ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿನ ಪ್ರಮಾಣದ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಅದೂ ಅಲ್ಲದೆ ಸೋಂಕಿನ ಮೂಲವೇ ಗೊತ್ತಿಲ್ಲದ ರೋಗಿಗಳು ಸಾಯುತ್ತಿರುವುದು ಸರ್ಕಾರದ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆ ಕರೋನಾ ಸೋಂಕು ಸಮುದಾಯಕ್ಕೆ ಹರಡುತ್ತಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಂಕಷ್ಟ ಎದುರಾಗಲಿದೆ ಎನ್ನುವ ಬಗ್ಗೆ ಸರ್ಕಾರಕ್ಕೆ ತಜ್ಞರು ವರದಿ ನೀಡಿದ್ದಾರೆ. ಅದೇ ಕಾರಣದಿಂದ ರಾಜ್ಯ ಸರ್ಕಾರ ಕರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮೊರೆ ಹೋಗಲಿದೆ ಎನ್ನುವ ಊಹಾಪೋಹಗಳು ಜನರ ನಡುವೆ ಹರಿದಾಡಿತ್ತು.
ಕರೋನಾ ಸೋಂಕು ಏರಿಕೆಯಾಗುತ್ತಿದ್ದು, ಪರಿಸ್ಥಿತಿ ಸರಿಯಿಲ್ಲ ಎನ್ನುವುದನ್ನು ಒಪ್ಪಿಕೊಂಡಿರುವ ಬಹುತೇಕ ಸಚಿವರು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದಿದ್ದರು. ಬೆಂಗಳೂರಿನ ಬಹುತೇಕ ಶಾಸಕರು ಲಾಕ್‌ಡೌನ್ ಮಾತ್ರವೇ ಜನರನ್ನು ಉಳಿಸಲು ಇರುವ ಏಕೈಕ ಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಲಾಕ್‌ಡೌನ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳುವ ಮೂಲಕ ಲಾಕ್‌ಡೌನ್ ಆಗುತ್ತೆ, ಕರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಮುಂದಾಗುತ್ತೆ ಎಂದು ನಿರೀಕ್ಷೆಯಿಂದ ಕಾಯುತ್ತಿದ್ದ ಜನರಿಗೆ ಮಾಧುಸ್ವಾಮಿ ಶಾಕ್ ಕೊಟ್ಟಿದ್ದು, ಕೋವಿಡ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಆಗಿದ್ದೇನು..?
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾದ ವಿಚಾರಗಳನ್ನು ಮಾಧ್ಯಮಗಳ ಎದುರು ಹೇಳಿದರು. 2012ರಿಂದಲೂ ಇಲ್ಲಿ ತನಕ ಬಾಕಿ ಇರುವ 9.74 ಲಕ್ಷ ಮನೆ ನಿರ್ಮಾಣಕ್ಕೆ ಸಂಪುಟದಲ್ಲಿ ಹಸಿರು ನಿಶಾನೆ ತೋರಿಸಲಾಗಿದೆ. ಅದಕ್ಕಾಗಿ 10,194 ಕೋಟಿ ಹಣ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದಿದ್ದಾರೆ. ಇನ್ನೂ ಪದ್ಮ ಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲು ಸಿಎಸ್ ನೇತೃತ್ವದಲ್ಲಿ ಕ್ಯಾಬಿನೆಟ್ ಉಪ ಸಮಿತಿ ರಚನೆ ಮಾಡಲಾಗುವುದು ಎಂದರು. ಕರೋನಾ ಸೋಂಕಿತರಿಗೆ ಅನುಕೂಲ ಆಗುವಂತೆ 32.02 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆ್ಯಂಬ್ಯಲೆನ್ಸ್ ಖರೀದಿಗೆ ಸಂಪುಟ ಒಪ್ಪಿಗೆ ನೀಡಿದ್ದು, 120 ವಾಹನ ಖರೀದಿಸಲಾಗುತ್ತದೆ ಎಂದಿದ್ದಾರೆ.

ಜನಪ್ರತಿನಿಧಿಗಳ ಸಂಬಳಕ್ಕೆ ಕತ್ತರಿ..! ಜಮೀನೂ ಮಾರಾಟ..!
ಕರೋನಾ ಜನರ ಸಾವು ನೋವಿನ ಜೊತೆ ಅಷ್ಟೇ ಆಟವಾಡುತ್ತಿಲ್ಲ. ದೇಶದ, ರಾಜ್ಯದ ಆರ್ಥಿಕ ವ್ಯಸವತೆ ಬರಿದಾಗುವಂತೆ ಮಾಡಿದೆ. ಹಾಗಾಗಿ ಸಚಿವರು, ಶಾಸಕರು ಸೇರಿದಂತೆ ವಿಧಾನ ಪರಿಷತ್ ಸದಸ್ಯರ ವೇತನದಲ್ಲಿ ಶೇಕಡ 30 ರಷ್ಟು ಕಡಿತ ಮಾಡಲು ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇನ್ನೂ ಖಾಸಗಿ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಕೊಟ್ಟಿರುವ ಸರ್ಕಾರಿ ಭೂಮಿಯನ್ನು ಖರೀದಿಗೆ ಕೊಟ್ಟು ಬಿಡುವ ಮೂಲಕ ಖಜಾನೆ ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಬೇಸಾಯ, ಕೈಗಾರಿಕೆ, ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ಕೊಟ್ಟಿರುವ ಭೂಮಿಯನ್ನ ಖರೀದಿಗೆ ಕೊಡಲು ನಿರ್ಧಾರ ಮಾಡಲಾಗಿದೆ. ಖಾಸಗಿ ಸಂಘ ಸಂಸ್ಥೆಗಳಿಗೆ ಈಗಾಗಲೇ ಕೊಟ್ಟಿರುವ ಭೂಮಿಯನ್ನು ಮಾರಾಟಕ್ಕೆ ಕೊಡಲು ನಿರ್ಧಾರ ಮಾಡಿದೆ. ರೇಟ್ ಫಿಕ್ಸ್ ಮಾಡಿ ಸೇಲ್ ಡೀಡ್ ಮಾಡಿಕೊಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಸರ್ಕಾರದ ಬೊಕ್ಕಸ ತುಂಬಿಸಲು ನಿರ್ಧಾರ ಮಾಡಿದೆ.
ಖಾಸಗಿ ಆಸ್ಪತ್ರೆ ಚಿಕಿತ್ಸಾ ದರ ನಿಗದಿ ಕುರಿತು ಅನುಮೋದನೆ ಕೊಡಲಾಗಿದೆ. ಆದರೆ ಸರ್ಕಾರ ನಿಗದಿ ಮಾಡಿರುವ ದರವನ್ನು ಖಾಸಗಿ ಆಸ್ಪತ್ರೆಗಳು ಒಪ್ಪಿಲ್ಲ. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಯ ಮುಖ್ಯಸ್ಥರನ್ನು ಸಭೆ ಕರೆದು ಸಿಎಂ ಬಿ.ಎಸ್ ಯಡಿಯೂರಪ್ಪ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಇನ್ನೂ ತಿರುಪತಿ ತಿರುಮಲದಲ್ಲಿ ನಮ್ಮ ಸರ್ಕಾರಕ್ಕೆ ಸೇರಿದ ೭.೫ ಎಕರೆ ಭೂಮಿ ಇದೆ. ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಇದೀಗ ತೀರ್ಪು ಕರ್ನಾಟಕದ ಪರವಾಗಿ ಬಂದಿದೆ. ಅಲ್ಲಿ ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಅತಿಥಿ ಗೃಹ, ಕಲ್ಯಾಣ ಮಂಟಪ ಸೇರಿದಂತೆ ಹಲವು ಯೋಜನೆ ಕೈಗೆತ್ತಿಕೊಳ್ಳುತ್ತೇವೆ ಎಂದಿದ್ದಾರೆ.
ಲಾಕ್‌ಡೌನ್ ಕುರಿತು ಅಲ್ಲಸಲ್ಲದ ಹೇಳಿಕೆ ನೀಡಬೇಡಿ..!
ಕರೋನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಹಲವು ಸಚಿವರು ಇಂದಿನ ಕ್ಯಾಬಿನೆಟ್‌ನಲ್ಲಿ ಅಂತಿಮ ನಿರ್ಧಾರ ಮಾಡಲಾಗುತ್ತದೆ. ಸಿಎಂ ಬಿ.ಎಸ್ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ತಾರೆ ಎಂದು ಹಲವು ಸಚಿವರು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು. ಆದರೆ, ಲಾಕ್‌ಡೌನ್ ಬಗ್ಗೆ ತುಟಿ ಬಿಚ್ಚದಂತೆ ಸಚಿವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಲಾಕ್‌ಡೌನ್ ಬಗ್ಗೆ ಶೀಘ್ರವಾಗಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಸಚಿವರು ಭಿನ್ನಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಬೇಡಿ ಎಂದಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಕರೋನಾ ವಿಚಾರ ಬಿಟ್ಟು ಬೇರೆಲ್ಲಾ ವಿಚಾರಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ನಾಳೆ ಸರ್ವ ಪಕ್ಷ ಸಭೆ ಕರೆಯಲಾಗಿದ್ದು, ಮುಖ್ಯಮಂತ್ರಿ ಯಾವ ನಿರ್ಧಾರ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Also Read: ಖಾಸಗಿಯವರಿಗೆ ತಾತ್ಕಾಲಿಕವಾಗಿ ನೀಡಿದ್ದ ಜಮೀನನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು ನಗರದಲ್ಲಿ ಯಾವುದೇ ಲಾಕ್ ಡೌನ್ ಇರುವುದಿಲ್ಲ. ಅದರ ಅಗತ್ಯವೂ ಬೆಂಗಳೂರಿಗೆ ಇಲ್ಲ. ಕೊರೋನಾ ನಿಯಂತ್ರಣದಲ್ಲಿ ನಾವು ಮಾದರಿಯಾಗಿದ್ದೇವೆ. ಇರುವುದರಲ್ಲೇ ಪರಿಸ್ಥಿತಿ ನಿಭಾಯಿಸಲು ಸಶಕ್ತರಾಗಿದ್ದೇವೆ. ಮುಖ್ಯಮಂತ್ರಿಗಳೂ ಇದನ್ನೇ ಹೇಳಿದ್ದಾರೆ. ಸೀಲ್ ಡೌನ್ ಆಗಿರೋ ಪ್ರದೇಶ ಬಿಟ್ಟರೆ ಬೇರೆ ಯಾವುದೇ ಪ್ರದೇಶ ಮತ್ತೆ ಲಾಕ್ ಡೌನ್ ಆಗಲ್ಲ. ಪರಿಸ್ಥಿತಿ ಬಿಗಡಾಯಿಸಿದ್ದಲ್ಲಿ ಮುಂದಿನ ತೀರ್ಮಾನವನ್ನು ಮುಖ್ಯಮಂತ್ರಿ ಮಾಡಲಿದ್ದಾರೆ. ಬೆಂಗಳೂರಿಗರು ಹೆದರಬೇಕಾದ ಅಗತ್ಯ ಇಲ್ಲ ಎಂದು ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.












