ವಿಶ್ವಾಸಮತ ಯಾಚನೆ ಕುರಿತು ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ನೀಡಿದ ಎರಡು ನಿರ್ದೇಶನಗಳನ್ನು ಕ್ಯಾರೇ ಎನ್ನದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಗೆ ಕಾಲಹರಣ ಮಾಡಿ ಸೋಮವಾರಕ್ಕೆ ಕಲಾಪ ಮುಂದೂಡುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಆ ಮೂಲಕ ನಮಗೆ ನಿರ್ದೇಶನ ನೀಡಲು ರಾಜ್ಯಪಾಲರು ಯಾರು ಎಂದು ಸೆಡ್ಡು ಹೊಡೆದಿದ್ದಾರೆ. ಪ್ರತಿಪಕ್ಷ ಬಿಜೆಪಿಯ ಪಟ್ಟು, ಸ್ಪೀಕರ್ ಅವರ ಮನವಿಗೂ ಬೆಲೆ ನೀಡದೆ, ಸದಸ್ಯರ ಮಾತನಾಡುವ ಹಕ್ಕು ಮೊಟಕುಗೊಳಿಸಬೇಡಿ ಎಂಬ ಒತ್ತಾಯ ಮುಂದಿಟ್ಟುಕೊಂಡು ಶುಕ್ರವಾರ ಕೊನೆಗೊಳ್ಳಬೇಕಿದ್ದ ವಿಶ್ವಾಸಮತ ಕಲಾಪವನ್ನು ಸೋಮವಾರದವರೆಗೆ ವಿಸ್ತರಿಸಿಕೊಂಡಿದೆ ಸರ್ಕಾರ. ಇದರ ಮಧ್ಯೆ ಕಲಾಪ ವಿಸ್ತರಣೆಗೆ ಪ್ರತಿಪಕ್ಷ ಬಿಜೆಪಿಯನ್ನೂ ಪಾಲುದಾರನನ್ನಾಗಿ ಮಾಡಿಕೊಳ್ಳಬೇಕು ಎಂದು ಮೈತ್ರಿ ನಾಯಕರು ಸಾಕಷ್ಟು ಪ್ರಯತ್ನ ಮಾಡಿದರೂ ಅದಕ್ಕೆ ಬಿಜೆಪಿ ಕಡೆಯಿಂದ ಯಾವುದೇ ಸ್ಪಂದನೆ ಸಿಗದೆ, ಕಾಲಹರಣಕ್ಕೆ ಸಂಪೂರ್ಣ ಸರ್ಕಾರವೇ ಹೊಣೆ ಎನ್ನುವಂತಾಗಿದೆ.
ಮೇಲ್ನೋಟಕ್ಕೆ ಆಡಳಿತ ಪಕ್ಷದ ನಾಯಕರು ನಡೆಸಿದ ಈ ಪ್ರಯತ್ನ ಕಾಲಹರಣ, ರಾಜ್ಯಪಾಲರ ಸೂಚನೆಗೆ ಸೆಡ್ಡು ಹೊಡೆಯುವುದು ಎಂಬಂತೆ ಕಾಣುತ್ತಿದೆಯಾದರೂ ಅದರ ಹಿಂದೆ ಎರಡು ಪ್ರಮುಖ ಉದ್ದೇಶಗಳಿವೆ.
1. ಸರ್ಕಾರ ಉಳಿಸಿಕೊಳ್ಳಲು ‘ಪರ್ಯಾಯ’ ಕ್ರಮ.
ಸದ್ಯದ ಅಂಕಿ ಅಂಶಗಳನ್ನು ಗಮನಿಸಿದಾಗ ಸರ್ಕಾರ ಉಳಿಯುವ ಲಕ್ಷಣ ಕಾಣಿಸುತ್ತಿಲ್ಲ. 224 ಶಾಸಕರ ಪೈಕಿ ರಾಜೀನಾಮೆ ಕೊಟ್ಟಿರುವ 15 ಶಾಸಕರು ಸೇರಿದಂತೆ ಒಟ್ಟು 20 ಶಾಸಕರು ಗೈರು ಹಾಜರಾಗಿದ್ದು, ಸದನದ ಸಂಖ್ಯಾಬಲ 204ಕ್ಕೆ ಕುಸಿದಿದೆ. ಬಹುಮತ ಸಾಬೀತಿಗೆ 103 ಸದಸ್ಯರ ಬೆಂಬಲ ಬೇಕಿದ್ದು, ಬಿಜೆಪಿ ಏಕಾಂಗಿಯಾಗಿಯೇ 105 ಸದಸ್ಯ ಬಲ ಹೊಂದಿದೆ. ಇಬ್ಬರು ಪಕ್ಷೇತರರೂ ಬಿಜೆಪಿ ಜತೆಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿಶ್ವಾಸಮತ ಸಾಬೀತು ಕಷ್ಟಸಾಧ್ಯ. ಹೀಗಾಗಿ ಶಾಸಕರನ್ನು ಸದನಕ್ಕೆ ಬರುವಂತೆ ಬಲವಂತ ಮಾಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ವಿಪ್ ಜಾರಿ ಕುರಿತಂತೆ ಶಾಸಕಾಂಗ ಪಕ್ಷದ ನಾಯಕರ ಅಧಿಕಾರದ ಬಗ್ಗೆ ಸ್ಪಷ್ಟನೆ ಕೇಳಲು ಮುಂದಾಗಿದ್ದಾರೆ. ಈ ಕುರಿತು ಸ್ಪಷ್ಟನೆ ಬಂದ ಬಳಿಕ ವಿಶ್ವಾಸಮತ ಯಾಚಿಸುವುದಾದರೆ ಅದು ಸೋಮವಾರವಷ್ಟೇ ಸಾಧ್ಯ. ಈ ಅವಧಿಯಲ್ಲಿ ಸರ್ಕಾರ ಉಳಿಸಿಕೊಳ್ಳಲು ರಿವರ್ಸ್ ಆಪರೇಷನ್ ನಂತಹ ‘ಪರ್ಯಾಯ’ ದಾರಿಗಳೇನಾದರೂ ಸಿಗುತ್ತವೆಯೇ ಎಂಬುದನ್ನು ಪ್ರಯತ್ನಿಸುವುದು ಈ ವಿಳಂಬದ ಹಿಂದಿನ ಪ್ರಮುಖ ಉದ್ದೇಶ.
2. ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು.
ಅದೇ ರೀತಿ ಮುಖ್ಯಮಂತ್ರಿಗಳು ರಾಷ್ಟ್ರಪತಿ ಆಳ್ವಿಕೆ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದನ್ನು ಗಮನಿಸಿದಾಗ, ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ನಿರ್ದೇಶನವನ್ನು ಸರ್ಕಾರ ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿದಂತೆ ಕಾಣುತ್ತಿದೆ. ರಾಜಿನಾಮೆ ನೀಡಿದ 15 ಶಾಸಕರು ರಾಜ್ಯಪಾಲರಿಗೂ ಅದರ ಪ್ರತಿಯನ್ನು ಸಲ್ಲಿಸಿದ್ದರಿಂದ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಕೇಳುವ ಅಧಿಕಾರ ರಾಜ್ಯಪಾಲರಿಗೆ ಇದೆ. 2018ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು 15 ದಿನ ಕಾಲಾವಕಾಶ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಈ ಕಾಲಾವಕಾಶವನ್ನು ಒಂದೇ ದಿನಕ್ಕೆ ಇಳಿಸಿಕೊಂಡಿದ್ದ ಇದೇ ಕಾಂಗ್ರೆಸ್ ಇದೀಗ ಒಂದು ದಿನದಲ್ಲಿ ಬಹುಮತ ಸಾಬೀತುಪಡಿಸಿ ಎಂಬ ರಾಜ್ಯಪಾಲರ ಆದೇಶ ಉಲ್ಲಂಘಿಸಿ ಅವರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯಪಾಲರು ಕೆರಳಿ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರೆ ಆಗ ಈ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರಲು ಕಾಯುತ್ತಿರುವ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಸಾಧ್ಯವಾಗುತ್ತದೆ. ನಂತರ ರಾಜ್ಯಪಾಲರ ಶಿಫಾರಸಿನ ವಿರುದ್ಧ ಕಾನೂನು ಸಮರ ಸಾರುವುದೋ, ಬಿಜೆಪಿಯಂತೆ ತಾವೂ ಕೂಡ ಕುದುರೆ ವ್ಯಾಪಾರ ಮಾಡಿ ಮತ್ತೆ ಅಧಿಕಾರಕ್ಕೆ ಬರುವುದನ್ನೋ ಮಾಡಲು ಕಾಲಾವಕಾಶ ಸಿಗುತ್ತದೆ.

ಈ ಕಾರಣಕ್ಕಾಗಿಯೇ ಪ್ರತಿಪಕ್ಷ ಬಿಜೆಪಿಯವರನ್ನು ಉದ್ರೇಕಿಸಿ ಗದ್ದಲ ಸೃಷ್ಟಿಸಿ ಕಾಲಹರಣದಲ್ಲಿ ಅವರನ್ನು ಪಾಲ್ಗೊಳ್ಳುವಂತೆ ಮೈತ್ರಿ ನಾಯಕರು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪ್ರಮುಖರು ಮಾಡಿದರು. ಆದರೆ, ಈ ಉದ್ದೇಶ ಅರಿತಿದ್ದ ಬಿಜೆಪಿಯವರು ಒಂದೆರಡು ಬಾರಿ ಮಾತನಾಡಿದರಾದರೂ ಉಳಿದ ಅವಧಿಯಲ್ಲಿ ಜಪ್ಪಯ್ಯ ಎಂದರೂ ತುಟಿ ಬಿಚ್ಚಲಿಲ್ಲ. ಮೈತ್ರಿ ಸರ್ಕಾರ ತೊರೆದು ತಮ್ಮೊಂದಿಗೆ ಬರುವಂತೆ ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ವಿಶ್ವನಾಥ್, ಮಾಜಿ ಸಚಿವ ಯೋಗೀಶ್ವರ್ 5 ಕೋಟಿ ರೂ. ನೊಂದಿಗೆ ನಮ್ಮ ಮನೆಗೆ ಬಂದಿದ್ದರು ಎಂದು ಜೆಡಿಎಸ್ ನ ಶ್ರೀನಿವಾಸಗೌಡ ನೇರ ಆರೋಪ ಮಾಡಿದರು. ಎಚ್. ವಿಶ್ವನಾಥ್ ರಾಜಿನಾಮೆ ನೀಡಲು ಬಿಜೆಪಿಯವರು ಅವರಿಗೆಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಸಚಿವ ಸಾ. ರಾ. ಮಹೇಶ್ ನೇರವಾಗಿ ಪ್ರಶ್ನಿಸಿದರು. ಆದರೂ ಬಿಜೆಪಿಯವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಉದ್ದೇಶಿತ ಚರ್ಚೆಗಿಂತ ಆರೋಪಕ್ಕೇ ಆದ್ಯತೆ
ಗುರುವಾರದಂತೆ ಶುಕ್ರವಾರವೂ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲಿನ ಚರ್ಚೆಗಿಂತ ವಿಶ್ವಾಸಮತ ಯಾಚನೆ ಕುರಿತು ಮುಖ್ಯಮಂತ್ರಿಗಳಿಗೆ ರಾಜ್ಯಪಾಲರ ನಿರ್ದೇಶನ, ರಾಜಿನಾಮೆ ಬಳಿಕ ಶಾಸಕರು ಮುಂಬೈನಲ್ಲಿರಲು ಬಿಜೆಪಿ ಕಾರಣ, ಬಿಜೆಪಿ ಅವರನ್ನು ಕೂಡಿ ಹಾಕಿದೆ ಎಂಬ ಆರೋಪ… ಹೀಗೆ ರಾಜ್ಯಪಾಲರು ಮತ್ತು ಪ್ರತಿಪಕ್ಷದ ಮೇಲಿನ ಟೀಕೆಗಷ್ಟೇ ಸೀಮಿತವಾಯಿತೇ ಹೊರತು ಪ್ರಸ್ತಾಪದ ಮೇಲೆ ಚರ್ಚೆ ನಡೆಸಿದವರು ಮೂರ್ನಾಲ್ಕು ಮಂದಿ ಮಾತ್ರ. ಅವರೂ ಕೂಡ ಬಿಜೆಪಿಯ ಆಪರೇಷನ್ ಕಮಲವನ್ನೇ ಪ್ರಸ್ತಾಪಿಸಿದರೇ ಹೊರತು ಸರ್ಕಾರದ ಮೇಲೆ ಏಕೆ ವಿಶ್ವಾಸವಿಡಬೇಕು ಎಂಬುದನ್ನು ಹೇಳಲೇ ಇಲ್ಲ.
ಕುತೂಹಲ ಕೆರಳಿಸಿದ ರಾಜ್ಯಪಾಲರ ನಡೆ
ವಿಶ್ವಾಸಮತ ಯಾಚನೆ ವಿಚಾರದಲ್ಲಿ ರಾಜ್ಯಪಾಲರು ನೀಡಿದ ಎರಡು ಡೆಡ್ ಲೈನ್ ಕೂಡ ಸರ್ಕಾರದಿಂದ ಉಲ್ಲಂಘನೆಯಾಗಿದೆ. ಹೀಗಾಗಿ ರಾಜ್ಯಪಾಲರು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಚಾರ ಕುತೂಹಲ ಕೆರಳಿಸಿದೆ. ರಾಜ್ಯಪಾಲರ ಆದೇಶಕ್ಕೆ ಮಿತ್ರಪಕ್ಷಗಳು ಕ್ಯಾರೇ ಎನ್ನದೇ ಇದ್ದರೂ ಕನಿಷ್ಠ ಸ್ಪೀಕರ್ ಅಥವಾ ಅವರ ಕಚೇರಿಯಿಂದ ಇಲ್ಲವೇ ಮುಖ್ಯ ಕಾರ್ಯದರ್ಶಿಗಳಿಂದ ರಾಜ್ಯಪಾಲರಿಗೆ ಮಾಹಿತಿ ಕಳುಹಿಸಲೇ ಬೇಕಾಗುತ್ತದೆ. ಈ ಮಧ್ಯೆ ಏನೇ ಆದರೂ ಸೋಮವಾರ ಸಂಜೆಯೊಳಗೆ ವಿಶ್ವಾಸಮತ ಪ್ರಸ್ತಾಪ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಒಪ್ಪಿದೆ. ಈ ವಿಚಾರವನ್ನೇ ರಾಜ್ಯಪಾಲರ ಗಮನಕ್ಕೆ ತಂದು ಅವರನ್ನು ಸಮಾಧಾನಪಡಿಸುವ ಕೆಲಸ ಆಗಬೇಕಷ್ಟೆ. ರಾಜ್ಯಪಾಲರು ಇದಕ್ಕೆ ಒಪ್ಪಿದರೆ ಸರಿ, ಇಲ್ಲದಿದ್ದರೆ ಅವರ ಮುಂದಿನ ನಡೆ ಸರ್ಕಾರಕ್ಕೆ ಅಪಾಯ ತರಬಹುದು ಇಲ್ಲವೇ ರಾಷ್ಟ್ರಪತಿ ಆಳ್ವಿಕೆಗೆ ಕಾರಣವಾಗಬಹುದು.