ಉತ್ತಮ ಆಡಳಿತ ನೀಡುವ ಘೋಷಣೆಯೊಂದಿಗೆ ಅಧಿಕಾರಕ್ಕೇರಲು ಬಿಜೆಪಿ ಸಿದ್ಧವಾಗುತ್ತಿದೆ. ಉತ್ತಮ ಆಡಳಿತ ಎಂದರೆ ಸದ್ಯ ಎಲ್ಲರೂ ಗಮನಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮುಂತಾದ ಯಾವುದೇ ಆರೋಪಗಳಿಲ್ಲದೆ ಐದು ವರ್ಷ ಉತ್ತಮ ಆಡಳಿತ ನೀಡಿ ಇನ್ನಷ್ಟು ಹೆಚ್ಚು ಬೆಂಬಲದೊಂದಿಗೆ ಕೇಂದ್ರದಲ್ಲಿ ಮೋದಿ-2 ಸರ್ಕಾರ ರಚನೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದಲೂ ಜನತೆ ಅಂತಹದ್ದೇ ಆಡಳಿತ ಬಯಸುತ್ತಿದ್ದಾರೆ. ಆದರೆ, ಅಂತಹ ಆಡಳಿತ ನೀಡಬೇಕಾದರೆ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟ ಸಮರ್ಥವಾಗಿರಬೇಕು. ಮುಖ್ಯಮಂತ್ರಿಯಾಗಿ ಹಿಂದಿನ ಅವಧಿಯಲ್ಲಿ ತಮ್ಮ ಮೇಲೆ ಬಂದ ಭ್ರಷ್ಟಾಚಾರದ ಆರೋಪಗಳನ್ನು ಮೆಟ್ಟಿನಿಂತು ಯಡಿಯೂರಪ್ಪ ಅವರು ಕೆಲಸ ಮಾಡಬೇಕು ಮತ್ತು ಅದೇ ರೀತಿ ತಮ್ಮ ಸಚಿವ ಸಂಪುಟವನ್ನೂ ಕೊಂಡೊಯ್ಯಬೇಕು.
ಇದಕ್ಕಾಗಿಯೇ ಅಧಿಕಾರ ಸ್ವೀಕಾರ, ಸಂಪುಟ ರಚನೆ ವಿಚಾರದಲ್ಲಿ ತರಾತುರಿ ಮಾಡದೆ ಎಲ್ಲದಕ್ಕೂ ಪಕ್ಷದ ವರಿಷ್ಠರ ಮೊರೆ ಹೋಗುತ್ತಿದ್ದಾರೆ. ಅವರ ಸಲಹೆ, ಸೂಚನೆಗಳಂತೆ ಮುಂದುವರಿಯಲು ನಿರ್ಧರಿಸಿದ್ದಾರೆ. ಏಕೆಂದರೆ, ಅಧಿಕಾರಕ್ಕಾಗಿ ಹಾತೊರೆಯುತ್ತಿರುವವರನ್ನು ಮುಂದಿಟ್ಟುಕೊಂಡು ಮುಂದೆ ಆಡಳಿತ ನಡೆಸುವುದು ಸರ್ಕಾರ ರಚಿಸಿದಷ್ಟು ಸುಲಭವಲ್ಲ. ಈ ಸಂದರ್ಭದಲ್ಲಿ ಏನೇ ಅಸಮಾಧಾನ ಉದ್ಭವವಾದರೂ ಅದರಿಂದ ಸರ್ಕಾರಕ್ಕೆ ಅಪಾಯ ಎದುರಾಗಬಹುದು. ಅಧಿಕಾರ ಕಳೆದುಕೊಂಡು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವ ಕಾಂಗ್ರೆಸ್ ಮತ್ತು ಜೆಡಿಎಸ್ ಇಂತಹ ಪ್ರತಿ ಅಸಮಾಧಾನದ ಲಾಭ ಪಡೆದು ಸರ್ಕಾರಕ್ಕೆ ಅಪಾಯ ತಂದೊಡ್ಡಬಹುದು.
ಅಂತಹ ಅಪಾಯ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಯಡಿಯೂರಪ್ಪ ಅವರು ಪಕ್ಷದ ವರಿಷ್ಠರಿಂದ ಸರ್ಕಾರ ರಚನೆ ಮತ್ತು ಆಡಳಿತದ ಕುರಿತು ನೀಲನಕ್ಷೆಯೊಂದನ್ನು ಪಡೆದುಕೊಂಡು ಅದರಂತೆ ಮುಂದುವರಿಯಲು ಯೋಚಿಸಿದ್ದಾರೆ. ಈ ವಿಚಾರದಲ್ಲಿ ಎಲ್ಲಾ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರವನ್ನು ಅವರಿಗೇ ಬಿಟ್ಟುಕೊಟ್ಟು ರಾಜ್ಯದ ನಾಯಕರು ತಮ್ಮ ವಿರುದ್ಧ ತಿರುಗಿ ಬೀಳದಂತೆ ನೋಡಿಕೊಳ್ಳಲು ಬಯಸಿದ್ದಾರೆ. ಪ್ರತಿಯೊಂದು ಬೆಳವಣಿಗೆಯನ್ನೂ ತಾವೇ ಖುದ್ದಾಗಿ ಅವರ ಗಮನಕ್ಕೆ ತರುತ್ತಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದಲ್ಲಿ ಇರುವ ಸ್ಥಾನಗಳು 34 ಮಾತ್ರ. ಅಂದರೆ, ಮುಖ್ಯಮಂತ್ರಿ ಹೊರತಾಗಿ 33 ಮಂದಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಸಿಗುತ್ತದೆ. ಆದರೆ, ಬಿಜೆಪಿಯ 105 ಶಾಸಕರಲ್ಲೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳ ಸಂಖ್ಯೆ 50ರ ಗಡಿ ದಾಟಿದೆ. ಇದರ ಜತೆಗೆ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅತೃಪ್ತ ಶಾಸಕರು ಬಿಜೆಪಿಗೆ ಸೇರಿದ ಬಳಿಕ ಅವರಿಗೂ ಅವಕಾಶ ನೀಡಬೇಕು. ಶಾಸಕ ಸ್ಥಾನದಿಂದ ಅನರ್ಹಗೊಂಡರೆ ಮತ್ತೆ ಚುನಾವಣೆ ನಡೆದು ಆಯ್ಕೆಯಾಗುವ ತನಕ ಅವಕಾಶ ಸಿಗುತ್ತದೆ. ಆದರೆ,ಅವರ ರಾಜಿನಾಮೆ ಅಂಗೀಕಾರವಾದರೆ ಕೆಲವರಿಗಾದರೂ ತಕ್ಷಣ ಸಚಿವ ಸ್ಥಾನ ನೀಡಬೇಕಾಗುತ್ತದೆ. ಆಗ ಇರುವ 33 ಸಚಿವ ಸ್ಥಾನಗಳನ್ನು ಯಾರಿಗೆ ಹಂಚಬೇಕು? ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರ ಜತೆಗೆ ಪಕ್ಷ ಕಟ್ಟಿ ಗೆದ್ದು ಬಂದವರಿರೂ ಆದ್ಯತೆ ನೀಡಬೇಕಾಗುತ್ತದೆ. ಇದು ಯಡಿಯೂರಪ್ಪ ಮುಂದಿರುವ ಬಹುದೊಡ್ಡ ಸವಾಲು.

ಈಗಾಗಲೇ ಕೆಲವು ಸಚಿವಾಕಾಂಕ್ಷಿಗಳು ಯಡಿಯೂರಪ್ಪ ಅವರ ಬೆನ್ನ ಹಿಂದೆಯೇ ಸುತ್ತುತ್ತಿದ್ದರೆ, ಇನ್ನು ಕೆಲವರು ಈ ಬಾರಿಯ ಆಪರೇಷನ್ ಕಮಲದಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಅವರ ಆಪ್ತ ಸಂತೋಷ್, ಮತ್ತೆ ಕೆಲವರು ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಗುಂಪು ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡುತ್ತಿದೆ. ಸಂಪುಟ ರಚನೆ ವಿಚಾರದಲ್ಲಿ ಯಡಿಯೂರಪ್ಪ ಅವರು ಯಶಸ್ವಿಯಾದರೆ, ಅಂದರೆ ಸಂಪುಟ ರಚನೆ ಬಳಿಕ ಶಾಸಕರಲ್ಲಿ ಸ್ಫೋಟಗೊಳ್ಳುವಂತಹ ಅಸಮಾಧಾನ, ಆಕ್ರೋಶ ಹೊರಹೊಮ್ಮದೇ ಇದ್ದರೆ ಅಲ್ಲಿಗೆ ಈ ಸರ್ಕಾರ ಸ್ವಲ್ಪ ದಿನ ಗಟ್ಟಿಯಾಗಿರುತ್ತದೆ. ಒಂದೊಮ್ಮೆ ಅಸಮಾಧಾನ ತೀವ್ರಗೊಂಡರೆ ಮೈತ್ರಿ ಸರ್ಕಾರ ಎದುರಿಸಿದ ಪರಿಸ್ಥಿತಿಯನ್ನೇ ಬಿಜೆಪಿಯೂ ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಯಡಿಯೂರಪ್ಪ ಅವರು ಪಕ್ಷದ ವರಿಷ್ಠರ ಮೂಲಕವೇ ಸರ್ಕಾರ ರಚನೆ ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದಾರೆ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಪಕ್ಷೇತರರು, ಅನ್ಯ ಪಕ್ಷಗಳಿಂದ ಬಂದವರನ್ನು ಸೇರಿಸಿಕೊಂಡು ಬಿಜೆಪಿ ಅಧಿಕಾರ ನಡೆಸುತ್ತಿದೆ. ಅಷ್ಟೇ ಅಲ್ಲ, ರಾಜಕೀಯವಾಗಿ ಯಾವುದೇ ಸಮಸ್ಯೆ ಇಲ್ಲದಂತೆ ಆಡಳಿತ ನಡೆಯುತ್ತಿದೆ. ಅಮಿತ್ ಶಾ ನೇತೃತ್ವದ ತಂಡ ನೀಡಿದ ಸಲಹೆ, ಸೂಚನೆಗಳನ್ನು ಪಾಲಿಸಿ ಅಲ್ಲಿನ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿರುವುದರಿಂದ ಸರ್ಕಾರ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಮುಂದುವರಿಯುತ್ತಿದೆ. ಯಡಿಯೂರಪ್ಪ ಅವರು ಈ ಬಾರಿ ಎಲ್ಲದಕ್ಕೂ ವರಿಷ್ಠರ ಮೊರೆ ಹೋಗುತ್ತಿರುವುದರ ಹಿಂದೆ ಇದು ಕೂಡ ಒಂದು ಕಾರಣವಿರಬಹುದು.
ಸರ್ಕಾರ ರಚನೆ ಜತೆಗೆ ಪಕ್ಷ ಬಲವರ್ಧನೆ
ಉತ್ತಮ ಆಡಳಿತ ನೀಡಬೇಕಾದರೆ ಸಮರ್ಥರನ್ನೊಳಗೊಂಡ ಸಚಿವ ಸಂಪುಟದ ಅಗತ್ಯವಿದೆ. ಅಂತಹ ಸಂಪುಟ ರಚಿಸುವಾಗ ಪಕ್ಷದ ಕೆಲವು ಹಿರಿಯ ಶಾಸಕರನ್ನು ಹೊರಗಿಡಬೇಕಾಗುತ್ತದೆ. ಹಾಗಾದಾಗ ಅವರು ತಿರುಗಿ ಬೀಳುವ ಅಪಾಯವಿದ್ದು, ಹಾಗೆ ಆಗದಂತೆ ನೋಡಿಕೊಳ್ಳಬೇಕಾದರೆ ವರಿಷ್ಠರೇ ಮುಂದೆ ನಿಂತು ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು? ಯಾರಿಗೆ ಪಕ್ಷದಲ್ಲಿ ಕೆಲಸ ಕೊಡಬೇಕು? ಎಂದು ತೀರ್ಮಾನಿಸಬೇಕಾಗುತ್ತದೆ. ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿದ್ದರಿಂದ ಹಿಂದಿನ ಸರ್ಕಾರದಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿದ್ದ ಜೆ. ಪಿ. ನಡ್ಡಾ ಅವರು ಸಚಿವ ಸ್ಥಾನದಿಂದ ವಂಚಿತರಾಗಬೇಕಾಯಿತು. ಅವರಿಗೆ ಬಿಜೆಪಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷದ ಜವಾಬ್ದಾರಿ ವಹಿಸಲಾಯಿತು. ಅದೇ ರೀತಿ ಮೋದಿ-1 ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಕೆಲವರನ್ನು ಕೈಬಿಟ್ಟು ಅವರಿಗೆ ಪಕ್ಷದ ಜವಾಬ್ದಾರಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲೂ ಇಂತಹದ್ದೇ ಕ್ರಮ ಅನುಸರಿಸಲಾಗುತ್ತಿದೆ. ಅದರಂತೆ ರಾಜ್ಯದಲ್ಲೂ ಕೆಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನದ ಬದಲು ಪಕ್ಷದ ಜವಾಬ್ದಾರಿ ನೀಡುವ ನಿರ್ಧಾರ ಕೈಗೊಳ್ಳಬಹುದು. ಹೀಗಾದಲ್ಲಿ ಸರ್ಕಾರವೂ ಸೇಫ್, ಪಕ್ಷ ಬಲಪಡಿಸಲು ಸಮರ್ಥರ ತಂಡವೂ ಸಿದ್ಧವಾಗುತ್ತದೆ.