ರಾಜ್ಯದಲ್ಲಿನ ದೋಸ್ತಿ ಸರ್ಕಾರಕ್ಕೆ ದೋಸ್ತಿ ಉಳಿಸಿಕೊಳ್ಳುವ ಜೊತೆಗೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ತಮ್ಮ ಮೈತ್ರಿ ಗಟ್ಟಿ ಎಂದು ಸಾಬೀತುಪಡಿಸುವ ಸವಾಲು ಕೂಡ ಎದುರಾಗಿದೆ. ಈ ಕಾರಣಕ್ಕೆ ಎರಡೂ ಪಕ್ಷಗಳು ಒಟ್ಟಾಗಿ ದುಡಿಯುತ್ತಿರುವುದು ಸಕಾರಾತ್ಮಕ ಅಂಶವಾದರೂ, ಕಾರ್ಯಕರ್ತರ ಹೊಂದಾಣಿಕೆ ಕಷ್ಟವೇ ಆಗಿದೆ. ಇದರ ಲಾಭ ಪಡೆಯುವ ಹವಣಿಕೆಯಲ್ಲಿರುವ ಬಿಜೆಪಿಗೆ ಈಗಿರುವ ಸ್ಥಾನಗಳನ್ನು ಉಳಿಸಿಕೊಂಡೇ ಇನ್ನಷ್ಟು ಸ್ಥಾನ ಹಿಡಿಯುವ ಉಮೇದು. ಹಾಗಾದರೆ, ಕಣದಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ಚಿತ್ರಣ.
ಬಳ್ಳಾರಿ
ಈ ಹಿಂದೆ ಬಿಜೆಯ ಭದ್ರಕೋಟೆಯಾಗಿದ್ದು, ಗಣಿ ಹಗರಣದ ಬಳಿಕ ಕಾಂಗ್ರೆಸ್ ಕಡೆ ವಾಲಿದ್ದ ಬಳ್ಳಾರಿ ಜಿಲ್ಲೆಯ ಬಳ್ಳಾರಿ ಲೋಕಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಬದಲಾಗಿ ಕಾಂಗ್ರೆಸ್ ವರ್ಸಸ್ ಅಸಮಾಧಾನಿತ ಕಾಂಗ್ರೆಸ್ ಎನ್ನುವಂತಾಗಿದೆ. ಇಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ವಿರುದ್ಧ ವೈ.ದೇವೇಂದ್ರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ, ಅವರ ಹಿಂದೆ ಬಲವಾಗಿ ನಿಂತಿರುವುದು ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ. ಗಣಿ ರೆಡ್ಡಿಗಳ ಬಳಿಕ ಶ್ರೀರಾಮುಲು ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದರು, ಮಾತ್ರವಲ್ಲ ಸಂಸದರಾಗಿಯೂ ಆಯ್ಕೆಯಾಗಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ವಲಸೆ ಹೋಗಿ ಗೆದ್ದ ಬಳಿಕ ಅವರ ಶಕ್ತಿ ಕಡಿಮೆಯಾಗಿದೆ. ಹೀಗಾಗಿ, ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ಉಗ್ರಪ್ಪ ಅವರಿಗೆ ಅಷ್ಟೊಂದು ಅನುಕೂಲಕರ ಪರಿಸ್ಥಿತಿ ಇಲ್ಲ. ಡಿ.ಕೆ.ಶಿವಕುಮಾರ್ ಅವರು ಉಗ್ರಪ್ಪ ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದಾರಾದರೂ ರಮೇಶ್ ಜಾರಕಿಹೊಳಿ ಅವರಿಗೆ ಅಡ್ಡಿಯಾಗಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಶ್ರೀರಾಮುಲು ಮತ್ತು ರಮೇಶ್ ಜೊತೆಗೂಡಿದರೆ ಹಾಗೂ ಬಳ್ಳಾರಿ ಕಾಂಗ್ರೆಸ್‌ನಲ್ಲಿರುವ ಆಂತರಿಕ ಕಚ್ಚಾಟ ಕಡಿಮೆಯಾಗದೆ ಇದ್ದಲ್ಲಿ ದೇವೇಂದ್ರಪ್ಪ ಕೈ ಮೇಲಾಗಬಹುದು. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆಯೂ ಇದೆ. ಆದರೆ, ಕಾಂಗ್ರೆಸ್‌ನ ಉಗ್ರಪ್ಪ ಅವರು ಆರು ತಿಂಗಳ ಹಿಂದಷ್ಟೇ ಉಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದರೂ ಅಲ್ಪಾವಧಿಯಲ್ಲೇ ಕ್ಷೇತ್ರದ ಜೊತೆ ನಿರಂತರ ಮತ್ತು ಉತ್ತಮ ಸಂಪರ್ಕ ಇಟ್ಟುಕೊಡಿದ್ದಾರೆ. ಹೀಗಾಗಿ, ಕಾಂಗ್ರೆಸ್- ಬಿಜೆಪಿ ನಡುವೆ ಸಮಬಲದ ಹೋರಾಟ ಖಚಿತ.
ಕೊಪ್ಪಳ
ಸ್ಥಳೀಯವಾಗಿ ಸಾಕಷ್ಟು ವಿರೋಧ ಇದ್ದರೂ ಹಾಲಿ ಸಂಸದರಿಗೆ ಟಿಕೆಟ್ ಖಾತರಿ ಕಾರಣದಿಂದಾಗಿ ಟಿಕೆಟ್ ಪಡೆದು ಕಣಕ್ಕಿಳಿದಿರುವ ಬಿಜೆಪಿಯ ಹಾಲಿ ಸಂಸದ ಸಂಗಣ್ಣ ಕರಡಿ ಅವನ್ನು ಮೋದಿ ಅಲೆ ಮತ್ತು ಸಂಸದರಾಗಿ ಕ್ಷೇತ್ರದಲ್ಲಿ ಮಾಡಿದ ಅಲ್ಪಸ್ವಲ್ಪ ಕೆಲಸಗಳಷ್ಟೇ ಕೈಹಿಡಿಯಬೇಕಿದೆ. ಇಂತಹ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಸಂಗಣ್ಣ ಕರಡಿ ಅವರ ವಿರುದ್ಧ ಕೆ.ರಾಜಶೇಖರ ಹಿಟ್ನಾಳ್ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ವ್ಯಾಮೋಹ ಮೆರೆದ ಕಾರಣದಿಂದಾಗಿ ಸಂಗಣ್ಣ ಕರಡಿ ಅವರಿಗೆ ಪಕ್ಷದಲ್ಲೇ ಸಾಕಷ್ಟು ವಿರೋಧವಿತ್ತು. ಹೀಗಾಗಿ, ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹೇರಲಾಗಿತ್ತು. ಇದರ ನಡುವೆಯೂ ಟಿಕೆಟ್ ಗಿಟ್ಟಿಸಿದ ಸಂಗಣ್ಣಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಪಕ್ಷದಲ್ಲೇ ಅವರಿಗೆ ಪೈಪೋಟಿ ಇತ್ತು. ಇದರ ನಡುವೆಯೂ ಟಿಕೆಟ್ ಗಿಟ್ಟಿಸಿಕೊಂಡಿರುವ ಸಂಗಣ್ಣ ಕರಡಿ ಪ್ರಧಾನಿ ಮೋದಿ ಮಂತ್ರದೊಂದಿಗೆ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಮಾಜಿ ಸಚಿವ ದಿವಂಗತ ಬಸವರಾಜ್ ಹಿಟ್ನಾಳ್ ಅವರ ಪುತ್ರ ರಾಜಶೇಖರ ಹಿಟ್ನಾಳ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಸವರಾಜ್ ಪುತ್ರ ಎಂಬುದನ್ನು ಹೊರತುಪಡಿಸಿ ರಾಜಶೇಖರ್ ಅವರಿಗೆ ಕ್ಷೇತ್ರದ ಬಗ್ಗೆ ಪರಿಚಯ ಇಲ್ಲ. ಆದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅವರ ಕೈಹಿಡಿದರೆ ಸಂಗಣ್ಣ ಕರಡಿ ಗೆಲ್ಲಲು ಕಷ್ಟಪಡಬೇಕಾದೀತು. ಒಂದೊಮ್ಮೆ ಬಿಜೆಪಿ ಒಗ್ಗಟ್ಟಾದರೆ ಆಗ ಕರಡಿ ಕುಣಿತ ಜೋರಾಗಬಹುದು.
ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರೇ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ನಿರಾಕರಿಸಿದ್ದಾರೆ ಎನ್ನುವಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇದೆ ಎಂದರೆ ಫಲಿತಾಂಶವನ್ನು ಮೊದಲೇ ಊಹಿಸಬಹುದು ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಅದಕ್ಕೆ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಒಂದು ಕಾರಣವಾದರೆ, ಪ್ರಧಾನಿ ನರೇಂದ್ರ ಮೋದಿ ಅಲೆ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತರು ಬಿಜೆಪಿ ಪರ ನಿಂತಿರುವುದು ಇನ್ನೆರಡು ಕಾರಣಗಳು. ಈ ಕಾರಣಕ್ಕಾಗಿಯೇ ಶಾಮನೂರು ಕುಟುಂಬ ಸ್ಪರ್ಧೆಗೆ ಹಿಂದೇಟು ಹಾಕಿ, ಹಿಂದುಳಿದ ಸಮುದಾಯದ ಎಚ್.ಬಿ.ಮಂಜಪ್ಪ ಅವರ ಹೆಸರನ್ನು ಹೇಳಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಮಂಜಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಹಣಾಹಣಿ ನಡೆಯುತ್ತಿರುವುದು ಶಾಮನೂರು ಕುಟುಂಬ ಮತ್ತು ಜಿ.ಎಂ.ಸಿದ್ದೇಶ್ವರ ಅವರ ನಡುವೆ. ಶಾಮನೂರು ಅವರೊಂದಿಗೆ ಇರುವ ಸ್ವಲ್ಪ ಪ್ರಮಾಣದ ಲಿಂಗಾಯತ ಮತಗಳ ಜೊತೆ ಹಿಂದುಳಿದ ವರ್ಗಗಳ ಮತ ಕ್ರೋಡೀಕರಣಗೊಂಡರೆ ಮಾತ್ರ ಮಂಜಪ್ಪ ಅವರಿಗೆ ಸ್ವಲ್ಪ ಮಟ್ಟಿಗೆ ಉಸಿರಾಡಲು ಸಾಧ್ಯವಾಗಬಹುದು. ಆದರೆ, ದಾವಣಗೆರೆ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಆರರಲ್ಲಿ ಬಿಜೆಪಿ ಶಾಸಕರಿರುವುದು, ಇದರೊಂದಿಗೆ ಸ್ವಲ್ಪ ಮಟ್ಟಿಗೆ ಹಿಂದುಳಿದ ಸಮುದಾಯದ ಮತಗಳೂ ಬಿಜೆಪಿಯತ್ತ ವಾಲುತ್ತಿರುವುದು ಸಿದ್ದೇಶ್ವರ್ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಒಟ್ಟಿನಲ್ಲಿ, ದಾವಣಗೆರೆ ಲೋಕಸಭೆ ಕ್ಷೇತ್ರ ಬಿಜೆಪಿಗೆ ಸುಲಭದ ತುತ್ತಾಗಲಿದೆ ಎಂಬ ರಾಜಕೀಯ ಪಂಡಿತರ ಮಾತುಗಳು ಎಷ್ಟರಮಟ್ಟಿಗೆ ಸತ್ಯ ಎಂಬುದು ಫಲಿತಾಂಶದ ನಂತರವಷ್ಟೇ ಗೊತ್ತಾಗಬೇಕು.
ಧಾರವಾಡ
ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಬಳಿಕ ಬಿಜೆಪಿಯ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ (ಹುಬ್ಬಳ್ಳಿ ಸೇರಿ) ಸತತ ಮೂರು ಬಾರಿ ಗೆದ್ದಿರುವ ಬಿಜೆಪಿಯ ಪ್ರಹ್ಲಾದ ಜೋಶಿ ಮತ್ತೆ ಗೆಲ್ಲುವ ಕನಸಿನೊಂದಿಗೆ ಕಣದಲ್ಲಿದ್ದರೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಕಳೆದ ಚುನಾವಣೆಯಲ್ಲೂ ಇವರಿಬ್ಬರು ಎದುರಾಳಿಗಳಾಗಿದ್ದರೂ ಜೋಶಿ ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ವಿನಯ್ ಕುಲಕರ್ಣಿ ಲಿಂಗಾಯತರಾಗಿದ್ದರೂ ಆ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಇದಕ್ಕೆ ಕಾರಣ. ಆದರೆ, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಪಾಲ್ಗೊಂಡ ವಿನಯ್ ಕುಲಕರ್ಣಿ ವೀರಶೈವ ಲಿಂಗಾಯತ ಸಮಾಜದಿಂದ ಮತ್ತಷ್ಟು ದೂರವಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರ ಮತಗಳೇ ಪ್ರಮುಖ ಆಧಾರ. ಇದನ್ನೇ ನೆಚ್ಚಿಕೊಂಡು ವಿನಯ್ ಕುಲಕರ್ಣಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ, ಪ್ರಹ್ಲಾದ ಜೋಶಿ ಅವರಿಗೆ ಲಿಂಗಾಯತರ ಬೆಂಬಲದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆಯೂ ಬೆನ್ನಿಗೆ ನಿಂತಿದೆ. ಮೋದಿ ಹೆಸರಲ್ಲೇ ಮತ ಯಾಚಿಸಿ ಗೆಲ್ಲುತ್ತೇನೆ ಎಂದು ಹೇಳಿಕೊಂಡು ಅದೇ ರೀತಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ಜನಸಾಮಾನ್ಯರೊಂದಿಗೆ ಬೆರೆಯುವಲ್ಲಿ ವಿನಯ್ ಕುಲಕರ್ಣಿ ಅವರಿಗಿಂತ ಜೋಶಿ ಮುಂಚೂಣಿಯಲ್ಲಿರುವುದು ಕೂಡ ಪರಿಸ್ಥಿತಿ ಬಿಜೆಪಿ ಪರ ಇರುವಂತೆ ಮಾಡಿದೆ. ಹೀಗಾಗಿಯೇ, ವಿನಯ್ ಕುಲಕರ್ಣಿ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಉಸಿರೆತ್ತದೆ ಸಮಾಜದ ಮತ ಪಡೆಯಲು ಪ್ರಯತ್ನಿಸುತ್ತಿದ್ದು, ಇದು ಯಶಸ್ವಿಯಾದರೆ ಪ್ರಬಲ ಪೈಪೋಟಿ ನಡೆಯಬಹುದು. ಇಲ್ಲವಾದಲ್ಲಿ ಇದು ಕೂಡ ಬಿಜೆಪಿಗೆ ಸುಲಭದ ತುತ್ತಾಗಬಹುದು.
ಉತ್ತರ ಕನ್ನಡ
ಇದು ಕೇಂದ್ರ ಸಚಿವ, ಬಿಜೆಪಿಯ ಫೈರ್ ಬ್ರಾಂಡ್ ಅನಂತ ಕುಮಾರ್ ಹೆಗಡೆ ವರ್ಸಸ್ ಆನಂದ್ ಅಸ್ನೋಟಿಕರ್ ನಡುವಿನ ಪೈಪೋಟಿ. ಏಕೆಂದರೆ, ಜಿಲ್ಲೆಯಲ್ಲಿ ಆಗೊಮ್ಮೆ-ಈಗೊಮ್ಮೆ ಜೆಡಿಎಸ್ ಸ್ವಲ್ಪ ಎಚ್ಚೆತ್ತುಕೊಳ್ಳುವುದು ಬಿಟ್ಟರೆ ನೇರ ಪೈಪೋಟಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ. ಆದರೂ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯಿತು. ಇದರಿಂದ ಅಸಮಾಧಾನಗೊಂಡಿರುವ ಆ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕ, ಸಚಿವ ಆರ್.ವಿ.ದೇಶಪಾಂಡೆ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಅಷ್ಟೇ ಅಲ್ಲ, ಸ್ಥಳೀಯ ಕಾಂಗ್ರೆಸ್ ಮುಖಂಡರಿಂದಲೂ ಜೆಡಿಎಸ್ ಅಭ್ಯರ್ಥಿಗೆ ಸಹಕಾರ ಸಿಗುತ್ತಿಲ್ಲ. ಇನ್ನೊಂದೆಡೆ, ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿಯೂ ಸುದ್ದಿಯಾಗದೆ, ಕೇವಲ ವಿವಾದಾತ್ಮಕ ಹೇಳಿಕೆಗಳಿಂದ ಮಾತ್ರವೇ ಪ್ರಚಾರ ಪಡೆಯುತ್ತಿರುವ ಅನಂತ್ ಕುಮಾರ್ ಹೆಗಡೆ ಈ ಬಾರಿ ಅಷ್ಟೊಂದು ವಿವಾದ ಸೃಷ್ಟಿಸುತ್ತಿಲ್ಲ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲೇ ಮತ ಯಾಚಿಸುತ್ತಿದ್ದಾರೆ. ಹೆಗಡೆ ಅವರು ವಿವಾದಕ್ಕೆ ಎಡೆಮಾಡಿಕೊಡುವ ಹೇಳಿಕೆ ನೀಡದೆ ಇರುವುದು ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರಿಗೆ ಪ್ರಚಾರಕ್ಕೆ ವಿಷಯ ಸಿಗದಂತಾಗಿ ಹಳೆಯ ವಿಚಾರಗಳನ್ನೇ ಕೆದಕಬೇಕಾಗಿದೆ. ಮೇಲಾಗಿ, ಅನಂತಕುಮಾರ್ ಹೆಗಡೆ ಅವರು ಮುಸ್ಲಿಮರನ್ನು ಹೊರತುಪಡಿಸಿ ಇತರೆಲ್ಲ ಜಾತಿಗಳವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಕೂಡ ಮೈತ್ರಿ ಅಭ್ಯರ್ಥಿಗೆ ಪ್ರತಿಕೂಲ ಪರಿಸ್ಥಿತಿ ಉಂಟುಮಾಡಿದೆ. ಇದರ ಮಧ್ಯೆಯೂ ಮೈತ್ರಿ ಗಟ್ಟಿಯಾಗಿ ನಿಂತರೆ ಬಿಜೆಪಿ ಅಭ್ಯರ್ಥಿಗೆ ಸ್ಪರ್ಧೆ ನೀಡಬಹುದು.
ಶಿವಮೊಗ್ಗ
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕ್ಷೇತ್ರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅವರ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿ. ಮಾಜಿ ಶಾಸಕ ಜೆಡಿಎಸ್‌ನ ಮಧು ಬಂಗಾರಪ್ಪ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಇಲ್ಲಿ ಜೆಡಿಎಸ್‌ಗಿಂತ ಕಾಂಗ್ರೆಸ್ ಹೆಚ್ಚು ಬಲ ಹೊಂದಿದ್ದರೂ ಯಡಿಯೂರಪ್ಪ ಎದುರು ಗೆಲ್ಲುವುದು ಕಷ್ಟ ಎಂಬ ಕಾರಣಕ್ಕೆ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಈಡಿಗ ಸಮುದಾಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಾರಣದಿಂದ ಜೆಡಿಎಸ್ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿತು. ಇಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರಾದರೂ ಮಧು ಸಹೋದರ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿರುವುದರಿಂದ ಈ ಮತ ವಿಭಜನೆಯಾಗುತ್ತದೆ. ಜೊತೆಗೆ ಬಿಜೆಪಿಯಲ್ಲೂ ಈಡಿಗ ಸಮುದಾಯದ ಶಾಸಕರಿದ್ದಾರೆ. ಇದರ ಜೊತೆಗೆ ಯಡಿಯೂರಪ್ಪ ಅವರಿಗೆ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಠೆ. ಇದರಿಂದಾಗಿ ರಾಘವೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮ ತಂದೆಯ ಹೆಸರಿನಲ್ಲೇ ಮತ ಯಾಚನೆ ಮಾಡುತ್ತಿದ್ದಾರೆ. ಇಷ್ಟರ ಮಧ್ಯೆಯೂ ಮಧು ಬಂಗಾರಪ್ಪ ಪರವಾಗಿ ಕಾಂಗ್ರೆಸ್ ಕೂಡ ಸ್ವಲ್ಪ ಗಟ್ಟಿಯಾಗಿಯೇ ನಿಂತಿದೆ. ರಾಜ್ಯಾದ್ಯಂತ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಗೊಂದಲ ಇದ್ದರೂ ಶಿವಮೊಗ್ಗದಲ್ಲಿ ಅಷ್ಟೊಂದು ಬಲವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದರ ಪರಿಣಾಮ, ಕ್ಷೇತ್ರದಲ್ಲಿ ಬಿಜೆಪಿ ಮತ್ತು ಮೈತ್ರಿ ಮಧ್ಯೆ ಪ್ರಬಲ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಹಾವೇರಿ
ಹಾವೇರಿ ಮತ್ತು ಗದಗ ಜಿಲ್ಲೆಗಳನ್ನೊಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿಯ ಶಿವಕುಮಾರ ಉದಾಸಿ ಬಿಜೆಪಿಯಿಂದ ಪುನರಾಯ್ಕೆ ಬಯಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಅವರ ಸಮೀಪದ ಬಂಧು ಡಿ.ಆರ್. ಪಾಟೀಲ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಬಳಿಕ ಬಿಜೆಪಿ ಪಾಲಾಗಿದ್ದ ಈ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಕಠಿಣ ಸ್ಪರ್ಧೆ ಕಾಣಿಸುತ್ತಿದೆ. ತಮ್ಮ ಸಂಬಂಧಿಯನ್ನು ಗೆಲ್ಲಿಸಲು ಎಚ್.ಕೆ.ಪಾಟೀಲರು ಟೊಂಕ ಕಟ್ಟಿ ನಿಂತಿದ್ದರೆ, ಡಿ.ಆರ್.ಪಾಟೀಲ್ ಅವರ ಬಗ್ಗೆ ಕ್ಷೇತ್ರದಲ್ಲಿರುವ ಉತ್ತಮ ಅಭಿಪ್ರಾಯವೂ ಕಾಂಗ್ರೆಸ್ ಪಾಲಿಗೆ ಸಮಾಧಾನ ತಂದುಕೊಟ್ಟಿದೆ. ಹಾಗೆಂದು ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರೇನೂ ಪ್ರಚಾರ ಮತ್ತು ಜನಬೆಂಬಲದಲ್ಲಿ ಹಿಂದೆ ಬಿದ್ದಿಲ್ಲ. ಸಂಸದರಾಗಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದು, ಇದೇ ಅವರನ್ನು ರಕ್ಷಿಸಬಹುದು. ಜೊತೆಗೆ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇತರೆಡೆಗಳಿಗಿಂತ ಕೊಂಚ ಹೆಚ್ಚಾಗಿಯೇ ಇದ್ದು, ಇದು ಬಿಜೆಪಿ ಪಾಲಿಗೆ ವರದಾನವಾಗಿದೆ. ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಸಿ.ಎಂ.ಉದಾಸಿ ಅವರಿಗೆ ವೈಯಕ್ತಿಕವಾಗಿ ಸಿಗುವ ಬೆಂಬಲವೂ ಶಿವಕುಮಾರ್ ಪರವಾಗಿದೆ. ಏನೇ ಆದರೂ ಇಬ್ಬರ ಮಧ್ಯೆ ತುರುಸಿನ ಸ್ಪರ್ಧೆ ನಡೆಯುವುದು ಖಚಿತ.