ವಿಮಾನ ಪ್ರಯಾಣಕ್ಕೆ ಡಾಕ್ಟರ್ ಸರ್ಟಿಫಿಕೇಟ್ ಕಡ್ಡಾಯ ಸಾಧ್ಯತೆ

ಕರೋನೋತ್ತರ ಜಗತ್ತು ಬಹಳಷ್ಟು ಬದಲಾವಣೆಗಳನ್ನು ಹೊತ್ತು ತರಲಿದೆ. ವಿಮಾನ ಪ್ರಯಾಣ ಮಾಡುವುದು ಕೂಡ ಮುಂದೆ ಸಮಸ್ಯೆಯಾಗಲಿದೆ. ವಿಮಾನ‌ ಪ್ರಯಾಣ ಎರಡು ಕಾರಣಗಳಿಗೆ ಕಷ್ಟ ಆಗಲಿದೆ. ಒಂದು ಮುಂದಿನ ದಿನಗಳಲ್ಲಿ ಜಾಗತಿಕವಾಗಿ ವಿಮಾನಯಾನ ಕ್ಷೇತ್ರದಲ್ಲಾಗುವ ದೊಡ್ಡ ಪ್ರಮಾಣದ ಬದಲಾವಣೆ-ಬೆಳವಣಿಗೆಗಳಿಂದ. ಇನ್ನೊಂದು ಕರೋನಾ ಕಾರಣಕ್ಕೆ ವಿಮಾನಯಾನ ಸಂಸ್ಥೆಗಳು ಮತ್ತು ಸರ್ಕಾರಗಳು ವಿಧಿಸುವ ಷರತ್ತುಗಳಿಂದ.

ಮೊದಲಿಗೆ ಷರತ್ತುಗಳ ವಿಷಯವನ್ನು ಗಮನಿಸಿ. ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣ ಮಾಡಲು ವೈದ್ಯರ ಪ್ರಮಾಣಪತ್ರವನ್ನು ಕೊಡುವುದು ಕಡ್ಡಾಯವಾಗಲಿದೆ. ಅಂದರೆ ನೀವು ವಿಮಾನಯಾನ ಮಾಡಲು ಬಯಸಿದರೆ ಮೊದಲಿಗೆ ವೈದ್ಯರ ಬಳಿ ಹೋಗಿ ಆರೋಗ್ಯ ತಪಾಸಣೆ ಮಾಡಬೇಕು. ನೀವು ಆರೋಗ್ಯವಾಗಿದ್ದೀರಿ ಎಂದು ಅವರು ಪ್ರಮಾಣಪತ್ರ ನೀಡಬೇಕು. ಆ ಪ್ರಮಾಣಪತ್ರವನ್ನು ನೀವು ವಿಮಾನಯಾನ ಸಂಸ್ಥೆಗಳಿಗೆ ಪ್ರಸ್ತುತ ಪಡಿಸಬೇಕು. ಅಷ್ಟೇ ಅಲ್ಲ, ಬಳಸಿ ಬಿಸಾಡುವ ಮಾಸ್ಕ್, ಗ್ಲೌಸ್ ಮತ್ತು ಟೋಪಿಯನ್ನೂ ಧರಿಸಬೇಕು ಎಂಬ ಷರತ್ತು ವಿಧಿಸುವ ಸಾಧ್ಯತೆಗಳಿವೆ.

ಈ ರೀತಿಯ ಷರತ್ತುಗಳನ್ನು ವಿಧಿಸಬೇಕೆಂಬ ಚರ್ಚೆ ಶುರುವಾಗಿದೆ. ಆದರೆ ಯಾವಾಗ ನಿರ್ಧಾರ ಆಗುತ್ತೆ ಎಂಬ ಬಗ್ಗೆ ಖಚಿತತೆ ಇಲ್ಲ. ಏಕೆಂದರೆ ಈಗಿನ್ನೂ ಮೇ 3ನೇ ತಾರೀಖಿನ ನಂತರವೂ ಲಾಕ್ಡೌನ್ ಮುಂದುವರೆಯುತ್ತದೆಯೋ ಅಥವಾ ಮುಕ್ತಾಯವಾಗುತ್ತದೆಯೋ ಎಂಬ ವಿಷಯವೇ ಇತ್ಯರ್ಥ ಆಗಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. ಕೆಲವು ಮುಖ್ಯಮಂತ್ರಿಗಳು ಲಾಕ್ಡೌನ್ ಮುಂದುವರೆಸಿ ಅಂತಾ, ಕೆಲ ಮುಖ್ಯಮಂತ್ರಿಗಳು ಮೊಟಕುಗೊಳಿಸಿ ಅಂತಾ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಆ ವಿಷಯ ಇತ್ಯರ್ಥ ಆಗಿಲ್ಲ.

ಲಾಕ್ಡೌನ್ ವಿಷಯ ಇತ್ಯರ್ಥ ಆದ ಮೇಲೆ ಕೇಂದ್ರ ಸರ್ಕಾರದ ಅಧಿಕಾರಿಗಳು, ವಿಮಾನಯಾನ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವಿಮಾನಯಾನ ಸಂಸ್ಥೆಗಳ ಅಧಿಕಾರಿಗಳ ತಂಡವು ಈ ಬಗ್ಗೆ ತೀರ್ಮಾನ ಮಾಡಲಿದೆ. ವಿಮಾನ ಪ್ರಯಾಣಕ್ಕೆ ವೈದ್ಯರ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸಿದ ಮೇಲೆ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗುತ್ತದೆ. ತಾಂತ್ರಿಕ ಸಮಿತಿ ವತಿಯಿಂದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಸ್ಟಾಂಡರ್ಡ್ ಆಪರೇಟಿಂಗ್ ಹೀಗರೊಸೆಡ್ಯುರ್ಸ್) ರೂಪಿಸಲಾಗುತ್ತದೆ.

ವೈದ್ಯರಿಂದ ಪ್ರಮಾಣಪತ್ರ ಮಾಡಿಸಬೇಕು ಎಂದರೆ ಸರ್ಕಾರಿ ವೈದ್ಯರಿಂದ ಮಾತ್ರವೇ ಮಾಡಿಸಬೇಕೇ? ಖಾಸಗಿ ವೈದ್ಯರ ಪ್ರಮಾಣಪತ್ರಕ್ಕೆ ಮಾನ್ಯತೆ ಸಿಗಲಿದೆಯೇ? ಸರ್ಕಾರಿ ವೈದ್ಯರಿಂದಲೇ ಆಗಬೇಕು ಎಂದರೆ ಈಗಾಗಲೇ ವೈದ್ಯರ ಕೊರತೆ ಎದುರಿಸುತ್ತಿರುವ ನಮ್ಮ ಆರೋಗ್ಯ ಕ್ಷೇತ್ರದ ಕತೆ ಏನು? ಖಾಸಗಿ ಕ್ಷೇತ್ರಕ್ಕೆ ಮುಕ್ತ ಅವಕಾಶ ನೀಡಿದರೆ ದುರ್ಬಳಕೆ ಆಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಅಥವಾ ಇವೆಲ್ಲವುಗಳ ಬದಲಿಗೆ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪರೀಕ್ಷೆ ನಡೆಸಲಾಗುತ್ತದೆಯೇ? ‘ಆರೋಗ್ಯ ಸರಿ ಇಲ್ಲ’ ಎಂಬ ಫಲಿತಾಂಶ ಬಂದರೆ ಸಹಪ್ರಯಾಣಿಕರ ಪರಿಸ್ಥಿತಿ ಏನಾಗಲಿದೆ? ಆಗ ಮೊದಲೇ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಹಣ ವಾಪಸ್ ಮಾಡಲಿವೆಯೇ? ಹಣ ವಾಪಸ್ ಮಾಡಿದರೆ ಆ ಕಂಪನಿಗಳಿಗೆ ಆಗುವ ನಷ್ಟವನ್ನು ತುಂಬಿಕೊಡುವವರು ಯಾರು? …ಹೀಗೆ ವಾಸ್ತವವಾಗಿ ನೂರೆಂಟು ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

ಇನ್ನು ವಿಮಾನಯಾನ ಕ್ಷೇತ್ರದಲ್ಲಿ ನಡೆಯಲಿರುವ ಬೆಳವಣಿಗೆಗಳು- ಬದಲಾವಣೆಗಳನ್ನು ಗಮನಿಸುವುದಾದರೆ ಈಗಾಗಲೇ ಇಂಡಿಗೊ ವಿಮಾನಯಾನ ಸಂಸ್ಥೆ ಥರ್ಮಲ್-ಸ್ಕ್ರೀನ್ ಅಳವಡಿಸಿಕೊಳ್ಳಲು, ಪ್ರಯಾಣಿಕರಿಗೆ ಉಚಿತವಾದ ಮಾಸ್ಕ್, ಗ್ಲೌಸ್ ಗಳನ್ನು ನೀಡಲು, ಚೆಕ್-ಇನ್ ಕೌಂಟರ್ ಕ್ಯೂಗಳಲ್ಲಿ ಮತ್ತು ಬೋರ್ಡಿಂಗ್ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಹಾಯಕರ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕ್ಯಾಬಿನ್ ಸಿಬ್ಬಂದಿ ಕೂಡ ಮಾಸ್ಕ್, ಗ್ಲೌಸ್ ಹಾಗೂ ರಕ್ಷಣಾತ್ಮಕ ನಿಲುವಂಗಿ ಧರಿಸುವುದನ್ನು ಕಡ್ಡಾಯಗೊಳಿಸಲಿದೆ.

ಕೊರಿಯನ್ ಏರ್ ಲೈನ್ಸ್‌ ತನ್ನ ಸಿಬ್ಬಂದಿಗಳಿಗೆ ಮಾಸ್ಕ್, ಗ್ಲೌಸ್ ಜೊತೆಗೆ ವಿಶೇಷ ಕನ್ನಡಕಗಳು, ನಿಲುವಂಗಿಗಳು ಸೇರಿದಂತೆ ಸಂಪೂರ್ಣ ರಕ್ಷಣಾತ್ಮಕ ಸಾಧನಗಳನ್ನು ಧರಿಸಿರಬೇಕೆಂದು ನಿರ್ಧರಿಸಿದೆ. ಈಜಿ ಜೆಟ್‌ನಂತಹ ಕೆಲವು ಜಾಗತಿಕ ವಿಮಾನಯಾನ ಸಂಸ್ಥೆಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಭಾಗವಾಗಿ ಮಧ್ಯದ ಆಸನಗಳನ್ನು ಖಾಲಿ ಇಡಲು ಯೋಜಿಸುತ್ತಿವೆ. ಮಧ್ಯದ ಸೀಟುಗಳ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲೂ ಚರ್ಚೆಯಾಗುತ್ತಿದೆ. ಮಧ್ಯದ ಆಸನವನ್ನು ಖಾಲಿ ಇಡುವುದರಿಂದ ಇಬ್ಬರ ನಡುವೆ 6 ಅಡಿ ಜಾಗದ ಸಾಮಾಜಿಕ ಅಂತರ ಸಾಧಿಸಲು ಸಾಧ್ಯವಾಗುವುದಿಲ್ಲ, ಕೇವಲ ಎರಡು ಅಡಿ ಮಾತ್ರ ಅಂತರ ಇರುತ್ತೆ’ ಎಂಬ ವಾದ ಇದೆ. ಮಧ್ಯದ ಸೀಟುಗಳನ್ನು ಖಾಲಿ ಇಡಬೇಕು ಎಂಬ ಸರ್ಕಾರದ ಬೇಡಿಕೆಗೆ ಭಾರತ ವಿಮಾನಯಾನ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದರಿಂದ ಸಾಮಾಜಿಕ ಅಂತರ ಕಾಪಾಡುವುದಕ್ಕೂ ಆಗುವುದಿಲ್ಲ, ಆರ್ಥಿಕವಾಗಿಯೂ ವಾಸ್ತವಿಕವಾದುದಲ್ಲ ಎಂದು ಹೇಳಿದ್ದವು.

ಈ ರೀತಿ ವಿಮಾನಯಾನ ಸಂಸ್ಥೆಗಳಿಗೂ ಮುಂದಿನ ದಿನಗಳಲ್ಲಿ ವಿಮಾನ ಹಾರಾಟ ನಡೆಸುವುದು ತುಸು ತ್ರಾಸದಾಯಕವಾಗಿರಲಿದೆ. ಒಂದು ಕಾಲಕ್ಕೆ ಶ್ರೀಮಂತರು ಮಾತ್ರ ವಿಮಾನಯಾನ ಮಾಡುತ್ತಿದ್ದರು. ಈಗ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ಕೂಡ ವಿಮಾನಯಾನ ಬಳಕೆ ಮಾಡುತ್ತಿದೆ. ಈ ವರ್ಗ ಈಗ ದೊಡ್ಡ ಪ್ರಮಾಣದ ಸಂಪನ್ಮೂಲವಾಗಿದೆ. ಆದರೆ ಕರೋನಾ ಸೋಂಕು ಹರಡುವಿಕೆ, ಲಾಕ್ಡೌನ್, ಸಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು, ಮಧ್ಯದ ಸೀಟು ಖಾಲಿ ಬಿಡಬೇಕು. ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಕಾರಣಕ್ಕೆ ವಿಮಾನ ಪ್ರಯಾಣದ ದರಗಳು ದುಪ್ಪಟ್ಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಇದರಿಂದ ಈಗಾಗಲೇ ಹೇಳಿದಂತೆ ಸದ್ಯದ ಬಹುದೊಡ್ಡ ಪ್ರಯಾಣಿಕರ ಸಮುದಾಯವಾದ ಮಧ್ಯಮ, ಮೇಲ್ಮದ್ಯಮ ವರ್ಗ ಕೂಡ ವಿಮಾನ ಪ್ರಯಾಣ ಮಾಡಲಾರದಂತಹ ಸ್ಥಿತಿ ತಲುಪಬಹುದು.

ಕರೋನಾ ಎಂಥೆಂಥಾ ಕಷ್ಟತಂದೊಡ್ಡಲಿದೆ ಎಂಬುದನ್ನು ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಈ ಕ್ರೂರಿ ಕರೋನಾ ಬಡವರನ್ನು ಪರಿಪರಿಯಾಗಿ ಕಾಡಲಿದೆ. ಹಾಗಂತ ಮಧ್ಯಮ ವರ್ಗದವರನ್ನು ಅಥವಾ ಉಳ್ಳವರ ಬಗ್ಗೆಯೂ ಉದಾರವಾಗಿರುವುದಿಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

Please follow and like us:

Related articles

Share article

Stay connected

Latest articles

Please follow and like us: