ಇದು ಒಂದು ಸಾಲು ಸುದ್ದಿಯಂತೆ ಕಾಣಬಹುದು. ಆದರೆ, ಸುದ್ದಿ ಬರೆಯುವುದಕ್ಕೆ ಕಾಗದ ಖರ್ಚಾಗುವುದಿಲ್ಲ, ಪರಿಸರ ಅಷ್ಟೊಂದು ಕೆಡುವುದಿಲ್ಲ ಎಂಬ ವಿಶ್ವಾಸದಲ್ಲಿ ಇಷ್ಟು ಬರೆಯಲೇಬೇಕು. ವಿಶ್ವ ಪರಿಸರ ದಿನದಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಕಾರ್ಯಕ್ರಮಕ್ಕೆ ವ್ಯಯಿಸಿದ ಹಣ ಬರೋಬ್ಬರಿ ರೂ 20 ಲಕ್ಷ (20,45,245).
ಈ ಕಾರ್ಯಕ್ರಮ ನಡೆದಿದ್ದು ಮಲ್ಲೇಶ್ವರಂನ ಪಿಟೀಲು ಚೌಡಯ್ಯ ಸಭಾಂಗಣದಲ್ಲಿ. ಕಾರ್ಯಕ್ರಮದ ಮುಖ್ಯಾಂಶ ಇಷ್ಟು; ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಕಾಣಿಕೆ ನೀಡಿದ ಮೂವರಿಗೆ ಹಾಗೂ ಮೂರು ಸಂಘ-ಸಂಸ್ಥೆಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ. ಪ್ರಶಸ್ತಿ ತಲಾ ರೂ 1 ಲಕ್ಷ ನಗದು ಒಳಗೊಂಡಿತ್ತು. ಕಾರ್ಯಕ್ರಮ ನಡೆದಿದ್ದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ.
ಈ ಕಾರ್ಯಕ್ರಮ ಆಯೋಜನೆಗೆ ಮಂಡಳಿ ಮೊತ್ತ ಮೊದಲನೆಯದಾಗಿ ಪಡೆದುಕೊಂಡಿದ್ದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆಯಡಿ (Karnataka Transparency in Public Procurement Act – KTPP) ವಿನಾಯಿತಿ. ಈ ವಿನಾಯಿತಿ ನೀಡಲಾಗುವುದು ಕಾಯ್ದೆಯ ಸೆಕ್ಷನ್ 4G ಅಡಿಯಲ್ಲಿ. ಈ ವಿನಾಯತಿ ನೀಡಲಾಗುವುದು ಟೆಂಡರ್ ಕರೆಯಲು ಸಮಯವೇ ಇಲ್ಲದಂತ ತುರ್ತು ಕಾಮಗಾರಿಗಳಿಗಷ್ಟೆ. ಉದಾಹರಣೆಗೆ, ಪ್ರವಾಹ, ಭೂಕಂಪ ಹಾಗೂ ಇಂತಹ ತುರ್ತು ಕಾಮಗಾರಿಗಳಿಗಷ್ಟೆ ಈ ವಿನಾಯಿತಿಯನ್ನು ಕೋರಲಾಗುತ್ತದೆ ಹಾಗೂ ವಿನಾಯಿತಿಯನ್ನು ನೀಡಲಾಗುತ್ತದೆ. ಯಾವುದೇ ಖರೀದಿ ಅಥವಾ ಸಿವಿಲ್ ಕಾಮಗಾರಿಗಳ ಒಟ್ಟು ಮೊತ್ತ ರೂ 5 ಲಕ್ಷಕ್ಕೂ ಕಡಿಮೆ ಇದ್ದರೆ ಕಾಯ್ದೆಯೇ ಅನ್ವಯಿಸುವುದಿಲ್ಲ.
ಪ್ರತಿವರ್ಷ ಜೂನ್ 5 ರಂದೇ ಆಚರಿಸಲಾಗುವ ವಿಶ್ವ ಪರಿಸರ ದಿನದ ಖರ್ಚು ನಿರ್ವಹಣೆಗೂ ವಿನಾಯಿತಿ ಪಡೆದಿರುವುದು ಸಂಶಯವನ್ನು ಹೆಚ್ಚಿಸಿತ್ತು. ಇದಕ್ಕಾಗಿ, ಮೇ 10 ರಿಂದ ಜೂನ್ 1 ರವರೆಗೆ ಪತ್ರ ವ್ಯವಹಾರ ನಡೆಸಿದ ಮಂಡಳಿ ಕೊನೆಗೂ ವಿನಾಯಿತಿ ಪಡೆಯುವಲ್ಲಿ ಯಶಸ್ವಿಯಾಯಿತು.
ಈಗ ಮಂಡಳಿ ಯಾವುದಕ್ಕೆಲ್ಲಾ ಎಷ್ಟೆಷ್ಟು ಖರ್ಚು ಮಾಡಿದೆ ಎನ್ನುವುದನ್ನು ನೋಡೋಣ.


ಪ್ರತಿಧ್ವನಿ ಕಲೆಹಾಕಿದ ಮಾಹಿತಿ ಪ್ರಕಾರ ಕೇವಲ ಕಾರ್ಯಕ್ರಮದ ಆಯೋಜನೆಗೇ ರೂ. 20 ಲಕ್ಷ ಖರ್ಚು ಮಾಡಲಾಗಿದೆ. ಪ್ರಶಸ್ತಿ ಮೊತ್ತ ಇದರಲ್ಲಿ ಒಳಗೊಂಡಿಲ್ಲ. ಸ್ಟೇಜ್ ನ ಅಲಂಕಾರಕ್ಕೆ ರೂ. 47,250, ಸ್ಟೇಜ್ ನ ಬ್ಯಾಕ್ ಡ್ರಾಪ್ ಗೆ ರೂ. 54,000, ಸೈಡ್ ಪ್ಯಾನೆಲ್ ಗೆ ರೂ. 42,000, ಕನ್ಸೋಲ್ ಮಾಸ್ಕಿಂಗ್ ಮತ್ತು ಸ್ಟ್ಯಾಂಡ್ ಬೈ ಗೆ ರೂ. ತಲಾ 18,900, ಸ್ವಾಗತ ಬ್ಯಾನರ್ ಗೆ ರೂ. 22,800, ಒಬ್ಬ ಫೊಟೊಗ್ರಾಫರ್ ಗೆ ರೂ. 47,460, ವಿಡಿಯೋಗ್ರಾಫರ್ ಗೆ ರೂ. 94,920, ಜನರೇಟರ್ ಗೆ ರೂ. 71,190, ಸಭೆಯ ಮೇಲಿನ ಕುರ್ಚಿ ಹಾಗೂ ಟೇಬಲ್ ಗೆ ರೂ. 35,595, ಹೂವಿನ ಅಲಂಕಾರ ಮತ್ತು ಹಣ್ಣುಗಳ ಬಾಸ್ಕೆಟ್ ಗೆ ರೂ. 94,500, ಹೊರಾಂಗಣದ ಆರ್ಚ್ ಗೆ ರೂ. 52,000, ನೀರಿನ್ ಬಾಟಲ್, ಬಾಳೆ ಹಣ್ಣು ಮತ್ತು 500 ಸ್ಯಾಂಡ್ ವಿಚ್ ಗೆ ರೂ. 47,400, ಎರಡು ಹೊತ್ತು ತಿಂಡಿ ಮತ್ತು ಊಟಕ್ಕೆ ರೂ. 6.21 ಲಕ್ಷ, ಹೂಗುಚ್ಛ (ಅದರಲ್ಲೂ eco-friendly) ರೂ. 6,300, 2,000 ಹೂ ಕುಂಡಗಳಿಗೆ ರೂ. 30,000, ವೇಸ್ಟ್ ಮ್ಯಾನೆಜ್ ಮೆಂಟ್ ಗೆ ರೂ. 1 ಲಕ್ಷ, 100 ಮಂದಿ ಮಾಧ್ಯಮದವರಿಗೆ ಕಿಟ್ ವಿತರಣೆಗಾಗಿ ರೂ. 20,000 ಹಾಗೂ ಕೊನೆಯದಾಗಿ ಜಿಎಸ್ ಟಿ ಮೊತ್ತ ರೂ 3.11 ಲಕ್ಷ.
ಪ್ರತಿವರ್ಷ ಆಚರಿಸುವ ಪರಿಸರ ದಿನದ ಕಾರ್ಯಕ್ರಮದ ಖರ್ಚಿಗೆ ಪ್ರತಿಧ್ವನಿ KTPP ಕಾಯ್ದೆಯಡಿ ವಿನಾಯಿತಿ ಏಕೆ ಪಡೆಯಲಾಯಿತು ಎಂದು ಕೇಳಲು ಪ್ರತಿಧ್ವನಿ ಮಂಡಳಿ ಅಧ್ಯಕ್ಷ ಡಾ. ಜಯರಾಂ ಅವರನ್ನು ಸಂಪರ್ಕಿಸಿತು. ಆದರೆ, ಅವರು ಲಭ್ಯವಿರದ ಕಾರಣ ಹೇಳಿಕೆ ಪಡೆಯಲಾಗಿಲ್ಲ. ಅವರ ಪ್ರತಿಕ್ರಿಯೆ ದೊರಕಿದೊಡನೆ ವರದಿಯಲ್ಲಿ ಸೇರಿಸಲಾಗುವುದು.