ವಿಶ್ವಾಸಮತಯಾಚನೆ ಸಂಬಂಧ ಇಂದು ಗುರುವಾರ ಮುಂಜಾನೆ 11 ರಿಂದ ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು “ಪಾಯಿಂಟ್ ಆಫ್ ಆರ್ಡರ್( ಕ್ರಿಯಾಲೋಪ) ಗಳದ್ದೇ ವಾರ್ ನಡೆದಿದೆ. ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ,ಎಚ್.ಕೆ.ಪಾಟೀಲ ಮತ್ತು ಕೃಷ್ಣ ಭೈರೇಗೌಡ ಅವರು ಅತೃಪ್ತ 15 ಶಾಸಕರ ಗೈರು ಹಾಜರಿ,ಅವರ ಸದಸ್ಯತ್ವದ ಬಗ್ಗೆ ಕ್ರಿಯಾಲೋಪ ಎತ್ತಿದ್ದಾರೆ. ಚರ್ಚೆ ನಡೆದಾಗ ಕ್ರಿಯಾಲೋಪದ ಮೂಲಕ ಸಭಾಧ್ಯಕ್ಷರ ಗಮನ ಸೆಳೆದು ಸ್ಪಷ್ಟೀಕರಣ ಕೇಳುವದು ಸಾಮಾನ್ಯ.
1980 ರಲ್ಲಿ ರಾಜ್ಯದಲ್ಲಿ ಗುಂಡೂರಾವ್ ಸರಕಾರ. ರಾಜ್ಯ ವಿಧಾನಸಭೆಯಲ್ಲಿ ವಿಷಯವೊಂದರ ಮೇಲೆ ಗಹನವಾದ ಚರ್ಚೆ ನಡೆದಿತ್ತು. ಲಕ್ಷ್ಮೇಶ್ವರದ ಶಾಸಕ, ಕಾಂಗ್ರೆಸ್ಸಿನ ಗೂಳಪ್ಪ ಉಪನಾಳ ಮತ್ತು ಸವದತ್ತಿ ಕಾಂಗ್ರೆಸ್ ಶಾಸಕ ದಿ.ಜಿ.ಕೆ.ಟಕ್ಕೇದ ಒಂದೇ ಕಡೆಗೆ ಕುಳಿತಿದ್ದರು. ದೊಡ್ಡ ಪೇಟಾ, ಅದರಲ್ಲಿ ಎಲೆ ಅಡಿಕೆ ಸುಣ್ಣದ ಕಟ್ಟು ಇರಿಸಿಕೊಂಡಿರುತ್ತಿದ್ದ ಉಪನಾಳ ಅವರು ಅಪ್ಪಟ ಗ್ರಾಮೀಣ ಶೈಲಿಯ , ಹೃದಯವಂತ ಶಾಸಕ. ಸದನದಲ್ಲಿ ತಾವೂ ಏನಾದರೂ ಮಾತನಾಡಿ ಸದನದ ಗಮನ ಸೆಳೆಯಬೇಕೆಂಬ ಆಸೆಯಾಯಿತು. ತಮ್ಮ ಆಸೆಯನ್ನು ಅವರು ಬದಿಗೇ ಕುಳಿತಿದ್ದ ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದ ಟಕ್ಕೇದರ ಕಿವಿಯಲ್ಲಿ ಹೇಳಿಯೇ ಬಿಟ್ಟರು!
ಟಕ್ಕೇದರು ತಮ್ಮ “ಅಮೂಲ್ಯ” ಸಲಹೆ ನೀಡುತ್ತ,” ಗೂಳಪ್ಪ, ನೀನು ಎದ್ದು ನಿಂತು ಪಾಯಿಂಟ್ ಆಫ್ ಆರ್ಡರ್ ” ಎಂದು ಬಿಡು.” ಅದರ ಹೊಡ್ತಾ ನೋಡು” ಎಂದರು.
ಗೂಳಪ್ಪ ಎದ್ದು ನಿಂತು,” ಸಭಾಧ್ಯಕ್ಷರೇ ಪಾಯಿಂಟ್ ಆಫ್ ಅಡರ್ ರ್ ರ್” ಎಂದು ಕೂಗಿ ಬಿಟ್ಟರು! ಸಭಾಧ್ಯಕ್ಷರು,” ಹೇಳ್ರಿ, ಏನು ಹೇಳ್ರಿ” ಎಂದು ಗೂಳಪ್ಪರನ್ನು ಕೇಳಿದರು. ಆದರೆ ಗೂಳಪ್ಪ, ” ಪಾಯಿಂಟ್ ಆಪ್ ಅಡರ್ ಅಡರ್ ಅಡರ್ ” ಎಂದು ಪುನರುಚ್ಛಾರ ಮಾಡತೊಡಗಿದರು. ಇಡೀ ಸದನ ನಗೆಗಡಲದಲ್ಲಿ ಮುಳುಗಿತು. ಮುಖ್ಯಮಂತ್ರಿ ಗುಂಡೂರಾವ್ ಅವರೂ ನಕ್ಕರು. ಅವರಿಗೆ ಗೊತ್ತಾಯಿತು ಇದು ಟಕ್ಕೇದರ ಕಿರಿಕ್ ಎಂದು! ಅಲ್ಲಿಂದ ಟಕ್ಕೇದರನ್ನು ಎಬ್ಬಿಸಿ ಬೇರೆ ಕಡೆಗೆ ಕೂಡಿಸಿದರು. ಟಕ್ಕೇದರು ತಮಗೆಷ್ಟು ಕಲಿಸಿದ್ದರೊ ಅಷ್ಟನ್ನೇ ಗೂಳಪ್ಪ ಹೇಳಿದರು.
ದಿ.ಟಕ್ಕೇದರು ಶಾಸಕರಾಗಿದ್ದಾಗ ಬೆಳಗಾವಿ ಪತ್ರಕರ್ತರೊಂದಿಗೆ ವಾರ್ತಾ ಇಲಾಖೆಯ ವಾಹನದಲ್ಲೇ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ” ಪಾಯಿಂಟ್ ಆಫ್ ಅಡರ್ ” ಪ್ರಸಂಗವನ್ನು ನೆನಪಿಸಿಕೊಳ್ಳುತ್ತಿದ್ದರು.
ಟಕ್ಕೇದ 1978 ರಲ್ಲಿ ಸವದತ್ತಿಯಿಂದ ಶಿವಾನಂದ ಕೌಜಲಗಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಅವರು ಸಂಸ್ಕೃತ ಶ್ಲೋಕಗಳನ್ನು ಕಂಠಪಾಠ ಮಾಡಿದ್ದರು.