ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಕಲಾಪಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಅವರ ನಡೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಆಡಳಿತ ಪಕ್ಷದ ಪರ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ವಿಶ್ವಾಸಮತ ಯಾಚನೆ ಪ್ರಸ್ತಾಪ ಮತಕ್ಕೆ ಹಾಕಲು ಅನಗತ್ಯ ವಿಳಂಬ ಮಾಡುವ ಮೂಲಕ ಅಲ್ಪಮತದ ಸರ್ಕಾರ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದಾರೆ… ಹೀಗೆ ನಾನಾ ಆರೋಪಗಳು ಅವರ ಮೇಲೆ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಂತೂ ಇಂತಹ ಟೀಕೆ, ಆರೋಪಗಳಿಗೆ ಮಿತಿಯೇ ಇಲ್ಲದಂತಾಗಿದೆ. ಆದರೆ, ರಾಜ್ಯದ ಚಾಣಾಕ್ಷಮತಿ ಸ್ಪೀಕರ್ ಎಂದು ತಮಗೆ ಲಭಿಸಿರುವ ಗೌರವವನ್ನು ರಮೇಶ್ ಕುಮಾರ್ ಅವರು ತಮ್ಮ ಈ ನಡೆ ಮೂಲಕ ಉಳಿಸಿಕೊಂಡಿದ್ದಾರೆ. ಆ ಮೂಲಕ ನ್ಯಾಯಾಂಗ ಮತ್ತು ಶಾಸಕಾಂಗ, ಸ್ಪೀಕರ್ ಮತ್ತು ನ್ಯಾಯಾಂಗದ ನಡುವೆ ಸಂಭವಿಸಬಹುದಾದ ಕಾನೂನು ಸಂಘರ್ಷವನ್ನು ತಪ್ಪಿಸಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗದಂತೆ ನೋಡಿಕೊಂಡಿದ್ದಾರೆ. ಇನ್ನೊಂದೆಡೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೂ ಅವರ ನಡೆ ಪರೋಕ್ಷವಾಗಿ ಲಾಭ ಮಾಡಿಕೊಟ್ಟಿದೆ.
ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಮೈತ್ರಿ ಸರ್ಕಾರ ಸದನದಲ್ಲಿ ವಿಶ್ವಾಸಮತ ಕಳೆದುಕೊಂಡು ಕೆಲವೇ ದಿನಗಳಲ್ಲಿ ಹೊಸ ಸರ್ಕಾರ (ಬಿಜೆಪಿ ಸರ್ಕಾರ) ಅಧಿಕಾರಕ್ಕೆ ಬರಬಹುದು. ಆದರೆ, ಅದು ರಾಜ್ಯಪಾಲರ ವರದಿ ಮತ್ತು ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನವನ್ನು ಅವಲಂಬಿಸಿದೆ. ಸೋಮವಾರ ವಿಶ್ವಾಸಮತ ಪ್ರಸ್ತಾಪದ ಮೇಲೆ ಮತದಾನ ಆಗುವವರೆಗೆ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಕುಳಿತರೆ ಸರ್ಕಾರ ಉರುಳುವುದು ಖಚಿತ.
ಸ್ಪೀಕರ್ ಅವರ ಪ್ರಬುದ್ಧ ಮತ್ತು ನಿಯಮಬದ್ಧ ನಡೆ ಏನು?
1. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ಕ್ರಿಯಾಲೋಪ: ರಾಜಿನಾಮೆ ನೀಡಿದ ಶಾಸಕರನ್ನು ಸದನಕ್ಕೆ ಬರುವಂತೆ ಬಲವಂತ ಮಾಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ ಅವರು, ಶಾಸಕಾಂಗ ಪಕ್ಷದ ನಾಯಕ ನಾನಾಗಿರುವಾಗ ನನ್ನನ್ನು ಪ್ರತಿವಾದಿಯಾಗಿ ಮಾಡದೆ ಈ ರೀತಿಯ ಆದೇಶ ಕೊಟ್ಟಿರುವುದು ವಿಪ್ ನೀಡುವ ತನ್ನ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಅಡ್ಡಿ ಬಂದಂತಾಗಿದೆ. ಆದ್ದರಿಂದ ಈ ಬಗ್ಗೆ ಕೋರ್ಟ್ ನಿಂದ ಸ್ಪಷ್ಟನೆ ಸಿಗುವವರೆಗೆ ವಿಶ್ವಾಸಮತ ಯಾಚನೆ ಮುಂದೂಡಬೇಕು ಎಂದು ಒತ್ತಾಯಿಸಿದ್ದರು. ಸಭಾ ನಾಯಕರೇ ಪ್ರತಿವಾದಿಯಾಗಿರುವಾಗ ಕೋರ್ಟ್ ಆದೇಶ ಎಲ್ಲಾ ಸದಸ್ಯರಿಗೂ (ಶಾಸಕಾಂಗ ಪಕ್ಷದ ನಾಯಕರು ಸೇರಿ) ಅನ್ವಯವಾಗುತ್ತದೆಯಾದರೂ ಪ್ರಕರಣ ಎಳೆಯಲು ಸಿದ್ದರಾಮಯ್ಯ ಮುಂದಾದರು. ಈ ಕುರಿತು ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದ ಬಳಿಕ ಸ್ಪೀಕರ್ ಅವರು ಕ್ರಿಯಾಲೋಪ ಕುರಿತ ತಮ್ಮ ರೂಲಿಂಗ್ ಕಾಯ್ದಿರಿಸಿದ್ದರು. ಒಂದೊಮ್ಮೆ ರೂಲಿಂಗ್ ಕೊಟ್ಟಿದ್ದರೆ ಅದನ್ನು ಪ್ರಶ್ನಿಸಿ ಮತ್ತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇತ್ತು. ಇದು ಮತ್ತಷ್ಟು ವಿಳಂಬಕ್ಕೆ ಕಾರಣವಾಗುತ್ತಿತ್ತು.
2. ರಾಜ್ಯಪಾಲರ ಸಂದೇಶವನ್ನು ಸದನಕ್ಕೆ ತಿಳಿಸಿದ್ದು: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲಿನ ಚರ್ಚೆ ಅನಗತ್ಯವಾಗಿ ವಿಳಂಬವಾಗುತ್ತಿದ್ದುದರಿಂದ ರಾಜ್ಯಪಾಲರು ಸ್ಪೀಕರ್ ಅವರಿಗೆ ಪತ್ರವೊಂದನ್ನು ಕಳುಹಿಸಿ, ಶೀಘ್ರ ಇದನ್ನು ಪೂರ್ಣಗೊಳಿಸುವಂತೆ ಸಂದೇಶ ರವಾನಿಸಿದ್ದರು. ಈ ಸಂದೇಶವನ್ನು ಸದನದಲ್ಲಿ ಓದಿದ ಸ್ಪೀಕರ್ ರಮೇಶ್ ಕುಮಾರ್, ಅದನ್ನು ಸದನದ ಸೊತ್ತಾಗಿ ಮಾಡಿ ತಮ್ಮ ಮತ್ತು ರಾಜ್ಯಪಾಲರ ನಡುವೆ ಸಮಸ್ಯೆ ತಲೆದೋರದಂತೆ ನೋಡಿಕೊಂಡರು.
3. ವಿಶ್ವಾಸಮತಕ್ಕೆ ಸಮಯ ನಿಗದಿ: ರಾಜ್ಯಪಾಲರ ಸೂಚನೆಯಂತೆ ಶುಕ್ರವಾರ ಸಂಜೆಯೊಳಗೆ ವಿಶ್ವಾಸಮತ ಸಾಬೀತುಪಡಿಸಲೇ ಬೇಕು ಎಂದು ಪದೇ ಪದೇ ಆಡಳಿತ ಪಕ್ಷವನ್ನು ಒತ್ತಾಯಿಸುತ್ತಾ, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿದ್ದ ನಿರ್ದೇಶನ ಪಾಲಿಸಲು ತಾನು ಎಲ್ಲಾ ಪ್ರಯತ್ನ ಮಾಡಿದೆ. ಆದರೆ, ಆಡಳಿತ ಪಕ್ಷದವರು ಕೇಳಲಿಲ್ಲ ಎಂದು ಹೇಳಿ ಅಲ್ಲೂ ಸ್ಪೀಕರ್ ಮತ್ತು ರಾಜ್ಯಪಾಲರ ಕಚೇರಿ ಮಧ್ಯೆ ವಿವಾದ ಉದ್ಭವವಾಗದಂತೆ ನೋಡಿಕೊಂಡರು.
4. ವಿಶ್ವಾಸಮತ ಪ್ರಸ್ತಾಪ ಕಲಾಪವನ್ನು ಸೋಮವಾರವೇ ಅಂತ್ಯಗೊಳಿಸುವುದಾಗಿ ಸರ್ಕಾರದಿಂದಲೇ ಹೇಳಿಸಿದ್ದು: ಸ್ಪೀಕರ್ ಅವರು ಕೈಗೊಂಡ ನಿರ್ಣಯಗಳಲ್ಲಿ ಅತಿ ಮುಖ್ಯ ಮತ್ತು ಸಾಂವಿಧಾನಿಕ ಬಿಕ್ಕಟ್ಟು ಉದ್ಭವವಾಗದಂತೆ ನೋಡಿಕೊಂಡಿದ್ದು ಈ ನಡೆ. ವಿಶ್ವಾಸಮತ ಯಾಚನೆ ಕಲಾಪವನ್ನು ಎಷ್ಟು ಸಾಧ್ಯವೋ ಅಷ್ಟು ವಿಳಂಬಿಸಲು ಸರ್ಕಾರ ನಾನಾ ಪ್ರಯತ್ನ ಮಾಡುತ್ತಿತ್ತು. ಇದಕ್ಕಾಗಿ ಸಂಬಂಧಪಡದ ವಿಚಾರಗಳನ್ನು ಪ್ರಸ್ತಾಪಿಸಿ ಕಾಲಹರಣ ಮಾಡುವುದರ ಜತೆಗೆ ಪ್ರತಿಪಕ್ಷ ಬಿಜೆಪಿಯನ್ನೂ ಕೆಣಕಲು ಪ್ರಯತ್ನಿಸುತ್ತಿತ್ತು. ಕಲಾಪ ಮುಗಿಸಲು ತಾವು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದಾಗ ಸ್ಪೀಕರ್ ತಮ್ಮ ಅಧಿಕಾರ ಬಳಸಿ ಕಲಾಪವನ್ನು ಮತಕ್ಕೆ ಹಾಕಿಸಿ ಅದು ಇತ್ಯರ್ಥವಾಗುವಂತೆ ನೋಡಿಕೊಳ್ಳಬಹುದಿತ್ತು. ಆದರೆ, ಆಡಳಿತ ಪಕ್ಷದ ಅನೇಕ ಸದಸ್ಯರು ತಾವು ಸದನದಲ್ಲಿ ಮಾತನಾಡಲೇಬೇಕು ಎಂದು ಪಟ್ಟುಹಿಡಿದಾಗ ನಿಯಮಾವಳಿ ಪ್ರಕಾರ ಅದಕ್ಕೆ ಸ್ಪೀಕರ್ ಅವಕಾಶ ಮಾಡಿಕೊಡಲೇ ಬೇಕಾಗುತ್ತದೆ. ಹೀಗಿರುವಾಗ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದೆ ಪ್ರಸ್ತಾಪವನ್ನು ಮತಕ್ಕೆ ಹಾಕಿದರೆ ಸಮಸ್ಯೆ ಉದ್ಭವವಾಗುತ್ತಿತ್ತು. ಸರ್ಕಾರ ವಿಶ್ವಾಸಮತ ಕಳೆದುಕೊಂಡರೂ ಸದನದಲ್ಲಿ ಮಾತನಾಡುವ ತಮ್ಮ ಹಕ್ಕನ್ನು ಸ್ಪೀಕರ್ ಮೊಟಕುಗೊಳಿಸಿದ್ದಾರೆ ಎಂದು ಆರೋಪಿಸಿ ಶಾಸಕರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇತ್ತು. ಇಷ್ಟರಲ್ಲಾಗಲೇ ಕಾನೂನು ಸಂಘರ್ಷದ ಮೂಲಕ ಸರ್ಕಾರದ ಆಯಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮಿತ್ರಪಕ್ಷಗಳು ಅಧಿಕಾರ ಹೋದಾಗ ಅದನ್ನು ಉಳಿಸಿಕೊಳ್ಳಲು ತಮ್ಮ ವಿರುದ್ಧವೂ ಕಾನೂನು ಹೋರಾಟಕ್ಕಿಳಿಯಲು ಹೇಸುವುದಿಲ್ಲ ಎಂಬುದನ್ನು ಅರಿತ ಸ್ಪೀಕರ್ ಅವರು ವಿಶ್ವಾಸಮತ ಯಾಚನೆ ಕಲಾಪವನ್ನು ಸೋಮವಾರದವರೆಗೆ ವಿಸ್ತರಿಸಲು ಅವಕಾಶ ಮಾಡಿಕೊಟ್ಟರು. ಅದೇ ಸಂದರ್ಭದಲ್ಲಿ ಸೋಮವಾರವೇ ಪ್ರಸ್ತಾಪವನ್ನು ಮತಕ್ಕೆ ಹಾಕಲು ಸರ್ಕಾರವೇ ಒಪ್ಪಿ ವಾಗ್ದಾನ ಮಾಡುವಂತೆ ನೋಡಿಕೊಂಡರು.

ಒಂದೊಮ್ಮೆ ಸ್ಪೀಕರ್ ಅವರು ಸದಸ್ಯರಿಗೆ ಮಾತನಾಡಲು ಅವಕಾಶ ನೀಡದೆ ಶುಕ್ರವಾರವೇ ವಿಶ್ವಾಸಮತ ಪ್ರಸ್ತಾಪವನ್ನು ಮತಕ್ಕೆ ಹಾಕಿದ್ದರೆ ಸರ್ಕಾರ ವಿಶ್ವಾಸಮತವೇನೋ ಕಳೆದುಕೊಳ್ಳುತ್ತಿತ್ತು. ಆದರೆ, ಸ್ಪೀಕರ್ ಅವರು ತಮ್ಮ ಹಕ್ಕು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದರೆ ಆಗ ಕೋರ್ಟ್ ಮಧ್ಯಪ್ರವೇಶಿಸಿ ವಿಶ್ವಾಸಮತ ಯಾಚನೆಗೆ ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಅವಕಾಶ ನೀಡಿ ಹಾಗೂ ಬಯಸಿದ ಸದಸ್ಯರಿಗೆಲ್ಲಾ ಮಾತನಾಡಲು ಅವಕಾಶ ನೀಡಿ ಎಂದು ಸ್ಪೀಕರ್ ಅವರಿಗೆ ಆದೇಶಿಸುವ ಸಾಧ್ಯತೆ ಇತ್ತು. ಇಂತಹ ಆದೇಶ ಹೊರಬಿದ್ದರೆ ಸ್ಪೀಕರ್ ಸ್ಥಾನ ಮತ್ತು ವೈಯಕ್ತಿಕವಾಗಿ ರಮೇಶ್ ಕುಮಾರ್ ಅವರ ಘನತೆಯೂ ಕುಂದುವಂತಾಗುತ್ತಿತ್ತು. ಇಷ್ಟೆಲ್ಲದರ ಮಧ್ಯೆ ತಮ್ಮ ಮೇಲೆ ಆಡಳಿತ ಪಕ್ಷದ ಪರ ಪಕ್ಷಪಾತಿ ಎಂಬ ಆರೋಪ ಬಂದರೂ ಅದಾವುದಕ್ಕೂ ತಲೆಕೆಡಿಸಿಕೊಳ್ಳದೆ ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯೆ ನಡೆಯಬಹುದಾಗಿದ್ದ ಮತ್ತಷ್ಟು ಕಾನೂನು ಸಂಘರ್ಷವನ್ನು ತಪ್ಪಿಸಿದರು.
ಬಿಜೆಪಿ ಸ್ಪೀಕರ್ ಅವರಿಗೆ ಕೃತಜ್ಞವಾಗಿರಬೇಕು:
ವಿಶ್ವಾಸಮತ ಕಲಾಪದಲ್ಲಿ ಸ್ಪೀಕರ್ ನಡೆದುಕೊಂಡ ರೀತಿಯಿಂದಾಗಿ ಅವರ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿ ಅವರ ನಿರ್ಣಯಗಳಿಂದ ತನಗಾಗುವ ಲಾಭ ನೋಡಿದರೆ ನಿಜವಾಗಿಯೂ ಸ್ಪೀಕರ್ ಅವರಿಗೆ ಕೃತಜ್ಞವಾಗಿರಬೇಕು. ಪ್ರಸ್ತುತ ಕಲಾಪದಲ್ಲಿ ಸ್ಪೀಕರ್ ಕೈಗೊಂಡಿರುವ ನಿರ್ಧಾರಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಿರ್ಣಯ ಕೈಗೊಂಡಿದ್ದರೂ ಸಮಸ್ಯೆಯಾಗುತ್ತಿತ್ತು. ಸಿದ್ದರಾಮಯ್ಯ ಅವರ ಕ್ರಿಯಾಲೋಪದ ಕುರಿತು ರೂಲಿಂಗ್ ಕಾಯ್ದಿರಿಸದಿದ್ದರೆ ಕಾಂಗ್ರೆಸ್ ಸುಪ್ರೀಂ ಕೋರ್ಟ್ ನಲ್ಲಿ ಇಷ್ಟರಲ್ಲಾಗಲೇ ಮಧ್ಯಂತರ ಅರ್ಜಿ ಸಲ್ಲಿಸಿ ವಿಶ್ವಾಸಮತ ಪ್ರಸ್ತಾಪ ಕುರಿತ ಕಲಾಪ ಮುಂದೂಡುವ ಪ್ರಯತ್ನ ಮಾಡುತ್ತಿತ್ತು. ಇನ್ನೊಂದೆಡೆ ವಿಶ್ವಾಸಮತ ಯಾಚನೆಗೆ ಸೋಮವಾರದವರೆಗೆ ಕಾಲಾವಕಾಶ ನೀಡದೆ ಶುಕ್ರವಾರವೇ ಮುಗಿಸುತ್ತಿದ್ದರೆ ಅದು ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಪ್ರಸ್ತಾಪ ಇತ್ಯರ್ಥಗೊಳ್ಳುವುದು ಮತ್ತಷ್ಟು ವಿಳಂಬವಾಗುತ್ತಿತ್ತು. ವಿಶ್ವಾಸಮತ ಸಾಬೀತುಪಡಿಸಲು ಸಿಗುವ ಆ ಸಮಯದಲ್ಲಿ ರಿವರ್ಸ್ ಆಪರೇಷನ್ ನಡೆಸಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು, ಇಲ್ಲವೇ ಮತ್ತಷ್ಟು ಕಾಲಹರಣವಾಗಿ ಬಿಜೆಪಿಗೆ ಸದ್ಯಕ್ಕೆ ಅಧಿಕಾರ ಸಿಗದಂತೆ ಆಗುತ್ತಿತ್ತು.
ಆದರೆ, ಕಾನೂನು ಸಂಘರ್ಷಕ್ಕೆ ಅವಕಾಶವಾಗದಂತೆ ಕೈಗೊಂಡ ಸ್ಪೀಕರ್ ನಿರ್ಣಯಗಳಿಂದಾಗಿ ಆಡಳಿತ ಪಕ್ಷತ ಪಕ್ಷದ ಪರ ಅಂತಹ ಸಾಧ್ಯತೆಗಳು ನಡೆಯದಂತೆ ನೋಡಿಕೊಂಡವು. ಇದರ ಪರಿಣಾಮ ಈಗಾಗಲೇ ಸದನದಲ್ಲಿ ಹೇಳಿರುವಂತೆ ಸೋಮವಾರ ಮುಗಿಯುವುದರೊಳಗೆ ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸಬೇಕು ಇಲ್ಲವೇ ಸೋತು ರಾಜಿನಾಮೆ ಕೊಡಬೇಕು. ಅದಾದ ಬಳಿಕ ರಾಜ್ಯಪಾಲರು ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡುತ್ತಾರೆ. ಅಂದರೆ, ಬಿಜೆಪಿಯ ಅಧಿಕಾರದ ಆಸೆ ನೆರವೇರಲು ಸ್ಪೀಕರ್ ಪರೋಕ್ಷವಾಗಿ ಸಹಾಯ ಮಾಡಿದಂತೆ ಆಗುತ್ತದೆ. ಆದರೆ, ಇದಾವುದನ್ನೂ ಅರ್ಥ ಮಾಡಿಕೊಳ್ಳದ ಬಿಜೆಪಿಯವರು ಸ್ಪೀಕರ್ ಅವರ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಯುತ್ತಿದ್ದಾರೆ.
ರಾಜ್ಯಪಾಲರು, ಕೇಂದ್ರ ಸರ್ಕಾರದ ಬಳಿಯಿದೆ ಬಿಜೆಪಿಯ ಅಧಿಕಾರ:
ರಾಜಿನಾಮೆ ನೀಡಿರುವ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸೋಮವಾರ ಮೈತ್ರಿ ಸರ್ಕಾರದ ಪಾಲಿಗೆ ಕೊನೆಯ ದಿನವಾಗುತ್ತದೆ. ಆದರೆ, ಅದನ್ನು ಕೊಡಿಸುವುದು ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರದ ಕೆಲಸ. ವಿಶ್ವಾಸಮತ ಯಾಚನೆ ವಿಚಾರದಲ್ಲಿ ಮುಖ್ಯಮಂತ್ರಿಗಳು ತಮ್ಮ ನಿರ್ದೇಶನ ಪಾಲಿಸಿಲ್ಲ. ಸರ್ಕಾರ ಅಲ್ಪಮತಕ್ಕೆ ಕುಸಿದರೂ ಕಾಲಹರಣ ಮಾಡುತ್ತಾ ಪ್ರಮುಖ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದು ರಾಜ್ಯಪಾಲರು ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರೆ ಆ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬಿಜೆಪಿಯ ಅಧಿಕಾರದ ಕನಸು ಈಡೇರುವುದಿಲ್ಲ.
ರಾಷ್ಟ್ರಪತಿ ಆಳ್ವಿಕೆ ಹೇರಿದರೆ ಆಗ ಮತ್ತೆ ಕಾನೂನು ಸಂಘರ್ಷ ಮುಂದುವರಿಯುತ್ತದೆ. ಅಷ್ಟೇ ಅಲ್ಲ, ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಿದ ತೀರ್ಮಾನ ವಾಪಸ್ ಪಡೆದರೆ ರಾಜ್ಯಪಾಲರು ಮತ್ತೆ ಮೈತ್ರಿ ಸರ್ಕಾರಕ್ಕೇ (ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ) ಬಹುಮತ ಸಾಬೀತುಪಡಿಸಲು ಅವಕಾಶ ನೀಡಬೇಕಾಗುತ್ತದೆ. ಆದರೆ, ಇದಕ್ಕೆ ಸಾಕಷ್ಟು ಸಮಯ ಬೇಕಾಗಿದ್ದು, ಈ ಅವಧಿಯಲ್ಲಿ ಶಾಸಕರ ನಡೆಯಲ್ಲಿ ಏನು ಬೇಕಾದರೂ ಬದಲಾವಣೆಗಳಾಗಬಹುದು. ರಾಜಿನಾಮೆ ನೀಡಿದ ಅತೃಪ್ತರ ಮನಸ್ಸು ಬದಲಾಗಬಹುದು ಇಲ್ಲವೇ, ಬಿಜೆಪಿಯ ಕೆಲ ಶಾಸಕರೇ ಮೈತ್ರಿ ಸರ್ಕಾರದ ಬೆಂಬಲಕ್ಕೆ ನಿಲ್ಲಬಹುದು. ಆಗ ಮತ್ತೆ ಕುಮಾರಸ್ವಾಮಿಯವರೇ ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಯ ರಾಜ್ಯ ನಾಯಕರು ಆತುರ ಮಾಡಿದರೂ, ಕೇಂದ್ರ ನಾಯಕರು ಆತುರದ ನಿರ್ಣಯ ಕೈಗೊಂಡು ಪಕ್ಷಕ್ಕೆ ಅಧಿಕಾರ ಸಿಗದಂತೆ ಮಾಡುವ ತಪ್ಪು ನಿರ್ಧಾರ ಕೈಗೊಳ್ಳಲಾರರು.