ಸಂಸತ್ತಿನಲ್ಲಿ ವಾಗ್ದಂಡನೆ ನಡೆಸುವ ಸಂದರ್ಭದಲ್ಲಿ ಯಾವ್ಯಾವ ಸಂಸದರು ಅನುಮೋದಿಸುತ್ತಾರೆ ಮತ್ತು ಯಾವ್ಯಾವ ಸಂಸದರು ವಾಗ್ದಂಡನೆಗೆ ನೀಡಿದ್ದ ಬೆಂಬಲ ವಾಪಸು ಪಡೆದರು ಎಂಬ ಮಾಹಿತಿಯನ್ನು ಆರ್‌ಟಿಐ ವ್ಯಾಪ್ತಿಯಡಿ ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ ತೀರ್ಪು ನೀಡಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್ (ನಿವೃತ್ತ) ನ್ಯಾಯಮೂರ್ತಿ ಸಿ ವಿ ನಾಗಾರ್ಜುನ ರೆಡ್ಡಿ ವಾಗ್ದಂಡನೆ ಸಂಬಂಧ ಈ ಮಾಹಿತಿ ಕೋಡಿ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಇತರ ನ್ಯಾಯಮೂರ್ತಿಗಳು ವಿಚಾರಣೆ ನಡೆಸುವ ಕೇಸುಗಳಲ್ಲಿ ಅನಗತ್ಯ ಮಧ್ಯಪ್ರವೇಶ, ಜಾತಿ ನಿಂದನೆ, ಕಿರಿಯ ಸಿವಿಲ್ ನ್ಯಾಯಾಧೀಶ ಸಂಕು ರಾಮಕೃಷ್ಣ ಎಂಬುವವರಿಗೆ ಜೀವಬೆದರಿಕೆ ಸೇರಿದಂತೆ ಹಲವು ಆರೋಪಗಳು ಇವರ ಮೇಲಿದ್ದವು, ಈಗಲೂ ಇವೆ.
ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ವಾಗ್ದಂಡನೆ ಮಂಡಿಸುವ ಪ್ರಸ್ತಾಪವಾಗಿತ್ತು. ಇದಕ್ಕೆ 2016ರ ಡಿಸೆಂಬರ್ 5ರಂದು 61 ಮಂದಿ ರಾಜ್ಯಸಭಾ ಸದಸ್ಯರು ಅನುಮೋದನೆ ನೀಡಿದ್ದರು. ಆದರೆ, ಇವರಲ್ಲಿ 19 ಮಂದಿ ಅನುಮೋದನೆ ವಾಪಸು ಪಡೆದ ಹಿನ್ನೆಲೆಯಲ್ಲಿ ವಾಗ್ದಂಡನೆ ನಡೆದಿರಲಿಲ್ಲ. ಈ ಪ್ರಕರಣ ಮತ್ತೆ ಸದ್ದು ಮಾಡಿದ್ದು 2017ರ ಮೇ 25ರಂದು 60 ಮಂದಿ ರಾಜ್ಯಸಭಾ ಸದಸ್ಯರು ಇದೇ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆಗೆ ಬೆಂಬಲ ಸೂಚಿಸಿದಾಗ.
ಬಹುತೇಕ ಎಲ್ಲರ ನೆನಪಿನಿಂದ ಜಾರಿದ್ದ ಈ ಪ್ರಕರಣವು ಮಾಹಿತಿ ಆಗೋಗಕ್ಕೆ ಸಲ್ಲಿಕೆಯಾಗಿದ್ದ ದೂರೊಂದರ ಪರಿಣಾಮ ಮತ್ತೆ ಜೀವ ಪಡೆದಿದೆ. ಆದರೆ, ಅರ್ಜಿಯನ್ನು ತಳ್ಳಿಹಾಕಿರುವ ಮಾಹಿತಿ ಆಯೋಗ, ವಾಗ್ದಂಡನೆ ಸಂಬಂಧ ರಾಜ್ಯಸಭಾ ಸದಸ್ಯರ ಕುರಿತು ಯಾವುದೇ ಮಾಹಿತಿ ನೀಡುವುದು ಆರ್‌ಟಿಐ ವ್ಯಾಪ್ತಿಯಲ್ಲಿ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದೆ.
ಮಾಹಿತಿ ನಿರಾಕರಣೆಗೆ ಆಯೋಗ ನೀಡಿರುವ ಕಾರಣ ಕೂಡ ಗಮನಾರ್ಹ: “ವಾಗ್ದಂಡನೆಗೆ ಅನುಮೋದಿಸುವುದು ಅಥವಾ ಬೆಂಬಲ ಹಿಂಪಡೆದುಕೊಳ್ಳುವುದು ಕೂಡ ಸಂಸದರ ಸಂಸದೀಯ ಕಾರ್ಯಕಲಾಪಗಳ ವ್ಯಾಪ್ತಿಗೆ ಒಳಪಡುತ್ತದೆ. ಒಂದು ವೇಳೆ ಈ ಮಾಹಿತಿ ನೀಡಿದ್ದೇ ಆದರೆ, ಸಂಸದರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಿದ ಹಾಗಾಗುತ್ತದೆ. ಯಾವುದೇ ಸಂಸದರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡುವುದು ಅಪರಾಧ. ಜೊತೆಗೆ, ಭವಿಷ್ಯದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಕೂಡ ದುಸ್ತರ ಆಗಬಹುದು. ಹಾಗಾಗಿ ಅಂಥ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ.”
ಈ ವಾಗ್ದಂಡನೆ ಪ್ರಕರಣದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು ಎಸ್ ಮಲ್ಲೇಶ್ವರ ರಾವ್ ಎಂಬುವವರು. ನ್ಯಾ.ಸಿ ವಿ ನಾಗಾರ್ಜುನ ರೆಡ್ಡಿ ಅವರ ವಿರುದ್ಧ 2016ರಲ್ಲಿ ನಡೆಸಲು ಉದ್ದೇಶಿಸಿದ್ದ ವಾಗ್ದಂಡನೆಗೆ ರಾಜ್ಯಸಭೆಯ ಒಟ್ಟು ಎಷ್ಟು ಮಂದಿ ಸಹಿ ಮಾಡುವ ಮೂಲಕ ಅನುಮೋದನೆ ನೀಡಿದ್ದರೋ ಆ ಸದಸ್ಯರ ವಿವರ ಹಾಗೂ ಬೆಂಬಲ ವಾಪಸು ಪಡೆದ 19 ಮಂದಿ ಸದಸ್ಯರ ವಿವರವನ್ನು ರಾಜ್ಯವಾರು ವಿಭಾಗ ಮಾಡಿ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಈ ಕುರಿತ ಮಾಹಿತಿ ನೀಡುವಂತೆ ಆಯೋಗವು ರಾಜ್ಯಸಭಾ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು. ಆದರೆ ಸಚಿವಾಲಯವು ಮಾಹಿತಿ ನಿರಾಕರಿಸಿತ್ತು ಮತ್ತು ಈ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಮಾಹಿತಿ ಪ್ರಸಾರ/ ಪ್ರಕಟಣೆ ಕಂಡಿದೆ ಎಂಬ ಉತ್ತರ ನೀಡಿತ್ತು. ನಂತರದಲ್ಲಿ ಸಚಿವಾಲಯದ ಬೇಜವಾಬ್ದಾರಿ ಉತ್ತರವನ್ನು ಉಲ್ಲೇಖಿಸಿ ಮಲ್ಲೇಶ್ವರ ರಾವ್ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಚಿತ್ರ: ಕಡಪ ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನ್ಯಾ.ನಾಗಾರ್ಜುನ ರೆಡ್ಡಿ (ಮಧ್ಯ)