ಚುನಾವಣೆ ಬಿಟ್ಟರೆ ಪ್ರಪಂಚದಲ್ಲಿ ಮತ್ತೇನೂ ನಡೆಯುತ್ತಲೇ ಇಲ್ಲ ಎಂಬಂತೆ ಇಡೀ ದೇಶವೇ ಶಾಸಕಾಂಗದ ಈ ಪಂಚವಾರ್ಷಿಕ ಉತ್ಸವದ ಮತ್ತಲ್ಲಿ ಮುಳುಗೇಳುತ್ತಿರುವಾಗ, ನ್ಯಾಯಾಂಗ ಕಳೆದ ವಾರ ಅನಪೇಕ್ಷಿತ ಕಾರಣಗಳಿಗಾಗಿ ಏಕಾಏಕಿ ಸುದ್ದಿ ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪ, ಪ್ರತ್ಯಾರೋಪಗಳು, ನಂತರದ ಬೆಳವಣಿಗೆಗಳು, ಹಿನ್ನೆಲೆಗೆ ಸರಿದಿದ್ದ ಮೀ ಟೂ (Me Too Movement) ಮತ್ತೆ ಸದ್ದು ಮಾಡುವಂತೆ ಮಾಡಿವೆ. ಆದರೆ, ಈ ಬಾರಿ ಮೀ ಟೂ ಪ್ರಕರಣಗಳ ಸತ್ಯಾಸತ್ಯತೆಗಳ ಬಗ್ಗೆ ಈ ಮೊದಲು ಅಲ್ಲಲ್ಲಿ ಕೇಳಿ ಬರುತ್ತಿದ್ದ ಅನುಮಾನಗಳಿಗೆ ಈಗ ಗಟ್ಟಿ ದ್ವನಿ ದೊರಕಿದಂತಾಗಿದೆ.
ವಕೀಲ ಉತ್ಸವ್ ಸಿಂಗ್ ಬೇನ್ಸ್ ಇದು ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ನಡೆಯುತ್ತಿರುವ ಷಡ್ಯಂತ್ರ ಎಂದು ಹೇಳಿಕೆ ನೀಡಿರುವುದು, ಜನರನ್ನು ಈ ಪ್ರಕರಣದ ವಿಷಯದಲ್ಲಿ ಇಬ್ಭಾಗವಾಗಿಸಿದೆ. ಇದರ ಸತ್ಯಾಸತ್ಯತೆಯ ತನಿಖೆ ನಡೆಯುವ ಮೊದಲೇ ಸಿಜೆಐ ನಂತಹ ಅತ್ಯಂತ ಪ್ರಭಾವಿ ವ್ಯಕ್ತಿಗಳ ವಿರುದ್ಧವೇ ಇಂತಹ ಷಡ್ಯಂತ್ರಗಳು ಸಾಧ್ಯ ಎಂದಾದರೆ ಸಾಮಾನ್ಯರ ಪಾಡೇನು? ಲೈಂಗಿಕ ಕಿರುಕುಳ ಆರೋಪಗಳನ್ನು ದ್ವೇಷ ಸಾಧನೆಗೆ ಬಳಸಿಕೊಂಡರೆಗತಿಯೇನು ಎಂಬಂತಹ ಆತಂಕದ ಪ್ರಶ್ನೆಗಳು ಹೆಚ್ಚಾಗುತ್ತಿವೆ. ಇದರ ಜೊತೆಗೆ, ಚುನಾವಣೆಯ ಸಂದರ್ಭದಲ್ಲಿ ಹೊರಬಂದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಅವರಿಗೆ ಸಂಬಂಧಿಸಿದ ಪ್ರಕರಣಗಳೂ ವಿವಿಧ ರೀತಿಯ ಅಭಿಪ್ರಾಯಗಳನ್ನು ರೂಪಿಸುತ್ತಿವೆ. ಹೀಗಾಗಿ, ಮೀ ಟೂ ಅಭಿಯಾನವನ್ನುಲೈಂಗಿಕತೆಯ ಅನೇಕ ಆಯಾಮಗಳ ಅಂದರೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜೈವಿಕ ನಲೆಗಟ್ಟಿನ ಮೇಲೆ ಅದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡದೇ ಹೋದರೆ, ಕೆಲವು ಹುಳುಕುಗಳಿಂದಾಗಿ ಇಡೀ ಅಭಿಯಾನವೇ ನಂಬಿಕೆ ಕಳೆದುಕೊಳ್ಳುವ ಅಪಾಯ ಎದುರಾಗುವ ಸಾಧ್ಯತೆ ಇದೆ.
ಪ್ರಾಣಿ ಪ್ರಪಂಚದ ಲೈಂಗಿಕತೆ, ವಿಕಾಸವಾದದ ಒಂದು ಪ್ರಮುಖ ಅಂಶ. ಮಾನವನೂ ಸೇರಿದಂತೆ ಪ್ರಾಣಿಲೋಕ ಕೆಲವು ನಿರ್ದಿಷ್ಟ ಲೈಂಗಿಕ ವರ್ತನೆಗಳನ್ನುತೋರಿಸುತ್ತದೆ. ಅದರಲ್ಲಿ ಲೈಂಗಿಕ ಸಂಗಾತಿಯನ್ನು ಸೆಳೆಯುವ ಯತ್ನವೂ ಒಂದು. ಬಹುತೇಕ ಎಲ್ಲಾ ಪ್ರಾಣಿ, ಪಕ್ಷಿ, ಕೀಟ ಸಂಕುಲಗಳಲ್ಲೂ ಇದರ ಜವಾಬ್ದಾರಿ ಗಂಡಿನ ಮೇಲಿರುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹೆಣ್ಣು ಜೀವಿಗಳು ಈ ವಿಷಯದಲ್ಲಿ ತುಂಬಾ ಚೂಸಿ (Choosy). ಕೆಲವನ್ನುಹೊರತುಪಡಿಸಿ ಬಹುತೇಕ ಜೀವಿಗಳಲ್ಲಿ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಗರ್ಭ ಧರಿಸುವ ತಾಯಿಯ ಮೇಲೇ ಇರುತ್ತದೆ. ಹೀಗಾಗಿ, ಆಯ್ಕೆಯ ಹಕ್ಕು ಪ್ರಕೃತಿದತ್ತವಾಗಿ ಹೆಣ್ಣಿಗೆ ದೊರೆತಿದೆ. ಮತ್ತೊಂದು ಪ್ರಮುಖ ಕಾರಣವೆಂದರೆ ಗಂಡು ಜೀವಿಗಳಿಗೆ ಅನೇಕ ಲೈಂಗಿಕ ಸಂಗಾತಿಗಳನ್ನು ಹೊಂದುವ ಸೆಳೆತ ಹೆಚ್ಚು. ಹೀಗಾಗಿ, ಹೆಣ್ಣನ್ನು ಆಕರ್ಷಿಸುವ ಹೊಣೆ, ಅನಿವಾರ್ಯತೆ ಗಂಡಿನದಾಗಿದೆ. ಗಂಡು ಜೀವಿಗಳು ಪರಸ್ಪರ ಸ್ಪರ್ಧಿಸಿ ಹೆಣ್ಣನ್ನು ಪಡೆಯುವುದು ಪ್ರಕೃತಿ ಸಹಜ ನಿಯಮ. ಇದೇ ಗಂಡು ನವಿಲಿನ, ಗಂಡು ಸಿಂಹದ ಸೌಂದರ್ಯಕ್ಕೂ, ಜೇನು ನೊಣಗಳ ಕುಣಿತಕ್ಕೂ, ಹಕ್ಕಿಗಳ ಮಧುರವಾದ ಹಾಡಿಗೂ ಕಾರಣ. ವಿಕಾಸವಾದದಲ್ಲಿ ಹೇಳಲಾಗಿರುವ ಈ ಲೈಂಗಿಕ ಆಯ್ಕೆ, ವಂಶವಾಹಿನಿಯನ್ನುಬಲಿಷ್ಟ ಮತ್ತು ಉತ್ತಮಗೊಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.
ಸಾಮಾಜಿಕ ಕಾರಣಗಳಿಂದ ಮಾನವನ ಲೈಂಗಿಕ ವರ್ತನೆಗಳಲ್ಲಿ ಸಾಕಷ್ಚು ಬದಲಾವಣೆಗಳಾಗಿದ್ದರೂ, ಅತ್ಯಂತ ಮೂಲದಲ್ಲಿರುವ, ಜೈವಿಕವಾದ ಈ ಅಂಶ ಮಾತ್ರ ಬದಲಾಗಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಹೆಣ್ಣನ್ನು ಆರಿಸುವ ಆಯ್ಕೆಯ ಅವಕಾಶ ಗಂಡಿಗೆ ದೊರೆತಿದ್ದರೂ, ಮೂಲದಲ್ಲಿನ ವರ್ತನೆ ಬದಲಾಗಿಲ್ಲ ಮತ್ತು ಅದರ ಅನಿವಾರ್ಯತೆಯೂ ಕಡಿಮೆಯಾಗಿಲ್ಲ. ಹೀಗಾಗಿ, ಮದುವೆ ಎಂಬ ಸಾಮಾಜಿಕ ಬಂಧನದ ಒಳಗಾಗಲೀ ಅಥವಾ ಅದರ ಹೊರಗಾಗಲೀ, ದೀರ್ಘ ಸಾಂಗತ್ಯಕ್ಕಾಗಲೀ ಅಥವಾ ಅಲ್ಪ ಸಾಂಗತ್ಯಕ್ಕಾಗಲೀ ಹೆಣ್ಣನ್ನು ಸಮೀಪಿಸುವ, ಆ ಕುರಿತು ಪ್ರಸ್ತಾಪ ಮುಂದಿಡುವ ಕೆಲಸ ಗಂಡಿನದೇ ಎಂಬ ಭಾವನೆ ಇದೆ. ಹೀಗಾಗಿ, ಗಂಡಿನ ಇಂತಹ ವರ್ತನೆಗಳನ್ನು ಜೈವಿಕ ಮತ್ತು ಪ್ರಾಕೃತಿಕ ನೆಲೆಗಟ್ಟಿನ ಮೇಲೆ ಅರ್ಥೈಸುವ ಅಗತ್ಯವಿದೆ. ಕೆಲವು ಮೀ ಟೂ ಪ್ರಕರಣಗಳು ನಿರುಪದ್ರವ ಚಕ್ಕಂದಗಳಂತೆ (flirting) ಕಂಡುಬಂದದ್ದು ಸುಳ್ಳಲ್ಲ. ಈ ಸಂದರ್ಭದಲ್ಲಿ ಆನ್ ಲೈನ್ ಚಾಟ್ ಗಳು, ಮೆಸೇಜ್ ಗಳು ಮೈ ಕೊಡವಿ ಎದ್ದು ಬಂದವು. ಇಂತಹ ಪ್ರಕರಣಗಳಲ್ಲಿ ಹೆಣ್ಣಿನ ಕಡೆಯಿಂದ ಬಲವಾದ ನಿರಾಕರಣೆ ಇರಲಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಹಾಗಿದ್ದರೆ ತಪ್ಪಿದ್ದೆಲ್ಲಿ? ಮಾನವ ಸಾಮಾಜಿಕ ಜೀವಿಯಾಗಿ ನಾಗರೀಕನಾಗಿದ್ದೇನೆ ಎಂದು ಎಷ್ಟೇ ಹೆಮ್ಮೆಪಟ್ಟರೂ ಕೆಲವು ಸಂದರ್ಭದಲ್ಲಿ ಪ್ರಾಣಿಗಳ ನಡವಳಿಕೆಗಳೇ ಹೆಚ್ಚು ನಾಗರಿಕವಾಗಿರುತ್ತದೆ. ಹೆಣ್ಣನ್ನು ಗೆಲ್ಲಲು ಗಂಡುಗಳ ನಡುವೆ ಸ್ಪರ್ಧೆ, ಯುದ್ಧ ನಡೆಯುವುದು ಸಾಮಾನ್ಯವಾದರೂ ಹೆಣ್ಣು ಜೀವಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒಳಪಡಿಸುವುದು ಕೆಲವು ಜೀವಿಗಳಲ್ಲಿ ಮಾತ್ರ ಕಂಡುಬರುತ್ತದೆ. ಅಂದರೆ, ಬಹುತೇಕ ಪ್ರಾಣಿ ಪ್ರಪಂಚ ಈ ವಿಷಯದಲ್ಲಿ ನಾಗರೀಕ ವರ್ತನೆ ತೋರುತ್ತದೆ. ಆದರೆ, ಮಾನವ ಸಮಾಜದ ಪಿತೃ ಪ್ರಧಾನ ವ್ಯವಸ್ಥೆಯಿಂದಾಗಿ, ಲೈಂಗಿಕ ಪ್ರಾಬಲ್ಯತೆ ಅಧಿಕಾರ ಮತ್ತು ಶಕ್ತಿಯ ಸಂಕೇತವಾಗಿ ಬೆಳೆದು ನಿಂತಿದೆ. ಹೀಗಾಗಿ, ಈ ಹಂತದಲ್ಲಿ ಬಲ ಪ್ರಯೋಗ ಯಾವುದೇ ಎಗ್ಗಿಲ್ಲದೆ ಸಂಭವಿಸುವುದೂ ಇದೆ. ತಪ್ಪಿರುವುದು ಇಲ್ಲಿ. ಹೆಣ್ಣನ್ನು ಸಮೀಪಿಸುವ ಯತ್ನ ತಪ್ಪಲ್ಲವಾದರೂ, ಆಕೆಯ ಸ್ಪಷ್ಟ ನಿರಾಕಣೆಯ ನಂತರವೂ ಮುಂದುವರಿಯುವುದು ತಪ್ಪು.
ನಾನು ಸ್ಪಷ್ಚ ನಿರಾಕರಣೆ ಎಂದದಕ್ಕೆ ಅತ್ಯಂತ ಮುಖ್ಯವಾದ ಕಾರಣವಿದೆ. ನಾವು ಸಮಾಜವನ್ನು ಯಾವ ರೀತಿ ಒಗ್ಗಿಸಿದ್ದೇವೆಂದರೆ ಇಂತಹ ವಿಷಯದಲ್ಲಿ ಹೆಣ್ಣಿನ “ನೋ” ವನ್ನು, ಯಾವಾಗಲೂ “ನೋ” ಎಂಬ ಅರ್ಥದಲ್ಲೇ ಪರಿಗಣಿಸಲಾಗುವುದಿಲ್ಲ. ಒಂದು ಹೆಣ್ಣಿನ ಹಿಂದೆ ಬಿದ್ದಿರುವ ಗಂಡು ತನ್ನ ಓಲೈಕೆಯ ಯತ್ನದಲ್ಲಿ ಎದುರಾಗುವ ಹಲವು ನಿರಾಕಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ನಮ್ಮ ಸಿನಿಮಾಗಳಲ್ಲಿ ಹೀರೋಗಳು, ಒಲ್ಲೆ ಎನ್ನುವ ನಾಯಕಿಯ ಮನ ಗೆಲ್ಲುವ ಯತ್ನಗಳು ಹಲವು ವೇಳೆ ಕಿರುಕುಳದಂತೆಯೇ ಕಾಣುತ್ತದೆ. ಆದರೂ, ಕೊನೆಗೆ ನಾಯಕಿ ನಾಯಕನಿಗೇ ಒಲಿಯುತ್ತಾಳೆ. ಇದು ನೀಡುವ ಅಪಾಯಕಾರಿ ಸಂದೇಶದ ಬಗ್ಗೆ ಯೋಚಿಸುವ ಜೊತೆಗೆ ಹೆಣ್ಣು ಮತ್ತು ಗಂಡುಗಳನ್ನು ನಾವು ಬೆಳೆಸುವ ರೀತಿಯ ಬಗ್ಗೆಯೂ ಚಿಂತಿಸಬೇಕಿದೆ. ಕಾರಣ, ಬಹುತೇಕ ಸಂದರ್ಭಗಳಲ್ಲಿ ಹೆಣ್ಣಿನ ನಿರಾಕರಣೆ ಮೇಲ್ಮಟ್ಟದ್ದು ಮಾತ್ರವೇ ಆಗಿರುತ್ತದೆ ಎಂಬುದು ಕೂಡ ಸತ್ಯವೇ.
ಗಂಡಿನ ಪ್ರಸ್ತಾವನೆಯನ್ನು ಕೂಡಲೇ ಒಪ್ಪಿಕೊಳ್ಳುವುದು ಹೆಣ್ಣಿಗೆ ತಕ್ಕುದಲ್ಲ, ಇಷ್ಚವಿದ್ದರೂ, ಒಂದಷ್ಚು ಬಿಂಕ ಪ್ರದರ್ಶಿಸಿ, ಎರಡು ಬಾರಿ ನಿರಾಕರಿಸಿಯೇ ಒಪ್ಪಬೇಕು ಎಂಬುದು ಕುಟುಂಬ, ಸಮಾಜ ಪರೋಕ್ಷವಾಗಿ ಹೆಣ್ಣಿಗೆ ಹೇಳಿಕೊಡುತ್ತದೆ. ಇದು ಹೆಣ್ಣಿನ ಸಹಜ ಲಕ್ಷಣ, ನಾಚಿಕೆ ಎಂದೇ ಬಿಂಬಿಸಲಾಗುತ್ತದೆ. ಹೀಗಾಗಿ, ಬೇಡ ಎನ್ನುವುದು ಎಷ್ಟೋ ಬಾರಿ ನಕಾರಾತ್ಮಕವಾಗಿರದೆ ಒಪ್ಪಿಗೆಯ ಹೊರ ಹೊದಿಕೆಯಾಗಿರುತ್ತದೆ. ಇದರಿಂದಾಗಿ ಸರಳವಾದ ಅರ್ಥವಿರುವ ಒಂದು ಪದ ಎಷ್ಟು ಕ್ಲಿಷ್ಟಕರವಾದ ಅರ್ಥ ಪಡೆದುಕೊಳ್ಳುತ್ತದೆ ಎಂದರೆ, ನೋ ಎಂಬುದರ ಹಿಂದಿರುವ ಭಾವ, ಪರಿಸ್ಥಿತಿ, ತೀವ್ರತೆಗಳನ್ನುಅವಲಂಬಿಸಿ ಅದರ ಅರ್ಥ ಬದಲಾಗುತ್ತದೆ. ವಿಪರ್ಯಾಸವೆಂದರೆ, ಇವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಸೂಕ್ಷ್ಮತೆ ಕೆಲವು ಗಂಡುಗಳಿಗೆ ಇರುವುದಿಲ್ಲ. ಅಥವಾ ಕೆಲವರು ಅರ್ಥವಾದರೂ ಅದನ್ನು ಒಪ್ಪಿಕೊಂಡು ಗೌರವಯುತವಾಗಿ ಹಿಂದೆ ಸರಿಯುವುದಿಲ್ಲ. ಮೀ ಟೂ ಪ್ರಕರಣಗಳು ಸಂಭವಿಸುವುದು ಹೀಗೆ.
ಇನ್ನೂ ಹಲವರು, ಅತ್ಯಾಚಾರದ ಮಟ್ಟಕ್ಕೇರಿದರೆ ಮಾತ್ರ ಗಂಭೀರ ಪ್ರಕರಣ ಇಲ್ಲವಾದರೆ ದೊಡ್ಡ ಸಂಗತಿಯಲ್ಲ ಎಂಬಂತೆ ಮಾತನಾಡುವುದಿದೆ. ಆದರೆ, ಇದು ದೈಹಿಕವಾಗಿಯೇ ಇರಬೇಕು ಎಂದೇನಿಲ್ಲ. ಮಾನಸಿಕವಾಗಿ, ಭಾವನಾತ್ಮಕವಾಗಿ ಕಿರಿಕಿರಿ ಉಂಟುಮಾಡಿದರೂ ಅದು ಕಿರುಕುಳವೇ ಎಂಬುದನ್ನು ನಾವು ಅರಿಯಬೇಕು. ಏಕೆಂದರೆ, ಈ ಪ್ರಕರಣಗಳಲ್ಲಿ ಆಪಾದಿತರಾಗಿರುವವರು ಪ್ರಭಾವಶಾಲಿಗಳು. ಅವರು ತಮ್ಮ ಸ್ಥಾನದ ಬಲವನ್ನು ಯಾವುದೇ ರೀತಿಯಲ್ಲಾಗಲೀ ದುರುಪಯೋಗಪಡಿಸಿಕೊಂಡಿದ್ದರೂ ಅದು ತಪ್ಪೇ. ಮತ್ತು ಅವರು ಪ್ರಭಾವಶಾಲಿಗಳು ಎಂಬ ಕಾರಣಕ್ಕಾಗಿಯೇ ಹೆದರಿ ಮೌನವಾಗಿದ್ದವರು ಎಷ್ಟೋ ವರ್ಷಗಳ ನಂತರ ಮಾತನಾಡಿದಾಗ ಅದನ್ನು ಪ್ರಶ್ನಿಸುವುದೂ ಕೂಡ ತಪ್ಪೇ. ತಮ್ಮ ವೃತ್ತಿ ಜೀವನ, ವೈಯಕ್ತಿಕ ಜೀವನ, ಕೌಟುಂಬಿಕ ಜೀವನಗಳನ್ನುಉಳಿಸಿಕೊಳ್ಳಲು ಮೌನವಾಗಿದ್ದರೆ ಅದು ಸಂತ್ರಸ್ತೆಯ ತಪ್ಪಲ್ಲ. ಆಕೆ, ಮೌನವಾಗಿರುತ್ತಾಳೆ, ಬೇರೆ ಮಾರ್ಗವಿಲ್ಲ ಎಂಬ ಅಪಾದಿತನ ದಾರ್ಷ್ಟ್ಯತನದ ಬಗ್ಗೆ ನಾವು ಇಲ್ಲಿ ಮುಖ್ಯವಾಗಿ ಯೋಚಿಸಬೇಕು. ಇಲ್ಲಿ ಸಂತ್ರಸ್ತರು ಹೆಣ್ಣಾದರೂ, ಗಂಡಾದರೂ ಇದು ಅನ್ವಯಿಸುತ್ತದೆ.
ಹೆಣ್ಣು ತನ್ನ ಲೈಂಗಿಕತೆಯ ಬಗ್ಗೆ ಸ್ವಲ್ಪಮಟ್ಟಿನ ಮುಕ್ತತೆ ಬೆಳೆಸಿಕೊಳ್ಳುತ್ತಿರುವುದು ತೀರಾ ಇತ್ತೀಚೆಗೆ. ಆಕೆಯಲ್ಲಿನ ಹಿಂಜರಿಕೆ, ನಾಚಿಕೆ, ಅಂಜಿಕೆ ಕಡಿಮೆಯಾಗಿಲ್ಲ. ಸಧ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ಗಂಡು ಸಾಧಿಸಿರುವ ಮಟ್ಟಿನ ಲೈಂಗಿಕ ಸ್ವಾತಂತ್ರ್ಯ ಹೆಣ್ಣಿಗೆ ಕನಸಿನ ಮಾತು. ಮತ್ತು ಅದು ಜೈವಿಕವಾಗಿಯೂ ಹೆಣ್ಣಿಗೆ ತೀರಾ ಸಹಜವಾದದ್ದೂ ಅಲ್ಲ. ಸಂಬಂಧವೊಂದನ್ನುಮೊಳೆಯಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಗಂಡೇ ಮೊದಲ ಹೆಜ್ಜೆ ಇಡಬೇಕಾಗುತ್ತದೆ ಮತ್ತು ಆ ವಿಷಯದಲ್ಲಿ ಪ್ರಯತ್ನ ಮಾಡುವುದು ಗಂಡಿಗೆ ಪ್ರಾಕೃತಿಕ ಮತ್ತು ಸಾಮಾಜಿಕ ಅನಿವಾರ್ಯತೆ ಎಂಬುದು ದೊಡ್ಡ ಸತ್ಯ. ಈ ಸತ್ಯವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಮೀ ಟು ಪ್ರಕರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಗಂಡಿನ ಎಲ್ಲಾ ಪ್ರಯತ್ನಗಳನ್ನುಸಾರಸಗಾಟಾಗಿ ಮೀ ಟೂ ಗುಂಪಿಗೆ ಸೇರಿಸುವುದು ಒಂದು ರೀತಿ ಅನಾಹುತಕಾರಿ ಎಂದರೆ ತಪ್ಪಲ್ಲ. ಹೆಣ್ಣಿಗೆ “ನೋ” ಎಂಬುದನ್ನು ನೇರವಾಗಿ ಸ್ಪಷ್ಚತೆಯೊಂದಿಗೆ ಬಳಸಲು ಹೇಳಿಕೊಡುವುದು ಮತ್ತು ಗಂಡಿಗೆ ಅದನ್ನು ಗೌರವಿಸಲು ಹೇಳಿಕೊಡುವುದರಿಂದ ಮಾತ್ರ ಕಿರುಕುಳಗಳ ವ್ಯಾಪ್ತಿಗೆ ಬಾರದ ಪ್ರಕರಣಗಳಲ್ಲೂ ಗಂಡುಗಳು ಅಪಾದಿತರಾಗುವುದನ್ನು ತಪ್ಪಿಸಬಹುದು.
ಒಟ್ಟಿನಲ್ಲಿ, ಕೆಲವು ಪ್ರಕರಣಗಳನ್ನು ಮುಂದಿಟ್ಟುಕೊಂಡು ಹೆಣ್ಣಿಗೆ ದನಿ ಕೊಟ್ಟ ಇಡೀ ಅಭಿಯಾನವನ್ನೇ ದುರ್ಬಲಗೊಳಿಸುವುದು ಹಾಗು ಮೀ ಟೂ ಪ್ರಕರಣಗಳಲ್ಲಿ ಹೆಸರು ಕಾಣಿಸಿಕೊಂಡ ತಕ್ಷಣ ತೀರ್ಪು ನೀಡಿ ತೀವ್ರವಾಗಿ ಅವಮಾನಿಸುವುದು ಎರಡೂ ದೊಡ್ಡ ತಪ್ಪು. ಇದರ ಪರಿಹಾರ ಇರುವುದು ಮೇಲೆ ಹೇಳಿದಂತಹ ಒಟ್ಟಾರೆ ಸಾಮಾಜಿಕ ಮನಸ್ಥಿತಿಯ ಬದಲಾವಣೆಯಲ್ಲಿ ಮಾತ್ರ.
ಅಂಕಣಕಾರರು ಹವ್ಯಾಸಿ ಪತ್ರಕರ್ತೆ