ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಹಲವು ಶಾಸಕರ ರಾಜಿನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಹೇಳಿರುವುದರ ಅರ್ಥವೇನು?
ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹದಿಮೂರು ಶಾಸಕರು ರಾಜಿನಾಮೆ ಸಲ್ಲಿಸಿದ್ದಾರೆ. ಅಸೆಂಬ್ಲಿ ಸ್ಪೀಕರ್ ತಕ್ಷಣಕ್ಕೆ ಶಾಸಕರ ರಾಜಿನಾಮೆ ಅಂಗೀಕರಿಸಿಲ್ಲ. ಮಂಗಳವಾರ ಜುಲೈ 09ರಂದು ಕಚೇರಿಗೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು ಹದಿಮೂರು ಮಂದಿ ರಾಜಿನಾಮೆ ಸಲ್ಲಿಸಿದ್ದು ಅವರಲ್ಲಿ ಎಂಟು ಶಾಸಕರ ರಾಜಿನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ, ಕೇವಲ ಐದು ಮಂದಿಯ ರಾಜಿನಾಮೆ ಪತ್ರಗಳು ಮಾತ್ರ ಕ್ರಮಬದ್ಧವಾಗಿವೆ ಎಂದು ಮಾಧ್ಯಮದವರ ಸಮ್ಮುಖ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೆ, ಇದೇ ಮಾಹಿತಿಯನ್ನು ಅಧಿಕೃತವಾಗಿ ಕರ್ನಾಟಕ ರಾಜ್ಯಪಾಲರ ಗಮನಕ್ಕೂ ತಂದಿದ್ದಾರೆ. ಯಾವ ಶಾಸಕನ ರಾಜಿನಾಮೆ ಪತ್ರವನ್ನು ಸ್ಪೀಕರ್ ಇದುವರೆಗೆ ಅಂಗೀಕರಿಸಿಲ್ಲ.
ಹಾಗಾದರೆ ಕ್ರಮಬದ್ಧ ರಾಜಿನಾಮೆ ಪತ್ರ ಅಂದರೇನು ಎಂಬುದು ರಾಜ್ಯದ ಜನತೆಯ ಮನಸ್ಸಿನಲ್ಲಿ ಕುತೂಹಲ, ಸಂಶಯ ಮೂಡುವುದು ಸಹಜ. ಕರ್ನಾಟಕ ವಿಧಾನಸಭೆಯ ವ್ಯವಹಾರಗಳ ನಡವಳಿಯ ನಿಯಮಾವಳಿ ಪ್ರಕಾರ ನಿಯಮ 202 , 22ನೇ ಅಧ್ಯಾಯದಲ್ಲಿ ಶಾಸಕರು ರಾಜಿನಾಮೆ ನೀಡಬೇಕಾದ ನಮೂನೆಯನ್ನು ನೀಡಲಾಗಿದೆ.


ವಿಧಾನಸಭೆಯ ಸದಸ್ಯತ್ವಕ್ಕೆ ಸ್ವಯಂ ಇಚ್ಛೆಯಿಂದ ರಾಜಿನಾಮೆ ನೀಡಲು ಬಯಸುವ ಶಾಸಕರು ತಮ್ಮ ಕೈ ಬರಹದಲ್ಲೇ ರಾಜಿನಾಮೆ ಪತ್ರವನ್ನು ಬರೆದು ನೀಡಬೇಕಾಗುತ್ತದೆ. ಕೇವಲ ಒಂದು ವಾಕ್ಯದಲ್ಲಿ ರಾಜಿನಾಮೆ ಬರೆದು ಆ ಪತ್ರದಲ್ಲಿ ರಾಜಿನಾಮೆಗೆ ಯಾವುದೇ ಕಾರಣಗಳನ್ನು ಉಲ್ಲೇಖಿಸುವಂತಿಲ್ಲ.
ಶಾಸಕರು ತಮ್ಮ ರಾಜಿನಾಮೆ ಪತ್ರದಲ್ಲಿ ಯಾವುದೇ ಕಾರಣ ಅಥವ ಸಂಬಂಧಪಡದ ವಿಚಾರಗಳನ್ನು ಉಲ್ಲೇಖ ಮಾಡಿದ್ದರೆ, ಸ್ಪೀಕರ್ ತನ್ನ ವಿವೇಚನೆಯನ್ನು ಬಳಸಿ ಸದನದಲ್ಲಿ ರಾಜಿನಾಮೆಯನ್ನು ಪ್ರಕಟಿಸುವಾಗ ಅಂತಹ ಶಬ್ದಗಳನ್ನು ಓದದೆ ಬಿಟ್ಟು ಬಿಡಬಹುದು. ಅಂಗೀಕೃತವಾದ ಪ್ರತಿ ಶಾಸಕರ ರಾಜಿನಾಮೆಯನ್ನು ಸದನದಲ್ಲಿ ಸ್ಪೀಕರ್ ಘೋಷಿಸಬೇಕು, ಗಜೆಟ್ ಪ್ರಕಟಣೆ ಹೊರಡಿಸಬೇಕು ಮತ್ತು ಈ ವಿಚಾರವನ್ನು ಮುಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ತಿಳಿಸಬೇಕಾಗುತ್ತದೆ.
ಕ್ರಮ ಸಂಖ್ಯೆ ಎರಡರ ಪ್ರಕಾರ ಶಾಸಕರ ರಾಜಿನಾಮೆ ಸ್ವಯಂ ಇಚ್ಛೆಯಿಂದ ನೀಡಿದ್ದು ಮತ್ತು ಅಧಿಕೃತ ಎಂದು ಮನಗಂಡರೆ ಸ್ಪೀಕರ್ ಕೂಡಲೇ ರಾಜಿನಾಮೆಯನ್ನು ಅಂಗೀಕರಿಸಬಹುದು.
ನಿಯಮದ ಕ್ರಮ ಸಂಖ್ಯೆ 3: ವಿಧಾನಸಭೆಯ ಸ್ಪೀಕರ್ ಅವರಿಗೆ ಶಾಸಕರ ವಿಚಾರಣೆ ನಡೆಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ರಾಜಿನಾಮೆ ನೀಡಬಯಸುವ ವಿಧಾನಸಭೆಯ ಸದಸ್ಯ ಮುಖತಃ ಸ್ಪೀಕರ್ ಅವರನ್ನು ಭೇಟಿಯಾಗದೆ ರಾಜಿನಾಮೆ ಪತ್ರವನ್ನು ಇತರರ ಮೂಲಕ ನೀಡಿದಾಗ ಸ್ಪೀಕರ್ ಅವರಿಗೆ ರಾಜಿನಾಮೆ ಪತ್ರ ನೀಡಿದ ಶಾಸಕರನ್ನು ಕರೆಯಿಸಿ ರಾಜಿನಾಮೆಯು ಸ್ವಯಂ ಇಚ್ಛೆಯಿಂದ ನೀಡಿರುವುದರ ಸಾಚಾತನವನ್ನು ತಿಳಿದುಕೊಳ್ಳಬಹುದು ಎನ್ನುತ್ತದೆ ನಿಯಮ.
ವಿಧಾನಸಭಾಧ್ಯಕ್ಷರು ರಾಜಿನಾಮೆಯ ಸಾಚಾತನದ ಬಗ್ಗೆ ಸ್ವಯಂ ಅಥವ ವಿಧಾನಸಭೆಯ ಕಾರ್ಯದರ್ಶಿ ಅಥವ ಇತರ ಯಾವುದೇ ಏಜೆನ್ಸಿ ಮೂಲಕ ವಿಚಾರಣೆ ನಡೆಸಿದಾಗ ರಾಜಿನಾಮೆ ಸ್ವಯಂಇಚ್ಛೆಯಿಂದ ಕೂಡಿದ್ದಲ್ಲ ಎಂದು ಸ್ಪೀಕರ್ ಅವರಿಗೆ ಮನವರಿಕೆಯಾದರೆ ಅಂತಹ ಸಂದರ್ಭದಲ್ಲಿ ರಾಜಿನಾಮೆಯನ್ನು ಅಂಗೀಕರಿಸಬೇಕಾಗಿಲ್ಲ.
ಸ್ಪೀಕರ್ ರಾಜಿನಾಮೆಯನ್ನು ಅಂಗೀಕರಿಸುವ ಮುನ್ನ ರಾಜಿನಾಮೆ ನೀಡಿದ ಶಾಸಕರಿಗೆ ತಮ್ಮ ರಾಜಿನಾಮೆ ಪತ್ರವನ್ನು ಹಿಂತೆಗೆದುಕೊಳ್ಳುವುದಕ್ಕೆ ಕೂಡ ನಿಯಮದಲ್ಲಿ ಅವಕಾಶವಿದೆ.
ಇಂದಿನ ರಾಜಕೀಯ ಸನ್ನಿವೇಶದಲ್ಲಿ ನಿಯಮಾವಳಿ ಪ್ರಕಾರ, ಶಾಸಕರಾದ ಆನಂದ್ ಸಿಂಗ್, ನಾರಾಯಣಗೌಡ, ಪ್ರತಾಪ್ ಗೌಡ, ಗೋಪಾಲಯ್ಯ, ರಾಮಲಿಂಗಾರೆಡ್ಡಿ ಅವರ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಸ್ಪೀಕರ್ ಪ್ರಕಟಿಸಿದ್ದಾರೆ. ಆದರೆ, ಅವರ ರಾಜಿನಾಮೆಯನ್ನೂ ಸ್ಪೀಕರ್ ಅಂಗೀಕರಿಸಿಲ್ಲ.
ಇನ್ನುಳಿದಂತೆ ಶಾಸಕರಾದ ರಮೇಶ್ ಜಾರಕಿಹೊಳಿ, ಎಸ್ ಟಿ ಸೋಮಶೇಖರ್, ಮುನಿರತ್ನ, ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್, ಬಿ. ಸಿ. ಪಾಟೀಲ್, ಹೆಚ್.ವಿಶ್ವನಾಥ್, ಭೈರತಿ ಬಸವರಾಜು ಅವರ ರಾಜಿನಾಮೆ ಕ್ರಮಬದ್ಧವಾಗಿಲ್ಲ ಎಂದು ಪರಿಗಣಿಸಲಾಗಿದೆ.
ಈ ಮಧ್ಯೆ, ತಮ್ಮ ರಾಜಿನಾಮೆಗಳನ್ನು ವಿಳಂಬ ಮಾಡದೆ ಅಂಗೀಕರಿಸುವಂತೆ ಹತ್ತು ಮಂದಿ ಶಾಸಕರು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದು, ಗುರುವಾರ ಜುಲೈ 11ರಂದು ನ್ಯಾಯಾಲಯ ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆ ಇದೆ.
ರಾಜಿನಾಮೆ ನೀಡಿರುವ ಶಾಸಕರಾದ ಆನಂದ್ ಸಿಂಗ್, ನಾರಾಯಣ ಗೌಡ ಅವರನ್ನು 2019 ಜುಲೈ 12ರಂದು, ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರನ್ನು ಜುಲೈ 15ರಂದು ವಿಚಾರಣೆಗೆ ಹಾಜರಾಗಬೇಕೆಂದು ಕರೆದಿದ್ದೇನೆ ಎಂದು ಸ್ಪೀಕರ್ ತಿಳಿಸಿದ್ದಾರೆ.