ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಸಿಕೊಳ್ಳುವ ಗಿರೀಶ್ ಕಾರ್ನಾಡ್ ಇಂದಿನಿಂದ ಕನ್ನಡ ಸಾಹಿತ್ಯ ಲೋಕಕ್ಕೆ ನೆನಪು ಮಾತ್ರ. ಮಹಾರಾಷ್ಟ್ರದಲ್ಲಿ ಹುಟ್ಟಿ, ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುವುದಕ್ಕೆ ಪಟ್ಟ ಕಾರ್ನಾಡರ ಶ್ರಮ ಅಪಾರವಾದದ್ದು. ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ ಅಗ್ನಿ ಮತ್ತು ಮಳೆ ಟಿಪ್ಪುವಿನ ಕನಸುಗಳು ಮುಂತಾದವು ಇವರ ಪ್ರಮುಖ ನಾಟಕಗಳು. ಅಲ್ಲದೇ ಇವರ ಹಲವು ನಾಟಕಗಳು ರಂಗಭೂಮಿಯಲ್ಲಿ ಜೀವ ಪಡೆದಿದೆ. ಜನಮಾನಸದಲ್ಲಿ ಸರ್ವಕಾಲಕ್ಕೂ ಉಳಿಯುವ ಬರವಣಿಗೆಯನ್ನು ಮೈಗೂಡಿಸಿಕೊಂಡ ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್. ತುಘಲಕ್ ನಾಟಕಕ್ಕೆ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ಬರವಣಿಗೆಯ ಜೊತೆ ಜೊತೆಗೆ ಸಿನಿಮಾಗಳಿಗೆ ಚಿತ್ರಕಥೆ – ಸಂಭಾಷಣೆ – ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದು ಕನ್ನಡ ಸಾಹಿತ್ಯಕ್ಕೆ ಮತ್ತು ಸಿನಿಮಾಗೆ ತಂದ ಸೌಭಾಗ್ಯ. ಪಟ್ಟಾಭಿರಾಮ ರೆಡ್ಡಿಯವರು ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ತೆರೆಯ ಮೇಲೆ ತರಬೇಕೆಂದು, ಕಾರ್ನಾಡರಿಗೆ ಚಿತ್ರಕಥೆ- ಸಂಭಾಷಣೆ ಮತ್ತು ಮುಖ್ಯ ಪಾತ್ರವನ್ನು ಕೊಟ್ಟು ನಟಿಸುವ ಜವಾಬ್ದಾರಿಯನ್ನೂ ಕೊಟ್ಟಿದ್ದರು. ನಂತರ ಈ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಕೂಡ ಬಂದಿತು. ಕಾರ್ನಾಡರು “ಕಾದಂಬರಿ (ಸಂಸ್ಕಾರ) ಆಧಾರಿತ ಚಿತ್ರದಲ್ಲಿ ಕೆಲಸ ಮಾಡಿದ್ದ ಅನುಭವದಿಂದ, ಎಸ್ ಎಲ್ ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯನ್ನು ತೆರೆಯ ಮೇಲೆ ತರುವುದಕ್ಕೆ ತಳಹದಿಯನ್ನೇ ಹಾಕಿ ಕೊಟ್ಟತ್ತು” ಎಂದು ಸ್ವತಃ ಕಾರ್ನಾಡ್ ರವರೆ ಹೇಳಿದ್ದುಂಟು.
ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ ಆಳಕ್ಕಿಳಿದು ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾ ಶೀಲತೆಯಿಂದ ಶೋಧಿಸುವ ಕಾದಂಬರಿ ‘ವಂಶವೃಕ್ಷ’. ಹಿಂದಿ, ಮರಾಠಿ, ಗುಜರಾತಿ, ತೆಲುಗು, ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡಿರುವ ಈ ಕಾದಂಬರಿಯನ್ನು ಗಿರೀಶ್ ಕಾರ್ನಾಡ್ ಮತ್ತು ಬಿ. ವಿ. ಕಾರಂತರು ತೆರೆಯ ಮೇಲೆ ತರುವುದಕ್ಕೆ ಪಟ್ಟ ಶ್ರಮ ಹಲವು. 30-40 ವರ್ಷಗಳ ಹಿಂದೆ ಒಂದು ಕಾದಂಬರಿಯನ್ನು ತೆರೆಯ ಮೇಲೆ ತಂದು, ಅದು ಜನರ ಮನ್ನಣೆ ಗಳಿಸುವುದು ಸುಲಭದ ಮಾತಾಗಿರಲಿಲ್ಲ.
ಮದ್ರಾಸಿನಲ್ಲಿದ್ದ ಕಾರ್ನಾಡ್ ರವರಿಗೆ ಬಿ.ವಿ.ಕಾರಂತರು ಒಂದು ಪತ್ರ ಬರೆದಿದ್ದರು “ಜಿ.ವಿ.ಅಯ್ಯರ್ ಅವರು ಎಸ್.ಎಲ್ ಭೈರಪ್ಪನವರ “ವಂಶವೃಕ್ಷ” ಕಾದಂಬರಿಯನ್ನು ಆಧಾರಿಸಿ ಒಂದು ಚಿತ್ರವನ್ನು ನಿರ್ಮಿಸಿಲಿದ್ದಾರೆ. ನಿರ್ದೇಶನ ಮಾಡು ಎಂದು ನನಗೆ ಹೇಳಿದ್ದಾರೆ. ನೀವೂ ಬರುತ್ತೀರಾ?” ಎಂದು ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಕಾರ್ನಾಡರು ಹುರುಪಿನಿಂದ ಕೂಡಲೇ “ನಾನು ನಿಮ್ಮ ಸಹಾಯಕ ನಿರ್ದೇಶಕನಾಗುತ್ತೇನೆ” ಎಂದರು. ನಂತರ ಕಾರಂತರು “ಸಹಾಯಕ ನಿರ್ದೇಶಕನಲ್ಲ, ಸಹನಿರ್ದೇಶಕನಾಗಬೇಕು” ಎಂದು ಕೇಳಿಕೊಂಡಿದ್ದರು.
ಕನ್ನಡ ಚಿತ್ರರಂಗದಲ್ಲಿ ‘ವಂಶವೃಕ್ಷ’ಕ್ಕೆ ಮಹಾ ಬೇಡಿಕೆಯಿತ್ತು. ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯರವರಂಥ ಚಿತ್ರರಂಗದ ಅತಿರಥ-ಮಹಾರಥರೆಲ್ಲ ಅದನ್ನು ಚಿತ್ರೀಕರಿಸುವುದಕ್ಕೆ ಮುಂದಾಗಿದ್ದರು. ಆದರೆ ಭೈರಪ್ಪ ಒಪ್ಪಿಗೆ ಕೊಟ್ಟಿರಲಿಲ್ಲ, ಜಿ. ವಿ. ಅಯ್ಯರ್ ರವರು ‘ವಂಶವೃಕ್ಷ’ ಓದಿ ಎಲ್ಲರಂತೆ ಅವರೂ ಉತ್ತೇಜಿತರಾಗಿ, ಅದನ್ನು ಚಿತ್ರೀಕರಿಸಲು ಭೈರಪ್ಪನವರಿಂದ ಅಪ್ಪಣೆ ಕೇಳಿದ್ದರು. ಭೈರಪ್ಪ ‘ಬಿ.ವಿ.ಕಾರಂತರು ನಿರ್ದೇಶನ ಮಾಡುವುದಾದರೆ ಒಪ್ಪುತ್ತೇನೆ’ ಎಂದಿದ್ದರಂತೆ. ಅದಕ್ಕೆ ಅಯ್ಯರ್ “ಕಾರಂತನಿಗೆ ಚಿತ್ರೋದ್ಯಮದ ಅನುಭವವೇ ಇಲ್ಲವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಭೈರಪ್ಪ “ಉಳಿದವರ ಯಶಸ್ಸಿಗಿಂತ ಕಾರಂತ ಮಾಡಿದ ತಪ್ಪುಗಳೇ ಹೆಚ್ಚು ಕಲಾತ್ಮಕವಾಗಿರುವುದು ಸಾಧ್ಯ” ಎಂದಿದ್ದರಂತೆ. “ಈ ದ್ರಾವಿಡ ಪ್ರಾಣಾಯಾಮದ ಫಲವಾಗಿ ನಾನು ‘ವಂಶವೃಕ್ಷ’ದಲ್ಲಿ ದಾಖಲಾದೆ” ಎಂದು ಹೇಳುತ್ತಿದ್ದರು ಗಿರೀಶ್ ಕಾರ್ನಾಡ್.
ಈ ಕಾದಂಬರಿಯನ್ನು ಕಾರ್ನಾಡರು ಮೆಚ್ಚುವುದಕ್ಕೆ ಒಂದು ಕಾರಣವಿತ್ತು. “ನಾನು ‘ವಂಶವೃಕ್ಷ’ದ ದಟ್ಟವಾದ ಕೌಟುಂಬಿಕ ಅನುಭವ, ದಿನನಿತ್ಯದ ಜೀವನದಲ್ಲಿ ಮೂಡಿ ಮಾಯವಾಗುವ ಸೂಕ್ಷ್ಮ ಕ್ರೌರ್ಯ-ಹಿಂಸೆ-ಸಂವೇದನೆಗಳ ಚಿತ್ರಣ, ಮಾನವೀಯ ಸಂಘರ್ಷಗಳ ಪದರು-ಪದರುಗಳ ವಿಶ್ಲೇಷಣೆ ಇವುಗಳನ್ನೆಲ್ಲ ಮೆಚ್ಚಿಕೊಂಡೆ. ‘ಸಂಸ್ಕಾರ’ ನನಗೆ ಹುಚ್ಚು ಹಿಡಿಸಿತ್ತು. ‘ವಂಶವೃಕ್ಷ’ದ ಚಿತ್ರಕತೆ ಬರೆಯುವ ಪ್ರಕ್ರಿಯೆ ಆಸ್ವಾದಕರವಾಗಿತ್ತು” ಎಂದು ಹೇಳುತ್ತಿದ್ದರು.
ಈ ಚಿತ್ರದ ಚಿತ್ರೀಕರಣದ ವೇಳೆ ಮತ್ತೊಂದು ಹಾಸ್ಯಸ್ಪದ ವಿಷಯವೇನೆಂದರೆ ಕಥೆಗೆ ತಕ್ಕಂತೆ ಕಾರಂತರು ಮತ್ತು ಕಾರ್ನಾಡರು ಸೇರಿ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯನ್ನು ಹುಡುಕಿದರು. ಆದರೆ ಚಿತ್ರೀಕರಣಕ್ಕೆ ಸಿಕ್ಕ ಛಾಯಗ್ರಾಹಕ ಮುಸಲ್ಮಾನ ಯುವಕ ‘ಶರೀಫ’. ಇವನು ಛಾಯಗ್ರಾಹಣ ವೇಳೆ ಮನೆಯಲ್ಲಿ ಓಡಾಡುವುದು ಅಸಮಾಧಾನಕರವಾಗಬಹುದು ಎಂದು, ಕಾರ್ನಾಡರು ಶರೀಫನಿಗೆ ‘ಗುರು’ ಎಂದು ನಾಮಕರಣ ಮಾಡಿದ್ದರು. ಛಾಯಗ್ರಾಹಣ ನಡೆದಾಗ ಒಂದು ಸಲ ಕೂಡ ಅಪ್ಪಿತಪ್ಪಿ ಶರೀಫ್ ಎಂದು ಹೆಸರು ಹಿಡಿದು ಕರೆದಿರಲಿಲ್ಲ. ಚಿತ್ರೀಕರಣ ಮುಗಿಸಿದ ನಂತರ ಆ ಮನೆಯವರು “ಛಾಯಗ್ರಾಹಕನ ಹೆಸರು ಶರೀಫ್ ಎಂಬುದನ್ನು ತಾವು ಮೊದಲನೇ ದಿನವೇ ‘ಪ್ರಜಾವಾಣಿ’ಯಲ್ಲಿ ಓದಿ ತಿಳಿದುಕೊಂಡಿದ್ದೆವೆಂಬುದನ್ನು” ಎಂದು ಕಾರ್ನಾಡ್ ಮತ್ತು ಕಾರಂತರಿಗೆ ಸ್ಪಷ್ಟಪಡಿಸಿದರು.
ವಂಶವೃಕ್ಷ ಸಿನಿಮಾದ ನಿರ್ದೇಶನದಲ್ಲಿ ಕಾರಂತರ ಜೊತೆಗಿನ ಸಂಬಂಧವನ್ನು ಹೇಗಿತ್ತು ಎಂಬುದನ್ನು ಕಾರ್ನಾಡರು ತಮ್ಮ ಆತ್ಮ ಕಥೆ `ಆಡಾಡತ ಆಯುಷ್ಯ’ ದಲ್ಲಿ ಹೀಗೆ ಹೇಳಿದ್ದಾರೆ, “ನಾನು-ಕಾರಂತ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸುವುದು ಎಂದು ಕೊಂಡಿದ್ದೆವು. ಅದೇನೂ ಸುಲಭ ಕೆಲಸವಲ್ಲ ಎಂಬುದರ ಅರಿವು ಇಬ್ಬರಿಗೂ ಇತ್ತು. ಸುದೈವದಿಂದ ನಮ್ಮಿಬ್ಬರಲ್ಲಿದ್ದ ಕೊರತೆಗಳನ್ನು ನಾವು ಪರಸ್ಪರರ ಅನುಭವದಿಂದ, ಸಾಮರ್ಥ್ಯಗಳಿಂದ ತುಂಬಿಕೊಂಡೆವಲ್ಲದೆ, ಎಲ್ಲಿಯೂ ನಾನು ಹೇಳಿದ್ದೇ ನಡೆಯಬೇಕು ಎಂಬ ಅಹಂಕಾರಕ್ಕೆ ಆಸ್ಪದ ಕೊಡಲಿಲ್ಲ. ನಮ್ಮಲ್ಲಿ ಚಿಕ್ಕ ಪುಟ್ಟ ಮತಬೇಧಗಳು, ಮನಸ್ತಾಪಗಳಾದರೂ ಪ್ರತಿಯೊಂದು ಅಂಶದ ಬಗ್ಗೆ ಆಪ್ತ ಚರ್ಚೆ ನಿರಂತರವಾಗಿ ನಡೆದೇ ಇತ್ತು. ನಾನು ‘ವಂಶವೃಕ್ಷ’ದ ಚಿತ್ರೀಕರಣದ ಹೊತ್ತಿಗೆ ಕಾರಂತರಿಂದ ಸಾಕಷ್ಟು ಕಲಿತೆ”.

ಮೈಸೂರಿನ ಪ್ರೀಮಿಯರ್ ಸ್ಟೂಡಿಯೋಸ್ ನ ಮಾಲೀಕರಾದ ಎಂ.ಎನ್ ಬಸವರಾಜಯ್ಯ ‘ವಂಶವೃಕ್ಷ’ ಚಿತ್ರಕ್ಕೆ ಮೊದಲು ಒಂದು ಲಕ್ಷ ಹಣವನ್ನು ಹೂಡಿದ್ದರು. ನಂತರ ಚಿತ್ರೀಕರಣ ಮುಗಿದ ನಂತರ ಪ್ರಥಮ ಸಂಕಲಿತ ಪ್ರತಿ ನೋಡಿ ಬಸವರಾಜಯ್ಯ ಗಾಬರಿಯಾಗಿದ್ದರಂತೆ. ಅಲ್ಲದೇ ಅಯ್ಯರ್, ಕಾರ್ನಾಡ್ ಮತ್ತು ಕಾರಂತರನ್ನು ಸಭೆ ಕರಿಸಿ “ನನಗೆ ಈ ಚಿತ್ರವೇ ಅರ್ಥವಾಗುವುದಿಲ್ಲ. ಇದನ್ನು ಹೀಗಿಯೇ ಬಿಟ್ಟರೆ ಇದು ಎರಡು ದಿನ ಕೂಡ ಓಡುವುದಿಲ್ಲ ಎಂಬುದು ಖಂಡಿತ. ಇದನ್ನು ಅಮೂಲಾಗ್ರವಾಗಿ ಮತ್ತೆ ಸಂಕಲನ ಮಾಡಲೇಬೇಕು. ಎಂ.ಆರ್.ವಿಠ್ಠಲ್, ಪುಟ್ಟಣ್ಣ ಕಣಗಾಲರಂಥ ನುರಿತ ನಿರ್ದೇಶಕರಿಗೆ ಈ rushes ತೋರಿಸಿ ಅವರ ಮಾರ್ಗದರ್ಶನದಲ್ಲಿ re-edit ಮಾಡಲೇಬೇಕು” ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಕಾರ್ನಾಡರು “ಈ ದೊಡ್ಡವರು ಬಂದು ಏನು ಪ್ರಯೋಜನ? ಅವರ ಮನಸ್ಸಿನಂತೆ ಸಂಕಲವಾದರೆ, ಚಿತ್ರ ಅವರದೂ ಆಗುವುದಿಲ್ಲ, ನಮ್ಮದೂ ಆಗುವುದಿಲ್ಲ” ಎಂದಿದ್ದರು. ನಂತರ ಬಸವರಾಜಯ್ಯ “ನಾನು ಹಾಕಿದ ದುಡ್ಡಿಗೆ ಒಂದು ಲಕ್ಷ ಹಣ ವಾಪಸ್ಸು ಕೊಟ್ಟುಬಿಡಿ, ನನಗೂ ಈ ಚಿತ್ರಕ್ಕೂ ಸಂಬಂಧವೇ ಬೇಡ” ಎಂದು ಕೋಪಿಸಿಕೊಂಡು ಆ ಸಭೆಯಿಂದ ಹೊರಟು ಹೋದರು.
ಇದಾದ ನಂತರ ಅಯ್ಯರ್ ಹಣವನ್ನು ಒದಗಿಸಿಕೊಂಡು ಯಶಸ್ವಿಯಾಗಿ ಚಿತ್ರೀಕರಣವನ್ನು ಮುಗಿಸಿ, ಚಂದ್ರಶೇಖರ ಕಂಬಾರ ರಚಿಸಿದ ‘ಮುಗಿಲ ತುಂಬ ಬೇರುಬಿಳಲಿನಾಲದಾ ಮರ’ ಗೀತೆಯನ್ನು ಚಿತ್ರದುದ್ದಕ್ಕೂ ಪಲ್ಲವಿಯಂತೆ ಬಳಸಲಾಗಿತ್ತು. ಅಲ್ಲದೆ ಆ ಕಾಲದ ಪತ್ರಕರ್ತರಲ್ಲಿ ವೈಎನ್ಕೆ, ವಿ.ಎನ್,ಸುಬ್ಬರಾವ್, ಎಂ.ಬಿ.ಸಿಂಗ್, ವೈಕುಂಠರಾಜು ಮೊದಲಾದ ಹಲವರಿಗೆ ಚಲನಚಿತ್ರ ಮಾಧ್ಯಮದಲ್ಲಿ ವ್ಯಕ್ತಿಗತವಾದ ಆಸಕ್ತಿಯಿದ್ದ ಕಾರಣ, ದೈನಿಕ-ವಾರ-ಮಾಸಿಕ ಪತ್ರಿಕೆಗಳಲ್ಲಿ ‘ವಂಶವೃಕ್ಷ’ಕ್ಕೆ ಭರ್ಜರಿ ಪ್ರಸಿದ್ಧಿ ಸಿಕ್ಕಿತು ಎಂಬುದನ್ನು ಗಿರೀಶ್ ಕಾರ್ನಾಡ್ ರವರು ಹೇಳಿಕೊಂಡಿದ್ದಾರೆ.
81 ವರುಷದಲ್ಲಿ ‘ಆಡಾಡತ ಆಯುಷ್ಯ’ನ ಕಥೆ, ಕಾದಂಬರಿ, ನಾಟಕಗಳೆಲ್ಲವೂ ಮುಂದಿನ ಪೀಳಿಗೆಯವರಿಗೆ ಪರಿಚಯಿಸುವ ಮತ್ತು ತಿಳಿಸುವ ಹಾಗೂ ಎಂದೆಂದಿಗೂ ಶಾಶ್ವತವಾಗಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಕನ್ನಡಿಗರದ್ದು.