ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸುವುದರೊಂದಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚಿಸುವುದು ಖಚಿತವಾಗಿದೆ. ಯಡಿಯೂರಪ್ಪ ಅವರ ವಿಶ್ವಾಸಮತಕ್ಕೆ ಅಧಿಕಾರ ಕಳೆದುಕೊಂಡಿರುವ ಮೈತ್ರಿ ಪಕ್ಷಗಳ ವಿರೋಧವಿರಬಹುದು. ಆದರೆ, ಅದೇ ಮೈತ್ರಿ ಸರ್ಕಾರದ ಹಣಕಾಸು ವಿಧೇಯಕ ವಿಶ್ವಾಸಮತ ಪ್ರಸ್ತಾಪದ ಪರವಾಗಿರುತ್ತದೆ. ಈ ವಿಧೇಯಕಕ್ಕೋಸ್ಕರವಾದರೂ ಮೈತ್ರಿ ಶಾಸಕರು ಯಡಿಯೂರಪ್ಪ ವಿಶ್ವಾಸಮತ ಗೆಲ್ಲುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅವರೇ ರೂಪಿಸಿದ ವಿಧೇಯಕವನ್ನು ಅವರೇ ಸೋಲಿಸಿದಂತಾಗುತ್ತದೆ.
ಹರಸಾಹಸದ ಮೂಲಕ ಮುಖ್ಯಮಂತ್ರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು ಇಂದು (ಸೋಮವಾರ 29-07-2019) ವಿಶ್ವಾಸಮತ ಯಾಚಿಸುವುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿರುವುದು, ವಿಶ್ವಾಸಮತ ಯಾಚಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಆದರೆ, 17 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರಿಂದ 224 ಸದಸ್ಯಬಲದ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯಾಬಲ 207ಕ್ಕೆ ಇಳಿದಿದೆ. ಈ ಸಂಖ್ಯಾಬಲ ಆಧರಿಸಿ ಯಡಿಯೂರಪ್ಪ ವಿಶ್ವಾಸಮತ ಯಾಚಿಸುವುದು ಸಂವಿಧಾನಬಾಹಿರ ಆಗುವುದಿಲ್ಲ. ಸದನದಲ್ಲಿ ವಿಶ್ವಾಸಮತ ಯಾಚನೆ ಸಂವಿಧಾನಬಾಹಿರ ಎಂದು ವಾದಿಸಲು ಕಾಂಗ್ರೆಸಿಗರಿಗೆ ಇದ್ದ ಅಸ್ತ್ರವನ್ನು ಶಾಸಕರ ಅನರ್ಹತೆ ಮೂಲಕ ಸ್ಪೀಕರ್ ಅವರೇ ಕಸಿದುಕೊಂಡಿದ್ದಾರೆ.
ಇನ್ನು 207 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಯಡಿಯೂರಪ್ಪ ಅವರಿಗೆ ಬೇಕಿರುವುದು 104 ಸದಸ್ಯಬಲ. ಆದರೆ, ಬಿಜೆಪಿ ಮಾತ್ರ 105 ಸದಸ್ಯಬಲ ಹೊಂದಿದೆ. ಪಕ್ಷೇತರ ಶಾಸಕ ನಾಗೇಶ್ ಕೂಡ ಬಿಜೆಪಿಯನ್ನು ಬೆಂಬಲಿಸುತ್ತಿರುವುದರಿಂದ ಒಟ್ಟು ಸಂಖ್ಯಾಬಲ 106 ಆಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಎಲ್ಲಾ ಸದಸ್ಯರು ಹಾಜರಿದ್ದರೂ ಅವರ ಸಂಖ್ಯೆ 101 ದಾಟುವುದಿಲ್ಲ. ಹೀಗಾಗಿ ವಿಶ್ವಾಸಮತ ಸಾಬೀತುಪಡಿಸಲು ಯಡಿಯೂರಪ್ಪ ಅವರಿಗೆ ಯಾವುದೇ ಸಮಸ್ಯೆ ಆಗದು. ಬಿಜೆಪಿ ಸದಸ್ಯರೇ ಯಡಿಯೂರಪ್ಪ ಅವರಿಗೆ ಕೈಕೊಡಬಹುದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರಾದರೂ ಅಂಥಹ ನಿರೀಕ್ಷೆ ಅವರಲ್ಲೇ ಇಲ್ಲ. ಏಕೆಂದರೆ, ಅಧಿಕಾರದ ಹಿಂದೆ ಬಿದ್ದಿರುವ ರಾಜಕೀಯ ವ್ಯವಸ್ಥೆಯಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಶಾಸಕರು ಬಿಜೆಪಿಯಲ್ಲೂ ಇಲ್ಲ. ಇದು ಯಡಿಯೂರಪ್ಪ ಅವರ ವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಹಣಕಾಸು ವಿಧೇಯಕದ ಬಲ
ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರು ಕಳೆದ ಫೆಬವರಿಯಲ್ಲಿ 2019-20ನೇ ಸಾಲಿಗೆ 2.34 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, 2019ರ ಜುಲೈ ಅಂತ್ಯದವರೆಗಿನ ವೆಚ್ಚಕ್ಕೆ ಲೇಖಾನುದಾನ ಪಡೆದುಕೊಂಡಿದ್ದರು. ಉಳಿದಂತೆ ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆದು ಜುಲೈ ಅಂತ್ಯದೊಳಗೆ ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕಿತ್ತು. ಅದಕ್ಕಾಗಿ ಜುಲೈ ತಿಂಗಳಲ್ಲಿ ಅಧಿವೇಶನ ಕರೆದು ಹಣಕಾಸು ವಿಧೇಯಕ ಮಂಡಿಸಬೇಕಿತ್ತು. ಆದರೆ, ಅತೃಪ್ತ ಶಾಸಕರ ರಾಜಿನಾಮೆಯಿಂದ ಅದಕ್ಕೆ ಮುನ್ನವೇ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪಡೆದುಕೊಂಡಿದ್ದ ಲೇಖಾನುದಾನ ಜುಲೈ 31ರವರೆಗೆ ಮಾತ್ರ. ಆಗಸ್ಟ್ 1ರಿಂದ ಸರ್ಕಾರ ಒಂದು ರುಪಾಯಿ ವೆಚ್ಚ ಮಾಡಬೇಕಾದರೂ ಹಣಕಾಸು ವಿಧೇಯಕಕ್ಕೆ ಸದನದ ಅನುಮೋದನೆ ಪಡೆಯಬೇಕು.
ಸೋಮವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕ ಯಡಿಯೂರಪ್ಪ ಅವರು ನಂತರ ಹಣಕಾಸು ವಿಧೇಯಕವನ್ನು ಸದನದ ಅನುಮೋದನೆಗೆ ಮಂಡಿಸುವುದಾಗಿ ಹೇಳಿದ್ದಾರೆ. ಈ ಕುರಿತು ಈಗಾಗಲೇ ವಿಧಾನಸಭೆ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸಭಾಪತಿಗಳಿಗೆ ಮಾಹಿತಿ ನೀಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರೂಪಿಸಿರುವ ಹಣಕಾಸು ವಿಧೇಯಕವನ್ನು ಒಂದಕ್ಷರವೂ ತಿದ್ದುಪಡಿ ಮಾಡದೆ ಮಂಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿಶ್ವಾಸಮತ ಪ್ರಸ್ತಾಪಕ್ಕೆ ಸೋಲಾಗುವಂತೆ ಮಾಡಿದರೆ ಅವರೇ ರೂಪಿಸಿದ ಹಣಕಾಸು ವಿಧೇಯಕವನ್ನೇ ಸೋಲಿಸಿದಂತಾಗುತ್ತದೆ. ಏಕೆಂದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಿಧೇಯಕ ಮಂಡಿಸಬೇಕಾದರೆ ವಿಶ್ವಾಸಮತ ಸಾಬೀತುಪಡಿಸಬೇಕು. ಸಾಬೀತಾದರೆ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ ಮತ್ತು ಹಣಕಾಸು ವಿಧೇಯಕ ಮಂಡಿಸುತ್ತಾರೆ. ಹೀಗಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಇಷ್ಟವಿಲ್ಲದೇ ಇದ್ದರೂ ತಾವು ರೂಪಿಸಿದ ಹಣಕಾಸು ವಿಧೇಯಕಕ್ಕಾಗಿಯಾದರೂ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿಸಬೇಕಾಗುತ್ತದೆ. ಅದಕ್ಕಾಗಿ ವಿಶ್ವಾಸಮತ ಯಾಚನೆ ವೇಳೆ ಸಭಾತ್ಯಾಗದ ಮೂಲಕ ವಿರೋಧ ವ್ಯಕ್ತಪಡಿಸಿಯೋ ಅಥವಾ ಮೌನವಾಗಿರುವ ಮೂಲಕವೋ ಯಡಿಯೂರಪ್ಪ ವಿಶ್ವಾಸಮತ ಪ್ರಸ್ತಾಪ ಸದನದಲ್ಲಿ ಗೆಲ್ಲುವಂತೆ ನೋಡಿಕೊಳ್ಳುತ್ತಾರೆ.
ಯಡಿಯೂರಪ್ಪ ಪರ ಇದೆ ಅದೃಷ್ಟ
ಹಾಗೆ ನೋಡಿದರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯಡಿಯೂರಪ್ಪ ಅವರಿಗೆ ಇದ್ದ ಸವಾಲುಗಳು ಒಂದೊಂದಾಗಿ ನಿವಾರಣೆಯಾಗುತ್ತಾ ಬಂದಿದೆ. ಶಾಸಕರ ಅನರ್ಹತೆ ಆದೇಶ ಹೊರಬಿದ್ದು ಬಹುಮತಕ್ಕೆ ಬೇಕಾದ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ. ಹಣಕಾಸು ವಿಧೇಯಕದಿಂದಾಗಿ ಪ್ರತಿಪಕ್ಷಗಳು ಕೂಡ ವಿಶ್ವಾಸಮತದ ವಿಚಾರದಲ್ಲಿ ಸದನದಲ್ಲಿ ಮೌನವಾಗಿರಬಹುದು. ಅದಕ್ಕಿಂತ ಮುಖ್ಯವಾಗಿ ಮುಂದಿನ ದಿನಗಳ ಯಡಿಯೂರಪ್ಪ ಅವರ ಹಾದಿಯೂ ಸುಗಮವಾಗಿದೆ. ಸೋಮವಾರ ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತುಪಡಿಸಿದರೆ ಮತ್ತೆ ಸದನದ ಸಂಖ್ಯಾಬಲ ಬದಲಾಗುವವರೆಗೆ (ಅನರ್ಹಗೊಂಡ ಶಾಸಕರ ಕ್ಷೇತ್ರಗಳ ಉಪ ಚುನಾವಣೆ ನಡೆದು ಹೊಸದಾಗಿ ಶಾಸಕರ ಆಯ್ಕೆ ಇಲ್ಲವೇ ರಾಜಿನಾಮೆಯಿಂದ ಸದಸ್ಯ ಬಲ ಕಡಿಮೆಯಾದರೆ) ಇಲ್ಲವೇ ಆರು ತಿಂಗಳು ಯಡಿಯೂರಪ್ಪ ಅವರ ಸರ್ಕಾರ ಸೇಫ್. ಶಾಸಕರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದರೆ ಅವರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಆಗ ಬಿಜೆಪಿ ಸಾಸಕರಲ್ಲಿ ಅಸಮಾಧಾನ ಉಂಟಾಗುತ್ತಿತ್ತು. ಆದರೆ, ಎಲ್ಲಾ 17 ಶಾಸಕರು ಅನರ್ಹಗೊಂಡಿರುವುದರಿಂದ ನ್ಯಾಯಾಲಯದಲ್ಲಿ ಅನರ್ಹತೆ ವಿಚಾರ ಇತ್ಯರ್ಥವಾಗುವವರೆಗೆ ಅನರ್ಹ ಶಾಸಕರಿಗೆ ಯಾವುದೇ ಸ್ಥಾನಮಾನ ನೀಡಬೇಕಾದ ಅಗತ್ಯ ಇಲ್ಲ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ಇರುವೆಲ್ಲಾ ಸ್ಥಾನಗಳನ್ನು ಬಿಜೆಪಿ ಶಾಸಕರಿಗೇ ಹಂಚಿಕೆ ಮಾಡಬಹುದು. ಜತೆಗೆ ನಿಗಮ-ಮಂಡಳಿಗಳು, ಸಂಸದೀಯ ಕಾರ್ಯದರ್ಶಿಗಳು ಹೀಗೆ ಪ್ರಮುಖ ಸ್ಥಾನಮಾನಗಳನ್ನೂ ಬಿಜೆಪಿ ಶಾಸಕರು, ಕಾರ್ಯಕರ್ತರಿಗೆ ಹಂಚಿಕೆ ಮಾಡಿ ಪಕ್ಷದವರನ್ನು ಸಮಾಧಾನದಿಂದ ಇಟ್ಟುಕೊಳ್ಳಬಹುದು.