ಪ್ರಧಾನಿ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ ಇಲ್ಲದೇ ಹೋಗಬಾರದು
ವರ್ಷ: 1982. ಉತ್ತರ ಕರ್ನಾಟಕದ ವರದಿ ಮಾಡಲು ಹುಬ್ಬಳ್ಳಿಯಲ್ಲಿ ಇದ್ದರೂ, ಗೋವೆಯ ವರದಿಗಳನ್ನು ಮಾಡುವ ಜವಾಬ್ದಾರಿಯೂ ನನ್ನ ಮೇಲಿತ್ತು.
ಗೋವೆಯಲ್ಲಿರುವ ಕರ್ನಾಟಕದಿಂದ ನೆಲೆಸಿ ಕೂಲಿ ಕಾಯಕ ಮಾಡುತ್ತಿರುವವರ ಮೇಲೆ ಅಲ್ಲಿನ ಕೆಲವರ ಕೆಂಗಣ್ಣು ಬಿದ್ದು ಅವರನ್ನು ತವರು ರಾಜ್ಯಕ್ಕೆ ಕಳಿಸುವ ಒಂದು ಅಭಿಯಾನವೇ ನಡೆದಿತ್ತು. ನಮ್ಮ ಸುಂದರ ರಾಜ್ಯವನ್ನು ಗಲೀಜು ಮಾಡುತ್ತಿದ್ದಾರೆ, ಅವರನ್ನು ಬೇಗ ಹೊರಗೆ ಕಳಿಸಿ ಎಂದು ಚಳುವಳಿ ನಡೆದಿತ್ತು.
ಆಗ ಪ್ರಧಾನಿ ಇಂದಿರಾ ಗಾಂಧಿ ಅವರ ಎರಡು ದಿವಸದ ಗೋವಾ ಪ್ರವಾಸವಿತ್ತು. ಸಂಜೆ ರಾಜಧಾನಿ ಪಣಜಿಯ ಕ್ರೀಡಾಂಗಣ ಮೈದಾನದಲ್ಲಿ ಸಾರ್ವಜನಿಕ ಭಾಷಣ ಮಾಡಿ, ಮರು ದಿವಸ ಬೇಗ ನಿರ್ಗಮನ. ಅವರ ಪ್ರವಾಸ ವರದಿ ಮಾಡಲು ನಾನು ಪಣಜಿಗೆ ಹೋಗಿದ್ದೆ. ಅವರ ವಾಸ್ತವ್ಯದಲ್ಲಿ ಪ್ರಧಾನಿಯವರನ್ನು ಮಾಧ್ಯಮದವರು ಭೇಟಿ ಮಾಡುವ ಪ್ರಯತ್ನಪಟ್ಟಾಗ ಗೋವಾದ ಮುಖ್ಯಮಂತ್ರಿ ಪ್ರತಾಪ ಸಿಂಗ ರಾಣೆ “ಅವರಿಗ ವೇಳೆ ಇಲ್ಲ. ಬೆಳಿಗ್ಗೆ ಬೇಗನೇ ಹೋಗುತ್ತಾರೆ” ಎಂದಿದ್ದರು.
ಪ್ರಧಾನಿಗಳ ಮೊದಲ ಸಂಜೆಯ ಸಾರ್ವಜನಿಕ ಭಾಷಣದಲ್ಲಿ ನಾನು ಅಂದು ಕೊಂಡಂತೆ ಪ್ರಧಾನಿಯವರು ಗೋವಾದಲ್ಲಿ ಕನ್ನಡಿಗರನ್ನು ಒಡಿಸುವ ಪ್ರಯತ್ನವನ್ನು ತೀವ್ರ ಶಬ್ದಗಳಲ್ಲಿ ಖಂಡಿಸಿದ್ದರು. ಆ ವರದಿ ಕಳಿಸಲು ನಾನು ತಂತಿ ಕಚೇರಿಗೆ ಗಡಿಬಿಡಿಯಲ್ಲಿ ಧಾವಿಸುತಿದ್ದೆ. (ಆಗಿನ್ನೂ ಲ್ಯಾಪ ಟ್ಯಾಪ್ ಇದ್ದಿದ್ದಿಲ್ಲ) ಒಮ್ಮೆಲೆ ಮೈಕನಲ್ಲಿ ಒಂದು ಪ್ರಕಟನೆ ಕೇಳಿಸಿತು. “ಮಾಧ್ಯಮದವರು ಎಲ್ಲಿದ್ದರೂ, ಬನ್ನಿ ಕಚೇರಿಗೆ ಬನ್ನಿರಿ. ಪ್ರಧಾನ ಮಂತ್ರಿಗಳು ನಿಮ್ಮನ್ನು ಭೇಟಿಯಾಗಬಯಸುತ್ತಾರೆ” ಎಂದು.
ಪ್ರಧಾನ ಮಂತ್ರಿಯವರನ್ನು ಭೇಟಿಯಾಗಲೂ ಅವಕಾಶವೇ ಇಲ್ಲ ಎಂದು ನಿರಾಶೆಯಾಗಿದ್ದ ನಮಗೆ ಈ ಪ್ರಕಟನೆ ಆಶ್ಚರ್ಯ ತಂದಿತು. ಧಾವಿಸಿ ಬಂದೆವು. ನಮ್ಮನ್ನು ಕ್ರೀಡಾಂಗಣದ ಒಳಾಂಗಣಕ್ಕೆ ಕರೆದೊಯ್ಯಲಾಯಿತು. ಪ್ರಧಾನ ಮಂತ್ರಿಗಳು ನಮ್ಮನ್ನು ಭೇಟಿಯಾಗುವ ಕಾರ್ಯಕ್ರಮ ಕೊನೆ ವೇಳೆಯಲ್ಲಿ ನಿರ್ಧಾರವಾಗಿರಬೇಕು. ಏಕೆಂದರೆ, ಒಳಾಂಗಣ ಸ್ವಚ್ಛ ಮಾಡಿರಲಿಲ್ಲ. ಅಲ್ಲಿರುವ ಕುರ್ಚಿಗಳ ಧೂಳೂ ಝಾಡಿಸಿರಲಿಲ್ಲ. ಅಂತಹದೇ ಒಂದು ಕುರ್ಚಿಯನ್ನು ಎಳೆದುಕೊಂಡು ಇಂದಿರಾಗಾಂಧಿಯವರು ಕುಳಿತರು. ನಾವೂ ಹಾಗೆಯೇ ಮಾಡಿ ಅವರ ಸುತ್ತ ಕುರ್ಚಿ ಎಳೆದು ಕುಳಿತು ಕೊಂಡೆವು. ನಾವು ಸುಮಾರು 15-20 ಜನ ಇದ್ದೆವು.
ಕುಳಿತ ನಂತರ “ಯೆಸ್?” ಎಂದು ನಮ್ಮನ್ನು ಪ್ರಶ್ನೆ ಕೇಳಲು ಸೂಚಿಸಿದರು. ನಮ್ಮ ಬಾಯಿಯಿಂದ ಎಂದು ಶಬ್ದವೂ ಬರಲಿಲ್ಲ. ಪ್ರಶ್ನೆ ಕೇಳಲು ನಮ್ಮ ತಯಾರಿಯೇ ಇರಲಿಲ್ಲವಾದುದರಿಂದ ಒಂದು ಪೂರ್ತಿ ನಿಮಿಷ ಎಲ್ಲರೂ ಮೌನ. ಶ್ರೀಮತಿ ಗಾಂಧಿಯವರು ತಾಳ್ಮೆಯಿಂದ ಕಾಯುತ್ತಿದ್ದರು. ನಮ್ಮಲ್ಲಿ ಒಬ್ಬರು ಸ್ವಲ್ಪ ಸಾವರಿಕೊಂಡು ಒಂದು ಪ್ರಶ್ನೆ ಕೇಳಿದರು. ನಂತರ ಪ್ರಶ್ನೆ ಉತ್ತರಗಳ ಸುರಿಮಳೆಯೇ ನಡೆಯಿತು. ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಹತ್ತು ಹದಿನೈದು ನಿಮಿಷಗಳ ನಂತರ ಹೊರನಡೆದರು.
ಪ್ರಧಾನ ಮಂತ್ರಿಗಳ ವೇಳೆ ಬಹು ಅಮೂಲ್ಯ. ಅವರ ಒಂದು ನಿಮಿಷ ಅವದಿಯಲ್ಲಿ ಏನು ಬೇಕಾದರೂ ಆಗಬಹುದು. ಅಂತಹ ಅವಧಿಯನ್ನು ಪ್ರಶ್ನೆಗಳ ಅಭಾವದಿಂದ ಹಾಗೆ ಕಳೆದುಕೊಂಡುದು ನನ್ನ ಮನಸ್ಸನ್ನು ಆಗಾಗ ಕೊರೆಯುತ್ತಿತ್ತು. ನಾನೊಂದು ಪಾಠ ಕಲಿತೆ. ನನ್ನ ದೀರ್ಘ ವೃತ್ತಿ ಜೀವನದಲ್ಲಿ ವಿ.ವಿ.ಐ.ಪಿ ಭೇಟಿ ಕಾಲದಲ್ಲಿ ಅಂತಹ ತಪ್ಪು ಮರು ಕಳಿಸದಂತೆ ಎಚ್ಚರ ವಹಿಸಿದೆ.

ವಿರೋಧಿ ಪಕ್ಷದ ಧುರೀಣರಿಗೆ ಧ್ವಜಾರೋಹಣದ ಪಾಠ ಮಾಡಿದಾಗ
ಹುಬ್ಬಳ್ಳಿಯಲ್ಲಿ ವಿವಾದಿತ ಈದ್ಗಾ ಮೈದಾನದಲ್ಲಿ ರಾಷ್ಟ್ರಿಯ ಧ್ವಜ ಹಾರಿಸುವ ಬಿಜೆಪಿ ಚಳುವಳಿ ಭರದಿಂದ ಸಾಗಿತ್ತು. ಈ ಚಳುವಳಿ ಶುರುವಾದ ವರ್ಷದಿಂದ ಹುಬ್ಬಳ್ಳಿಯಲ್ಲಿ ಆಗಸ್ಟ್ 15 ಸ್ವಾತಂತ್ರ್ಯೋತ್ಸವ ಮತ್ತು ಜನವರಿಯ ಗಣರಾಜ್ಯೋತ್ಸವದ ದಿವಸಗಳಂದು 1994 ರ ತನಕ ಧ್ವಜಾರೋಹಣ ಆಗುತ್ತಲೇ ಇರಲಿಲ್ಲ. ಧ್ವಜವನ್ನು ಆ ದಿನಗಳಂದು ಹಾರಿಸಿದರೆ ಮತೀಯ ಗಲಭೆ ಆಗುತ್ತವೆ ಎಂದು ಹೇಳುವ ಪೋಲಿಸ ವರದಿಗಳ ಪ್ರಕಾರ ಪ್ರತಿಬಂಧಕಾಜ್ಞೆ ಜಾರಿ ಆಗುತ್ತಿತ್ತು.
ಇಂತಹ ಒಂದು ಪ್ರಸಂಗದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಹುಬ್ಬಳ್ಳಿಯಲ್ಲಿ ಪ್ರತಿಬಂದಕಾಜ್ಞೆ ಇದ್ದರೂ ಧ್ವಜಾರೋಹಣವನ್ನು ಮಾಡುವೆ ಎಂದು ಘೋಷಿಸಿದ್ದರು. ಅದರ ಪ್ರಕಾರ ಮಾಧ್ಯಮದ ಮಿತ್ರರು ಎಲ್ಲರೂ ಅಲ್ಲಿ ಜಮಾಯಿಸಿದ್ದರು. ಪೋಲಿಸರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಅವರ ಧ್ವಜಾರೋಹಣದಕ್ಕೆ ನಿಗದಿ ಪಡಿಸಿದ ಸಮಯ ಮುಗಿದರೂ, ಅಲ್ಲಿ ಬಿಜೆಪಿ ಕಾರ್ಯಕರ್ತರ ಅಥವಾ ಅ ಚಳುವಳಿ ಅಧ್ವರ್ಯುಗಳಾದ ರಾಷ್ಟ್ರಧ್ವಜ ಗೌರವ ಸಂರಕ್ಷಣಾ ಸಮಿತಿಯ ಸದಸ್ಯರ ಸುಳಿವೇ ಇರಲಿಲ್ಲ. (ಈಗಿನ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಮಂತ್ರಿ ಪ್ರಹ್ಲಾದ್ ಜೋಶಿ ಅಂದು ಆ ಸಮಿತಿಯ ಸಂಚಾಲಕರಾಗಿದ್ದರು). ಬಿಜೆಪಿ ಈ ಕಾರ್ಯಕ್ರಮ ಕೈಬಿಟ್ಟಿದೆ ಏನೋ ಎಂದು ಮಾಧ್ಯಮದವರು ಮಾತನಾಡುತ್ತಿರುವಾಗ ಯಾರೋ ಬಂದು ನನ್ನ ಗಮನ ಸೆಳೆದರು. ಹತ್ತಿರದ ಪ್ರವಾಸಿ ಮಂದಿರದಲ್ಲಿ ಯಡಿಯೂರಪ್ಪನವರ ಪತ್ರಿಕಾ ಪರಿಷತ್ತು ನಡೆದಿದೆ ಎಂದು.
ನೆರೆದಿದ್ದ ನಾವೆಲ್ಲ ಪ್ರವಾಸಿ ಮಂದಿರಕ್ಕೆ ಧಾವಿಸಿದೆವು. ಅವರ ಪತ್ರಿಕಾ ಪರಿಷತ್ತು ಮುಗಿಯಲು ಬಂದಿತ್ತು. “ನಾವು ಈದ್ಗಾ ಮೈದಾನದಲ್ಲಿ ಹೂಡಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರ,ಮ ಯಶಸ್ವಿಯಾಗಿ ಮಾಡಿದೆವು.” ಈ ಬಗ್ಗೆ ಬಿಜೆಪಿ ಹೂಡಿಕೊಂಡಿದ್ದ ಆಭಿಯಾನವೂ ಫಲಕಾರಿಯಾಯಿತು” ಎಂದು ಹೇಳುತ್ತಿರುವಂತೆ ನಾನು ಕೇಳಿದೆ, “ನಮ್ಮಲ್ಲಿ ಕೆಲವರು ಮುಂಜಾನೆ ಆ ಮೈದಾನದಲ್ಲಿ ಕಾಯುತ್ತಿದ್ದೇನೆ. ಯಾರೂ ಬರಲಿಲ್ಲ. ಧ್ವಜಾರೋಹಣವೂ ಅಗಲಿಲ್ಲವಲ್ಲ. ಯಾವ ವೇಳೆಗೆ ಧ್ವಜಾರೋಹಣ ಮಾಡಿದಿರಿ.’’ ಸ್ವಲ್ಪ ಗಲಿಬಿಲಿ ಗೊಂಡ ಅವರಂದರು – ಮುಂಜಾನೆ ಆಯಿತು ಎಂದರು. ಧ್ವಜಾರೋಹಣ ಮಾಡಿದ್ದು ಯಾರು ಎಂದೆ. “ಒಬ್ಬ ಹುಡುಗಿ ಮುಂಜಾನೆ ಒಂದು ಕೋಲಿಗೆ ಧ್ವಜ ಕಟ್ಟಿ ತಂದು ಈದ್ಗಾ ಮೈದಾನದಲ್ಲಿ ನೆಟ್ಟಳು ಎಂದು ಉತ್ತರಿಸಿದರು.
“ನೀವು ವಿರೋಧಿ ಪಕ್ಷದ ಧುರೀಣರು. ಧ್ವಜ ಹಾರಿಸಿದ ಕಾರಿನಲ್ಲಿ ಯಾವಾಗಲೂ ತಿರುಗುತ್ತೀರಿ. ಧ್ವಜಾರೋಹಣ ಕಾರ್ಯ ಎಷ್ಟು ಗಂಭೀರದಿಂದ ಮಾಡಬೇಕು ಎಂದು ನಿಮಗೆ ನಾವು ಹೇಳಬೇಕೇ? ಧ್ವಜವನ್ನು ಗೌರವದಿಂದ ಹಾರಿಸಿ, ವಂದನೆ ಸಲ್ಲಿಸಿ ಸಂಜೆ ಇಳಿಸಬೇಕು ಎನ್ನುವುದು ಗೊತ್ತಿಲ್ಲವೇ. ಒಬ್ಬರು ಕೋಲಿಗೆ ಧ್ವಜ ಕಟ್ಟಿ ನೆಟ್ಟರೆ ಅದನ್ನು ಧ್ವಜಾರೋಹಣ ಎಂದು ಹೇಗೆ ಕರೆಯಲು ಬರುತ್ತದೆ” ಎಂದು ನಾನು ಮತ್ತು ನನ್ನ ಕೆಲ ಸಹೋದ್ಯೋಗಿಗಳು ಪ್ರಶ್ನಿಸಿದೆವು. ಒಂದು ನಿಮಿಷ ಸುಮ್ಮನಿದ್ದು ನಂತರ ಅವರೇ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರು “ಹೌದು ಧ್ವಜಾರೋಹಣ ಆಗಿಲ್ಲ” ಎಂದು.
ಅಂದು ಧ್ವಜಾರೋಹಣ ದೊಂದಿಗೆ ಬಿಜೆಪಿ ಮುಗಿಸಲು ಬಯಸಿದ್ದ ಈದ್ಗಾ ಚಳುವಳಿ ಮುಂದುವರಿಯಿತು. ಮುಂದೆ ಹೇಗೆ ಬಿಜೆಪಿ ಧುರೀಣೆ ಉಮಾಭಾರತಿ ಇದಕ್ಕಾಗಿ ಬಂದಾಗ, ಗದ್ದಲವಾಗಿ ಪೋಲಿಸ ಗೋಲಿಬಾರಿನಲ್ಲಿ ಕೆಲ ಕಾರ್ಯಕರ್ತರು ಅಸು ನೀಗಿದ್ದು ಇತಿಹಾಸ.