ವೈದಿಕ ಅಜೆಂಡಾದ ಮುಂದೆ ‘ಹರಕೆಯ ಕುರಿ’ಯಾದರೆ ಶೂಧ್ರ ನಾಯಕರು!

ಆಳುವ ವ್ಯವಸ್ಥೆ ಕ್ಷಾಮ, ಸಾಂಕ್ರಾಮಿಕದಂತಹ ಸಾಮುದಾಯಿಕ ಸಂಕಷ್ಟಗಳನ್ನು ಕೂಡ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತದೆಯೇ ವಿನಃ, ಜನಹಿತಕ್ಕಾಗಿ ಅಲ್ಲ ಎಂಬುದು ಸಾವಿರಾರು ವರ್ಷಗಳ ಮಾನವ ಚರಿತ್ರೆಯಲ್ಲಿ ಮತ್ತೆ ಮತ್ತೆ ನಿರೂಪಿತವಾಗುತ್ತಲೇ ಬಂದಿದೆ. ಅದರಲ್ಲೂ ಜನಾಂಗ, ಧರ್ಮ, ಕೋಮು ಅಜೆಂಡಾದಂತಹ ಮನುಕುಲದ ಹೀನ ಅಜೆಂಡಾಗಳ ಮೇಲೆ ಅಧಿಕಾರಕ್ಕೆ ಬಂದ ಆಡಳಿತಗಳಂತೂ ಇಂತಹ ಸಂಕಷ್ಟಗಳೇ ಅಪೂರ್ವ ಅವಕಾಶ ಎಂದು, ಅದು ಕೈತಪ್ಪದಂತೆ ಎಚ್ಚರಿಕೆ ವಹಿಸುತ್ತವೆ.

ಸದ್ಯದ ಕರೋನಾ ಸಾವು ನೋವುಗಳ, ಹಿಂದೆಂದೂ ಕಂಡುಕೇಳರಿಯದ ಸಂಕಷ್ಟ ಕೂಡ ದೇಶದ ಆಳುವ ಪಕ್ಷಕ್ಕೆ ಅಂತಹದ್ದೇ ಐತಿಹಾಸಿಕ ಅವಕಾಶವಾಗಿ ಒದಗಿಬಂದಿದೆ. ಅದು ಕೇವಲ ಜನ ವಿರೋಧಿ ಕಾನೂನು, ಕಾಯ್ದೆಗಳ ಜಾರಿಯ ವಿಷಯದಲ್ಲಿ ಮಾತ್ರವಲ್ಲ; ತನ್ನ ಗೌಪ್ಯ ಅಜೆಂಡಾಗಳನ್ನು ಜಾರಿಗೆ ತರಲು ಕೂಡ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಮಾತೃಸಂಘಟನೆ ರಾಷ್ಟ್ರೀಯ ಸ್ವಯಂಸೇವಾ ಸಂಘಗಳು(ಆರ್ ಎಸ್ ಎಸ್) ಈ ಅವಕಾಶವನ್ನು ಅತ್ಯಂತ ಚಾಣಾಕ್ಷತೆಯಿಂದ ಬಳಸಿಕೊಳ್ಳುತ್ತಿವೆ.

ಅದರಲ್ಲೂ ತನ್ನ ರಾಜಕೀಯ ಕೈಗೊಂಬೆಯಂತಿರುವ ಭಾರತೀಯ ಜನತಾ ಪಕ್ಷದ ಮೂಲಕ ಹಿಂದುತ್ವವಾದಿ, ಪುರೋಹಿತಶಾಹಿ ಅಜೆಂಡಾವನ್ನು ಅತ್ಯಂತ ನಾಜೂಕಾಗಿ ಅನುಷ್ಠಾನಕ್ಕೆ ತರುವ ಮೂಲಕ ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ವೈದಿಕ ಶಕ್ತಿಗಳನ್ನು ಸ್ಥಾಪಿಸುವ ಕಾರ್ಯವನ್ನು ಆರ್ ಎಸ್ ಎಸ್ ಈ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೆ ತರುತ್ತಿದೆ ಎಂಬುದು ಇತ್ತೀಚಿನ ದಿನಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಅರಿವಾಗದೇ ಇರದು. ಆರ್ ಎಸ್ ಎಸ್ ಇತಿಹಾಸ ಮತ್ತು ಸಿದ್ಧಾಂತವನ್ನು ಬಲ್ಲವರಿಗೆ ಅದರ ರಾಜಕೀಯ ತಂತ್ರಗಾರಿಕೆಗಳು ಹೊಸತಲ್ಲ. ಆದರೆ, ಇಡೀ ದೇಶವೇ ಸಾವು ಬದುಕಿನ ಸಂಕಟದಲ್ಲಿ ಮುಳುಗೇಳುತ್ತಿರುವಾಗ ಅಂತಹ ಅವಕಾಶವನ್ನೇ ಬಳಸಿಕೊಂಡು ದೇಶವನ್ನು ವೈದಿಕ ಪ್ರಭುತ್ವಕ್ಕೆ, ಪುರೋಹಿತಶಾಹಿ ಆಡಳಿತಕ್ಕೆ ಹೊರಳಿಸುವ ಅದರ ಚಾಣಾಕ್ಷ ನಡೆ ಹೊಸತು.

ಅದು, ಅಸ್ಸಾಂ ವಿಧಾನಸಭಾ ಚುನಾವಣೆಯ ಬಳಿಕ ಅಲ್ಲಿನ ಮುಖ್ಯಮಂತ್ರಿ ಸ್ಥಾನಕ್ಕೆ ಸರಬಾನಂದ ಸೋನಾವಾಲಾನಂತಹ, ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿಬೆಳಸಿದ ಬುಡಕಟ್ಟು ನಾಯಕನ ಬದಲಿಗೆ ಬ್ರಾಹ್ಮಣ ನಾಯಕ ಹಿಮಂತ ಬಿಸ್ವಾ ಶರ್ಮಾರನ್ನು ಕೂರಿಸಿದ್ದಿರಬಹುದು, ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಿಬೆಳೆಸಿದ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿ, ಸಿಎಂ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿಯನ್ನು ತರುವ ತೆರೆಮರೆಯ ಪ್ರಯತ್ನಗಳಿರಬಹುದು, ಹಿಂದುಳಿದ ವರ್ಗದ ಯುವ ನಾಯಕ ಪ್ರತಾಪ್ ಸಿಂಹ ಅವರನ್ನು ಬದಿಗೆ ಸರಿಸಿ, ಬ್ರಾಹ್ಮಣ ಸಮುದಾಯದ ತೇಜಸ್ವಿ ಸೂರ್ಯರನ್ನು ಮುನ್ನೆಲೆಗೆ ತರುತ್ತಿರುವುದು ಇರಬಹುದು. ಅಂತಿಮವಾಗಿ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಕರೋನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಸೋತಿದ್ದಾರೆ. ಹಾಗಾಗಿ ಸಂಕಷ್ಟದ ಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಲು ಅವರ ಬದಲಿಗೆ ನಾಗ್ಪುರ ಸಂಘದ ಪರಮಾಪ್ತ, ಬ್ರಾಹ್ಮಣ ಸಮುದಾಯದ ಹಿನ್ನೆಲೆಯ ನಿತಿನ್ ಗಡ್ಕರಿ ಅವರಿಗೆ ಹೆಚ್ಚಿನ ಹೊಣೆ ವಹಿಸಬೇಕು ಎಂಬ ಪ್ರಸ್ತಾವನೆಗಳವರೆಗೆ ಎಲ್ಲವೂ ಅಧಿಕಾರದ ಆಯಕಟ್ಟಿನ ಸ್ಥಾನಗಳಿಗೆ ಪುರೋಹಿತಶಾಹಿ ಸಮುದಾಯವನ್ನು ತಂದು ಕೂರಿಸುವ ಯತ್ನಗಳೇ!

ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಅಲ್ಲಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದವರು ಬುಡಕಟ್ಟು ಸಮುದಾಯದ ಹಿನ್ನೆಲೆಯ ಸರಬಾನಂದ ಸೋನಾವಾಲ. ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿ, ಮೋದಿಯವರ ಮೊದಲ ಅವಧಿಯ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದವರು. ಬಳಿಕ 2016ರಲ್ಲಿಅಸ್ಸಾಂ ಮುಖ್ಯಮಂತ್ರಿಯಾಗಿಯೂ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದವರು. ಆದರೆ, ರಾಜ್ಯದಲ್ಲಿ ಇತರೆ ಮಿತ್ರಪಕ್ಷಗಳ ಮತಬ್ಯಾಂಕ್ ಕಬಳಿಸಿ, ಬಹುತೇಕ ಸ್ವಂತ ಬಲದ ಮೇಲೆ ಸರಳ ಬಹುಮತ ಪಡೆಯುವ ಮಟ್ಟಿಗೆ ಪಕ್ಷ ಪ್ರಬಲವಾಗಿ ಬೇರೂರಿದೆ ಎನಿಸುತ್ತಲೇ ಬಿಜೆಪಿ ಮತ್ತು ಅದರ ರಾಜಕೀಯ ತಂತ್ರಗಾರ ಆರ್ ಎಸ್ ಎಸ್, ಅತ್ಯಂತ ಚಾಣಾಕ್ಷತನದಿಂದ ಬುಡಕಟ್ಟು ಸಮುದಾಯದ ಸಬರಾನಂದರನ್ನು ಬದಿಗೆ ಸರಿಸಿ, ಐದು ವರ್ಷಗಳ ಹಿಂದಷ್ಟೇ ಕಾಂಗ್ರೆಸ್ಸಿನಿಂದ ವಲಸೆ ಬಂದಿದ್ದ ಹಿಮಂತ ಬಿಸ್ವಾ ಶರ್ಮಾಗೆ ಚುನಾವಣಾ ಹೊಣೆಗಾರಿಕೆ ವಹಿಸಿತು. ಆ ಮೂಲಕ ಚುನಾವಣೆಯ ಗೆಲುವಿನ ಯಶಸ್ಸು ಸಂಪೂರ್ಣವಾಗಿ ಶರ್ಮಾ ಪಾಲಾಗುವಂತೆ ನೋಡಿಕೊಳ್ಳಲಾಯಿತು. ನಿರೀಕ್ಷೆಯಂತೆ ಬಹುಮತ ಪಡೆಯುತ್ತಲೇ, ನಾಲ್ಕು ದಿನ ಚರ್ಚೆ, ಸಮಾಲೋಚನೆಯ ತಂತ್ರ ಹೂಡಿ, ಸ್ವತಃ ಸಬರಾನಂದರೇ ಶರ್ಮಾ ಹೆಸರನ್ನು ಸಿಎಂ ಸ್ಥಾನಕ್ಕೆ ಸೂಚಿಸುವಂತೆ ಮಾಡಲಾಯಿತು. ಪರಿಣಾಮ; ಅಂತಿಮವಾಗಿ ಬುಡಕಟ್ಟು ಮತ್ತು ಹಿಂದುಳಿದ ಸಮುದಾಯಗಳ ಬಲದ ಮೇಲೆ ಅಧಿಕಾರಕ್ಕೆ ಬಂದ ಪಕ್ಷದ ಸರ್ಕಾರದ ಚುಕ್ಕಾಣಿ ಬ್ರಾಹ್ಮಣ ಸಮುದಾಯದ ಪಾಲಾಯಿತು!

ಹೀಗೆ, ಅಸ್ಸಾಂನಲ್ಲಿ ಅತ್ತ ಅಧಿಕಾರ ವೈದಿಕರ ಕೈವಶವಾಗುತ್ತಿರುವ ಹೊತ್ತಿಗೇ, ಇತ್ತ ಕರ್ನಾಟಕದಲ್ಲಿ ಕೂಡ ಕರೋನಾ ನಿರ್ವಹಣೆಯ ವೈಫಲ್ಯವನ್ನೇ ಅಸ್ತ್ರವಾಗಿಸಿಕೊಂಡು ಬಿ ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಆ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯದ ನಾಯಕ ಪ್ರಹ್ಲಾದ್ ಜೋಷಿ ಅವರನ್ನು ಕೂರಿಸುವ ಯತ್ನಗಳು ತೆರೆಮರೆಯಲ್ಲಿ ಚುರುಕುಗೊಂಡಿದ್ದವು. ಗಮನಸಿಬೇಕಾದ ಸಂಗತಿ ಎಂದರೆ, ಅತ್ತ ಈಶಾನ್ಯ ರಾಜ್ಯದಲ್ಲಿ ಬಡಕಟ್ಟು ನಾಯಕನಿಂದ ವೈದಿಕ ನಾಯಕನ ಕೈಗೆ ಅಧಿಕಾರ ಜಾರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಬಿ ಎಲ್ ಸಂತೋಷ್ ಎಂಬ ಆರ್ ಎಸ್ ಎಸ್ ಹಿನ್ನೆಲೆಯ ಬಿಜೆಪಿಯ ಪ್ರಭಾವಿ ನಾಯಕರೇ, ಇತ್ತ ಕರ್ನಾಟಕದಲ್ಲೂ ಲಿಂಗಾಯತ ನಾಯಕನಿಂದ ವೈದಿಕ ನಾಯಕರಿಗೆ ಅಧಿಕಾರ ಜಾರಿಸುವ ತೆರೆಮರೆಯ ಪ್ರಯತ್ನಗಳಿಗೆ ಶ್ರೀರಕ್ಷೆಯಾಗಿದ್ದರು!

ಅಷ್ಟೇ ಅಲ್ಲ; ಕರ್ನಾಟಕದಲ್ಲಿ ಒಂದು ಕಡೆ ಕರೋನಾ ವೈಫಲ್ಯದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಭುಗಿಲೆದ್ದಿದ್ದ ಜನಾಕ್ರೋಶವನ್ನು ದಿಕ್ಕುತಪ್ಪಿಸುವ ತಂತ್ರಗಾರಿಕೆಯ ಭಾಗವಾಗಿ ಸ್ಫೋಟಗೊಂಡ ‘ಬೆಡ್ ಬ್ಲಾಕಿಂಗ್’ ಹಗರಣವನ್ನು ಹೊರಗೆಳೆದು, ‘ಮಾಧ್ಯಮಗಳ ಮುಂದೆ ತಮ್ಮದೇ ಪಕ್ಷ ಅಧಿಕಾರವಿದ್ದಾಗಲೂ ಜನಪರವಾಗಿ ದನಿ ಎತ್ತಿದ್ದ ಯುವ ನಾಯಕ’ ಎಂಬ ಸೆನ್ಸೇಷನ್ ಗೆ ಪಾತ್ರವಾಗಬೇಕಾದವರು ಯಾರು? ಎಂಬುದನ್ನು ಕೂಡ ನಿರ್ಧರಿಸಿದ್ದು ಇದೇ ಬಿ ಎಲ್ ಸಂತೋಷ್! ಅವರ ಸೂಚನೆಯಂತೆಯೇ ತೇಜಸ್ವಿ ಸೂರ್ಯ ಎಂಬ ಬ್ರಾಹ್ಮಣ ಯುವ ಸಂಸದ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ದೀಢೀರ್ ಸುದ್ದಿಯ ಕೇಂದ್ರವಾದರು. ಆದರೆ, ಅವಧಿಯಿಂದ ಬಿಜೆಪಿ ಸಂಸದರಾಗಿ ಮತ್ತು ತಮ್ಮ ಪತ್ರಕರ್ತ ವೃತ್ತಿಯ ದಿನಗಳಲ್ಲಿ ಕೂಡ ಪತ್ರಿಕೋದ್ಯಮಕ್ಕಿಂತ ಬಿಜೆಪಿ ಮತ್ತು ಆರ್ ಎಸ್ ಎಸ್ ಗೇ ಸಂಪೂರ್ಣ ನಿಷ್ಠರಾಗಿದ್ದ ಪ್ರತಾಪ್ ಸಿಂಹ ಎಂಬ ಹಿಂದುಳಿದ ಸಮುದಾಯದ ಯುವ ಸಂಸದನಿಗೆ ಅಪ್ಪಿತಪ್ಪಿಯೂ ಇಂತಹ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಅವಕಾಶ ಸಿಗದಂತೆ ನೋಡಿಕೊಳ್ಳಲಾಯಿತು!

ಹಾಗೆ ನೋಡಿದರೆ, ಹಿಂದುಳಿದ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಪ್ರತಾಪ್ ಸಿಂಹ, ಕಳೆದ ಐದಾರು ವರ್ಷಗಳಿಂದಲೂ ಬಿಜೆಪಿ ಪಕ್ಷಕ್ಕೆ ಯುವ ಸಮುದಾಯವನ್ನು ಸೆಳೆಯುವಲ್ಲಿ ಗಮನಾರ್ಹ ಕೆಲಸ ಮಾಡಿದ್ದರೂ, ಅವರನ್ನು ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಲಾಗಿದೆ. ಆ ಮೂಲಕ ರಾಷ್ಟ್ರೀಯ ಯುವ ಘಟಕ ಸೇರಿದಂತೆ ಹಲವು ಸ್ಥಾನಮಾನಗಳಿಂದ ವಂಚಿತರನ್ನಾಗಿ ಮಾಡಲಾಗಿದೆ. ಅದೇ ಹೊತ್ತಿಗೆ, ಕೇವಲ ಮೊಟ್ಟಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಮತ್ತು ವಯಸ್ಸು ಮತ್ತು ಅನುಭವದಲ್ಲಿ ಪ್ರತಾಪ್ ಸಿಂಹ ಅವರಿಗಿಂತ ಕಿರಿಯರಾದ ತೇಜಸ್ವಿ ಸೂರ್ಯ ಅವರನ್ನು ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇನ್ನು ಪಶ್ಚಿಮಬಂಗಾಳದ ಚುನಾವಣಾ ಪ್ರಚಾರದ ವಿಷಯದಲ್ಲಿ ಕೂಡ ಬಿಜೆಪಿಯ ಯುವ ಸಂಸದರ ಪೈಕಿ ಪ್ರತಾಪ್ ಸಿಂಹ ಅವರನ್ನು ಬದಿಗೊತ್ತಿ, ತೇಜಸ್ವಿ ಸೂರ್ಯ ಅವರಿಗೇ ಹೆಚ್ಚಿನ ಜವಾಬ್ದಾರಿ ನೀಡಲಾಯಿತು. ಅದೂ ಕೂಡ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಈ ಬಾರಿ ಗೆದ್ದು ಅಧಿಕಾರ ಹಿಡಿಯಲಿದೆ ಎಂಬ ಲೆಕ್ಕಾಚಾರದಲ್ಲೇ ಅಂತಹ ಯಶಸ್ಸಿನ ಶ್ರೇಯಸ್ಸಿನಲ್ಲಿ ತೇಜಸ್ವಿ ಸೂರ್ಯಗೂ ಪಾಲು ನೀಡಿ, ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಸ್ಥಾನಮಾನಗಳಿಗೆ ಬಡ್ತಿ ನೀಡಲು ಇದೊಂದು ಅವಕಾಶವೆಂದೇ ಅವರನ್ನು ಅಲ್ಲಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಲಾಗಿತ್ತು. ಆ ತಂತ್ರಗಾರಿಕೆಯ ಹಿಂದೆ ಇದ್ದದ್ದು ಕೂಡ ಮತ್ತದೇ ಬಿ ಎಲ್ ಸಂತೋಷ್ !

ಅಷ್ಟೇ ಅಲ್ಲ; ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇದ್ದ ಪಶ್ಚಿಮಬಂಗಾಳದ ಚುನಾವಣೆಯಲ್ಲಿ ತೇಜಸ್ವಿ ಸೂರ್ಯಗೆ ಪ್ರಮುಖ ಅವಕಾಶ ನೀಡಿ, ಒಂದೆರಡು ಸ್ಥಾನ ಗೆಲ್ಲುವುದು ಕೂಡ ಅನುಮಾನವಿದ್ದ ತಮಿಳುನಾಡು ಚುನಾವಣೆಯ ಹೊಣೆಗಾರಿಕೆಯನ್ನು ಹಿಂದುಳಿದ ಸಮುದಾಯದ ಸಿ ಟಿ ರವಿಯವರಿಗೆ ವಹಿಸಿದ್ದರ ಹಿಂದೆಯೂ ಅಂತಹದ್ದೇ ವೈದಿಕ ಚಾತುರ್ಯ ಕೆಲಸ ಮಾಡಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ. ತಮಿಳು ಭಾಷೆಯಾಗಲೀ, ಅಲ್ಲಿನ ಸಂಸ್ಕೃತಿಯಾಗಲೀ ಗೊತ್ತಿರದ, ಅವರೊಂದಿಗೆ ಸಂವಹನ ನಡೆಸಲು ಸರಾಗ ಇಂಗ್ಲಿಷ್ ಕೂಡ ಬಾರದ ಸಿ ಟಿ ರವಿ ಅವರನ್ನು ಅಲ್ಲಿನ ಚುನಾವಣೆಯ ಉಸ್ತುವಾರಿ ಮಾಡಿದ್ದು ಕೂಡ ಆರ್ ಎಸ್ ಎಸ್ ನ ಬ್ರಾಹ್ಮಣ ಪಕ್ಷಪಾತಿ ಲೆಕ್ಕಾಚಾರದ ಭಾಗವಾಗಿಯೇ ಎನ್ನಲಾಗುತ್ತಿದೆ.

ಅಂದರೆ, ರಾಜ್ಯದಲ್ಲಿ ಬಿಜೆಪಿಯನ್ನು ಎರಡು ಜನ ಶಾಸಕ ಬಲದ ಪಕ್ಷದಿಂದ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರೆಗೆ ಪ್ರಬಲವಾಗಿ ಕಟ್ಟಿ ಬೆಳೆಸಲು ಬಿ ಎಸ್ ಯಡಿಯೂರಪ್ಪ, ಬಿ ಬಿ ಶಿವಪ್ಪ, ಎ ಕೆ ಸುಬ್ಬಯ್ಯ ಅವರಂಥ ಶೂದ್ರ ಸಮುದಾಯದ ನಾಯಕರ ನಾಯಕತ್ವದ ಊರುಗೋಲು ಬೇಕಿತ್ತು. ಆದರೆ, ಒಮ್ಮೆ ಪಕ್ಷ ರಾಜ್ಯಾದ್ಯಂತ ಭದ್ರ ನೆಲೆ ವಿಸ್ತರಿಸಿಕೊಂಡು, ಬಹುತೇಕ ಶೂದ್ರ ಮತಬ್ಯಾಂಕ್ ಬುಟ್ಟಿಗೆ ಹಾಕಿಕೊಂಡು ಬೇರುಗಳು ಭದ್ರವಾಗಿವೆ ಎಂಬುದು ಖಚಿತವಾದ ಬಳಿಕ, ಬಿಜೆಪಿಯ ಹಿಂದಿನ ಸೂತ್ರದಾರ ಆರ್ ಎಸ್ ಎಸ್ ಆಟಕ್ಕಿಳಿಯತೊಡಗಿದೆ. ಅಸ್ಸಾಂನಲ್ಲಿರಬಹುದು, ಕರ್ನಾಟಕದಲ್ಲಿರಬಹುದು, ಅಥವಾ ನಾಳೆ ಮಧ್ಯಪ್ರದೇಶ ಇರಬಹುದು, ಎಲ್ಲಾ ಕಡೆ ವೈದಿಕ ನಾಯಕರನ್ನು ಅಧಿಕಾರದ ಕುರ್ಚಿಗೆ ಏರಿಸುವ ಮೂಲಕ ದೇಶದಲ್ಲಿ ಮತ್ತೆ ಶತಮಾನಗಳ ಹಿಂದಿನ ಪುರೋಹಿತಶಾಹಿ ಪ್ರಭುತ್ವ ಮರು ಸ್ಥಾಪಿಸುವ ಆರ್ ಎಸ್ ಎಸ್ ನ ಗುಪ್ತ ಕಾರ್ಯಸೂಚಿ ಜಾರಿಗೆ ಬರುತ್ತಿದೆ.

ಕರೋನಾ ನಿರ್ವಹಣೆಯ ವೈಫಲ್ಯದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಕೆಲವು ನಾಯಕರು, ನಿತಿನ್ ಗಡ್ಕರಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸುವಂತೆ ಸಲಹೆ ನೀಡುತ್ತಿರುವುದರ ಹಿಂದೆಯೂ ಇಂತಹದ್ದೇ ಕಾರ್ಯಸೂಚಿ ಇದೆ. ಹಿಂದುಳಿದ ಸಮುದಾಯದ ನರೇಂದ್ರ ಮೋದಿಯವರನ್ನು ಈ ನೆಪದಲ್ಲಿ ಬದಿಗೆ ಸರಿಸಿ, ಪ್ರಧಾನಿ ಸ್ಥಾನಕ್ಕೆ ಬ್ರಾಹ್ಮಣ ನಾಯಕರನ್ನು ಕೂರಿಸುವ ತಂತ್ರಗಾರಿಕೆಯ ಭಾಗವಾಗಿಯೇ ಅಂತಹ ಒಂದು ಕೂಗು ಎದ್ದಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಹೀಗೆ, ಕರೋನಾದಂತಹ ಸಂಕಷ್ಟದ ಹೊತ್ತಲ್ಲಿ, ಅದೇ ಬಿಕ್ಕಟ್ಟನ್ನೇ ಮುಂದಿಟ್ಟುಕೊಂಡು ಆರ್ ಎಸ್ ಎಸ್ ತನ್ನ ಗುಪ್ತ ಕಾರ್ಯಸೂಚಿಯನ್ನು ನಾಜೂಕಾಗಿ ಜಾರಿಗೆ ತರುತ್ತಿದೆ. ಅದರ ಇಂತಹ ತಂತ್ರಗಾರಿಕೆಗಳಿಗೆ ಬಲಿಯಾಗುತ್ತಿರುವ ಶೂಧ್ರ ನಾಯಕರುಗಳಿಗೆ ಅಂತಹ ಪುರೋಹಿತಶಾಹಿ ಮರುಸ್ಥಾಪನೆಯ ಲೆಕ್ಕಾಚಾರಗಳು ಅರಿವಿಗೆ ಬರುವ ಮೊದಲೇ ಎಲ್ಲವೂ ಮುಗಿದಹೋಗಿಬಿಡಬಹುದು. ಏಕೆಂದರೆ, ಸಂಘದ ಧರ್ಮ ಮತ್ತು ಹುಸಿ ದೇಶಭಕ್ತಿಯ ಅಮಲು ಮೆಲುಕು ಹಾಕುತ್ತಲೇ ಮೈಮರೆಯುವ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಶೂಧ್ರ ನಾಯಕರ ಸ್ಥಿತಿ ಸದ್ಯ ‘ಹಬ್ಬಕ್ಕೆ ತಂದ ಹರಕೆಯ ಕುರಿ ತಳಿರ ಮೇಯಿತ್ತು’ ಎಂಬಂತಾಗಿದೆ!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...