ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಮತ್ತೆ ಹಿಡಿಯಬಹುದೆಂಬ ನಿರೀಕ್ಷೆ ಇತ್ತಾದರೂ ಕಳೆದ ಬಾರಿಗಿಂತಲೂ ದೊಡ್ಡ ಮಟ್ಟದ ಗೆಲುವು ಸಿಕ್ಕಿರುವುದು ಬಿಜೆಪಿಗರಿಗೂ ಅಚ್ಚರಿ ತಂದಿರಬಹುದು. ಕರ್ನಾಟಕದಲ್ಲಂತೂ ಪಕ್ಷದ ಮುಖಂಡರೇ ನಿಬ್ಬೆರಗಾಗುವ ಫಲಿತಾಂಶ ಸಿಕ್ಕಿದೆ. ಆದರೆ, ಬಿಜೆಪಿಯ ಪ್ರಚಂಡ ಗೆಲುವು ಹಾಗೂ ಮೈತ್ರಿ ಪಕ್ಷಗಳ ಹೀನಾಯ ಸೋಲನ್ನು ಅವಲೋಕಿಸುವುದಾರೆ, ಉಭಯ ಪಕ್ಷಗಳೂ ನೆನಪಿಡಬೇಕಾದ ಹಲವು ಸಂಗತಿಗಳು ಕಂಡುಬರುತ್ತವೆ.
ಬಿಜೆಪಿಯ ಅಭೂತಪೂರ್ವ ಗೆಲುವು ಮೋದಿಯ ಅಭಿಮಾನಿಗಳಿಗೆ ಎಷ್ಟು ಖುಷಿ ಕೊಟ್ಟಿದೆಯೋ, ಅವರ ಟೀಕಾಕಾರರನ್ನು ಅದಕ್ಕಿಂತಲೂ ದೊಡ್ಡ ಮಟ್ಟದ ಸಂಕಟಕ್ಕೆ ಈಡುಮಾಡಿದೆ. ಇದಕ್ಕೆ ಮುಖ್ಯ ಕಾರಣ, ಮೋದಿಯ ಗೆಲುವನ್ನು ಟೀಕಿಸಲು ಮುಂದಾದಾಗ ಎದುರಾಗುವ ಪರ್ಯಾಯದ ಪ್ರಶ್ನೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಮೆರೆದಿತ್ತೋ ಅದೇ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಜೊತೆಗೆ, ಅಧಿಕಾರವನ್ನು ಅತ್ಯಂತ ನಾಜೂಕಾಗಿ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಂತಿದೆ. ಜನರು ಏನನ್ನು ತಿರಸ್ಕರಿಸುತ್ತಾರೆ ಹಾಗೂ ಏನೇನು ಮಾಡದಿದ್ದರೆ ಉಳಿಯಬಹುದು ಎಂಬುದಕ್ಕೆ ಕಾಂಗ್ರೆಸ್ ಪಕ್ಷ ಎದುರಿಸಿದ ಕಷ್ಟಗಳು ಉದಾಹರಣೆಯಂತೆ ಕಣ್ಣ ಮುಂದಿವೆ.
ಆದರೆ, ಈಗ ಬಿಜೆಪಿಯ ಮುಂದಿರುವ ಸವಾಲುಗಳೇ ಬೇರೆ. ಅದರಲ್ಲಿ ಪ್ರಮುಖವೆನಿಸುವ ಅಂಶಗಳು; ಪ್ರಬಲ ವಿರೋಧ ಪಕ್ಷವೇ ಇಲ್ಲದ ಸಂದರ್ಭದಲ್ಲೂ ಆಡಳಿತ ಪಕ್ಷ ಹೇಗೆ ಸ್ವಯಂ ನಿಯಂತ್ರಣದೊಂದಿಗೆ ಹೆಜ್ಜೆ ಇಡುತ್ತದೆ ಎಂಬುದು ಹಾಗೂ ಅವರ ಸ್ವಂತ ಅಭಿಮಾನಿಗಳನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳುತ್ತದೆ ಎನ್ನುವುದು. ಐದು ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಏರಿದಾಗ ಇದ್ದ ಪರಿಸ್ಥಿತಿಗೂ, ಈಗಿನದಕ್ಕೂ ಹಲವು ವ್ಯತ್ಯಾಸಗಳಿವೆ. ಅಂದು ಆಡಳಿತದ ಆರಂಭದಲ್ಲಿ ಹಿಂದಿನ ಸರ್ಕಾರದ ಲೋಪದೋಷಗಳನ್ನು ಎತ್ತಿಹಿಡಿಯಲು ಇದ್ದ ಅವಕಾಶ ಈಗ ಕಡಿಮೆಯಾಗಿದೆ ಹಾಗೂ ಬಿಜೆಪಿಯನ್ನು ಒಪ್ಪಿಕೊಳ್ಳದವರು ಸರ್ಕಾರವನ್ನು ಇನ್ನಷ್ಟು ಕಟುವಾಗಿ ಟೀಕಿಸುವ ದಿನಗಳು ಆರಂಭವಾಗಲಿವೆ. ಇದನ್ನು ಮೋದಿಯ ನೇತೃತ್ವದ ಸರ್ಕಾರ ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯವಾಗುತ್ತದೆ.
ಅತಿ ದೊಡ್ಡ ಸಂಖ್ಯೆಯ ಜನರೇ ತಮ್ಮ ಜೊತೆಗಿರುವಾಗ ತಮ್ಮನ್ನು ವಿರೋಧಿಸುವವರ ಹಿತವನ್ನು ಕಾಪಾಡಿಕೊಂಡು ನಡೆಯುವುದು ಯಾವುದೇ ಸರ್ಕಾರಕ್ಕಾದರೂ ಸವಾಲೇ ಸರಿ! ಪ್ರಸ್ತುತ ಬಿಜೆಪಿಗೆ ಅತಿ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಮೋದಿಯನ್ನು ಟೀಕಿಸುವ ಹಾಗೂ ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧ ತಿರುಗಿಬೀಳುವವರ ಸಂಖ್ಯೆ ಸಹಜವಾಗಿ ಹೆಚ್ಚಿದೆ. ಸೈದ್ಧಾಂತಿಕ ಪ್ರತಿಷ್ಠೆಯಿಂದ ಚರ್ಚೆಗೆ ಒಳಪಡಬೇಕಾದ ಹಲವು ವಿಚಾರಗಳನ್ನು ಹಾಸ್ಯಾಸ್ಪದ ವಸ್ತುಗಳನ್ನಾಗಿಸುವ ಕೆಟ್ಟ ಪದ್ಧತಿ ಇನ್ನಷ್ಟು ಬೃಹದಾಕಾರವಾಗಿ ವ್ಯಾಪಿಸುವ ಸಾಧ್ಯತೆ ಇದೆ. ತಮಗೆ ಆಗದವರು ಯಾವುದನ್ನು ಬೆಂಬಲಿಸುತ್ತಾರೋ, ಏನನ್ನು ಒಪ್ಪಿಕೊಳ್ಳುತ್ತಾರೋ ಅದನ್ನು ತಾವು ವಿರೋಧಿಸಬೇಕು ಎಂಬ ಮನಸ್ಥಿತಿ ಎಡ, ಬಲವೆಂಬ ಭೇದವಿಲ್ಲದೆ ಎಲ್ಲರಲ್ಲೂ ಹುಟ್ಟಿಕೊಂಡಿರುವುದರಿಂದ ಬಿಜೆಪಿಗೆ ಇದು ದೊಡ್ಡ ಸವಾಲಾಗಬಹುದು. ಜೊತೆಗೆ ಸಧೃಡ ವಿರೋಧ ಪಕ್ಷವೂ ಇಲ್ಲದಿರುವುದರಿಂದ ಸರ್ಕಾರ ನೇರವಾಗಿ ಟೀಕೆಗೆ ಗುರಿಯಾಗುವ ಸಾಧ್ಯತೆಗಳೂ ಹೆಚ್ಚು. ಇಂತಹ ವಿಚಾರಗಳೇ ಮುಂಬರುವ ದಿನಗಳಲ್ಲಿ ಅತಿದೊಡ್ಡ ಮುಳುವಾಗಿ ಪರಿಣಮಿಸಿದರೂ ಅಚ್ಚರಿಯೇನಲ್ಲ. ಇದರೊಟ್ಟಿಗೆ ಉರಿವ ಬೆಂಕಿಗೆ ತುಪ್ಪ ಸುರಿಯುವಂತೆ ಆಗದಿರಲು ಅಧಿಕಾರಕ್ಕೇರಲಿರುವ ಬಿಜೆಪಿ ತಮ್ಮ ಅಭಿಮಾನಿಗಳಿಂದ ಅತಿರೇಕದ ವರ್ತನೆ ವ್ಯಕ್ತವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ.
ಇನ್ನು, ಈಗ ಸೋಲುಂಡಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳ ವಿಚಾರಕ್ಕೆ ಬಂದರೆ, ಇವರು ತಮ್ಮ ಸೋಲನ್ನು ಪರಾಮರ್ಶಿಸಿಕೊಂಡು ಸುಧಾರಿಸಿಕೊಳ್ಳಬೇಕೇ ವಿನಾ ಆಧಾರವಿಲ್ಲದ ಆರೋಪಗಳನ್ನು ಮಾಡಿ ಅವಿವೇಕತನ ಪ್ರದರ್ಶಿಸದಿದ್ದರೆ ಒಳಿತು. ಒಂದು ವೇಳೆ, ಮೋದಿಯ ವಿರೋಧಿಗಳೆಲ್ಲ ನಮ್ಮವರು ಎಂಬ ಪೊಳ್ಳು ನಂಬಿಕೆಯನ್ನು ಮುಂದುವರಿಸಿಕೊಂಡು ತಮ್ಮ-ತಮ್ಮ ಪಕ್ಷದೊಳಗಿನ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದೆ ಇದ್ದರೆ, ತಲೆಯ ಮೇಲೆ ಚಪ್ಪಡಿ ಎಳೆದುಕೊಂಡಂತಾಗುವುದು ನಿಶ್ಚಿತ. ಕರ್ನಾಟಕದ ಪರಿಸ್ಥಿತಿಯನ್ನೇ ಗಮನಿಸಿ ಇದನ್ನು ವಿಶ್ಲೇಷಿಸುವುದಾದರೆ, ಮೈತ್ರಿ ಪಕ್ಷದ ಆಡಳಿತವಿದ್ದೂ ಬಿಜೆಪಿ 28ರಲ್ಲಿ 25 ಸ್ಥಾನ ಗಳಿಸಿರುವುದು ಆಶ್ಚರ್ಯಕರ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ನಿಂತು ಚುನಾವಣೆ ಎದುರಿಸಿದ್ದರಿಂದ ಬಿಜೆಪಿ ಕಳೆದ ಬಾರಿಯಷ್ಟು ಸೀಟು ಗಳಿಸಲೂ ಪ್ರಯಾಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಅಂದಾಜಿತ್ತು. ಆದರೆ, ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿವೆ. ಮೈತ್ರಿ ಪಕ್ಷಗಳ ನಡುವಿನ ಮನಸ್ತಾಪ, ಪ್ರತಿಷ್ಠೆ ಇತ್ಯಾದಿ ವಿಚಾರಗಳು ಮೈತ್ರಿಯ ಸೋಲಿಗೆ ಕಾರಣಗಳಾಗಿ ಕಂಡರೂ, ಅದರೊಟ್ಟಿಗೆ ಕುಟುಂಬ ರಾಜಕಾರಣವೂ ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯಲಾಗದು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಈ ಬಾರಿಯೂ ರಾಹುಲ್ ಗಾಂಧಿ ಅವರನ್ನೇ ಪ್ರಧಾನಮಂತ್ರಿ ಅಭ್ಯರ್ಥಿಯಂತೆ ಬಿಂಬಿಸಿ ಕುಟುಂಬ ರಾಜಕಾರಣವನ್ನು ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿತು. ಅಂತೆಯೇ, ರಾಜ್ಯದಲ್ಲಿ ಜೆಡಿಎಸ್ ಪಕ್ಷವೂ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರನ್ನೂ ಅಭ್ಯರ್ಥಿಯನ್ನಾಗಿಸಿ ಕುಟುಂಬ ರಾಜಕಾರಣವನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದಿತು. ಜೆಡಿಎಸ್ ಪಕ್ಷದ ಪಾಲಿಗೆ ಭದ್ರಕೋಟೆಯಾದ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಿಂದಲೇ ಮೊಮ್ಮಕ್ಕಳನ್ನು ಕಣಕ್ಕಿಳಿಸಿ, ಅವರ ಗೆಲುವಿನ ಹಾದಿಯನ್ನು ಸುಗಮವಾಗಿಸುವ ಲೆಕ್ಕಾಚಾರ ದೇವೇಗೌಡರದ್ದೂ ಆಗಿತ್ತು.
ಆದರೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದಂತೆ, ಮಂಡ್ಯದಲ್ಲೂ ನಿಖಿಲ್ ಗೆಲ್ಲುತ್ತಾರೆ ಎಂಬ ನಂಬಿಕೆ ಹಾಗೂ ತುಮಕೂರಿನಲ್ಲಿ ದೇವೇಗೌಡರು ಮೈತ್ರಿಯ ಸಹಭಾಗಿತ್ವದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಸಂಪೂರ್ಣ ಕೈ ಕೊಟ್ಟಿದ್ದು ಜೆಡಿಎಸ್‍ಗೆ ಅರಗಿಸಿಕೊಳ್ಳಲಾಗದ ಆಘಾತ. ಈಗ ತುಮಕೂರಿನಲ್ಲಿ ದೇವೇಗೌಡರು ಸೋಲುಂಡಿರುವುದನ್ನು ಮೊಮ್ಮಗನಿಗಾಗಿ ಮಾಡಿದ ತ್ಯಾಗ ಎಂದು ಬಿಂಬಿಸಲಾಗುತ್ತಿದೆಯಾದರೂ, ಕುಟುಂಬ ರಾಜಕಾರಣವನ್ನು ವಿಸ್ತರಿಸುವ ಸ್ವಾರ್ಥ ತ್ಯಾಗಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ಪ್ರಜ್ವಲ್ ರೇವಣ್ಣ ತಮ್ಮ ಗೆಲುವು ಕಂಡ ನಂತರ ತಾತನಿಗಾಗಿ ರಾಜಿನಾಮೆ ನೀಡುತ್ತೇನೆ, ಅವರೇ ಮತ್ತೊಮ್ಮೆ ಸ್ಪರ್ಧಿಸಿ ಗೆಲ್ಲಲಿ ಎನ್ನುವ ಭಾವನಾತ್ಮಕ ಮಾತುಗಳನ್ನಾಡಿರುವುದು ಜೆಡಿಎಸ್ ಪಕ್ಷದಲ್ಲಿ ಕುಟುಂಬ ಪ್ರೇಮ ಎಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ. ಜೊತೆಗೆ ಇಂತಹ ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರಿಂದ ಮತ್ತಷ್ಟು ಅನುಕಂಪ ಗಿಟ್ಟಿಸಿಕೊಳ್ಳುವ ಹಾಗೂ ಮುಂದಿನ ರಾಜಕೀಯ ಭವಿಷ್ಯವನ್ನು ಈಗಿನಿಂದಲೇ ಬಲಪಡಿಸಿಕೊಳ್ಳುವ ತಂತ್ರವೂ ಅವರಲ್ಲಿ ಇದ್ದಿರಬಹುದು. ಇನ್ನು, ಕೆಲವು ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಅನರ್ಹತೆ ಭೀತಿ ಎದುರಿಸುತ್ತಿರುವುದರಿಂದ ಅದರಲ್ಲಾಗುವ ಮುಜುಗರ ತಪ್ಪಿಸಿಕೊಳ್ಳಲು ಈ ನಡೆ ಅನುಸರಿಸಿರಬಹುದು ಎನ್ನಲಾಗುತ್ತಿದೆ. ಅದೇನೇ ಇದ್ದರೂ, ಅವರು ಹೇಳುತ್ತಿರುವ ಮಾತುಗಳಲ್ಲಿ ಮೇಲ್ನೋಟಕ್ಕೆ ಎದ್ದುಕಾಣುತ್ತಿರುವುದು ಮಾತ್ರ ಕುಟುಂಬ ರಾಜಕಾರಣದ ಬಣ್ಣ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸಹ ಹೀಗೆಯೇ ಕುಟುಂಬ ರಾಜಕಾರಣದ ಮೋಹದಿಂದ ಸಮರ್ಥ ನಾಯಕತ್ವ ಇಲ್ಲದೆ ನಗೆಪಾಟಲಿಗೆ ಈಡಾಗುವ ಸ್ಥಿತಿಗೆ ಬಂದು ನಿಂತಿದೆ.
ಬಿಜೆಪಿ ಪಕ್ಷದ ದೊಡ್ಡ ಮಟ್ಟದ ಗೆಲುವಿಗೆ ಕಾರಣವಾದ ಅಂಶಗಳಲ್ಲಿ ಇವುಗಳದ್ದೂ ದೊಡ್ಡ ಪಾಲಿದೆ. ಇದರೊಟ್ಟಿಗೆ ಬಿಜೆಪಿ ಪಕ್ಷ ಚುನಾವಣೆ ಎದುರಿಸಿದ್ದು ನರೇಂದ್ರ ಮೋದಿ ಎಂಬ ವ್ಯಕ್ತಿಯಿಂದ. ಬಿಜೆಪಿ ಕಣಕ್ಕಿಳಿಸಿದ ಬಹುತೇಕ ಅಭ್ಯರ್ಥಿಗಳು ಇತರ ಪಕ್ಷಗಳ ಅಭ್ಯರ್ಥಿಗಳಿಗಿಂತ ಭಿನ್ನವಲ್ಲದಿದ್ದರೂ ಮೋದಿ ಎಂಬ ಒಂದೇ ಹೆಸರು ಅವರಿಗೆ ಬಲ ತುಂಬಿ ನಿರಾಯಾಸ ಗೆಲುವು ತಂದುಕೊಟ್ಟಿತು. ಭಾವನಾತ್ಮಕವಾಗಿ ಜನರನ್ನು ಸೆಳೆಯುವಲ್ಲಿ ಬಿಜಿಪಿಯೂ ಹೊರತಲ್ಲ, ಇತರರಿಗಿಂತ ಒಂದೇ ವ್ಯತ್ಯಾಸವೆಂದರೆ ಕುಟುಂಬ, ಸಂಬಂಧಗಳ ಹೆಸರು ಹೇಳದೇ ದೇಶ, ದೇಶಭಕ್ತಿ ಸೇರಿದಂತೆ ಎಲ್ಲರನ್ನೂ ಸುಲಭವಾಗಿ ತಲುಪಬಲ್ಲ ವಿಚಾರಗಳಿಂದ ಮತದರಾರನ್ನು ಹಿಡಿದಿಟ್ಟುಕೊಂಡರು. ದೇಶದಲ್ಲಿರುವ ಯುವಮತದಾರರನ್ನು ಅತ್ಯಂತ ಯಶಸ್ವಿಯಾಗಿ ತಮ್ಮ ಮತಗಳಾಗಿ ಪರಿವರ್ತಿಸಿಕೊಂಡರು. ಜೊತೆಗೆ, ಬೇರೆ ಪಕ್ಷಗಳಲ್ಲಿ ಮೋದಿಗೆ ಪರ್ಯಾಯ ನಾಯಕತ್ವರೂಪುಗೊಳ್ಳದೆ ಗೆಲುವು ಮತ್ತಷ್ಟು ಸುಲಭವಾಯಿತು.
ಆದರೆ, ಬಿಜೆಪಿ ಬಹುಮತಕ್ಕಿಂತಲೂ ಅತ್ಯಧಿಕ ಸ್ಥಾನಗಳನ್ನು ಪಡೆದು ವಿರೋಧ ಪಕ್ಷವೇ ಇಲ್ಲವಾಗಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಯೋಚಿಸಿದರೆ, ಪ್ರಸಕ್ತ ಅವಧಿಯಲ್ಲಾದರೂ ಒಂದೊಳ್ಳೆ ವಿರೋಧ ಪಕ್ಷದ ಅವಶ್ಯಕತೆ ದೇಶಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಇತ್ತು. ಲಗಾಮಿದ್ದರೆ ಮಾತ್ರ ಕುದುರೆ ಸವಾರಿ ಚೆನ್ನಾಗಿರುತ್ತದೆ ಎಂಬುದು ವಾಸ್ತವ.