ಕಳೆದ ವರ್ಷ ಇದೇ ಸಮಯಕ್ಕೆ ಸರಿಯಾಗಿ ಆಪರೇಷನ್ ಕಮಲ ರಂಗು ಪಡೆದು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿತ್ತು. ಜುಲೈ 26ಕ್ಕೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಅಂದು ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೇರಲು ಕಾರಣರಾದ ಜೆಡಿಎಸ್, ಕಾಂಗ್ರೆಸ್ನ ಬಹುತೇಕ ನಾಯಕರಿಗೆ ಬಿಜೆಪಿ ಸರ್ಕಾರದಲ್ಲಿ ಅಳೆದು ತೂಗಿ ಅಧಿಕಾರ ಕೊಡಲಾಗಿದೆ. ಶಾಸಕರಾಗಿ ಆಯ್ಕೆಯಾದವರು ಜನವರಿಯಲ್ಲಿ ಸಚಿವರಾಗಿದ್ದರು. ಉಳಿದವರು ಇದೀಗ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್ ವಿಶ್ವನಾಥ್ ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಿದ್ದಾರೆ. ಆದರೆ ನಾಮ ನಿರ್ದೇಶನಕ್ಕೆ ಅವಕಾಶ ಇಲ್ಲ ಎನ್ನುವ ವಾದ ಹುಟ್ಟಿಕೊಂಡಿದೆ.
ಹೆಚ್. ವಿಶ್ವನಾಥ್ ಆಯ್ಕೆಯೇ ಅಸಂವಿಧಾನಿಕ..!
ವಿಧಾನಪರಿಷತ್ ಸ್ಥಾನಕ್ಕೆ ಹೆಚ್ ವಿಶ್ವನಾಥ್ ನೇಮಕ ಮಾಡುವುದಕ್ಕೆ ಸಾಧ್ಯವಿಲ್ಲ. ರಾಜ್ಯಪಾಲರಿಗೆ ಕನ್ನಡ, ಇಂಗ್ಲೀಷ್ ಕೂಡ ಬರಲ್ಲ. ರಾಜ್ಯಪಾಲರು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಇದು ರಾಜ್ಯದ ರಾಜಕೀಯ ದುರಂತ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ವಿಶ್ವನಾಥ್, ವಿಧಾನ ಪರಿಷತ್ ಸ್ಥಾನವಲ್ಲ ಮಂಡಳಿಯ ಅಧ್ಯಕ್ಷರನ್ನಾಗಿಯೂ ಆಯ್ಕೆ ಮಾಡುವಂತಿಲ್ಲ. ವಿಶ್ವನಾಥ್ ನೇಮಕ ಕಾನೂನು ಬಾಹಿರ. ಅವರು ಪ್ರಮಾಣ ವಚನ ಸ್ವೀಕರಿಸುವಂತಿಲ್ಲ. ಇದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಯಾರಾದರೂ ತಪ್ಪು ಮಾಡಿರಲಿ. ಆದ್ರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ವಿಶ್ವನಾಥ್ ಹೇಗೆ ಪ್ರಮಾಣವಚನ ಸ್ವೀಕರಿಸುತ್ತಾರೆ. ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.

ʻಬಾಂಬೆ ಡೈರೀಸ್’ ಹೆಸರೇಳಿ ಬೆದರಿಸಿದ್ರಾ..?
ಹೆಚ್. ವಿಶ್ವನಾಥ್ ಅವರನ್ನು ಬಿಜೆಪಿ ಸರ್ಕಾರ ವಿಧಾನ ಪರಿಷತ್ಗೆ ಆಯ್ಕೆ ಮಾಡಿಲ್ಲ. ಆದರೆ ಹುಣಸೂರಿನಿಂದ ಬಾಂಬೆವರೆಗೆ ಹೋಗಿದ್ದ ಪ್ರಯಾಣದ ಸಂಪೂರ್ಣ ಮಾಹಿತಿಯನ್ನು ಬಾಂಬೆ ಡೈರೀಸ್ ಪುಸ್ತಕದಲ್ಲಿ ದಾಖಲು ಮಾಡುತ್ತೇನೆ ಎಂದಿದ್ದರು. ಅದರ ಫಲವೇ ಈಗ ಸಿಕ್ಕಿರುವ ಸ್ಥಾನ ಎಂದಿದ್ದಾರೆ. ಪುಸ್ತಕ ಬರೆಯುತ್ತೇನೆ ಎನ್ನುವ ಮೂಲಕ ಬ್ಲಾಕ್ಮೇಲ್ ಮಾಡಿದ್ದಾರೆ. ಅದಕ್ಕೆ ಈ ಪರಿಷತ್ ಸ್ಥಾನ ಸಿಕ್ಕಿದೆ. ಬ್ಲಾಕ್ಮೇಲ್ಗೆ ಸಿಕ್ಕಿರುವ ಭಿಕ್ಷೆ ಇದು. ಈ ಬಗ್ಗೆ ನಾನು ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇವೆ. ವಿಶ್ವನಾಥ್ ಅವರ ನಾಮನಿರ್ದೇಶನ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದು ಮನವರಿಕೆ ಮಾಡಿಕೊಡುತ್ತೇನೆ ಎಂದಿದ್ದಾರೆ ಸಾ.ರಾ ಮಹೇಶ್.
ಸರ್ಕಾರವನ್ನೇ ಬೆದರಿಸಿದ್ರಾ ಹೆಚ್ ವಿಶ್ವನಾಥ್..?
ವಿಧಾನ ಪರಿಷತ್ ಸ್ಥಾನ ಬಿಜೆಪಿಯಿಂದ ಪಡೆದ ಭಿಕ್ಷೆ ಎಂದಿರುವ ಸಾ.ರಾ ಮಹೇಶ್, ಹುಣಸೂರು ಜನರ ಮರ್ಯಾದೆಯನ್ನ ಬಾಂಬೆಯಲ್ಲಿ ತೆಗೆದಿದ್ದು ಆಯ್ತು. ಇದೀಗ ಕಾಡಿ ಬೇಡಿ ಬಿಜೆಪಿಯಿಂದ ಭಿಕ್ಷೆ ರೂಪದಲ್ಲಿ ವಿಧಾನಪರಿಷತ್ ಸ್ಥಾನ ಪಡೆದಿದ್ದೀರಿ. ಇವರ ಆಯ್ಕೆಯಿಂದ ಸಾಹಿತ್ಯ ಕ್ಷೇತ್ರ ಕಲುಷಿತವಾಗಿದೆ. ಸಾಹಿತ್ಯ ಕ್ಷೇತ್ರದವರೆಲ್ಲಾ ಬೇರೆ ಕ್ಷೇತ್ರ ಹುಡುಕಿಕೊಳ್ಳಬಹುದು. ಈ ರೀತಿಯ ನಾಯಕರಿಂದ ಮೆಲ್ಮನೆಯೂ ಕಲುಷಿತ ಆಗಿಬಿಡುತ್ತೆ ಅನ್ನೋ ಸಂಕಟ ಎಂದಿದ್ದಾರೆ. ಈ ಮಾತು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಬಿ.ಎಸ್ ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡುವ ಮೂಲಕ ಅಧಿಕಾರಕ್ಕೆ ಬಂದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರೆ ಅದೇ ಯಡಿಯೂರಪ್ಪ ಅವರನ್ನು ಬ್ಲಾಕ್ಮೇಲ್ ಮಾಡಿದ್ದು ಹೇಗೆ..? ವಿಶ್ವನಾಥ್ ಬ್ಲಾಕ್ಮೇಲ್ಗೆ ಹೆದರುವ ಕೆಲಸವನ್ನು ಸಿಎಂ ಏನು ಮಾಡಿದ್ದರು ಎನ್ನುವ ಅನುಮಾನ ಕಾಡುತ್ತಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬ್ಲಾಕ್ಮೇಲ್ ಆಟ ನಿಜವಾಗಿಯೂ ನಡೆದಿದ್ಯಾ..?
ಹೆಚ್ ವಿಶ್ವನಾಥ್ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಸ್ಪಷ್ಟ ಮಾಡಿ ಸೋಲುಂಡರು. ಆದರೂ ಮತ್ತೆ ವಿಧಾನಸೌಧಕ್ಕೆ ಪ್ರವೇಶ ಪಡೆಯುವ ಕಸರತ್ತು ಮಾಡಿದರು. ಆದರೆ ಪರಿಷತ್ಗೆ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಆದರೆ ಇದರಿಂದ ಕುಪಿತಗೊಂಡಿದ್ದ ಹೆಚ್.ವಿಶ್ವನಾಥ್ ಮುಖ್ಯಮಂತ್ರಿ ಮನೆಯಿಂದ ಹೊರಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದ್ದರು, ನಾನು ಬಾಂಬೇ ಡೈರೀಸ್ ಎಂಬ ಪುಸ್ತಕ ಬರೆಯುತ್ತೇನೆ. ಅದರಲ್ಲಿ ಪ್ರತಿಯೊಂದು ಅಂಶಗಳನ್ನು ಸೇರಿಸುತ್ತೇನೆ. ನಾವು ಪಕ್ಷದಿಂದ ಹೊರ ಬರುವುದಕ್ಕೆ ಕಾರಣವೇನು..? ನಾವು ಮುಂಬೈನಲ್ಲಿ ಹೇಗಿದ್ದೆವು..? ಬಿಜೆಪಿ ಸರ್ಕಾರಕ್ಕೆ ಬೆಂಬಲಿಸಿದ್ದು ಯಾಕೆ..? ಎನ್ನುವ ಬಗ್ಗೆ ಸಮಗ್ರವಾಗಿ ಬರೆಯುತ್ತೇನೆ ಎಂದಿದ್ದರು. ಆದರ ಜೊತೆಗೆ ಬಿ.ಎಸ್ ಯಡಿಯೂರಪ್ಪ ನಾಲಿಗೆ ಮೇಲೆ ನಿಲ್ಲುವ ಏಕೈಕ ನಾಯಕ ಎಂದು ತಿಳಿಸಿದ್ದರು.
ಬಾಂಬೆ ಡೈರಿ ಬಗ್ಗೆ ಸಿಎಂಗೆ ಭಯ ಇದೆಯಾ..?
ಆಪರೇಷನ್ ಕಮಲ ನಡೆದು ವರ್ಷವಾಗುತ್ತಾ ಬಂದರೂ ಅಧಿಕಾರ ಸಿಗುವ ಸಾಧ್ಯತೆ ಕ್ಷೀಣಿಸುತ್ತಾ ಸಾಗಿತ್ತು. ಅಧಿಕಾರಕ್ಕೆ ಬಂದ ನಮಗೆ ಅಧಿಕಾರ ಕೊಡುವುದು ಬಿಜೆಪಿ ಹಾಗೂ ಬಿ.ಎಸ್ಯಡಿಯೂರಪ್ಪ ಅವರ ಕರ್ತವ್ಯ ಎನ್ನುವ ಭಾವನೆ ವ್ಯಕ್ತಪಡಿಸುತ್ತಾ ಒತ್ತಡ ಹೇರುತ್ತಾ ಬಂದರು. ಆ ಬಳಿಕ ಬಾಂಬೆ ಡೈರಿ ಬರೆಯುವ ಪ್ರಸ್ತಾವನೆ ಹೊರಗೆ ಹಾಕಿದ್ದರು. ಒಂದು ವೇಳೆ ಬಾಂಬೆ ಡೈರೀಸ್ ಎಂದು ವಿಶ್ವನಾಥ್ ಎಲ್ಲಾ ಸತ್ಯವನ್ನು ಪುಸ್ತಕದಲ್ಲಿ ದಾಖಲಿಸಿದರೆ, ಇತಿಹಾಸದ ಪುಟಗಳಲ್ಲಿ ಬಿ.ಎಸ್ಯಡಿಯೂರಪ್ಪ ಖಳನಾಯಕನ ಸ್ಥಾನದಲ್ಲಿ ನಿಲ್ಲುವುದು ಬಹುತೇಕ ಖಚಿತ. ಅದೇ ಕಾರಣದಿಂದ ಪರಿಷತ್ಗೆ ನಾಮಕರಣ ಮಾಡುವ ಮೂಲಕ ಬಾಂಬೆ ಡೈರೀಸ್ ಪುಸ್ತಕ ಬರೆಯುವುದನ್ನೇ ನಿಲ್ಲಿಸುವ ಯತ್ನ ಮಾಡಿದ್ದಾರೆ. ಒಂದು ವೇಳೆ ತಾನು ಹೇಳಿದಂತೆ ಬಾಂಬೆ ಡೈರೀಸ್ ಪುಸ್ತಕವನ್ನು ಬರೆದರೂ ಸಾಕಷ್ಟು ವಿಚಾರಗಳಿಗೆ ಸೆನ್ಸಾರ್ ಇರುವಂತೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಒಟ್ಟಾರೆ ಬಾಂಬೆ ಡೈರೀಸ್ ವಿಶ್ವನಾಥ್ ಇಂದ್ರಲೋಕದ ಕಾಮಧೇನು ಆಗಿದೆ ಎನ್ನುವುದು ಮಾತ್ರ ಸತ್ಯ.