ಹಿಂದೆ ಜನರೊಂದಿಗೆ ಹೆಚ್ಚಿನ ಒಡನಾಟವಿರಿಸಿಕೊಂಡಿರುತ್ತಿದ್ದ ವಕೀಲರು, ವಿವಿಧ ಚಳವಳಿಗಳ ಪ್ರಮುಖರು, ಜನನಾಯಕರು ಶಾಸನಸಭೆಗಳಿಗೆ ಆಯ್ಕೆಯಾಗುತ್ತಿದ್ದರು. ಸಹಜವಾಗೇ ಸರ್ಕಾರದಿಂದ ಜನರಿಗೆ ಅನುಕೂಲ ಕಲ್ಪಿಸುವ ಯೋಜನೆಗಳು ರೂಪುಗೊಳ್ಳುತ್ತಿದ್ದವು. ಆದರೀಗ ಕಾಲ ಬದಲಾದಂತೆ ಅಕ್ರಮ ಮಾರ್ಗಗಳಲ್ಲಿ ಹಣ ಸಂಪಾದಿಸಿರುವವರು, ರಿಯಲ್ ಎಸ್ಟೇಟ್ ಕುಳಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆಗೆ ಬಂದು ಕುಳಿತಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಿಂದ ಆಯ್ಕೆಯಾಗಿರುವ ಶಾಸಕರಲ್ಲಿ ಬಹುಪಾಲು ರಿಯಲ್ ಎಸ್ಟೇಟ್ ಮೂಲದವರೇ ಆಗಿದ್ದಾರೆ. ಹಾಗಾಗಿ ಈಗ ಭೂಮಿಯನ್ನು ಲಾಭದಾಯಕಗೊಳಿಸಿಕೊಳ್ಳುವ ಯೋಜನೆಗಳೇ ಹೆಚ್ಚಾಗಿ ಮುನ್ನೆಲೆಗೆ ಬರುತ್ತಿವೆ.
ಈ ಭೂ ಕಬಳಿಕೆ ಪ್ರಯತ್ನಗಳನ್ನು ವಿವಿಧ ಜನಪ್ರಿಯ ಯೋಜನೆಗಳ ಹೆಸರಲ್ಲಿ ಜಾರಿಗೊಳಿಸಲು ಮುಂದಾಗುವುದು ವಿಶೇಷ. ಈಗ ಅಂತಹದೇ ಒಂದು ಯೋಜನೆಯನ್ನು ಈಗಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವುದಾಗಿ ಹೇಳಿದ್ದರು. ಅವರ ನಂತರ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವುದರ ಜೊತೆಗೆ ರಾಮನಗರದಲ್ಲಿ ಸಿನಿಮಾ ವಿಶ್ವವಿದ್ಯಾಲಯ ನಿರ್ಮಿಸುವ ಯೋಜನೆ ಘೋಷಿಸಿದ್ದರು.
ಈಗ ಇವೆರಡನ್ನೂ ಕೈಬಿಟ್ಟು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್ ನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ಮಾತುಗಳನ್ನಾಡಿದ್ದಾರೆ. ಸಹಜವಾಗೇ ಈ ನಿಲುವಿಗೆ ಸಿನಿಮಾ ವಲಯದವರಿಂದ ಸ್ವಾಗತ ವ್ಯಕ್ತವಾಗಿದ್ದರೆ, ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.
ಫಿಲ್ಮ ಸಿಟಿ ನಿರ್ಮಿಸಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. ಹಿಂದೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗಲೇ ಅವರೊಂದಿಗೆ ಹೆಚ್ಚಿನ ಒಡನಾಟವಿಟ್ಟುಕೊಂಡಿದ್ದ ಅನಂತನಾಗ್ ಮತ್ತು ಶಂಕರನಾಗ್ ಸಹೋದರರು ಫಿಲ್ಮ್ ಸಿಟಿ ನಿರ್ಮಿಸಬೇಕೆಂಬ ಬೇಡಿಕೆ ಇಟ್ಟಿದ್ದರು. ಅಂದಿನಿಂದ ಇಂದಿನವರೆಗೂ ಅದು ಬೇಡಿಕೆಯಾಗಿಯೇ ಉಳಿದಿದೆ. ಆದರೆ ಇದ್ದಕ್ಕಿದ್ದಂತೆ ಫಿಲ್ಮ್ ಸಿಟಿ ನಿರ್ಮಿಸುವ ಹೆಸರಲ್ಲಿ ದೇವಿಕಾರಾಣಿ-ರೋರಿಚ್ ಎಸ್ಟೇಟ್ ಮೇಲೇಕೆ ಸರ್ಕಾರದ ಕಣ್ಣು ಬಿದ್ದಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಹಲವು ವ್ಯಕ್ತಿಗಳ ಮುಖಗಳು ಕಣ್ಣಮುಂದೆ ಸರಿದಾಡುತ್ತವೆ. ಈ ಪ್ರಯತ್ನದ ಹಿಂದೆ ರಾಜಕೀಯ ಉದ್ದೇಶ ಮತ್ತು ಕೆಲ ಪ್ರಭಾವಿ ವ್ಯಕ್ತಿಗಳ ಹಿತಾಸಕ್ತಿ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು-ಕನಕಪುರ ರಸ್ತೆಯಲ್ಲಿ ತಾತಗುಣಿಯಲ್ಲಿರುವ ರೋರಿಚ್ ಎಸ್ಟೇಟ್ ಸುಮಾರು 460 ಎಕರೆಗಳಷ್ಟು ವಿಸ್ತಾರಕ್ಕೆ ಹರಡಿಕೊಂಡಿದೆ. ಇದರಲ್ಲಿ ನೂರು ಎಕರೆಗಳಷ್ಟು ಪ್ರದೇಶವನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಬನ್ನೇರುಘಟ್ಟ ಮತ್ತು ಸಾವನದುರ್ಗ ನಡುವಿನ ಆನೆ ಕಾರಿಡಾರ್ ಸಹ ಈ ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತದೆ. ಚಿರತೆ, ಚಿಂಕೆ, ನವಿಲು ಮತ್ತಿತರ ವನ್ಯಜೀವಿಗಳು ಈ ಪ್ರದೇಶದಲ್ಲಿವೆ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಜೀವವೈವಿಧ್ಯತೆಗೆ ಧಕ್ಕೆಯಾಗಲಿದೆ ಎಂಬುದು ಪರಿಸರವಾದಿಗಳ ಆಕ್ಷೇಪವಾಗಿದೆ.
ರಷ್ಯಾದ ಪ್ರಸಿದ್ಧ ಚಿತ್ರಕಲಾವಿದ ಮತ್ತು ಪುರಾತತ್ವ ಶಾಸ್ತ್ರಜ್ಞರಾಗಿದ್ದ ನಿಕೊಲಾಯ್ ರೋರಿಚ್ ಅವರ ಪುತ್ರ, ಚಿತ್ರಕಲಾವಿದ ಸ್ವೆತೊಸ್ಲಾವ್ ನಿಕೊಲಾವಿಚ್ ರೋರಿಚ್ ಅವರು 20ನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಬಂದು ಬೆಂಗಳೂರು-ಕನಕಪುರ ರಸ್ತೆಯಲ್ಲಿರುವ ತಾತಗುಣಿ ಎಸ್ಟೇಟ್ನಲ್ಲಿ ನೆಲೆಸಿದ್ದರು. ಇವರು ಬಿಡಿಸಿರುವ ಜವಾಹರಲಾಲ್ ಮತ್ತು ಇಂದಿರಾಗಾಂಧಿ ಅವರ ಭಾವಚಿತ್ರಗಳು ಸಂಸತ್ ಭವನದ ಸೆಂಟ್ರಲ್ ಹಾಲ್ ಗೋಡೆಯನ್ನು ಅಲಂಕರಿಸಿವೆ. ರೋರಿಚ್ ಅವರು ಹಿಂದಿ ಚಲನಚಿತ್ರ ರಂಗದ ಜನಪ್ರಿಯ ಅಭಿನೇತ್ರಿಯಾಗಿದ್ದ ದೇವಿಕಾರಾಣಿ ಅವರನ್ನು ಮದುವೆಯಾಗಿದ್ದರು. ದೇವಿಕಾರಾಣಿ-ರೋರಿಚ್ ದಂಪತಿ ತಾತಗುಣಿ ಎಸ್ಟೇಟ್ನಲ್ಲೇ ಕೊನೆಯುಸಿರೆಳೆದ ನಂತರ, ಆ ಆಸ್ತಿಯನ್ನು ಅವರ ಸಹಾಯಕಿಯಾಗಿದ್ದ ಮೇರಿ ಎಂಬುವರು ಕಬಳಿಸಲು ಯತ್ನಿಸಿದ್ದರು. ಆದರೆ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಆಸ್ತಿಯನ್ನು ಉಳಿಸಿಕೊಂಡಿತಲ್ಲದೆ, ಈ ಎಸ್ಟೇಟ್ ಗೆ ‘ದೇವಿಕಾರಾಣಿ ರೋರಿಚ್ ಎಸ್ಟೇಟ್’ ಎಂದೇ ನಾಮಕರಣ ಮಾಡಿದೆ.

ಕಷ್ಟಪಟ್ಟು ಉಳಿಸಿಕೊಂಡಿರುವ ಈ ಅರಣ್ಯಪ್ರದೇಶಕ್ಕೆ ಸರ್ಕಾರವೇ ಲಗ್ಗೆಹಾಕಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಪರಿಸರವಾದಿಗಳ ಪ್ರಶ್ನೆಯಾಗಿದೆ. ಫಿಲ್ಮ್ ಸಿಟಿ ಬೇಕು ನಿಜ, ಆದರೆ ಅದಕ್ಕೆ ಬೆಂಗಳೂರು ಸುತ್ತ ಇರುವ ನೈಸರ್ಗಿಕ ಅರಣ್ಯಗಳಲ್ಲಿ ಒಂದಾದ ರೋರಿಚ್ ಎಸ್ಟೇಟ್ ಗೆ ಕಣ್ಣು ಹಾಕುವುದು ಅಪರಾಧ ಎಂಬುದು ಅವರ ಆಕ್ರೋಶವಾಗಿದೆ. ಫಿಲ್ಮ ಸಿಟಿ ನಿರ್ಮಿಸಲು ಬೇರೆಲ್ಲಾದರೂ ಸೂಕ್ತ ಜಾಗ ಹುಡುಕಲಿ ಎಂಬುದು ಅವರ ಸಲಹೆಯಾಗಿದೆ.
ಬಂಡೆಗೆ ತಲೆ ಚಚ್ಚಿಕೊಳ್ಳುವ ಮೂರ್ಖ ಪ್ರಯತ್ನ:
ರಾಜ್ಯ ಸರ್ಕಾರ ಗೊತ್ತಿದ್ದು ಗೊತ್ತಿದ್ದೂ ಬಂಡೆಗೆ ತಲೆ ಚಚ್ಚಿಕೊಳ್ಳುವ ಮೂರ್ಖ ಪ್ರಯತ್ನಕ್ಕೆ ಕೈ ಹಾಕುತ್ತಿದೆ ಎಂಬುದಾಗಿ ‘ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್-ಟ್ರಸ್ಟ್’ ನ ಪೂರ್ಣಾವಧಿ ಸಂಯೋಜಕರಾದ ಪರಿಸವಾದಿ ಲಿಯೊ ಎಫ್. ಸಲ್ಡಾನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಅವರು, ದೇವಿಕಾರಾಣಿ-ರೋರಿಚ್ ಎಸ್ಟೇಟ್ ಅನ್ನು ಭಾರತ ಮತ್ತು ರಷ್ಯಾ ದೂತಾವಾಸಗಳೆರಡೂ ಸೇರಿ ರಕ್ಷಿಸಬೇಕು ಎಂಬ ನಿರ್ಣಯವಾಗಿ, ಹತ್ತು ವರ್ಷಗಳ ಹಿಂದೆಯೇ ಆದೇಶವೂ ಹೊರಬಿದ್ದಿದೆ. ಅಲ್ಲದೆ, “ಕಾಡು, ಕೆರೆ, ಕುಂಟೆ, ಗೋಮಾಳ ಇರುವ ಯಾವುದೇ ಮುಕ್ತ ಪ್ರದೇಶಕ್ಕೆ ಕೈ ಹಾಕುವ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಪಡೆಯಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂಬುದಾಗಿ ಮೂರು ವಾರಗಳ ಹಿಂದೆಯಷ್ಟೇ ಸರ್ವೋಚ್ಚ ನ್ಯಾಯಾಲಯ ಎಚ್ಚರಿಸಿದೆ. ಇವೆಲ್ಲಾ ಗೊತ್ತಿದ್ದೂ ಸರ್ಕಾರ ಮೂರ್ಖತನದ ಹೆಜ್ಜೆ ಇಡಲು ಹೊರಟಿದೆ ಎಂದು ಅವರು ಟೀಕಿಸಿದ್ದಾರೆ.

ಈ ಆಲೋಚನೆಯ ಹಿಂದೆ ಹಲವು ವ್ಯಕ್ತಿ ಮತ್ತು ಶಕ್ತಿಗಳು ಕೆಲಸ ಮಾಡಿರುವ ಸಾಧ್ಯತೆ ಇದೆ. ಅಶೋಕ್ ಖೇಣಿ ಅವರ ನೈಸ್ ರಸ್ತೆ, ಕನಕಪುರ ಹೆದ್ದಾರಿ ಮತ್ತು ಮೆಟ್ರೊ ಮಾರ್ಗ ಸಂಧಿಸುವ ಸ್ಥಳದ್ಲಲೇ ರೋರಿಚ್ ಎಸ್ಟೇಟ್ ಇರುವುದರಿಂದ ಎಲ್ಲರ ಕಣ್ಣು ಅದರ ಮೇಲೆ ಬಿದ್ದಿದೆ. ಈಗ ಕಾಂಗ್ರೆಸ್ ಪಕ್ಷದಲ್ಲಿರುವ ಖೇಣಿ ಅವರು ನಾಳೆ ಬಿಜೆಪಿ ಸೇರಿದರೂ ಆಶ್ಚರ್ಯವಿಲ್ಲ. ಅಲ್ಲದೆ, ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಇಸ್ಕಾನ್ ಅವರ ಇಚ್ಚೆಗೆ ಮಣಿದು ಕನಕಪುರ ರಸ್ತೆ ಕಡೆಗೆ ಮೆಟ್ರೊ ಮಾರ್ಗ ನಿರ್ಮಿಸಲಾಗಿದೆ. ಕಾಡಿನ ಪ್ರದೇಶ ಇರುವ ಮಾರ್ಗಕ್ಕೆ ಮೆಟ್ರೊ ಮಾರ್ಗ ಅಗತ್ಯವೇ ಇರಲಿಲ್ಲ. ಈ ಮಾರ್ಗದಲ್ಲಿ ಜನ ಓಡಾಡದ ಕಾರಣ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ (ಬಿಎಂಆರ್ ಸಿಎಲ್) ನಷ್ಟ ಅನುಭವಿಸುತ್ತಿದೆ. ಈ ಮಾರ್ಗದಲ್ಲಿ ಜನರು ಓಡಾಡುವಂತಾಗಲು ಏನು ಮಾಡಬೇಕು ಎಂದು ಯೋಚಿಸಿ ಈಗ ರೋರಿಚ್ ಎಸ್ಟೇಟ್ ಮೇಲೆ ಕಣ್ಣು ಹಾಕಲಾಗಿದೆ ಎಂಬುದು ಸಲ್ಡಾನ ಅಭಿಪ್ರಾಯವಾಗಿದೆ.
ಅಶೋಕ್ ಖೇಣಿ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಇಸ್ಕಾನ್, ಮಂತ್ರಿ ಸ್ಕ್ವೇರ್- ಇವರೆಲ್ಲಾ ರೋರಿಚ್ ಎಸ್ಟೇಟ್ ನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ಯೋಜನೆಯ ಬಹಿರಂಗ ಬೆಂಬಲಕ್ಕಿಳಿದರೂ ಆಶ್ಚರ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನಿವೃತ್ತ ಅರಣ್ಯಾಧಿಕಾರಿ, ಪರಿಸರವಾದಿ ಯಲ್ಲಪ್ಪ ರೆಡ್ಡಿ ಅವರು ಸೇರಿದಂತೆ ಪರಿಸರ ಪ್ರೇಮಿಗಳಿಂದ ಮತ್ತು ತಜ್ಞರಿಂದ ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸರ್ಕಾರ ತನ್ನಿಚ್ಚೆ(ಹಿತಾಸಕ್ತಿಗಳ ಹಿತ)ಯಂತೆ ರೋರಿಚ್ ಎಸ್ಟೇಟ್ ನಲ್ಲಿ ಫಿಲ್ಮ ಸಿಟಿ ನಿರ್ಮಾಣಕ್ಕೆ ಮುಂದಾಗಲಿದೆಯೇ ಅಥವಾ ವಿರೋಧಕ್ಕೆ ಮಣಿದು ಕೈಬಿಡಲಿದೆಯೇ ಕಾದು ನೋಡಬೇಕಿದೆ.