ಮುಸ್ಲಿಂ ಸಮುದಾಯದ ಹಿರಿಯ ನಾಯಕ, ಶಿವಾಜಿನಗರ ಶಾಸಕ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಅಮಾನತು ಮಾಡುವ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಹೆಜ್ಜೆ ಇಟ್ಟಂತಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪಕ್ಕೆ ಗುರಿಯಾಗಿರುವ ರೋಷನ್ ಬೇಗ್ ವಿರುದ್ಧ ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತ ರಿಜ್ವಾನ್ ಅರ್ಷದ್ ವಾಗ್ದಾಳಿ ನಡೆಸಿದ್ದರು.
ಐಎಂಎ ಜ್ಯುವೆಲ್ಸ್ ಹಗರಣದಲ್ಲಿ ಬೇಗ್ ಹೆಸರು ಕೇಳಿ ಬಂದಿರುವುದು ಹಾಗೂ ಪಕ್ಷದ ನಾಯಕತ್ವದ ಬಗ್ಗೆ ಬೇಗ್ ಬಿರು ನುಡಿಗಳು ಪಕ್ಷದಿಂದ ಅಮಾನತುಗೊಳ್ಳುವಂತೆ ಮಾಡಿದೆ. ಬಂಡೆದ್ದರೆ ಮಂತ್ರಿ ಸ್ಥಾನ ಖಾತ್ರಿಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಏಳನೇ ಬಾರಿ ಶಾಸಕರಾಗಿರುವ ರೋಷನ್ ಬೇಗ್ ತಮ್ಮ ರಾಜಕೀಯ ಪಥ ಬದಲಾವಣೆಗೂ ಅಣಿಯಾಗಿರುವ ಸಂದೇಶವನ್ನು ಹಿಂದೆಯೇ ಸೂಚ್ಯವಾಗಿ ರವಾನಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಲವು ತಿಂಗಳ ಹಿಂದೆ ಏಕವಚನದಲ್ಲಿ ನಿಂದಿಸಿದ್ದ ರೋಷನ್ ಬೇಗ್ ಆನಂತರ ಅವರನ್ನು ಮುಜುಗರವಾಗುವಷ್ಟು ಹೊಗಳಿದ್ದರು. ಇತ್ತೀಚೆಗೆ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹಾಗೂ ಮಾಜಿ ಸಚಿವ ಎಂ ಜೆ ಅಕ್ಬರ್ ಅವರನ್ನು ಭೇಟಿ ಮಾಡಿರುವ ಬೇಗ್, ಐಎಂಎ ಹಗರಣದಲ್ಲಿ ಸಿಲುಕುವುದರಿಂದ ಬಚಾವಾಗಲು ಬಿಜೆಪಿಯತ್ತ ವಾಲುವ ಸಾಧ್ಯತೆಯನ್ನು ದಟ್ಟವಾಗಿಸಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಜೊತೆ ಮಧುರ ಬಾಂಧವ್ಯ ಹೊಂದಿದ್ದರೂ, ರೋಷನ್ ಬೇಗ್ ಅವರನ್ನು ಸೇರಿಸಿಕೊಳ್ಳುವ ಮೂಲಕ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷವಾದ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗುವ ಧೈರ್ಯ ತೋರಲಾರದು. ಆದ್ದರಿಂದ ರೋಷನ್ ಬೇಗ್ ಗೆ ಉಳಿದಿರುವ ಏಕೈಕ ಹಾದಿ ಬಿಜೆಪಿ.
ಈ ವಿಚಾರದಲ್ಲಿ ಅವರು ಸ್ಪಷ್ಟವಾಗಿದ್ದು, “ಮುಸ್ಲಿಂ ಸಮುದಾಯ ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳಬೇಕು” ಎಂದು ಈಚೆಗೆ ಅಭಿಪ್ರಾಯಪಟ್ಟಿದ್ದರು. ಬೇಗ್ ತಮ್ಮ ಬದಲಾದ ರಾಜಕೀಯ ನಿಲುವಿನ ಭಾಗವಾಗಿ ಈ ಹೇಳಿಕೆ ನೀಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಆದರೆ, ಐಎಂಎ ಹಗರಣದ ಕೆಸರಿನಲ್ಲಿ ಸಿಲುಕಿರುವ ಬೇಗ್ ಕೈ ಹಿಡಿಯುವ ಮೂಲಕ ಬಿಜೆಪಿ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವ ಕೆಲಸಕ್ಕೆ ಮುಂದಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಸಾವಿರಾರು ಕೋಟಿ ರುಪಾಯಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿದ್ದ ಟಿಎಂಸಿ ನಾಯಕ ಮುಕುಲ್ ರಾಯ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬುಡ ಅಲುಗಾಡಿಸುತ್ತಿರುವ ಬಿಜೆಪಿ, ರೋಷನ್ ಬೇಗ್ ಸೇರ್ಪಡೆಯಾದರೆ ಸಮಸ್ಯೆ ಆಗುತ್ತದೆ ಎಂದು ಭಾವಿಸುವ ಸಾಧ್ಯತೆ ಕ್ಷೀಣ. ಸಮ್ಮಿಶ್ರ ಸರ್ಕಾರದ ಬಲ ಕುಗ್ಗಿಸುವುದು ಹಾಗೂ ಒಂದೊಮ್ಮೆ ಮಧ್ಯಂತರ ಚುನಾವಣೆ ಎದುರಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ರೋಷನ್ ಬೇಗ್ ತಮ್ಮ ಜೊತೆ ಇದ್ದಾರೆ ಎಂಬ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ನೀಡುವ ಮೂಲಕ ಬಿಜೆಪಿಯು ರಾಜಕೀಯ ಮೈಲಿಗೆಯಿಂದ ಕಳಚಿಕೊಳ್ಳುವುದು ಹಾಗೂ ಕಾಂಗ್ರೆಸ್ ಮತಬ್ಯಾಂಕ್ ಛಿದ್ರಗೊಳಿಸುವ ದಾಳ ಉರುಳಿಸುತ್ತಿರುವಂತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.

ಮತ್ತೊಂದು ಕಡೆ ಕಾಂಗ್ರೆಸ್ ತನ್ನನ್ನು ಅಮಾನತುಗೊಳಿಸಿದ್ದು, ರಾಜಕೀಯವಾಗಿ ಉಳಿಯಲು ಬಿಜೆಪಿ ಸೇರ್ಪಡೆ ಅನಿವಾರ್ಯ ಎಂಬ ಸಮರ್ಥನೆ ನೀಡುವ ಮೂಲಕ ಮತದಾರರನ್ನು ಓಲೈಸುವುದು ಹಾಗೂ ಕಾಂಗ್ರೆಸ್ ಅನ್ಯಾಯವೆಸಗಿತು ಎಂದು ಆರೋಪಿಸಲು ಬೇಗ್ ಅವರು ಅಮಾನತು ಶಿಕ್ಷೆವರೆಗೂ ಕಾಯುವ ತಂತ್ರಕ್ಕೆ ಮೊರೆಹೋಗಿರಬಹುದು ಎನ್ನಲಾಗುತ್ತಿದೆ.
ಈ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ರಾಜಕೀಯವಾಗಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಪಕ್ಷದಲ್ಲಿ ವಿಪುಲವಾಗಿರುವ ಅಸಮರ್ಥ ನಾಯಕರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕುವ ಪ್ರಕ್ರಿಯೆಗೆ ವೇಗ ನೀಡಬೇಕಿದೆ. ಇದುವೇ ಕಾಂಗ್ರೆಸ್ ಪುನರುತ್ಥಾನದ ಹಾದಿ. ಇದರಿಂದ ತಕ್ಷಣಕ್ಕೆ ಹಿನ್ನಡೆಯಾದರೂ ದೀರ್ಘಾವಧಿಯಲ್ಲಿ ಹೊಸ ನಾಯಕತ್ವ ಉದಯಕ್ಕೆ ಕಾರಣವಾಗಲಿದೆ. ಇದು ಬಿಜೆಪಿಯ ಯುವ ಮತದಾರರನ್ನು ಸೆಳೆಯುವ ತಂತ್ರಕ್ಕೆ ಪ್ರತಿತಂತ್ರವಾಗಲಿದೆ.
ಹೋರಾಟದ ಮನೋಭಾವ ಹೊಂದಿರುವ, ಪಕ್ಷ ನಿಷ್ಠವಾದ, ಸೈದ್ಧಾಂತಿಕ ಸ್ಪಷ್ಟತೆ ಇರುವ, ಡೈನಾಮಿಕ್ ಹಾಗೂ ತಳಮಟ್ಟದಿಂದ ಪಕ್ಷ ಕಟ್ಟಬಲ್ಲ ಹಾಗೂ ಸಾಮಾನ್ಯ ಹಿನ್ನಲೆ ಇರುವ ಯುವಕರಿಗೆ ಪಕ್ಷದ ಜವಾಬ್ದಾರಿ ನೀಡಬೇಕು. ಹಲವು ಹಿರಿತಲೆಗಳು ಕಾಂಗ್ರೆಸ್ ಗೆ ಭಾರವಾಗಿ ಪರಿಣಮಿಸಿ ಬಿಟ್ಟಿದ್ದು, ಇದು ಮತದಾರರಿಗೂ ಸಹ್ಯವಾಗುತ್ತಿಲ್ಲ ಎಂಬುದು ಫಲಿತಾಂಶದಲ್ಲಿ ಸಾಬೀತಾಗಿದೆ.
ಜನರೊಂದಿಗಿನ ಸಂಪರ್ಕ ಕಳೆದುಕೊಂಡಿರುವ ಕಾಂಗ್ರೆಸ್ ನ ಹಿರಿಯ ನಾಯಕರು ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗುವ ಕಸುವು ಉಳಿಸಿಕೊಂಡಿಲ್ಲ. ರಾಜಕೀಯ ಅಸ್ತಿತ್ವವನ್ನು ಸಾಮರ್ಥ್ಯದ ಆಧಾರದಲ್ಲಿ ಉಳಿಸಿಕೊಳ್ಳಲು ವಿಫಲರಾಗಿರುವ ಈ ನಾಯಕರು ಮತದಾರರನ್ನು ಭ್ರಷ್ಟಗೊಳಿಸುವ ತಂತ್ರದ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಿದ್ದಾರೆ. ಆದ್ದರಿಂದ ಇಂಥ ನಾಯಕರು ಕಾಂಗ್ರೆಸ್ ಅಥವಾ ಬೇರಾವುದೇ ಪಕ್ಷಕ್ಕೆ ಸೇರಿದರೂ ಶಾಪವೇ ಹೊರತು ವರವಲ್ಲ.
ಒಂದರ್ಥದಲ್ಲಿ ರೋಷನ್ ಬೇಗ್ ರಂಥವರು ಕಾಂಗ್ರೆಸ್ ನಿಂದ ಹೊರದಬ್ಬಿಸಿಕೊಳ್ಳುವುದು ಎಂದರೆ ದೀರ್ಘಾವಧಿಯಲ್ಲಿ ಅವರ ರಾಜಕೀಯ ಭವಿಷ್ಯ ಮುಗಿದಂತೆಯೇ.
ಮಾಜಿ ಕಾಂಗ್ರೆಸ್ ನಾಯಕರಾದ ಎಸ್ ಎಂ ಕೃಷ್ಣ, ಶ್ರೀನಿವಾಸ್ ಪ್ರಸಾದ್, ಮಾಲಕ ರೆಡ್ಡಿ, ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ, ಉಮೇಶ್ ಜಾಧವ್ ಮುಂತಾದವರು ಬಿಜೆಪಿ ಸೇರಿದ್ದಾರೆ. ಇವರಿಗೆ ಪರ್ಯಾಯವಾದ ಹೊಸ ಮುಖಗಳನ್ನು ಹುಟ್ಟುಹಾಕುವ ಬದ್ಧತೆಯನ್ನು ಕಾಂಗ್ರೆಸ್ ತೋರಿದಲ್ಲಿ ಮೇಲಿನ ನಾಯಕರು ರಾಜಕೀಯ ಪ್ರಸ್ತುತತೆ ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಸಾರ್ವಜನಿಕವಾಗಿ ಉತ್ತಮ ಹೆಸರು ಉಳಿಸಿಕೊಂಡ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಗ್ಡೆ ಅವರನ್ನು ಕೇಳುವವರೇ ಇಲ್ಲವಾಗಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ನಲ್ಲಿಯೇ ಉಳಿದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ಅವರಿಗೆ ಅವಕಾಶ ದಕ್ಕುತ್ತಿರಲಿಲ್ಲ. ಬಿಜೆಪಿಯ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧದ ಅಲೆಯು ಸೌಮ್ಯ ಸ್ವಭಾವದ ಜಯಪ್ರಕಾಶ್ ಹೆಗ್ಡೆ ಅವರ ಗೆಲುವಿಗೆ ಪೂರಕವಾಗುವ ಸಾಧ್ಯತೆ ಇತ್ತು. ಆದರೆ, ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡೆದ್ದು, ಬಿಜೆಪಿ ಸೇರಿದ ಹೆಗ್ಡೆ ಅವರನ್ನು ಪಕ್ಷ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಇತ್ತ ತನ್ನ ನೆಲೆ ವಿಸ್ತರಿಸಿಕೊಳ್ಳಲು ಹೈದರಾಬಾದ್ ಕರ್ನಾಟಕ ಹಾಗೂ ಹಳೆ ಮೈಸೂರಿನ ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಮತ್ತಿತರ ಕಡೆ ಬಿಜೆಪಿಗೆ ಕಾಂಗ್ರೆಸ್ ನ ಕೆಲವು ಹಿರಿತಲೆಗಳ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಎಸ್ ಎಂ ಕೃಷ್ಣ, ಶ್ರೀನಿವಾಸ್ ಪ್ರಸಾದ್, ಮಾಲಕ ರೆಡ್ಡಿ, ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚಿಂಚನಸೂರ, ಉಮೇಶ್ ಜಾಧವ್, ಎ ಮಂಜು ಅವರಂಥವರು ಬಿಜೆಪಿಗೆ ತಾತ್ಕಾಲಿಕವಾಗಿ ಬೇಕಿದೆ. ತನ್ನ ಕೆಲಸ ಮುಗಿದ ನಂತರ ಬಿಜೆಪಿಯೇ ಈ ನಾಯಕರಿಗೆ ವಿದಾಯ ಹೇಳಲಿದೆ. ಈ ನೆಲೆಯಲ್ಲಿ ಪಕ್ಷದ ಏಳಿಗೆಗೆ ತೊಡಕಾಗಿರುವ ನಾಯಕರಿಗೆ ಬೀಳ್ಕೊಡುಗೆ ನೀಡಿ, ಆ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕತ್ವ ಬೆಳೆಸುವ ಇಚ್ಛಾಶಕ್ತಿಯನ್ನು ಕಾಂಗ್ರೆಸ್ ತೋರಿದಲ್ಲಿ ಪಕ್ಷ ಪುಟಿದೇಳುವುದರಲ್ಲಿ ಸಂಶಯವಿಲ್ಲ. ಇದು ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಗೆ ಅನ್ವಯಿಸುವ ಮಾತು.