ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸ್ಪೀಕರ್ ಅವರ ಸುಪರ್ದಿಗೆ ಬರುತ್ತದೆ. ಈ ಬಗ್ಗೆ ಏನೇ ತೀರ್ಮಾನವಿದ್ದರೂ ಅದನ್ನು ಸ್ಪೀಕರ್ ಅವರೇ ಕೈಗೊಳ್ಳಬೇಕು ಎಂಬರ್ಥದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಇದರ ಲಾಭವನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪಡೆದು ಕಾಲಹರಣ ಮಾಡಿ ಕಲಾಪವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಯಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂಬ ತೀರ್ಮಾನಕ್ಕೆ ಸದ್ಯ ಕೋರ್ಟ್ ಬಂದಿದೆಯಾದರೂ ಅದೇ ಅಂತಿಮ ಆಗುವುದಿಲ್ಲ.
ಏಕೆಂದರೆ, ಪ್ರಸ್ತುತ ವಿಶ್ವಾಸಮತ ಯಾಚನೆ ಕಲಾಪ ನಿಯಮಬದ್ಧವಾಗಿ ನಡೆಯುತ್ತಿದೆ. ಸೋಮವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಅಂತ್ಯಗೊಳಿಸುವುದಾಗಿ ಸರ್ಕಾರ (ಸಭಾನಾಯಕರು, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರು ಮತ್ತು ಸಂಸದೀಯ ವ್ಯವಹಾರಗಳ ಸಚಿವರು) ಸ್ಪೀಕರ್ ಅವರಿಗೆ ವಾಗ್ಧಾನ ಮಾಡಿದ್ದಾರೆ. ಸ್ಪೀಕರ್ ಅವರು ಇದಕ್ಕೆ ಒಪ್ಪಿಯೇ ಶುಕ್ರವಾರ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದ್ದರೂ ಅದು ಅನಗತ್ಯವಾಗಿರುತ್ತದೆ ಮತ್ತು ಕಲಾಪ ನಿಯಮಾನುಸಾರ ನಡೆಯುತ್ತಿದ್ದರೂ ಅನಗತ್ಯ ಆದೇಶಗಳನ್ನು ಹೊರಡಿಸಿದರೆ ಅದು ಮುಜುಗರಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಕೋರ್ಟ್ ಯಾವುದೇ ಆದೇಶ ಹೊರಡಿಸದೇ ಇದ್ದಿರಬಹುದು.
ಒಂದೊಮ್ಮೆ ಸರ್ಕಾರ ಮತ್ತು ಸ್ಪೀಕರ್ ಸದನದಲ್ಲಿ ನೀಡಿದ ವಾಗ್ದಾನಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ ಆಗ ಕಲಾಪ ನಿಯಮ ಮೀರುತ್ತಿದೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಲು ಸರ್ಕಾರ ಅನಗತ್ಯವಾಗಿ ಕಾಲಹರಣ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮೇಲಾಗಿ ಸರ್ಕಾರ ಉಳಿಸಿಕೊಳ್ಳಲು ಶಾಸಕರ ಕುದುರೆ ವ್ಯಾಪಾರದಲ್ಲಿ ಆಡಳಿತ ಪಕ್ಷವೂ ತೊಡಗಿಕೊಂಡಿದೆ ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಂತಾಗುತ್ತದೆ.
ಇನ್ನೊಂದೆಡೆ ರಾಜ್ಯಪಾಲರೂ ವಿಧಾನಸಭೆಯ ವಿಸ್ವಾಸಮತ ಕಲಾಪದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರಕ್ರಿಯೆ ಮುಕ್ತಾಯಗೊಳಿಸುವಂತೆ ಶುಕ್ರವಾರ ಎರಡು ಬಾರಿ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದ್ದ ರಾಜ್ಯಪಾಲರು ಅದನ್ನು ಪಾಲಿಸದ ಸರ್ಕಾರದ ವಿರುದ್ಧ ಈಗಾಗಲೇ ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಸೋಮವಾರವೂ ಕಲಾಪದ ಮೇಲೆ ಅವರು ನಿಗಾ ಇಡುತ್ತಿದ್ದು, ಪ್ರತಿ ಬೆಳವಣಿಗೆಗಳನ್ನೂ ಗಮನಿಸುತ್ತಿದ್ದಾರೆ.
ಜುಲೈ 11ರಂದು ಮಿತ್ರಪಕ್ಷಗಳ ಶಾಸಕರ ರಾಜಿನಾಮೆ (16 ಶಾಸಕರು) ಪ್ರಕ್ರಿಯೆ ಕೊನೆಗೊಂಡಿದೆ. ಇಬ್ಬರು ಪಕ್ಷೇತರ ಶಾಸಕರೂ ಸರ್ಕಾರದಿಂದ ದೂರವಾಗಿದ್ದಾರೆ. ಅದೇ ದಿನ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಪರಿಸ್ಥಿತಿ ಉದ್ಭವಿಸಿದೆ. ಅಂದರೆ, ನಂತರದ 11 ದಿನಗಳ ಸರ್ಕಾರ ಬಹುಮತ ಇಲ್ಲದ ಸರ್ಕಾರ ಎನ್ನುವಂತಾಗುತ್ತದೆ. ಮೇಲಾಗಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಕಳೆದ ಗುರುವಾರವೇ ಆರಂಭವಾಗಿದೆ. ಕಳೆದ ಎರಡು ದಿನ ಕಲಾಪ ನಡೆದ ರೀತಿ ಗಮನಿಸಿದಾಗ ಅಲ್ಲಿ ಅನಗತ್ಯವಾಗಿ ಕಾಲಹರಣ ಮಾಡಲಾಗುತ್ತದೆ ಎಂಬ ಅಭಿಪ್ರಾಯ ಬಂದಿದೆ.
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಶ್ವಾಸಮತ ಯಾಚನೆ ಕಲಾಪ ಒಂಬತ್ತು ದಿನ ನಡೆದಿತ್ತು. ಹೀಗಾಗಿ ವಿಶ್ವಾಸಮತ ಕಲಾಪವನ್ನು ಇಂತಿಷ್ಟೇ ಅವಧಿಯಲ್ಲಿ ಅಂತ್ಯಗೊಳಿಸಬೇಕು ಎಂದು ಸಮಯ ನಿಗದಿಪಡಿಸುವಂತಿಲ್ಲ ಎಂದು ಆಡಳಿತ ಪಕ್ಷದವರು ವಾದಿಸುತ್ತಿದ್ದಾರೆ. ಆದರೆ, ಇಲ್ಲಿ ಒಂದು ಅಂಶ ಗಮನಿಸಬೇಕು. ವಾಜಪೇಯಿ ಅವರ ವಿಶ್ವಾಸಮತ ಯಾಚನೆ ವಿಳಂಬವಾಗುತ್ತಿರುವುದಕ್ಕೆ ಆಗ ಯಾವ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಜತೆಗೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರಲಿಲ್ಲ. ಆದರೆ, ಈ ಪ್ರಕರಣದಲ್ಲಿ ವಿಶ್ವಾಸಮತ ಯಾಚನೆ ತ್ವರಿತವಾಗಿ ಇತ್ಯರ್ಥಗೊಳ್ಳಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದು ಕೂತಿದೆ. ಮತ್ತೊಂದೆಡೆ ಪಕ್ಷೇತರ ಶಾಸಕರಿಬ್ಬರು ತ್ವರಿತ ಇತ್ಯರ್ಥ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ವಿಶ್ವಾಸಮತ ಯಾಚನೆ ವಿಚಾರದಲ್ಲಿ ತಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದರೂ ಮಂಗಳವಾರ ಮಧ್ಯಪ್ರವೇಶಿಸಿ ಮಧ್ಯಂತರ ಆದೇಶ ನೀಡದು ಎಂದು ಹೇಳುವಂತಿಲ್ಲ. ಸೋಮವಾರ ಪ್ರಕ್ರಿಯೆ ಅಂತ್ಯಗೊಳಿಸುವುದಾಗಿ ಸರ್ಕಾರ ಮತ್ತು ಸ್ಪೀಕರ್ ಹೇಳಿದ್ದರಿಂದ ಇಂದು ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರಬಹುದು. ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ಒಂದೊಮ್ಮೆ ಸರ್ಕಾರ ಮತ್ತು ಸ್ಪೀಕರ್ ಸದನದಲ್ಲಿ ನಾಡಿದ ವಾಗ್ದಾನವನ್ನು ಪಾಲಿಸದೇ ಇದ್ದರೆ ಆಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಲು ಎಲ್ಲಾ ಅವಕಾಶಗಳೂ ಇವೆ. ಜತೆಗೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವುದರಿಂದ ಪ್ರತಿಪಕ್ಷ ಬಿಜೆಪಿ ಕೂಡ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸಿ ಎಂದು ಮಧ್ಯಂತರ ಅರ್ಜಿ ಸಲ್ಲಿಸಿಕೊಳ್ಳಲು ಅವಕಾಶವಿದೆ.
ಈ ಮಧ್ಯೆ ಸುಪ್ರೀಂ ಕೋರ್ಟ್ ಸೋಮವಾರ ಮಧ್ಯಪ್ರವೇಶಿಸಲು ನಿರಾಕರಿಸಿದ್ದನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಕಲಾಪವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಸ್ಪೀಕರ್ ಅವರನ್ನು ಭೇಟಿಯಾಗಿ ಅಧಿವೇಶನವನ್ನು ವಿಸ್ತರಿಸಲು ಮನವಿ ಮಾಡಿಕೊಂಡಿದ್ದಾರೆ. ಸ್ಪೀಕರ್ ಅವರು ಇದಕ್ಕೆ ಅವಕಾಶ ನೀಡಿದಲ್ಲಿ ಅವರೇ ಸದನದಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸಿದಂತಾಗುತ್ತದೆ. ಇದು ಕೂಡ ಕೋರ್ಟ್ ಮಧ್ಯಪ್ರವೇಶಕ್ಕೆ ಕಾರಣವಾಗಬಹುದು. ಆದರೆ, ಇದೆಲ್ಲಕ್ಕೂ ಸೋಮವಾರ ಕಲಾಪದಲ್ಲಿ ಸರ್ಕಾರ ಮತ್ತು ಸ್ಪೀಕರ್ ತಮ್ಮ ವಾಗ್ದಾನದಂತೆ ನಡೆದುಕೊಳ್ಳುತ್ತಾರೆಯೇ ಅಥವಾ ಉಲ್ಲಂಘಿಸಿ ಸುಪ್ರೀಂ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಾರೆಯೇ ಎಂದು ಕಾದು ನೋಡಬೇಕು.