ಶಾಸಕರು ಮತ್ತು ಅವರ ಕುಟುಂಬದ ಆಸ್ತಿ ವಿವರ ಲೋಕಾಯುಕ್ತಕ್ಕೆ ಸಲ್ಲಿಸುವ ‘ಕಾಟಾಚಾರ’ವನ್ನು ಒಂದು ಶಿಸ್ತಿನ ಚೌಕಟ್ಟಿಗೆ ತರುವ ಪ್ರಯತ್ನ ನಮ್ಮ ಶಾಸಕಾಂಗದಿಂದ ಅಪೇಕ್ಷಿಸುವುದು ವ್ಯರ್ಥ. ಪ್ರತಿವರ್ಷ ಕಾನೂನಾತ್ಮಕವಾಗಿ ಸಲ್ಲಿಸಲೇಬೇಕಾಗಿರುವ ಈ ವಿವರವನ್ನು ಶಾಸಕರು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದಕ್ಕೆ ಹಲವು ಕಾರಣಗಳಿವೆ. ಎಲ್ಲಿಯವರೆಗೆ, ಲೋಕಾಯುಕ್ತ ಸಂಸ್ಥೆಗೆ ಈ ವಿವರಗಳನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಿಗುವುದಿಲ್ಲವೋ ಅಲ್ಲಿಯವರೆಗೆ ಇದು ಕಾಟಾಚಾರವಾಗಿಯೇ ಮುಂದುವರಿಯಲಿದೆ.
ಆಸ್ತಿ ವಿವರ ಸಲ್ಲಿಕೆ ಎಂಬ ಈ ಪ್ರಕ್ರಿಯೆ ಎಷ್ಟರಮಟ್ಟಿಗೆ ಕಾಟಾಚಾರವಾಗಿಬಿಟ್ಟಿದೆ ಎಂದರೆ, ಸುಸ್ತೀದಾರರೆಂಬಂತೆ ತಮ್ಮ ಹೆಸರು ಪತ್ರಿಕೆಗಳಲ್ಲಿ ಬಂದರೂ ಈ ಶಾಸಕರಿಗೆ ಗೊಡವೆಯೇ ಇಲ್ಲ. 2017-18 ರ ಸಾಲಿನ ಆಸ್ತಿ ವಿವರ ಸಲ್ಲಿಸದ 11 ಶಾಸಕರ ಹೆಸರುಗಳನ್ನು ಮೂರು ದಿನಪತ್ರಿಕೆಗಳಲ್ಲಿ ಪ್ರಕಟಗೊಳಿಸಲಾಯಿತು (ಮೇ 7).
ಆಸ್ತಿ ವಿವರ ಸಲ್ಲಿಸದ ಶಾಸಕರು
ಎಂ ವೈ ಪಾಟೀಲ್ (ಅಫ್ಜಲ್‌ಪುರ), ಬಿ ನಾರಾಯಣ ರಾವ್ (ಬಸವಕಲ್ಯಾಣ), ಬಸವರಾಜ ದಡೆಸೂಗೂರು (ಕನಕಗಿರಿ), ಕೆ ವೈ ನಂಜೇಗೌಡ (ಮಾಲೂರು), ಎಂ ಶ್ರೀನಿವಾಸ (ಮಂಡ್ಯ), ಕೆ ಎಸ್ ಲಿಂಗೇಶ (ಬೇಲೂರು) ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ ಎಂ ಲಿಂಗಪ್ಪ, ಸಿ ಎಂ ಇಬ್ರಾಹಿಂ, ಆಯನೂರು ಮಂಜುನಾಥ, ಆರ್ ಚೌಡಾರೆಡ್ಡಿ ತೂಪಲ್ಲಿ ಹಾಗೂ ಕಾಂತರಾಜ್.
ಶಾಸಕರು ಹಾಗೂ ಅವರ ಕುಟುಂಬದ ಆಸ್ತಿ ವಿವರ ಸಲ್ಲಿಸಲು ಕಡೆಯ ದಿನಾಂಕ ಪ್ರತಿವರ್ಷ ಜೂನ್ 30. ಇದು ಲೋಕಾಯುಕ್ತ ಕಾಯ್ದೆ ಸೆಕ್ಷನ್ 22 (1) ಪ್ರಕಾರ ಕಡ್ಡಾಯ. ಜೂನ್ 30 ರೊಳಗೆ ಆಸ್ತಿ ವಿವರ ಸಲ್ಲಿಸದೆ ಇದ್ದಾಗ, ಸೆಕ್ಷನ್ 22 (2)ರ ಪ್ರಕಾರ ಲೋಕಾಯುಕ್ತರು ಇಂತಹ ಶಾಸಕರ ಬಗ್ಗೆ ವರದಿಯೊಂದನ್ನು ಸಕ್ಷಮ ಪ್ರಾಧಿಕಾರಕ್ಕೆ (ರಾಜ್ಯಪಾಲ) ಸಲ್ಲಿಸುತ್ತಾರೆ. ಜೊತೆಗೆ ಅದರ ಪ್ರತಿಯೊಂದನ್ನು ಆಸ್ತಿ ವಿವರ ಸಲ್ಲಿಸದಿರುವ ಸದಸ್ಯರಿಗೂ ಕಳುಹಿಸುತ್ತಾರೆ.
ಇದಾದ ಎರಡು ತಿಂಗಳುಗಳ ನಂತರವೂ ಆಸ್ತಿ ವಿವರ ಸಲ್ಲಿಕೆಯಾಗದಿದ್ದರೆ, ಪತ್ರಿಕಾ ಪ್ರಕಟಣೆ ನೀಡಲಾಗುತ್ತದೆ. 2017-18ರ ಪ್ರಕ್ರಿಯೆ ಜೂನ್‌ನಿಂದ 2018ರ ಡಿಸೆಂಬರ್‌ವರೆಗೂ ನಡಿದಿದೆ. ಕೆಲ ಶಾಸಕರು ಬೇರೆ-ಬೇರೆ ಕಾರಣಗಳನ್ನು ನೀಡಿ ಸಮಯಾವಕಾಶ ಕೇಳಿದ್ದರು, ಇನ್ನು ಕೆಲವರು ಮೂರು ತಿಂಗಳ ಹಿಂದೆ ಪರಿಷತ್ ಅವಧಿ ಮುಗಿದಿದೆ ಎಂಬ ಕಾರಣವನ್ನೂ ನೀಡಿದ್ದರು. ಲೋಕಾಯುಕ್ತದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ಬಾರಿ ಪತ್ರಿಕಾ ಪಕಟಣೆ ನಂತರ ಇಬ್ಬರು ಶಾಸಕರು ಆಸ್ತಿ ವಿವರ ಸಲ್ಲಿಸಿದ್ದಾರೆ.
ಆಸ್ತಿ ವಿವರಗಳು ಸಲ್ಲಿಕೆಯಾದರೂ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಲೋಕಾಯುಕ್ತ ಸಂಸ್ಥೆಗೆ ನೀಡಲಾಗಿಲ್ಲ. ಆದರೆ, ಸಾರ್ವಜನಿಕರು, ಶಾಸಕರ ಆಸ್ತಿ ವಿವರದಲ್ಲಿನ ದೋಷಗಳ ವಿರುದ್ಧ ದೂರು ನೀಡಬಹುದು. ಆದರೆ, ಇದುವರೆಗೆ ಕೇವಲ ಬೆರಳೆಣಿಕೆಯಷ್ಟು ನಾಗರಿಕರು ಮಾತ್ರ ಮಾಹಿತಿ ಹಕ್ಕಿನಡಿಯಲ್ಲಿ ಶಾಸಕರ ಆಸ್ತಿ ವಿವರ ಕೇಳಿದ್ದಾರೆ. ಅದರಲ್ಲಿಯೂ ಕೆಲವರು ಆಸ್ತಿ ವಿವರ ಪಡೆದು ಮುಂದೇನು ಮಾಡಬೇಕೆಂದು ತಿಳಿಯದವರೂ ಇದ್ದಾರೆ.
ಇವೆಲ್ಲದರ ಮಧ್ಯೆ, ಇತ್ತೀಚೆಗೆ ಬಿಬಿಎಂಪಿ ಕಾರ್ಪೊರೇಟರ್‌ಗಳೂ ಕೂಡ ಆಸ್ತಿ ವಿವರ ಸಲ್ಲಿಸಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ, ಲೋಕಾಯುಕ್ತ ಕಾಯ್ದೆಯಲ್ಲಿ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂಬುದು ಲೋಕಾಯುಕ್ತ ಅಧಿಕಾರಗಳ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಸರ್ಕಾರ ನೇಮಿಸುವ ಹಲವು ಮಂಡಳಿಗಳ ನೇಮಕಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ ಎನ್ನಲಾಗುತ್ತಿದೆ.
ಲೋಕಾಯುಕ್ತ ಕಾಯ್ದೆ ಸೆಕ್ಷನ್ 22ರ ಪ್ರಕಾರ ಪ್ರತಿಯೊಬ್ಬ ಸರ್ಕಾರಿ ನೌಕರ (ರಾಜ್ಯ ಸರ್ಕಾರಿ ನೌಕರರು, IAS, IPS, IFS ಹೊರತುಪಡಿಸಿ) ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸಬೇಕು. ಈ ಪ್ರಕಾರ ಯಾವುದೇ ಪ್ರಾಧಿಕಾರ, ಮಂಡಳಿ ಅಥವಾ ಸಮಿತಿಯ ಅಥವಾ ವಿಧಾನಮಂಡಲದ ಯಾವುದೇ ಕಾನೂನಿನಡಿಯಲ್ಲಿ ಸ್ಥಾಪಿತವಾದ ನಿಗಮದ, ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ ಅಧ್ಯಕ್ಷ ಅಥವಾ ಉಪಾಧ್ಯಕ್ಷರೂ ಆಸ್ತಿ ವಿವರ ಸಲ್ಲಿಸಬೇಕಾಗುತ್ತದೆ. ಅಂದರೆ, ನಿಗಮ, ಮಂಡಳಿ ಹಾಗೂ ಇನ್ನಿತರ ಸರ್ಕಾರಿ ನಾಮನಿರ್ದೇಶಿತ ಅಧಿಕಾರಿಗಳೂ ಆಸ್ತಿ ವಿವರ ಸಲ್ಲಿಸಬೇಕಾಗುತ್ತದೆ.
ಶಾಸಕರ ಆಸ್ತಿ ವಿವರ ಸಲ್ಲಿಕೆಯಿಂದಲೇ ನಿರೀಕ್ಷಿತ ಸಾಮಾಜಿಕ ಸ್ವಚ್ಚತೆ ಆಗುತ್ತಿಲ್ಲ ಎಂಬುದು ಸತ್ಯ. ಇನ್ನು ನಿಗಮ, ಮಂಡಳಿ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯಂಥ ಸಂಸ್ಥೆಗಳ ಅಧ್ಯಕ್ಷರುಗಳಿಂದ ಅಸ್ತಿ ವಿವರ ಪಡೆದು ಹೆಚ್ಚಿನದೇನೂ ಬದಲಾವಣೆ ಆಗಲಾರದು ಎಂಬುದೂ ಅಷ್ಟೇ ಸತ್ಯ.