಿಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎರಡನೇ ಸ್ಥಾನದಲ್ಲಿದ್ದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮೂರನೇ ಸ್ಥಾನದಲ್ಲಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹನ್ನೊಂದನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಮುನಿರತ್ನ 60,668 ಮತಗಳನ್ನು ಪಡೆದರೆ, ಅವರ ಸಮೀಪ ಸ್ಪರ್ಧಿ ಕಾಂಗ್ರೆ ಸ್‌ನ ಕುಸುಮಾ 28,111 ಮತಗಳನ್ನು ಪಡೆದಿದ್ದಾರೆ. ಈವರೆಗೆ ಎಣಿಕೆ ನಡೆದ ಎಲ್ಲ ಸುತ್ತುಗಳಲ್ಲೂ ಮುನಿರತ್ನ ಮುನ್ನಡೆ ಕಾಯ್ದುಕೊಂಡೇ ಬಂದಿದ್ದಾರೆ.
ಈಗಾಗಲೇ ಆರ್ ಆರ್ ನಗರದಲ್ಲಿ ಮುನಿರತ್ನ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಬಿಜೆಪಿ ಕಾರ್ಯಕರ್ತರು ಜಯಘೋಷ ಹಾಕಿದ್ದಾರೆ.
ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾದ ಶಿರಾ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಶಿರಾ ಉಪಚುನಾವಣೆಯ ಎಂಟು ಸುತ್ತುಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. 7ನೇ ಸುತ್ತಿನಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮತ ಮುನ್ನಡೆ ಪಡೆಯುವ ಮೂಲಕ ಅಂತರ ಕೂಡಾ ಹೆಚ್ಚಿಸಿಕೊಂಡಿದೆ. ಬಿಜೆಪಿಗೆ ಗೆಲುವು ಸನ್ನಿಹಿತವಾದಷ್ಟು ಬಿಜೆಪಿ ಕಾರ್ಯಕರ್ತರು ಜಯದ ಘೋಷಣೆ ಮೊಳಗಿಸುತ್ತಿದ್ದಾರೆ. ವಿಜಯದ ಸಂಕೇತ ತೋರುತಿದ್ದಾರೆ.
ಸುಮಾರು ಏಳು ದಶಕಗಳ ಬಳಿಕ ಕೋಟೆ ನಾಡು ಶಿರಾದಲ್ಲಿ ಕಮಲ ಅರಳುವ ಲಕ್ಷಣಗಳು ಗೋಚರಿಸುತ್ತಿವೆ. ಬಿಜೆಪಿ ಮುನ್ನಡೆಯ ಅಂತರ ಕಡಿಮೆಯಿದ್ದು ಕಾಂಗ್ರೆಸ್ ನಾಯಕರು ಇನ್ನೂ ಗೆಲುವಿನ ವಿಶ್ವಾಸದಲ್ಲಿದ್ದಾರೆ.
Also Read: 11 ರಾಜ್ಯಗಳ ಉಪಚುನಾವಣೆ ಸೇರಿದಂತೆ ಬಿಹಾರ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ
ಹನ್ನೊಂದನೇ ಸುತ್ತಿನ ವೇಳೆಯಲ್ಲಿ ಬಿಜೆಪಿ 30,883 ಮತಗಳನ್ನು ಪಡೆದರೆ, ಕಾಂಗ್ರೆಸ್ 24,908 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಜೆಡಿಎಸ್ 16,911 ಮತಗಳನ್ನು ಪಡೆದು ತೃತೀಯ ಸ್ಥಾನದಲ್ಲಿದೆ.
ಮತದಾರರು ನೀಡಿದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು- ಡಿ.ಕೆ. ಶಿವಕುಮಾರ್
ಆರ್.ಆರ್. ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿನ್ನಡೆಯಲ್ಲಿದೆ. ಈ ಮಧ್ಯೆ, ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಮತ ಎಣಿಕೆ ಮುಗಿಯಲು ಇನ್ನೂ ಒಂದೂವರೆಗೆ ಗಂಟೆ ಇದೆ. ಫಲಿತಾಂಶದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡೋಣ. ಮತದಾರರು ನೀಡಿದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು’ ಎಂದಿದ್ದಾರೆ.