ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್-ಕಾಂಗ್ರೆಸ್ ಮಾಡಿಕೊಂಡ ಮೈತ್ರಿ ಲೋಕಸಭೆ ಚುನಾವಣೆಗೂ ವಿಸ್ತರಿಸಿತಾದರೂ ಎರಡೂ ಪಕ್ಷಗಳಿಗೆ ಅದರಿಂದ ಲಾಭವಾಗುವ ಬದಲು ನಷ್ಟವನ್ನೇ ತಂದುಕೊಟ್ಟಿತು. ಲೋಕಸಭೆಯ 28 ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನಗಳಿಗಷ್ಟೇ ಸೀಮಿತಗೊಂಡು ತಮ್ಮ ಹಿಂದಿನ ಸಾಧನೆಯ ಹತ್ತಿರಕ್ಕೆ ಬರಲು ಸಾಧ್ಯವಾಗದಿರುವುದೇ ಇದಕ್ಕೆ ಉದಾಹರಣೆ. ಚುನಾವಣೆ ಎಂದರೆ ಸೋಲು, ಗೆಲುವು ಸಾಮಾನ್ಯ. ಆದರೆ, ಮೈತ್ರಿಗೆ ಇಷ್ಟೊಂದು ಹೀನಾಯ ಸೋಲಾಗುತ್ತದೆ, ಜನ ಅದನ್ನು ಸಾರಾ ಸಗಾಟಾಗಿ ತಿರಸ್ಕರಿಸುತ್ತಾರೆ ಎಂಬುದನ್ನು ಕನಸಿನಲ್ಲೂ ಊಹಿಸದ ಮೈತ್ರಿ ಸರ್ಕಾರದ ನಾಯಕರು ತೀರಾ ಹತಾಶೆಗೆ ಒಳಗಾಗಿದ್ದಾರೆ. ಚುನಾವಣೆ ಮುಗಿದು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗುತ್ತಿದ್ದರೂ ಈ ಸೋಲನ್ನು ಜೀರ್ಣಿಸಿಕೊಳ್ಳಲು ಎರಡೂ ಪಕ್ಷಗಳ ಮುಖಂಡರಿಂದ ಸಾಧ್ಯವಾಗಿಲ್ಲ. ಈ ಹತಾಶೆಯೇ ಮೈತ್ರಿ ನಾಯಕರ ಹೇಳಿಕೆಗಳನ್ನು ಪ್ರತಿಬಿಂಬಿಸುತ್ತಿದೆ.
ವೋಟು ಮಾತ್ರ ನರೇಂದ್ರ ಮೋದಿಗೆ ಹಾಕುತ್ತೀರಿ, ಕೆಲಸಕ್ಕೆ ನಾವು ಬೇಕಾ? ನಿಮಗೆ ಮರ್ಯಾದೆ ಕೊಡಬೇಕಾ? ಲಾಠಿ ಚಾರ್ಜ್ ಮಾಡಿಸಬೇಕಾ? ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರೆ, ಅಕ್ಕಿ ಕೊಡೋರು ನಾವು, ಮಕ್ಕಳಿಗೆ ಹಾಲು ಕೊಡೋರು ನಾವು, ಬಟ್ಟೆ ಕೊಡೋರು ನಾವು, ಹೀಗೆ ಎಲ್ಲಾ ಕೊಡೋರು ನಾವು. ಅವರೇನು ಮಾಡಿದ್ದಾರೆ? ಏನೂ ಮಾಡಿಲ್ಲ. ಅದರೂ ಜನ ಅವರಿಗೇ (ಮೋದಿ) ವೋಟು ಹಾಕ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತದಾರರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇಂತಹ ಹೇಳಿಕೆಗಳು ಈಗ ಮಿತ್ರಪಕ್ಷಗಳ ನಾಯಕರಲ್ಲಿ ಸಮೂಹ ಸನ್ನಿಯಾಗಿ ಮಾರ್ಪಟ್ಟಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ… ಹೀಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡುತ್ತಿರುವವರ ಪಟ್ಟಿ ಬೆಳೆಯುತ್ತಲೇ ಇದೆ.
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಬಿಜೆಪಿಯ ಆಪರೇಷನ್ ಕಮಲದಿಂದ ಪಾರಾಗಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲೇ ಒಂದು ವರ್ಷ ಹೆಣಗಾಡಿದ ಮೈತ್ರಿ ನಾಯಕರಿಗೆ ಲೋಕಸಭೆ ಚುನಾವಣೆಯಲ್ಲಿ ಜನರಿಂದ ಸಿಕ್ಕಿದ ಪ್ರತಿಕ್ರಿಯೆ ನಿರಾಶೆ ತಂದಿದ್ದಂತೂ ಸತ್ಯ. ರೈತರ ಸಾಲ ಮನ್ನಾ, ಬಡ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದಲೇ ಸಾಲ ನೀಡುವ ವ್ಯವಸ್ಥೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ಜನ ಮಾತ್ರ ಮೈತ್ರಿಯನ್ನು ಸಾರಾ ಸಗಾಟಾಗಿ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಯಾವ ಪ್ರಧಾನ ನರೇಂದ್ರ ಮೋದಿ ವಿರುದ್ಧ ವಾಚಮಗೋಚರ ಆರೋಪಗಳನ್ನು ಮಾಡಿ ಲೋಕಸಭೆ ಚುನಾವಣೆ ಎದುರಿಸಿದರೂ ಮತದಾರ ಮಾತ್ರ ಇದನ್ನು ಒಪ್ಪದೆ ಬಿಜೆಪಿಯನ್ನು ಅಪ್ಪಿಕೊಂಡಿದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಿಟ್ಟು ಇದೀಗ ಪರೋಕ್ಷವಾಗಿ ಜನರ ಮೇಲೆಯೇ ತಿರುಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ನಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿದೆ. ಚುನಾವಣಾ ಕಾಲದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವುದು, ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಜಾರಿಗೆ ತರುವುದು ಆಡಳಿತ ಪಕ್ಷದ ಕರ್ತವ್ಯ ಹೇಗೋ, ಹಾಗೆಯೇ ನುಡಿದಂತೆ ನಡೆದವರನ್ನು ಬೆಂಬಲಿಸುವುದು ಮತದಾರರ ಜವಾಬ್ದಾರಿ. ಪ್ರಜಾಪ್ರಭುತ್ವದ ಬಲವರ್ಧನೆಗೆ ಇಂತಹ ಚರ್ಚೆ ಸಹಕಾರಿ ಎನ್ನುವ ಮೂಲಕ ಅಕ್ಕಿ ಕೊಡೋರು ನಾವು, ಮಕ್ಕಳಿಗೆ ಹಾಲು ಕೊಡೋರು ನಾವು, ಬಟ್ಟೆ ಕೊಡೋರು ನಾವು, ಹೀಗೆ ಎಲ್ಲಾ ಕೊಡೋರು ನಾವು. ಅವರೇನು ಮಾಡಿದ್ದಾರೆ? ಏನೂ ಮಾಡ್ಲಿಲ್ಲ. ಅದರೂ ಜನ ಅವರಿಗೇ (ಮೋದಿ) ವೋಟು ಹಾಕ್ತಾರೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯವಾಗಿ ಸಿದ್ದರಾಮಯ್ಯನವರ ಈ ಅಭಿಪ್ರಾಯ ಸರಿಯಾಗಿಯೇ ಇದೆ. ಏಕೆಂದರೆ, ಒಂದು ಸರ್ಕಾರ ತನ್ನನ್ನು ಆಯ್ಕೆ ಮಾಡಿದ ಜನರಿಗೆ ಹೇಗೆ ಉತ್ತದಾಯಿಯಾಗುತ್ತದೆಯೋ, ತಮ್ಮ ಬೇಡಿಕೆಗಳನ್ನು ಈಡೇರಿಸಿದ ಸರ್ಕಾರವನ್ನು ಬೆಂಬಲಿಸುವುದು ಜನರ ಜವಾಬ್ದಾರಿಯಾಗಿರುತ್ತದೆ.
ಇಂತಹ ಹೇಳಿಕೆಗಳೇ ತಿರುಗುಬಾಣವಾಗುವುದೇ ಅಥವಾ ಕೈ ಹಿಡಿಯುವುದೇ
ಹೀಗೊಂದು ಪ್ರಶ್ನೆ ರಾಜಕೀಯ ಅಂಗಳದಲ್ಲಿ ಕೇಳಿಬರುತ್ತಿದೆ. ಏಕೆಂದರೆ, ಮೈತ್ರಿ ಸರ್ಕಾರ ರಚನೆಯಾಗಿ ವರ್ಷವಾಗುತ್ತಿದ್ದಂತೆ ಮಿತ್ರ ಪಕ್ಷಗಳ ಶಾಸಕರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ಬಹಿರಂಗವಾಗಿ ಕಾಣಿಸಿಕೊಳ್ಳದಿದ್ದರೂ ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿದೆ. ಯಾವಾಗ ಅದು ಸ್ಫೋಟಗೊಳ್ಳುತ್ತದೋ ಗೊತ್ತಿಲ್ಲ. ಒಂದೊಮ್ಮೆ ಅಸಮಾಧಾನಗೊಂಡ ಶಾಸಕರು ಸರ್ಕಾರಕ್ಕೆ ಕೈಕೊಟ್ಟು ಬಿಜೆಪಿಗೆ ಸೇರಿದರೆ, ಆ ಸಂಖ್ಯೆ ಸರ್ಕಾರಕ್ಕಿರುವ ಬಹುಮತವನ್ನು ಕಿತ್ತುಕೊಂಡರೆ ಹೊಸ ಸರ್ಕಾರ ರಚನೆಯಾಗಬೇಕಾಗುತ್ತದೆ. ಹಲವು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈತ್ರಿ ನಾಯಕರ ಇಂತಹ ಹೇಳಿಕೆಗಳೇ ಪಕ್ಷದ ಅಭ್ಯರ್ಥಿಗಳ ಪಾಲಿಗೆ ಮುಳುವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ನಾಯಕರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ತಿರುಗಿಬಿದ್ದಿದ್ದರು. ಆದರೆ, ಅದರಿಂದ ಲಾಭವೇನೂ ಆಗಲಿಲ್ಲ. ಬದಲಾಗಿ ಹೀನಾಯ ಸೋಲು ಸೋಲು ಅನುಭವಿಸಬೇಕಾಯಿತು. ಉಪ ಚುನಾವಣೆ ನಡೆದಾಗ ಬಿಜೆಪಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಎಂಬ ಟ್ರಂಪ್ ಕಾರ್ಡ್ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದು ಖಚಿತ. ಜತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೆ ಹೆಚ್ಚು ಅನುಕೂಲ ಎಂಬ ಮಾತನ್ನೂ ಅದು ಚಲಾವಣೆಗೆ ಬಿಡಲಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ಕುರಿತಾದ ಟೀಕೆಯೇ ಮಿತ್ರಪಕ್ಷಗಳ ಪಾಲಿಗೆ ವಿಲನ್ ಆಗಬಹುದು.
ಹಾಗೆಂದು ನಷ್ಟವೇ ಆಗುತ್ತದೆ ಎಂದು ಹೇಳುವಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಬಾರಿ ಇನ್ನಷ್ಟು ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರಲು ಕಾರಣವಾಗಿದ್ದು ಕೇಂದ್ರದ ಸಾಧನೆಗಳನ್ನು ಮಾರ್ಕೆಟಿಂಗ್ ಮಾಡಿದ ರೀತಿ. ಚುನಾವಣೆಗೆ ಎರಡು ವರ್ಷ ಇರುವಂತೆಯೇ ಈ ಮಾರ್ಕೆಟಿಂಗ್ ಕಾರ್ಯ ಆರಂಭಿಸಿದ್ದ ಬಿಜೆಪಿ, ಅದರೊಂದಿಗೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಇತರೆ ಪಕ್ಷಗಳ ಲೋಪಗಳನ್ನು ಜನರಿಗೆ ತಿಳಿಸುತ್ತಾ ಭಾವನಾತ್ಮಕವಾಗಿ ಅವರನ್ನು ತಮ್ಮತ್ತ ಸೆಳೆದುಕೊಂಡಿತ್ತು. ಇದೇ ಮಾದರಿಯಲ್ಲಿ ಈಗಿನಿಂದಲೇ ರಾಜ್ಯ ಸರ್ಕಾರದ (ಸಿದ್ದರಾಮಯ್ಯ ಸರ್ಕಾರ ಮತ್ತು ಕುಮಾರಸ್ವಾಮಿ ಸರ್ಕಾರ) ಸಾಧನೆಗಳನ್ನು ಹೇಳುತ್ತಾ, ಕೇಂದ್ರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಮಿತ್ರ ಪಕ್ಷಗಳ ನಾಯಕರು ಪೀಠಿಕೆ ಹಾಕಿರಬಹುದು.
ರಾಜ್ಯ ಸರ್ಕಾರದ ಸಾಧನೆ ಮತ್ತು ಕೇಂದ್ರದ ವಿರುದ್ಧದ ಮಿತ್ರ ಪಕ್ಷಗಳ ನಾಯಕರ ಹೇಳಿಕೆಗಳು ಈ ರೀತಿಯ ಪ್ರಯತ್ನವಾದರೆ ಅದರಿಂದ ಲಾಭ ಸಿಗಬಹುದು. ಏಕೆಂದರೆ, ಕಳೆದ ವಿಧಾನಸಭೆ ಚುನಾವಣೆ ವೇಳೆ (2018) ಅನ್ನಭಾಗ್ಯ, ಕ್ಷಿರಭಾಗ್ಯ ಮುಂತಾದ ಯೋಜನೆಗಳು ಆಡಳಿತ ವಿರೋಧಿ ಅಲೆ ಮಧ್ಯೆಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಅಲೆ ಸೃಷ್ಟಿಮಾಡಿತ್ತು. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ, ಬಹುಸಂಖ್ಯಾತರ ವಿರುದ್ಧದ ಕೆಲವು ನಿರ್ಧಾರಗಳು ಕಾಂಗ್ರೆಸ್ ಸೋಲುವಂತೆ ಮಾಡಿತ್ತು.
ಇನ್ನೊಂದೆಡೆ, ಕೇಂದ್ರದ ನಾಯಕರು ಕೊಟ್ಟ ಅಂಕಿ ಅಂಶಗಳನ್ನೇ ಮುಂದಿಟ್ಟುಕೊಂಡು ವಾದ ಮಾಡುವ ಬಿಜೆಪಿಯವರಿಗೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬ ಸ್ಪಷ್ಟ ತಿಳುವಳಿಕೆಯೂ ಇಲ್ಲ, ಅಂಕಿ-ಅಂಶಗಳ ಸಹಿತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಛಾತಿಯೂ ಇಲ್ಲ. ಹೀಗಿರುವಾಗ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡುತ್ತಾ, ರಾಜ್ಯ ಸರ್ಕಾರದ ಸಾಧನೆಗಳನ್ನು ಹೊಗಳುತ್ತಾ ಹೋದರೆ ಜನ ಬೆಂಬಲ ಸಿಗಬಹುದು. ಆದರೆ, ಹಾಗೆ ಆಗಬೇಕಾದರೆ ಮಿತ್ರ ಪಕ್ಷಗಳ ನಾಯಕರು ವಿನಾ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇಲ್ಲ ಸಲ್ಲದ ಟೀಕೆ ಮಾಡುವುದನ್ನು ಬಿಡಬೇಕಾಗುತ್ತದೆ. ಇಲ್ಲವಾದಲ್ಲಿ ಲೋಕಸಭೆ ಚುನಾವಣೆಯಂತೆ ಇಂತಹ ಟೀಕೆಗಳನ್ನೇ ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳಬಹುದು. ಈ ಮಾತನ್ನು ಮಿತ್ರಪಕ್ಷಗಳ ನಾಯಕರು ಅರ್ಥ ಮಾಡಿಕೊಂಡರೆ ಅನಗತ್ಯ ಟೀಕೆಗಳಿಗೆ ಕಡಿವಾಣ ಬಿದ್ದು ರಾಜಕೀಯವೂ ಕೊಂಚ ಗಾಂಭೀರ್ಯ ಪಡೆದುಕೊಳ್ಳಬಹುದು.