“ಅರ್ಹ ವ್ಯಕ್ತಿಗಳೇ ಇಲ್ಲ ಎಂಬುದು ಕಾಳಜಿಯ ವಿಷಯವಲ್ಲ. ದೇಶದಲ್ಲಿ ಎಷ್ಟೋ ಮಂದಿ ಪರಿಣಿತ ವ್ಯಕ್ತಿಗಳಿದ್ದಾರೆ. ಆದರೆ, ಅರ್ಹ ವ್ಯಕ್ತಿಗಳನ್ನು ಹುಡುಕಿ ಜವಾಬ್ದಾರಿ ವಹಿಸುವ ಇಚ್ಛಾಶಕ್ತಿಯ ಕೊರತೆಯಿಂದ ಪ್ರಮುಖ ಹುದ್ದೆಗಳು ಪಟ್ಟಭದ್ರ ಹಿತಾಸಕ್ತಿಯ ಸಂಪರ್ಕವಿರುವ ವ್ಯಕ್ತಿಗಳ ಪಾಲಾಗುತ್ತಿದೆ.’’ – ಇದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧ್ಯಕ್ಷರನ್ನು ಆರಿಸುವ ಪ್ರಕ್ರಿಯೆಯ ಕುರಿತು 2017ರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ಮಾಲಿನ್ಯ ಮಂಡಳಿಗೆ ಕಳೆದ ಮೂರು ತಿಂಗಳಲ್ಲಿ ಎರಡನೇ ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಎರಡೂ ಅಭ್ಯರ್ಥಿಗಳು ಆ ಸ್ಥಾನಕ್ಕೆ ಅರ್ಹರೋ ಅಲ್ಲವೋ ಎಂಬುದು ಸದ್ಯಕ್ಕೆ ಮೊದಲ ಆದ್ಯತೆಯ ವಿಷಯವಲ್ಲ. ಆದರೆ, ಎರಡೂ ವ್ಯಕ್ತಿಗಳ ಆಯ್ಕೆಯಲ್ಲಿ ಸರ್ಕಾರದ ಮುಂದೆ ಇದ್ದಿದ್ದು ದಿನದಿಂದ ದಿನಕ್ಕೆ ಶಿಥಿಲದತ್ತ ಸಾಗುತ್ತಿರುವ ಪರಿಸರ, ಮಾಲಿನ್ಯ ಸಂಬಂಧ ನಿರ್ಧಾರಗಳನ್ನು ಸರಿಪಡಿಸುವ ಉದ್ದೇಶ ಮಾತ್ರ ಅಲ್ಲವೇ ಅಲ್ಲ ಎಂಬುದು ಸುಸ್ಪಷ್ಟ.
ಇದೀಗ (ಗುರುವಾರ 20-06-2019) ಮಾಲಿನ್ಯ ಮಂಡಳಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಡಾ. ಕೆ. ಸುಧಾಕರ್ ಚಿಕ್ಕಾಬಳ್ಳಾಪುರ ಕ್ಷೇತ್ರದ ಶಾಸಕರು. ಮಂಡಳಿ ಅಧ್ಯಕ್ಷರಾಗುವುದಕ್ಕೆ ಅವರಲ್ಲಿರುವ ಹೆಚ್ಚಿನ ಗುಣವಿಶೇಷಗಳೆಂದರೆ, ಅವರು ಎಂಬಿಬಿಎಸ್ ವೈದ್ಯರು ಹಾಗೂ ಪರಿಸರ ರಕ್ಷಣೆ ಸಂಬಂಧ ಅವರ ಕ್ಷೇತ್ರದಲ್ಲಿ ಬಹಳಷ್ಟು ಕಾಳಜಿ ತೋರಿದ್ದಾರೆ ಎಂಬುದು. ಇವರಿಗೂ ಮೊದಲು ಸಮ್ಮಿಶ್ರ ಸರ್ಕಾರ ಮಾರ್ಚ್ 5, 2019ರಂದು ಮಾಲಿನ್ಯ ಮಂಡಳಿ ಅಧ್ಯಕ್ಷರಾಗಿ ನಿಯೋಜನೆಗೊಳಿಸಿದ್ದು ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ (IFS) ಸಿ. ಜಯರಾಂ ಅವರನ್ನು. ಸರಿಸುಮಾರು ಮೂರು ತಿಂಗಳು ಅಧ್ಯಕ್ಷರಾಗಿದ್ದ ಜಯರಾಂ ಅವರ ಸ್ಥಾನದಲ್ಲಿ ಇದೀಗ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆನ್ನಲಾದ ಸುಧಾಕರ್ ಅವರನ್ನು ತಂದು ಕೂರಿಸಿ ಸಮಾಧಾನಪಡಿಸಲಾಗಿದೆ. ಜಯರಾಂ ಅವರನ್ನು ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಿಯುಕ್ತಿಗೊಳಿಸಿದಾಗ, ಸುಧಾಕರ್ ಪಕ್ಷ ತೊರೆಯುವ ಮಟ್ಟಕ್ಕೆ ಹೇಳಿಕೆಗಳನ್ನು ನೀಡಿದ್ದರು.
ಮಾಲಿನ್ಯ ಮಂಡಳಿ ಅಧ್ಯಕ್ಷರ ಆಯ್ಕೆ ಮತ್ತು ಕೋರ್ಟ್ ಆದೇಶಗಳು:
ಹಲವಾರು ರಾಜ್ಯಗಳಲ್ಲಿನ ಮಾಲಿನ್ಯ ಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿನ ನಿಯಮ ಉಲ್ಲಂಘನೆ ಅರ್ಜಿಗಳನ್ನು ಒಟ್ಟುಗೂಡಿಸಿ ರಾಷ್ಟ್ರೀಯ ಹಸಿರು ಪೀಠ (National Green Tribunal) ಸುದೀರ್ಘ ವಿಚಾರಣೆ ನಡೆಸಿತ್ತು. ಆಗಸ್ಟ್ 24, 2016ರಂದು ಈ ಬಗ್ಗೆ ಆದೇಶ ನೀಡಿದ ಪೀಠ ಹೆಚ್ಚಿನ ರಾಜ್ಯಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದುಗೊಳಿಸಿತ್ತು. ಅಲ್ಲದೇ, ಮಾಲಿನ್ಯ ಮಂಡಳಿಗಳ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಯಲ್ಲಿ ಅನುಸರಿಸಲೇಬೇಕಾದ ನಿಯಮಗಳನ್ನು ರೂಪಿಸಿತ್ತು. ಆದರೆ, ಈ ಆದೇಶದ ವಿರುದ್ಧ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದವು.
ಸೆಪ್ಟೆಂಬರ್ 2017 ರಂದು ಈ ಮನವಿಗಳ ಬಗ್ಗೆ (Civil Appeal 1359/2017) ಆದೇಶ ನೀಡಿದ ಸುಪ್ರೀಂ ಕೋರ್ಟ್, ಮಂಡಳಿಗೆ ಅಧ್ಯಕ್ಷರನ್ನು ನಿಯುಕ್ತಿಗೊಳಿಸುವಲ್ಲಿ ಹಸಿರು ಪೀಠ ನೀಡಿದ ನಿರ್ದೇಶನಗಳನ್ನು ರದ್ದುಗೊಳಿಸಿತು. ಆದರೆ, 6 ತಿಂಗಳೊಳಗೆ ಅಧ್ಯಕ್ಷರ ನೇಮಕಾತಿಗೆ ಸ್ಪಷ್ಟ ನಿಯಮಗಳನ್ನು ರೂಪಿಸುವಂತೆ ಆದೇಶ ನೀಡಿತು.

ಈ ಆದೇಶದಲ್ಲಿ ಸುಪ್ರೀಂ ಕೋರ್ಟ್ ಎಂಜಿಕೆ ಮೆನನ್ ಸಮಿತಿ ವರದಿಯನ್ನು ಹಲವಾರು ಕಡೆಗಳಲ್ಲಿ ಉಲ್ಲೇಖಿಸಿದೆ. 2003ರಲ್ಲಿ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು (Supreme Court Monitored Committee) ರಚಿಸಿ, ಮೆನನ್ ಸಮಿತಿ ವರದಿಯಂತೆ ಮಾಲಿನ್ಯ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ನಡೆಯುವಂತೆ ನೋಡಿಕೊಳ್ಳುವ ಕಾರ್ಯ ನೀಡಿತ್ತು.
ನೇಮಕಾತಿ ಹೇಗೆ ನಡೆಯಬೇಕು ?
ಎರಡು ಕಾಯ್ದೆಗಳ ಅಡಿಯಲ್ಲಿ ಮಾಲಿನ್ಯ ಮಂಡಳಿ ಅಧ್ಯಕ್ಷರ ನೇಮಕಾತಿ ನಡೆಯುತ್ತದೆ – ಒಂದು Water Act 1974, ಇನ್ನೊಂದು Air Act 1981. ಈ ಎರಡೂ ಕಾಯ್ದೆಗಳ ಧ್ಯೇಯೋದ್ಧೇಶಗಳ ಪ್ರಕಾರ ಮಾಲಿನ್ಯ ಮಂಡಳಿಯ ಅಧ್ಯಕ್ಷರಾಗುವವರು ಪರಿಸರ ರಕ್ಷಣೆ ಸಂಬಂಧ ವಿಶೇಷ ಜ್ಞಾನ ಹೊಂದಿರಬೇಕು ಮತ್ತು ಅಂತಹ ಸಂಸ್ಥೆಗಳಲ್ಲಿ ಮೊದಲು ಕೆಲಸ ಮಾಡಿರುವ ಅನುಭವ ಹೊಂದಿರಬೇಕು.
ಈ ಬಗ್ಗೆ ಒಂದು ಹೆಜ್ಜೆ ಮುಂದೆ ಸಾಗಿದ್ದ ಎಂಜಿಕೆ ಮೆನನ್ ಸಮಿತಿ, ಸ್ವಾಯತ್ತೆಯನ್ನು ರಕ್ಷಿಸುವ ದೃಷ್ಟಿಯಿಂದ ಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪವೇ ಇರಬಾರದು ಎಂದಿತ್ತು. ಹೀಗಾಗಿ, ಅಧ್ಯಕ್ಷರ ನೇಮಕಾತಿಯ ನಂತರವೂ ಮಂಡಳಿಯ ಕಾರ್ಯವೈಖರಿಯು ರಾಜಕೀಯ ಹಸ್ತಕ್ಷೇಪದಿಂದ ಹೊರತಾಗಿರಬೇಕು ಎಂದೂ ಹೇಳಿತ್ತು. ಮಂಡಳಿ ಅಧ್ಯಕ್ಷರ ಕಾರ್ಯಾವಧಿ ಐದು ವರ್ಷಗಳದ್ದಾಗಿರಬೇಕು ಎಂದು ಸಮಿತಿ ಹೇಳಿತ್ತು.
ಇವೆಲ್ಲಾ ಅಂಶಗಳನ್ನು ಗಮನದಲ್ಲಿರಿಸಿಯೇ ಸುಪ್ರೀಂ ಕೋರ್ಟ್ ತನ್ನ ಸೆಪ್ಟೆಂಬರ್ 2017 ರ ಆದೇಶದಲ್ಲಿ ರಾಜ್ಯ ಸರ್ಕಾರಗಳಿಗೆ ನಿಯಮ ರೂಪಿಸಲು 6 ತಿಂಗಳ ಗಡುವು ವಿಧಿಸಿತ್ತು. ಮತ್ತೆಯೂ ರಾಜಕೀಯ ಪ್ರೇರಿತ ನೇಮಕಾತಿ ನಡೆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸ್ವೀಕರಿಸುವುದಾಗಿ ಎಚ್ಚರಿಸಿತ್ತು. “ಸರ್ಕಾರಗಳ ಕ್ಯಾರ್ ಲೆಸ್ ಪ್ರವೃತ್ತಿಯಿಂದ ದೊಡ್ಡ ನಷ್ಟ ಅನುಭವಿಸುವುದು ದೇಶವಾಸಿಗಳು ಹಾಗೂ ಪರಿಸರ. ಕಾನೂನು ಹಾಗೂ ಪರಿಸರದ ಬಗೆಗಿನ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿಯೇ ಹಸಿರು ಪೀಠ ತಾನೇ ನಿಯಮ ರೂಪಿಸುವಲ್ಲಿ ಮುಂದಾಗಿದೆ. ಆದರೆ, ನಿಯಮಗಳನ್ನು ರೂಪಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು. ಹೀಗಾಗಿ, ರಾಜ್ಯ ಸರ್ಕಾರಗಳು ಈ ಕೋರ್ಟ್ ಹೇಳಿದಂತೆ, ವಿವಿಧ ಸಮಿತಿಗಳು ಸಲಹೆ ನೀಡಿದಂತೆ, ನೇಮಕಾತಿ ನಿಯಮಗಳನ್ನು ರೂಪಿಸಬೇಕು,’’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಈಗ ಆಗಿರುವುದೇನು?
ಈಗ ರಾಜ್ಯ ಸರ್ಕಾರದ ನಿರ್ಧಾರ ಸುಪ್ರೀಂ ಕೋರ್ಟ್ ನಿರ್ದೇಶನದ ಪೂರ್ಣ ತದ್ವಿರುದ್ಧ ಎಂಬುದಕ್ಕೆ ಇನ್ನೂ ಆಧಾರಗಳಿವೆ. ತನ್ನ ಸೆಪ್ಟೆಂಬರ್ 2017ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸ್ ನ ವರದಿಯೊಂದನ್ನು ಉಲ್ಲೇಖ ಮಾಡಿತ್ತು. 2013ರ ಆ ವರದಿಯ ಪ್ರಕಾರ ಹಲವು ರಾಜ್ಯಗಳಲ್ಲಿ ನೇಮಕಗೊಂಡ ಮಾಲಿನ್ಯ ಮಂಡಳಿ ಅಧ್ಯಕ್ಷರ ಹಿನ್ನೆಲೆ ಈಗ ರಾಜ್ಯ ಸರ್ಕಾರ ನೇಮಕಗೊಳಿಸಿದ ವ್ಯಕ್ತಿಯ ಹಿನ್ನೆಲೆಗೆ ಏನೂ ಭಿನ್ನವಾಗಿಲ್ಲ.
ಟಾಟಾ ಇನ್ಸ್ಟಿಟ್ಯೂಟ್ ವರದಿಯ ಸಾರಾಂಶ ಇಲ್ಲಿದೆ ; “ಇತ್ತೀಚೆಗೆ ಕೆಲವು ರಾಜ್ಯ ಸರ್ಕಾರಗಳು ಮಾಲಿನ್ಯ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸುವಲ್ಲಿ ಅನುಭವಿ, ಅರ್ಹತೆಯುಳ್ಳ, ರಾಜಕೀಯ ತಟಸ್ಥ ವ್ಯಕ್ತಿಯನ್ನು ಆರಿಸುವಲ್ಲಿ ವಿಫಲವಾಗಿರುವುದು ಸ್ಪಷ್ಟ. ಇದಕ್ಕೆ ಉದಾಹರಣೆ ಕರ್ನಾಟಕ (ಬಿಜೆಪಿ ನಾಯಕ – ಡಾ. ವಾಮನ ಆಚಾರ್ಯ), ಹಿಮಾಚಲ ಪ್ರದೇಶ (ಕಾಂಗ್ರೆಸ್ ನ ಮಾಜಿ ಶಾಸಕ), ಉತ್ತರ ಪ್ರದೇಶ (ಸಮಾಜವಾದಿ ಪಕ್ಷದ ನಾಯಕನ ಶಿಫಾರಸಿನೊಂದಿಗೆ ನೇಮಕ), ಅರುಣಾಚಲ ಪ್ರದೇಶ (ಎನ್ ಸಿ ಪಿ ಪಕ್ಷ ಶಾಸಕ) ಮಣಿಪುರ (ಶಾಸಕ), ಮಹಾರಾಷ್ಟ್ರ (ನಿವೃತ್ತ ಸರ್ಕಾರಿ ನೌಕರ; ಐಎಸ್). ಇವೆಲ್ಲವೂ ಸುಪ್ರೀಂ ಕೋರ್ಟ್ ನಿರ್ದೇಶನದ ತದ್ವಿರುದ್ಧದ ನೇಮಕಾತಿಗಳು. ಯಾವುದೇ ಅನರ್ಹ ನಿವೃತ್ತ ಅಧಿಕಾರಿ ಅಥವಾ ರಾಜಕಾರಣಿಗೆ ಕೊಡುಗೆ ನೀಡುವಂತೆ ಮಾಲಿನ್ಯ ಮಂಡಳಿಯ ಅಧ್ಯಕ್ಷರ ಹುದ್ದೆ ನೀಡುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಮತ್ತು ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಕ್ಷ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದಿಲ್ಲ.’’
2017ರಿಂದ ಇದುವೆರಗೂ ರಾಜ್ಯ ಸರ್ಕಾರ ಮಾಡಿದ್ದೇನು?
ಸುಪ್ರೀಂ ಕೋರ್ಟ್ 2017ರಲ್ಲಿ ರಾಜ್ಯ ಸರ್ಕಾರಗಳಿಗೆ ನಿಯಮ ರೂಪಿಸುವಂತೆ ಹೇಳಿತ್ತು. ಮೂಲಗಳ ಪ್ರಕಾರ ನಿಯಮಗಳ ಕರಡು ಸಿದ್ಧವಿದೆ. ಆದರೆ, ಅದರ ಅನುಷ್ಟಾನಕ್ಕೆ ರಾಜಕೀಯ ಇಚ್ಛಾ ಶಕ್ತಿಯ ಕೊರತೆಯಿದೆ. ಇದಕ್ಕೆ ಬಹು ದೊಡ್ಡ ತೊಡಕು ಬಂದಿರುವುದು ಸ್ಥಾಪಿತ ಹಿತಾಸಕ್ತಿ ವಲಯದಿಂದ. ಸುಪ್ರೀಂ ಕೋರ್ಟ್ ಹೇಳಿದಂತೆ ನಿಯಮ ರೂಪಿಸಿ ಅರ್ಹ ವ್ಯಕ್ತಿಯನ್ನು ಮಾಲಿನ್ಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದರೆ, ಎಲ್ಲಾ ಕಾನೂನು ಬಾಹಿರ ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯುವುದು ಬಲು ದೊಡ್ಡ ಸಮಸ್ಯೆಯಾದೀತು.
ಸಿ. ಜಯರಾಂ ಅವರ ನೇಮಕಾತಿ ಸಂಬಂಧದ ಕಡತವನ್ನು ಪ್ರತಿಧ್ವನಿ ಮಾಹಿತಿ ಹಕ್ಕಿನಡಿಯಲ್ಲಿ ಕೇಳಿತ್ತು. ಮೊದಲು ನಿರಾಕರಿಸಿದ ಇಲಾಖೆ, ನಂತರ ಮನವಿಯ ಅರ್ಜಿಯಲ್ಲಿ `ಅಪೂರ್ಣ’ ಮಾಹಿತಿ ನೀಡಿತು. ಇದರ ಪ್ರಕಾರ, ಜಯರಾಂ ಅವರನ್ನು ನೇಮಕ ಮಾಡುವ ಸಂದರ್ಭ ರಾಜ್ಯ ಸರ್ಕಾರಕ್ಕೆ 8 ಅರ್ಜಿಗಳು ಸ್ವೀಕೃತವಾಗಿದ್ದವು. ಆದರೆ, ಈ ಪೈಕಿ ಮೂರು ಅರ್ಜಿಗಳು ಸ್ವಯಂ ಮನವಿಗಳಾದರೆ, ಉಳಿದವು ರಾಜಕೀಯ ವ್ಯಕ್ತಿಗಳ ಶಿಫಾರಸಿನೊಂದಿಗೆ ಸ್ವೀಕೃತವಾದವು. ಆದರೆ, ಇವುಗಳಲ್ಲಿ ಜಯರಾಂ ಅವರ ಅರ್ಜಿ ಇರಲಿಲ್ಲ. ಆದರೂ ಸರ್ಕಾರ ಇದ್ದಕ್ಕಿದ್ದಂತೆ ಮಂಡಳಿಯ ಅಧ್ಯಕ್ಷರನ್ನಾಗಿ ಜಯರಾಂ ಅವರನ್ನು ಮಾರ್ಚ್ 5ರಂದು ನೇಮಕ ಮಾಡಿತು. ಅಪೂರ್ಣ ಮಾಹಿತಿ ಒದಗಿಸಲಾದ ಹಿನ್ನೆಲೆಯಲ್ಲಿ ಮತ್ತೆ ಮಾಹಿತಿ ಹಕ್ಕಿನಡಿಯಲ್ಲಿ ಜಯರಾಂ ನೇಮಕಾತಿಯ ಪೂರ್ಣ ದಾಖಲೆ, ಟಿಪ್ಪಣಿ, ನಡೆದ ಚರ್ಚೆ, ಎಲ್ಲವನ್ನೂ ಕೇಳಿದಾಗ ಅರಣ್ಯ, ಪರಿಸರ ಇಲಾಖೆ ಒದಗಿಸಿದ್ದು 3 ಪುಟಗಳ ದಾಖಲೆ. ಒಂದು, ದಿನಾಂಕವೇ ನಮೂದಾಗದೇ ಇರುವ ಜಯರಾಂ ಅವರ ಅರ್ಜಿಯ ಒಂದು ಪ್ರತಿ, ಮಾರ್ಚ್ 5, 2019ರ ಸರ್ಕಾರದ ಆದೇಶದ ಪ್ರತಿ ಹಾಗೂ ಜಯರಾಂ ಅವರ ಬಯೊಡೆಟಾ.
ಇದೀಗ, ಮೂರೇ ಮೂರು ತಿಂಗಳು ಮಾಲಿನ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಜಯರಾಂ ಅವರನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸುಧಾಕರ್ ಅವರಿಗೆ ಮಾಲಿನ್ಯ ಮಂಡಳಿ ಬಿಟ್ಟುಕೊಟ್ಟಿದ್ದಾರೆ. ಇದೂ ಕೂಡ ಯಾವುದೇ ಯೋಚನೆ (ಪರಿಸರ ಸಂಬಂಧ!) ಇಲ್ಲದೇ ಮಾಡಿರುವ ನಿರ್ಧಾರ ಅನ್ನುವುದಕ್ಕೆ ಆದೇಶದ ಒಕ್ಕಣೆಯೇ ಸಾಕ್ಷಿ. “ಡಾ. ಕೆ ಸುಧಾಕರ್, ಮಾನ್ಯ ವಿಧಾನಸಭಾ ಸದಸ್ಯರು, ಪರೇಸಂದ್ರ ಗ್ರಾಮ ಮತ್ತು ಅಂಚೆ, ಮುಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಮುಂದಿನ ಆದೇಶದವರೆಗೆ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿ, ನಂತರ ಘಟನೋತ್ತರ ಅನುಮೋದನೆಯನ್ನು ಪಡೆಯಲು ಆದೇಶಿಸಿದೆ.’’ ಸುಧಾಕರ್ ಅವರ ನೇಮಕಾತಿಯ ಬಗ್ಗೆ ಬಹುಶ: ರಾಜ್ಯ ಸರ್ಕಾರ ಘಟನೋತ್ತರ ಅನುಮೋದನೆಯಲ್ಲಿ ಚರ್ಚಿಸಲಿದೆ.
ಇದಲ್ಲದೇ ಇನ್ನೂ ಎರಡು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಕುಮಾರಸ್ವಾಮಿ ಗುರುವಾರ ರಾತ್ರಿ (20-06-2019) ಗ್ರಾಮ ವಾಸ್ತವ್ಯಕ್ಕೆಂದು ಯಾದಗಿರಿಗೆ ತೆರಳಿದರು. ಮಾಲಿನ್ಯ ಮಂಡಳಿ ಅಧ್ಯಕ್ಷರ ಹುದ್ದೆ ಬಿಟ್ಟು ಕೊಟ್ಟು, ಸಮ್ಮಿಶ್ರ ಸರ್ಕಾರದ `ಸಮನ್ವಯ’ ಸಾಧಿಸಬಹುದು. ಆದರೆ, ಪರಿಸರ ಹಾಗೂ ಮಾಲಿನ್ಯದಂತಹ ಗಂಭೀರ ಸಮಸ್ಯೆಗಳಿಂದ ರಾಜ್ಯವನ್ನು ಹೇಗೆ ಉಳಿಸಲಾದೀತು?