Breaking News, Shocking News ನೀಡುತ್ತಿದ್ದ ಟಿವಿ 9 ಚಾನಲ್ ತಾನೇ ನ್ಯೂಸ್ ಆಗುತ್ತಿದೆ. ಟಿವಿ 9 ಸ್ಟೋರಿಯೇ ಸೆನ್ಸೇಷನಲ್ ಆಗುತ್ತಿದೆ. ಟಿವಿ 9 ಮೂಲ ಸಂಸ್ಥೆ ಹೈದರಾಬಾದಿನ ABCLನಲ್ಲಿ (Associated Broadcasting Pvt Ltd) ಆಡಳಿತದ ಪಾರುಪತ್ಯಕ್ಕಾಗಿ ಅಕ್ಷರಶಃ ಅಂತರ್ಯುದ್ಧ, ಟಿವಿ 9 ಚಾನಲ್‌ನ ಸ್ಥಾಪಕರನ್ನೇ ಸಂಸ್ಥೆಯಿಂದ ಅಕ್ಷರಶಃ ಹೊರಗೆ ನೂಕಲಾಗಿದೆ ಮತ್ತು ಅವರ ಮೇಲೆ ಯುದ್ದ ಹೂಡಲಾಗಿದೆ. ಸಂಸ್ಥೆ ಕಟ್ಟಿ ಬೆಳೆಸಿದ ರವಿಪ್ರಕಾಶ್ ತನ್ನ ಸಂಸ್ಥೆಯೇ ತನ್ನ ಮೇಲೆ ಹಾಕಿದ ಅನೇಕ ಕೇಸುಗಳಲ್ಲಿ ಸಿಕ್ಕಿ ಹಾಕಿಕೊಂಡು ಪೊಲೀಸರ ಕಣ್ಣು ತಪ್ಪಿಸಿ ಭೂಗತವಾಗಿರಬೇಕಾದ ಪರಿಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ಟಿ ವಿ 9 ಸುದ್ದಿ ಬಹು ದೊಡ್ಡ ಸುದ್ದಿ. ಇದೇ ಸಮಯದಲ್ಲಿ ಇತರ ತೆಲುಗು ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳ ಮೂಲಕ ರಾಜಕೀಯ ಪಕ್ಷಗಳು ಟಿವಿ 9 ಮೇಲೆ ಮುಗಿಬಿದ್ದಿವೆ.
ಇದು ಕೇವಲ ಟಿ ವಿ 9 ಎಪಿಸೋಡ್ ಆಗಿಲ್ಲ. ಒಂದು ಮಾಧ್ಯಮ ಸಂಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣಗಳ ಯುದ್ಧವಾಗಿ ಪರಿಣಮಿಸಿದೆ. ಇದು ಮುಂದೆ ಇತರ ಮಾಧ್ಯಮಗಳಿಗೂ ಸಾಮಾಜಿಕ ಜಾಲತಾಣಗಳ ನಡುವೆ ನಡೆಯುವ ಯುದ್ದಕ್ಕೆ ಮುನ್ನುಡಿ ಬರೆದಂತಿದೆ. ಈ ಮಹಾ ಭಾರತ ತಿಳಿಯಬೇಕಾದರೆ ಪ್ರಾಂತೀಯ ಚಾನಲ್ ಗಳ ಲೀಡರ್ ಟಿ ವಿ 9 ನಲ್ಲಿ ನಡೆದ ಘಟನೆಗಳನ್ನು ತಿಳಿಯಲು ಪ್ಲಾಶ್ ಬ್ಯಾಕ್ ಗೆ ಹೋಗಬೇಕು:
ಅದು 2004ರ ಸಮಯ. ವಾರ್ತೆಗಳೆಂದರೆ ದಿನಕ್ಕೆ ಎರಡು ಬಾರಿ ಬಿತ್ತರವಾಗುತ್ತಿದ್ದ ಕಾಲ. ರವಿಪ್ರಕಾಶ್ ಎಂಬ ಯುವ ಪತ್ರಕರ್ತ ತೆಲುಗಿನ ಜೆಮಿನಿ ಟಿ.ವಿ.ಯಲ್ಲಿ ದಿನಕ್ಕೊಮ್ಮೆ ಬರುವ ವಾರ್ತೆಗಳನ್ನು ಸಂಗ್ರಹಿಸುತ್ತಿದ್ದ ವರದಿಗಾರ. ಆತನ ಎನ್‍ಕೌಂಟರ್ ಎಂಬ ಕಾರ್ಯಕ್ರಮ ಬಹು ಪ್ರಸಿದ್ಧಿ ಪಡೆದು ಜನಪ್ರಿಯ ತಂದು ಕೊಟ್ಟಿತು. ಆಗ ಆತನಿಗೆ ನ್ಯೂಸ್ ನಲ್ಲಿ ಇರುವ ಆಳ, ಅಗಲ, ಬಿಸಿನೆಸ್ ಮತ್ತು ನ್ಯೂಸ್ ಚಾನಲ್ ನ್ನು 24 x 7 ಅವಧಿಯಲ್ಲಿ ನಡೆಸಿದರೆ ಸಿಗಬಹುದಾದ ಪ್ರಚಾರ ಕಾಣಿಸಿತ್ತು.
ಆತ ಆ ದಿನ ಕಂಡ ಕನಸೇ ತೆಲುಗಿನಲ್ಲಿ ಮೊದಲ 24 x 7 ವಾರ್ತೆ ನೀಡುವ ವಾರ್ತೆ ವಾರ್ತಾ ಚಾನಲ್ ಟಿ ವಿ 9, ಇದನ್ನು ರವಿ ಪ್ರಕಾಶ್ ಸ್ಥಾಪಿಸಲು ಹೊರಟಾಗ ಆತನಿಗೆ ಹಣ ಹೂಡಿ ಜೊತೆಯಾಗಿದ್ದವರು ಶ್ರೀನಿರಾಜು. ಇವರುಗಳು ಎಲ್ಲಾ ಸೇರಿ ABCL ಎಂಬ ಸಂಸ್ಥೆಯ ಮೂಲಕ ದಕ್ಷಿಣ ಭಾರತದ ಮೊದಲ ತೆಲುಗಿನ 24 x 7 ಚಾನಲ್ ಟಿ ವಿ 9 ನ್ನು ಪ್ರಾರಂಭಿಸಿದರು. ಅದು ಪ್ರಾಂತೀಯ ಚಾನಲ್ ಗಳ ಉಗಮಕ್ಕೆ ನಾಂದಿ ಸಹ ಆಗಿತ್ತು.
ಪ್ರಾರಂಭದಲ್ಲಿ ಶ್ರೀನಿರಾಜುಗೆ ಇದ್ದದ್ದು ಕೇವಲ ಬ್ಯುಸಿನೆಸ್ ಇಂಟ್ರೆಸ್ಟ್. ಕೇವಲ ಹೂಡಿಕೆದಾರರಾಗಿ ABCL ನಲ್ಲಿ ಸುಮಾರು 90% ಶೇರುಗಳನ್ನು ಹೊಂದಿದ್ದ ಅವರು ರವಿಪ್ರಕಾಶ್ ಗೆ ಸುಮಾರು 8% ಶೇರುಗಳನ್ನು ನೀಡಿದರು ಮತ್ತು ರವಿಪ್ರಕಾಶ್ CEO ಆಗಿ ಚಾನಲನ್ನು ನಡೆಸಬೇಕೆಂದು ಒಪ್ಪಂದವಾಯಿತು. ಕೇವಲ ಪತ್ರಕರ್ತನಾಗಿ ಮಾತ್ರವೇ ಯೊಚಿಸಿದ ರವಿಪ್ರಕಾಶ್ ತನ್ನ ಶೇರುಗಳ ಭಾಗಗಳನ್ನು ಯೋಚಿಸದೆ, ತಾನು ಹುಟ್ಟು ಹಾಕಿದ ಚಾನಲ್ ಅಭಿವೃದ್ದಿ ಮಾಡುವತ್ತ ಯೋಚಿಸತೊಡಗಿದರು.
ಅಂದಿನಿಂದ ರವಿಪ್ರಕಾಶ್ ಪತ್ರಕರ್ತರ ದಂಡನ್ನೇ ಕಟ್ಟಿದರು. ಸುದ್ದಿ ನೀಡುವ ವಿಧಾನಕ್ಕೆ ಸಂಪೂರ್ಣವಾದ ಕಾರ್ಪೊರೆಟ್ ಶೈಲಿ ನೀಡಿದರು ನೋಡ ನೋಡುತ್ತಿದ್ದಂತೆಯೇ ಟಿ ವಿ 9 ತೆಲುಗರ ಮನೆ ಮಾತಾಯಿತು. ಸುದ್ದಿ ನೀಡುವ ವಿಧಾನಕ್ಕೆ ವೇಗ, ರೋಚಕತೆ, ನೀಡಿ ಸುದ್ದಿ ನೋಡುವುದನ್ನು ಆಸಕ್ತಿದಾಯವಾಗಿಸಿದರು. ಈ ಮೂಲಕ ರವಿಪ್ರಕಾಶ್ ತಾನೇ ಎಲ್ಲಾ ಆಗಿ ಟಿ ವಿ 9 ಬೆಳೆಸಿ ಟಿ ವಿ 9 ಅಂದರೆ ರವಿಪ್ರಕಾಶ್, ರವಿಪ್ರಕಾಶ್ ಅಂದರೆ ಟಿ ವಿ 9 ಎನ್ನುವಂತೆ ಬೆಳೆದರು. ಇದೇ ವೇಗದಲ್ಲೇ ಈ ಸಂಸ್ಥೆ ಕನ್ನಡ, ಗುಜರಾತಿ, ಹಿಂದಿ, ಇಂಗ್ಲೀಷ್‍ನಲ್ಲಿ ಸಹ ಪ್ರಾಂತೀಯ ಟಿ ವಿ 9 ಚಾನಲ್‍ಗಳನ್ನು ಆರಂಭಿಸಿತು. ಇಲ್ಲಿ ಪ್ರತಿ ಹಂತದಲ್ಲೂ ರವಿಪ್ರಕಾಶ್ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದರು.
ಒಳ್ಳೆಯ ಪ್ರಚಾರದ ಜೊತೆ ಕೆಟ್ಟ ಅಭಿಪ್ರಾಯವೂ ಬರಲಾರಂಭಿಸಿತು. ಟಿ ವಿ 9 ನ ಸುದ್ದಿ ನೀಡುವ ವಿಧಾನ, ಎಲ್ಲ ವಿಷಯಗಳಿಗೂ `ಮಸಾಲೆ’ ಸೇರಿಸುವ, ಪ್ರತಿ ವಿಷಯದಲ್ಲೂ ಅತಿಯಾಗಿ ಮೂಗು ತೂರಿಸುವ ಮತ್ತು ಕೆಲವು ರಾಜಕೀಯ ಪಕ್ಷಗಳ ಹಿತಾಸಕ್ತಿಗಾಗಿ ಕೆಲಸ ಮಾಡುವ ಚಾನಲ್, ಸುದ್ದಿ ಇಲ್ಲದಿದ್ದರೆ ಸುದ್ದಿ ಸೃಷ್ಟಿಸುವ ಚಾನಲ್ ಎಂಬ ಅಪಖ್ಯಾತಿಯೂ ಬಂದಿತು. ಇದರ ಹೆಚ್ಚು ಹೆಸರು ರವಿಪ್ರಕಾಶ್ ಗೆ ಅಂಟಿಕೊಂಡಿತು.
ಅಗಾಧವಾಗಿ ಬೆಳೆದ ಟಿ ವಿ 9 ಅಬಿಮಾನಿಗಳ ಜೊತೆ ಕೆಲ ಜನ ಸಾಮಾನ್ಯರೊಂದಿಗೂ ಮತ್ತು ರಾಜಕೀಯ ಪಕ್ಷಗಳೊಂದಿಗೂ ವಿರೋಧಿಗಳನ್ನು ಸಮವಾಗಿ ಸಂಪಾದಿಸಿತ್ತು ಈ ವಿರೋಧ ರವಿಪ್ರಕಾಶ್ ಪತನಕ್ಕೂ ಮುನ್ನುಡಿಯಾಯಿತು. ಜೊತೆ ಜೊತೆಯಲ್ಲಿ ಟಿ ವಿ 9 ಒಂದು ಯಶಸ್ವಿ ಚಿನ್ನದ ಮೊಟ್ಟೆ ನೀಡುವ ಚಾನಲ್ ಆಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಲಾಭ ತಂದು ಕೊಡುತ್ತದೆ ಎಂದು ಬಿಸಿನೆಸ್ ಗ್ರೂಪ್‍ಗಳು ಮತ್ತು ರಾಜಕೀಯ ಮೈಲೇಜ್ ಸಿಗುತ್ತದೆ ಎಂದು ರಾಜಕೀಯ ಪಕ್ಷಗಳೂ ಮತ್ತು ರವಿಪ್ರಕಾಶ್ ರನ್ನು ತುಳಿಯಬೇಕೆಂದುಕೊಂಡಿದ್ದ ವಿರೋಧಿಗಳು ಟಿ ವಿ 9 ನ ಮೇಲೆ ಕಣ್ಣು ಹಾಕತೊಡಗಿದವು.
2016 ನಂತರ ABCL ಮಾಲೀಕತ್ವಕ್ಕಾಗಿ ಅನೇಕ ವ್ಯಕ್ತಿಗಳು, ರಾಜಕೀಯ ಪಕ್ಷಗಳಿಂದ ಪೈಪೋಟಿ ನಡೆಯಿತು. ಇದರಲ್ಲಿ ತೆಲಂಗಾಣದ ಆಳುವ ಟಿ.ಆರ್.ಎಸ್. ಪಕ್ಷದ ಬೆಂಬಲವಿದೆ ಎಂದು ಹೇಳುವ ಅಳಂದ ಮೀಡಿಯಾ ABCL ಮುಖ್ಯ ಹೂಡಿಕೆದಾರ ಶ್ರೀನಿರಾಜುರವರಿಂದ ಸುಮಾರು 90% ಶೇರುಗಳನ್ನು ಖರೀದಿಸಿ ಇನ್ನು ABCL ಗೆ ತಾನೇ ಮಾಲೀಕ ಎಂದು ಘೋಷಿಸಿತು. ಇದರಲ್ಲಿ ಅಳಂದ ಸಂಸ್ಥೆ ತನ್ನ ಹಣ ಬಲ ಮತ್ತು ಟಿ.ಆರ್.ಎಸ್. ಪಕ್ಷದ ರಾಜಕೀಯ ಶಕ್ತಿ ಉಪಯೋಗಿಸಿತು ಎಂದು ಆರೋಪಗಳು ಕೇಳಿ ಬಂದವು.
ತನ್ನ ಅಧಿಪತ್ಯಕ್ಕೆ ಹೊಡೆತ ಬೀಳುವ ಮುನ್ಸೂಚನೆ ಅರಿತ ರವಿಪ್ರಕಾಶ್ ಇದನ್ನು ತೀವ್ರವಾಗಿ ವಿರೋಧಿಸಿ ಹೊರಾಟವನ್ನೇ ಮಾಡಿದರು. ಆದರೆ, ಕಾರ್ಪೊರೇಟ್ ಪ್ರಪಂಚದಲ್ಲಿ ಹೆಚ್ಚು ಶೇರು ಹೊಂದಿರುವವರೇ ಬಲವಂತರು ಮತ್ತು ಅವರ ಇಚ್ಚೆಯಂತೆಯೇ ಚಾನಲ್ ನ ಆಡಳಿತ, ದೃಷ್ಟಿ ಕೋನ, ವಾರ್ತೆಗಳ ವರದಿ ನಡೆಯಬೇಕು. ಶ್ರೀನಿರಾಜು ಇದ್ದಾಗ ಟಿ ವಿ 9 ಮತ್ತು ABCL ಗೆ ತಾನೇ ಎಲ್ಲ ಅಂದುಕೊಂಡಿದ್ದ ರವಿಪ್ರಕಾಶ್ ಅಂಡ್ ಟೀಂ ಗೆ ಈ ಪರಿಣಾಮ ದಿಕ್ಕು ತೋಚದಂತಾಯಿತು. ಹೊಸ ಮಾಲೀಕತ್ವದ ಅಳಂದ ಗ್ರೂಪ್ ಹೇಳುವ ಪ್ರಕಾರ ರವಿಪ್ರಕಾಶ್ ಅಂಡ್ ಟೀಂ ಮಾಲಿಕತ್ವ ಬದಲಾವಣೆಗೆ ಅನೇಕ ಅಡೆ ತಡೆಗಳನ್ನು ಒಡ್ಡಿದರು, ಟಿ ವಿ 9 ಮತ್ತು ABCLನ ಅನೇಕ ಮಾಹಿತಿಗಳನ್ನು ಕದ್ದಿದ್ದಾರೆ ಮತ್ತು ತಾನು ಸ್ಥಾಪಿಸಿದ ಹೊಸ ಚಾನಲ್‍ಗೆ ಟಿ ವಿ 9 ಗೆ ಸಂಬಂಧಿಸಿದ ಎಲ್ಲಾ ಕಾಪಿ ರೈಟ್‍ಗಳನ್ನು ಮ್ಯಾನೇಜ್‍ಮೆಂಟಿಗೆ ಗೊತ್ತಿಲ್ಲದೆ ಕಳ್ಳತನದಿಂದ ದುರುದ್ದೇಶ ಪೂರಕವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದೆ. ಇನ್ನು ಮುಂದೆ ಹೋಗಿ ಟಿ ವಿ 9 ಮತ್ತು ABCL ಡೈರೆಕ್ಟರ್‍ಗಳ ಸಹಿಗಳನ್ನು ಫೋರ್ಜರಿ ಮಾಡಿ ಅಳಂದ ಸಂಸ್ಥೆ ಟಿ ವಿ 9 ಮತ್ತು ABCL ಮಾಲೀಕತ್ವ ಪಡೆಯದ ಹಾಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆಂದು ಹೈದರಾಬಾದ್‍ನ ಸೈಬರಬಾದ್ ಪೊಲೀಸ್ ಠಾಣೆಯಲ್ಲೂ ರವಿಪ್ರಕಾಶ್ ಅಂಡ್ ಟೀಂ ಮೇಲೆ ವಂಚನೆ, ಕಳ್ಳತನ ಮತ್ತು ನಂಬಿಕೆ ದ್ರೋಹದ ಆರೋಪಗಳನ್ನು ಮಾಡಿ ಅತ್ಯಂತ ಕಠಿಣವಾದ ದೂರನ್ನು ದಾಖಲಿಸಿದೆ. ಇದನ್ನು ರವಿಪ್ರಕಾಶ್ ನಿರಾಕರಿಸಿ ತನ್ನದೇ ಚಾನಲ್‍ನಲ್ಲಿ ಕುಳಿತು ಸ್ಪಷ್ಟೀಕರಣ ನೀಡಬೇಕಾಯಿತು. ಆದರೆ, ಕೋಪಗೊಂಡ ಅಳಂದ ಸಂಸ್ಥೆ ಬಲವಂತವಾಗಿ ಶತ್ರು ಸೈನಿಕರು ಕೋಟೆ ವಶಪಡಿಸಿಕೊಂಡಂತೆ ಟಿ ವಿ 9 ಮತ್ತು ABCL ನ ಆಡಳಿತವನ್ನು ವಶಪಡಿಸಿಕೊಂಡು ರಾತ್ರೋ ರಾತ್ರಿ ರವಿಪ್ರಕಾಶ್ ರವರನ್ನು ಸಿ.ಇ.ಓ. ಹುದ್ದೆಯಿಂದ ಅಗೌರವವಾಗಿ ಕಿತ್ತು ಹಾಕಿತು.
ತಾನೇ ಸ್ಥಾಪಿಸಿದ ಟ ವಿ 9 ನಿಂದ ರವಿಪ್ರಕಾಶ್ ಅಕ್ಷರಶ: ಹೊರಗೆ ದಬ್ಬಲ್ಪಟ್ಟರು. ಇದನ್ನು ಪ್ರಶ್ನಿಸಿ ರವಿಪ್ರಕಾಶ್ ಹೈಕೋರ್ಟ್ ಮತ್ತು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ಅನ್ನು ಮೊರೆ ಹೊಕ್ಕರೂ ಹೆಚ್ಚಿನ ಯಶಸ್ಸು ಪಡೆಯಲ್ಲಿಲ್ಲ. ಇಷ್ಟೇ ಆಗಿದ್ದರೆ, ಇದೊಂದು ಕಾರ್ಪರೇಟ್ ಪ್ರಕರಣ ಎಂದು ಮರೆತು ಹೋಗುವ ಘಟನೆಯಾಗಿರುತ್ತಿತ್ತು.
ಇಲ್ಲಿಂದ ಮತ್ತೊಂದು ಪ್ರಕರಣ ಎಳೆ ತರಲಾಯಿತು. ರಾಜಕೀಯ ಪಕ್ಷಗಳು ವಿರೋಧಿ ಚಾನಲ್ ಗಳು ಮತ್ತು ಟಿ ವಿ 9 ನಿಂದ ನೊಂದವರು ಎಂದು ಹೇಳಿಕೊಳ್ಳುವ ಕೆಲವು ಸಂಘ ಸಂಸ್ಥೆಗಳು ಈ ಪ್ರಕರಣಕ್ಕೆ ಪ್ರವೇಶ ಪಡೆದವು. ಅಂದಿನಿಂದ ಈ ಪ್ರಕರಣ ಮಹಾನ್ ರೋಚಕ ಪ್ರಕರಣವಾಗಿ ಮಾರ್ಪಾಟ್ಟಿತು. ಪ್ರತಿ ದಿನ ವಿರೋಧಿ ನ್ಯೂಸ್ ಚಾನಲ್ ಗಳು ಟಿ ವಿ 9 ಮೇಲೆ ಮತ್ತು ರವಿಪ್ರಕಾಶ ಮತ್ತು ಟೀಂನ ಪತ್ರಕರ್ತ ಸಹೋದ್ಯೋಗಿಗಳ ಮೇಲೆ ತಮಗಿರುವ ಜಿದ್ದನ್ನು ತೀವ್ರವಾಗಿ ಪ್ರದರ್ಶನ ಮಾಡಿದರು. ಪ್ರತಿ ಗಂಟೆಯೂ ರವಿಪ್ರಕಾಶ ಮೇಲಿನ ಪ್ರಕರಣಗಳ ಬಗ್ಗೆ ಡಿಬೆಟ್ ಗಳು, ಹಿಂದೆ ಮಾಡಿದ ಅನೇಕ ಸುದ್ದಿಗಳು ವಿಮರ್ಶೆಗೆ ಒಳಪಟ್ಟವು. ಸಾಮಾಜಿಕ ಜಾಲತಾಣಗಳಲ್ಲಿ ಟ ವಿ 9 ನ ಹಿಂದಿನ ಅತಿಯಾದ ಮಸಾಲ ನ್ಯೂಸ್ ಗಳಿಂದ ನೊಂದವರು ಎಂದು ಹೇಳಿಕೊಂಡ ಕೆಲವರು ಅಕ್ಷರಶ: ಯುದ್ದಕ್ಕೆ ನಿಂತರು.
ಕೆಲವರು ಹಿಂದೆ ಅನೇಕ ವಿಷಯಗಳಲ್ಲಿ ಅತಿಯಾಗಿ ಮೂಗು ತೂರಿಸಿ ಪ್ರತಿಯೊಂದನ್ನೂ ವೈಯಕ್ತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಟಿ ವಿ 9 ನ ರವಿಪ್ರಕಾಶ್ ಪ್ರಕರಣವನ್ನು ಸಹ ಚಾನಲ್‍ನಲ್ಲಿ ವಿಮರ್ಶೆ ಮಾಡಬೇಕೆಂದು ಮತ್ತು ಅವರ ತಂದೆ ತಾಯಿಯವರನ್ನು ಕರೆಸಿ ಡಿಬೆಟ್ ಮಾಡಬೇಕೆಂದು ಹಠವನ್ನು ಆರಂಭಿಸಿದರು. ಪೊಲೀಸರು ಮೊಕದ್ದಮೆ ದಾಖಲಿಸಿ ರವಿಪ್ರಕಾಶ್ ಮತ್ತು ಟೀಂನ ಮನೆಯ ಮೇಲೆ, ಕಛೇರಿಗಳ ಮೇಲೆ ದಾಳಿಗಳನ್ನು ಮಾಡಿದರು. ಅವರನ್ನು ವಿಚಾರಣೆಗೆ ಬರಬೇಕೆಂದು ನೋಟೀಸ್‍ಗಳ ಮೇಲೆ ನೋಟೀಸ್ ನೀಡಲಾಯಿತು.
ಆದರೆ, ರವಿಪ್ರಕಾಶ್ ಟೀಂ ಸಂಪೂರ್ಣ ಭೂಗತವಾಗಿದ್ದು, ಪೊಲೀಸ್ ರ ಕಣ್ಣು ತಪ್ಪಿಸಿ ಓಡಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೆ, ಕೇವಲ ವ್ಯವಹಾರ ಮಾಡಿ ಗೊತ್ತಿರುವ ಅಳಂದ ಸಂಸ್ಥೆಗೆ ರವಿಪ್ರಕಾಶ್ ಇಲ್ಲದ ಟಿ ವಿ 9 ದೇವೇಗೌಡರಿಲ್ಲದ ಜನತಾ ದಳ, ಮೋದಿ ಇಲ್ಲದ ಬಿ.ಜೆ.ಪಿ ಆಗಿರುವುದಂತೂ ಸತ್ಯ. ರವಿಪ್ರಕಾಶ ಸಹ ಸುಮ್ಮನೆ ಕುಳಿತಿಲ್ಲ. ಏನೇ ಆಗಲಿ ತಾನು ಬೆಳೆಸಿದ ಚಾನಲ್‍ನಲ್ಲಿ ತನ್ನ ಅಧಿಕಾರ ಇರಬೇಕೆಂದು ಹೋರಾಟ ಮುಂದುವರಿಸಿದ್ದಾರೆ. ಈ ಪ್ರಕರಣ ಮುಂದೆ ಬಿಸಿನೆಸ್ ಹೌಸ್‍ಗಳಿಗೂ ಮಾಧ್ಯಮ ಕ್ಷೇತ್ರಕ್ಕೂ ಮತ್ತು ಮಾಧ್ಯಮ ಕ್ಷೇತ್ರಕ್ಕೂ ಮತ್ತು ಜನ ಸಾಮಾನ್ಯರೇ ನಡೆಸುವ ಸೋಷಿಯಲ್ ಮೀಡಿಯಾಗೂ ಮುಂದೆ ನಡೆಯುವ ಘರ್ಷಣೆಗಳಿಗೂ ನಾಂದಿ ಹಾಡಿರುವುದಂತೂ ಸತ್ಯ.