ಈಗಾಗಲೇ ಸರ್ಕಾರಕ್ಕೆ ನೀಡಬೇಕಾದ ಸ್ಪೆಕ್ಟ್ರಂ ಶುಲ್ಕ ಪಾಲತಿಗೆ ಕಾಲಾವಕಾಶವನ್ನು ಏರ್ಟೆಲ್ ಮತ್ತು ವೊಡಾಫೋನ- ಐಡಿಯಾ ಕೋರಿವೆ. ಜತೆಗೆ ದೂರಸಂಪರ್ಕ ಇಲಾಖೆಯು ತಮ್ಮ ನೆರವಿಗೆ ಬರುವಂತೆಯೂ ಮನವಿ ಮಾಡಿವೆ. ಅರ್ಧಲಕ್ಷ ಕೋಟಿಗೂ ಹೆಚ್ಚು ನಷ್ಟ ಘೋಷಣೆ ಮಾಡಿದ ವೋಡಾಫೋನ್- ಐಡಿಯಾ ಕೇಂದ್ರ ಸರ್ಕಾರ ನೆರವು ನೀಡದಿದ್ದರೆ, ದಿವಾಳಿ ಸಂಹಿತೆ ಮಂಡಳಿ (ಐಬಿಸಿ) ಮುಂದೆ ಹೋಗುವುದಾಗಿ ಹೇಳಿದೆ. ಈ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಯಾವುದೇ ಕಂಪನಿಯು ಬಾಗಿಲು ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ನಷ್ಟದಲ್ಲಿರುವ ಈ ಕಂಪನಿಗಳಿಗೆ ಸರ್ಕಾರ ಯಾವ ರೀತಿ ನೆರವು ನೀಡಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಈ ಕಂಪನಿಗಳಿಗೆ ಸರ್ಕಾರ ನೆರವು ನೀಡುವುದರ ವಿರುದ್ಧ ರಿಲಯನ್ಸ್ ಜಿಯೋ ಆಕ್ಷೇಪ ಎತ್ತಿದೆ. ಈ ಕಂಪನಿಗಳಿಗೆ ನೆರವು ನೀಡಬಾರದು, ಉದ್ದೇಶಪೂರ್ವಕವಾಗಿ ಹೆಚ್ಚಿನ ನಷ್ಟ ಘೋಷಣೆ ಮಾಡಿಕೊಂಡಿವೆ ಎಂದು ದೂರಿದೆ.
ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿರುವ ಕಂಪನಿಗಳು ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಘೋಷಣೆ ಮಾಡಿರುವ ನಷ್ಟದ ಮೊತ್ತವು ಸೇರಿದಂತೆ ಈ ಕಂಪನಿಗಳ ಮೇಲೆ ಇರುವ ಸಾಲದ ಹೊರೆಯನ್ನು ಗಮನಿಸಿದರೆ ಈ ಕಂಪನಿಗಳ ಭವಿಷ್ಯವೇನು ಎಂಬ ಪ್ರಶ್ನೆ ಕಾಡುತ್ತದೆ. ಇಲ್ಲಿ ಗ್ರಾಹಕ ಕೇಂದ್ರಿತ ಪ್ರಶ್ನೆ ಏನೆಂದರೆ- ಗ್ರಾಹಕರು ಈಗ ಪಡೆಯುತ್ತಿರುವ ಉಚಿತ ಕರೆ, ಮೆಸೆಜ್ ಮತ್ತು ಅತ್ಯಲ್ಪ ದರದ ಡೇಟಾ ಸೇವೆಯ ಭವಿಷ್ಯವೇನು? ಎಷ್ಟು ತಿಂಗಳ ಕಾಲ ಗ್ರಾಹಕರು ಈ ಉಚಿತ ಸೇವೆಯನ್ನು ಪಡೆಯಬಹುದು? ಇನ್ನು ಎಷ್ಟು ತಿಂಗಳ ಕಾಲ ಅಲ್ಪದರದ ಮೊಬೈಲ್ ಸೇವೆ ಲಭ್ಯವಾಗಬಹುದು?
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಬಹಳ ಕಾಲ ಗ್ರಾಹಕರಿಗೆ ಉಚಿತ ಸೇವೆಗಳು ಲಭ್ಯವಾಗುವುದಿಲ್ಲ. ಏಕೆಂದರೆ ಈಗ ಮೊಬೈಲ್ ಸೇವಾ ಮಾರುಕಟ್ಟೆ ಸ್ಥಿರತೆಯತ್ತ ದಾಪುಗಾಲು ಹಾಕುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಉಳಿದಿರುವುದು ಮೂರೇ ಕಂಪನಿಗಳು- ಏರ್ಟೆಲ್, ಜಿಯೋ ಮತ್ತು ಮತ್ತು ವೋಡಾ-ಐಡಿಯಾ. ಈ ಕಂಪನಿಗಳು ಗ್ರಾಹಕರ ಪಾಲನ್ನು ಹಂಚಿಕೊಂಡು ಸ್ಥಿರವಾದ ನಂತರ ದರ ಏರಿಕೆ ಪ್ರಾರಂಭವಾಗುತ್ತದೆ. ಈಗ ಇರುವ ಸುಮಾರು 1.20 ಕೋಟಿ ಸಂಪರ್ಕಗಳಲ್ಲಿ ಶೇ.50ರಷ್ಟು ಪಾಲು ಪಡೆಯುವ ಹುನ್ನಾರವನ್ನು ರಿಲಯನ್ಸ್ ಜಿಯೋ ನಡೆಸುತ್ತಿದೆ. ಸರ್ಕಾರದ ಪರೋಕ್ಷ ಬೆಂಬಲ ಇರುವ ರಿಲಯನ್ಸ್ ಜಿಯೋ ಒಂದು ಬಾರಿ ದರ ಏರಿಕೆ ಮಾಡಲಾರಂಭಿಸಿದರೆ, ಉಳಿದ ಕಂಪನಿಗಳು ಅದೇ ಹಾದಿಯನ್ನು ಹಿಡಿಯುತ್ತವೆ.
ಗ್ರಾಹಕರಿಗೆ ಇಷ್ಟವಿರಲಿ ಬಿಡಲಿ, ಸದ್ಯಕ್ಕೆ ದೊರೆಯುತ್ತಿರುವ ಮೊಬೈಲ್ ಸೇವೆಗಳು ಬಹಳ ಕಾಲ ಇರುವುದಿಲ್ಲ. ಆರು ತಿಂಗಳೋ ಅಥವಾ ಒಂದು ವರ್ಷದ ನಂತರ ಮೊಬೈಲ್ ಸೇವೆಗಳ ದರ ಏರಿಕೆ ಆಗಲಿದೆ. ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಆದರೆ, ದರ ಏರಿಕೆಗೆ ಗ್ರಾಹಕರು ಸಿದ್ಧರಾಗುವುದು ಅನಿವಾರ್ಯ. ಇನ್ನೂ ಕೆಲವು ವರ್ಷಗಳ ಕಾಲ ಮೊಬೈಲ್ ಕಂಪನಿಗಳು ಹೀಗೆ ಉಚಿತ ಮತ್ತು ಕಡಮೆ ದರದ ಸೇವೆ ಒದಗಿಸಿದರೆ ಕಂಪನಿಗಳು ದಿವಾಳಿಯಾಗುತ್ತವೆ. ಆದರೆ, ಒಂದಂತೂ ಸ್ಪಷ್ಟ ಈಗ ಕಂಪನಿಗಳ ಮೇಲಿರುವ ಲಕ್ಷ ಕೋಟಿ ರುಪಾಯಿಗಳ ಹೊರೆಯು ಭವಿಷ್ಯದಲ್ಲಿ ಗ್ರಾಹಕರ ಹೆಗಲಿಗೆ ಬೀಳಲಿದೆ. ಗ್ರಾಹಕರು ಹೆಚ್ಚಿನ ದರ ಭರಿಸುವ ಮೂಲಕ ಈ ಕಂಪನಿಗಳ ಸಾಲದ ಹೊರೆಯನ್ನು ಇಳಿಸಬೇಕಾಗುತ್ತದೆ.