ಜಗತ್ತಿನಾದ್ಯಂತ ಕರೋನಾ ಸೋಂಕು ನಿಯಂತ್ರಣ ಮತ್ತು ಅದರ ಆರ್ಥಿಕ ಹೊಡೆತಗಳಿಂದ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಗೊಂದಲ, ಆತಂಕ ಮತ್ತು ಅಸಹಾಯಕತೆಗಳೇ ಹೆಚ್ಚಿವೆ. ಜಾಗತಿಕ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಯಶೋಗಾಥೆಗಳಿಗಿಂತ, ಸೋಲಿನ ಪಾಠಗಳೇ ಅಧಿಕ.
ಇಂತಹ ಪರಿಸ್ಥಿತಿಯಲ್ಲಿ ವಿಶ್ವ ಸಮುದಾಯಕ್ಕೆ ವಿವೇಚನೆಯ ದಾರಿಗಳನ್ನು ತೋರಿಸಬೇಕಾಗಿದ್ದ, ಸಂಕಷ್ಟದ ಹೊತ್ತಲ್ಲಿ ಭರವಸೆಯ ಮಾರ್ಗಸೂಚಿಯನ್ನು ನೀಡಬೇಕಿದ್ದ ವಿಶ್ವಸಂಸ್ಥೆ ಮತ್ತು ಅದರ ಅಂಗಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ, ಅಂತಹ ಹೊಣೆಗಾರಿಕೆ ಮತ್ತು ನಾಯಕತ್ವ ಪ್ರದರ್ಶನದ ಬದಲಿಗೆ ಸ್ವತಃ ತನ್ನದೇ ವಿಶ್ವಾಸಾರ್ಹತೆಗೆ, ನಂಬಿಕೆಗೆ ಕೊಡಲಿ ಪೆಟ್ಟು ಕೊಡುವುದರಲ್ಲೇ ಮುಳುಗಿದೆ.
ಇತ್ತೀಚಿನ ವರ್ಷಗಳಲ್ಲಿ ಕ್ರಮೇಣ ಕುಂದುತ್ತಾ ಬಂದಿದ್ದ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೆ ದೊಡ್ಡ ಪೆಟ್ಟು ಕೊಟ್ಟದ್ದು ಈ ಕರೋನಾ ಕಾಲ ಎಂಬುದು ನಿರ್ವಿವಾದ. ಕರೋನಾ ವಿಷಯದಲ್ಲಿ ಆ ರೋಗದ ಉಗಮ ಮತ್ತು ಹರಡುವಿಕೆಗೆ ಹೊಣೆಗಾರನಾದ ಚೀನಾದ ವಿಷಯದಲ್ಲಿ ಅದು ನಡೆದುಕೊಂಡ ರೀತಿ, ಅನುಮಾನಾಸ್ಪದ ನಡೆಗಳು ಆರಂಭದಲ್ಲೇ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಅನುಮಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದವು. ಆ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊಲಾಲ್ಡ್ ಟ್ರಂಪ್ ಅವರಂಥವರು ಕೂಡ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್ ಒ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು ಮತ್ತು ಅಂತಿಮವಾಗಿ ಕಳೆದ ವಾರ ಭಾರೀ ಪ್ರಮಾಣದ ಅಮೆರಿಕದ ಅನುದಾನವನ್ನೇ ನಿಲ್ಲಿಸುವ ತೀರ್ಮಾನಕ್ಕೆ ಬಂದ್ದಿದ್ದರು.
ಕರೋನಾ ವಿಷಯದಲ್ಲಿ ಚೀನಾದ ಅನುಮಾನಾಸ್ಪದ ನಡೆಯಿಂದ ಹಿಡಿದು ಕಾಲಕಾಲಕ್ಕೆ ಹೊರಡಿಸಿದ ಸೋಂಕು ನಿಯಂತ್ರಣ ಮತ್ತು ರೋಗದ ಚಿಕಿತ್ಸೆ ಕುರಿತ ಮಾರ್ಗಸೂಚಿಗಳ ವಿಷಯದಲ್ಲಿಯೂ ವಿಶ್ವ ಆರೋಗ್ಯ ಸಂಸ್ಥೆಯ ಎಡವಟ್ಟುಗಳು ಸದ್ಯದ ಸ್ಥಿತಿಯಲ್ಲಿ ಅದೆಷ್ಟು ಅದಕ್ಷತೆಯ ಮತ್ತು ಅಸ್ಪಷ್ಟತೆಯ ವ್ಯವಸ್ಥೆಯಾಗಿದೆ ಮತ್ತು ಎಂಥ ಗೊಂದಲ ಗೂಡಾಗಿದೆ ಎಂಬುದನ್ನು ಜಗಜ್ಜಾಹೀರು ಮಾಡಿದವು. ಅಷ್ಟೇ ಅಲ್ಲ, ಡಬ್ಲ್ಯೂ ಎಚ್ ಒದ ನಡೆಗಳು ಸ್ವತಃ ಅದರ ಮಾತೃಸಂಸ್ಥೆ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಪ್ರಸ್ತುತತೆಯ ಕುರಿತ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಇದೀಗ ಅಂತಹದ್ದೇ ಮತ್ತೊಂದು ಹೊಸ ವಿವಾದ ಡಬ್ಲ್ಯೂ ಎಚ್ ಒ ಸುತ್ತಿಕೊಂಡಿದ್ದು, ಕರೋನಾ ಕುರಿತ ಅದರ ವಿವಾದಾತ್ಮಕ ಹೇಳಿಕೆಗಳಿಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ ಅನಿರೀಕ್ಷಿತ ಪ್ರಮಾಣದಲ್ಲಿ ಏರುತ್ತಿರುವಾಗ, ಸಾವಿನ ಪ್ರಮಾಣದ ಕೂಡ ಆಘಾತಕಾರಿ ಮಟ್ಟ ತಲುಪಿರುವಾಗ ಕೂಡ ತನ್ನ ಹೇಳಿಕೆ, ನೀತಿ- ಮಾರ್ಗಸೂಚಿಗಳಲ್ಲಿ ಸ್ಪಷ್ಟತೆ ಇಲ್ಲದೆ, ಗೊಂದಲಕಾರಿ ಹೇಳಿಕೆಗಳನ್ನು ನೀಡಿದ ಡಬ್ಲ್ಯೂ ಎಚ್ ಒ ಮತ್ತೊಮ್ಮೆ ತೀವ್ರ ಟೀಕೆಗೆ ಮತ್ತು ಭಾರೀ ಮುಜುಗರಕ್ಕೆ ಈಡಾಗಿದೆ.
ಕೋವಿಡ್-19 ಕುರಿತ ವಿಶ್ವಸಂಸ್ಥೆಯ ತಾಂತ್ರಿಕ ತಂಡದ ಮುಖ್ಯಸ್ಥೆಯಾಗಿರುವ ಮರಿಯಾ ವಾನ್ ಕೆರ್ಕೋವ್ ಕಳೆದ ಸೋಮವಾರ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. “ಯಾವುದೇ ರೋಗಲಕ್ಷಣಗಳಿಲ್ಲದ ಸೋಂಕಿತ ವ್ಯಕ್ತಿಗಳಿಂದ ಕರೋನಾ ಹರಡುವ ಸಾಧ್ಯತೆ ‘ತೀರಾ ಕಡಿಮೆ’” ಎಂಬ ಮರಿಯಾ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ಡಬ್ಲ್ಯೂ ಎಚ್ ಒ ಮತ್ತು ವಿಶ್ವಸಂಸ್ಥೆಯ ವಿರುದ್ಧ ಮತ್ತೊಂದು ಸುತ್ತಿನ ಆಕ್ರೋಶ, ಟೀಕೆಗಳ ಸುನಾಮಿಗೆ ಕಾರಣವಾಗಿದೆ.

ಕರೋನಾ ರೋಗ ಲಕ್ಷಣಗಳಿರುವ ಮತ್ತು ಸೋಂಕು ದೃಢಪಟ್ಟ ವ್ಯಕ್ತಿಗಳ ಸಂಪರ್ಕದ ಮೂಲಕ ಹರಡುವ ಸೋಂಕನ್ನು ತಡೆಯುವುದು, ಸೋಂಕಿತರ ಸಂಪರ್ಕ ಪತ್ತೆ ಮಾಡುವುದು, ಅಂಥವರನ್ನು ಕ್ವಾರಂಟೈನ್ ಮಾಡುವುದು ಸುಲಭ. ಆದರೆ, ಜಗತ್ತಿನಾದ್ಯಂತ ರೋಗ ವ್ಯಾಪಕ ಪ್ರಮಾಣದಲ್ಲಿ ಹರಡಲು ಮುಖ್ಯ ಕಾರಣ; ಆ ಸೋಂಕಿನ ಯಾವ ಗುಣಲಕ್ಷಣಗಳೂ ಕಾಣಿಸಿಕೊಳ್ಳದೆಯೂ ಸೋಂಕು ಮತ್ತೊಬ್ಬರಿಗೆ ಹರಡುವ ಮಟ್ಟಿಗೆ ವೈರಾಣುಗಳನ್ನು ಹೊಂದಿರುವ ‘ರೋಗಲಕ್ಷಣರಹಿತ’ ವ್ಯಕ್ತಿಗಳೇ. ಇವರಲ್ಲಿ ಸೋಂಕು ಪರೀಕ್ಷೆ ನಡೆಸದೆ ರೋಗ ಪತ್ತೆಯಾಗುವುದೇ ಇಲ್ಲ. ಪರೀಕ್ಷೆ ನಡೆಸುವುದು ಕೂಡ ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಹಾಗಾಗಿ ಅಂಥವರು ನಿರಂತರವಾಗಿ ಸೋಂಕು ಹರಡುತ್ತಲೇ ಇರುವುದೇ ರೋಗ ನಿಯಂತ್ರಣದ ವಿಷಯದಲ್ಲಿ ದೊಡ್ಡ ತೊಡಕಾಗಿದೆ ಎಂಬುದು ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ತಲೆಕೆಡಿಸಿಕೊಂಡಿದ್ದಾರೆ.
ಇಂತಹ ಹೊತ್ತಲ್ಲಿ ಸೋಂಕು ಲಕ್ಷಣಗಳಿಲ್ಲದ, ಆದರೆ ಸೋಂಕಿತರಾಗಿರುವ ವ್ಯಕ್ತಿಗಳು ಸೋಂಕು ಹರಡುವ ಪ್ರಮಾಣ ಅತ್ಯಲ್ಪ ಎಂಬ ಡಬ್ಲ್ಯೂ ಎಚ್ ಒ ಕರೋನಾ ತಾಂತ್ರಿಕ ತಂಡದ ಮುಖ್ಯಸ್ಥೆಯ ಹೇಳಿಕೆ ಸಹಜವಾಗೇ ತೀವ್ರ ಟೀಕೆಗೆ ಗ್ರಾಸವಾಗಿದೆ.
ಅದರಲ್ಲೂ ಕೆಲವು ದೇಶಗಳಲ್ಲಿ ಲಾಕ್ ಡೌನ್ ತೆರವು ಮತ್ತು ವಿನಾಯ್ತಿಗಳು ಜಾರಿಗೆ ಬಂದ ಹಿನ್ನಲೆಯಲ್ಲಿ ವ್ಯಾಪಕ ಸಮುದಾಯದ ಸೋಂಕು ಇರುವ ಪ್ರದೇಶದ ಆರೋಗ್ಯವಂತ ವ್ಯಕ್ತಿಗಳು ಕೂಡ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಮತ್ತು ಭೌತಿಕ ಅಂತಕ ಕಾಯ್ದುಕೊಳ್ಳುವುದು ಅಗತ್ಯ ಎಂದು ಸ್ವತಃ ಡಬ್ಲ್ಯೂ ಎಚ್ ಒ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಅದೇ ಸಂಸ್ಥೆಯ ಉನ್ನತಾಧಿಕಾರಿಯಾಗಿ ಮರಿಯಾ ನೀಡಿದ ಹೇಳಿಕೆ ಮತ್ತಷ್ಟು ಗೊಂದಲ ಮತ್ತು ಗಲಿಬಿಲಿಗೆ ಕಾರಣವಾಗಿದೆ.
ಹಾಗೆ ನೋಡಿದರೆ, ಜಾಗತಿಕವಾಗಿ ಈ ರೋಗ ಲಕ್ಷಣವಿರದ ಸೋಂಕಿತರು ಸೋಂಕು ಹರಡುವುದರಲ್ಲಿ ಎಷ್ಟರಮಟ್ಟಿಗೆ ಪಾತ್ರ ವಹಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಗೊಂದಲವಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೆಲವು ವರದಿಗಳ ಪ್ರಕಾರ ಹಾಗೆ ರೋಗಲಕ್ಷಣರಹಿತ ಸೋಂಕಿತರು ಇತರರಿಗೆ ಸೋಂಕು ಹರಡುವ ಪ್ರಮಾಣ ಶೇ.2ರಷ್ಟು! ಆದರೆ, ಲಂಡನ್ ಮೂಲಕ ಸ್ಕ್ರಿಪ್ಸ್ ರೀಸರ್ಚ್ ಟ್ರಾನ್ಸಲೇಷನಲ್ ಇನ್ ಸ್ಟಿಟ್ಯೂಟ್ ನ ಒಂದು ವರದಿಯ ಪ್ರಕಾರ ಒಟ್ಟಾರೆ ಕರೋನಾ ವೈರಾಣು ದೃಢ ಪ್ರಕರಣಗಳ ಪೈಕಿ ಹೀಗೆ ರೋಗ ಲಕ್ಷಣರಹಿತ ಸೋಂಕಿತರ ಪ್ರಮಾಣ ಶೇ.45ರಷ್ಟಿದ್ದು, ರೋಗ ಲಕ್ಷಣವುಳ್ಳ ಸೋಂಕಿತರು ಹೊಂದಿರುವಷ್ಟೇ ಪ್ರಮಾಣದ ವೈರಾಣು ಹೊಂದಿರುತ್ತಾರೆ. ಹಾಗಾಗಿ ವೈರಾಣು ಹರಡುವಿಕೆಯ ವಿಷಯದಲ್ಲಿಯೂ ಎರಡೂ ಗುಂಪಿನ ನಡುವೆ ಅಷ್ಟೇನು ವ್ಯತ್ಯಾಸವಿರಲಾರದು ಎಂದಿದೆ!
ತಮ್ಮ ಈ ಸಂಶೋಧನೆಯ ಹಿನ್ನೆಲೆಯಲ್ಲಿ ಡಬ್ಲ್ಯೂ ಎಚ್ ಒ ಕರೋನಾ ತಾಂತ್ರಿಕ ತಂಡದ ಮುಖ್ಯಸ್ಥೆ ಮರಿಯಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸ್ಕ್ರಿಪ್ಸ್ ರೀಸರ್ಚ್ ಸಂಸ್ಥೆ ನಿರ್ದೇಶಕ ಡಾ ಎರಿಕ್ ಟೊಪಾಲ್, “ಈ ಹೇಳಿಕೆಯನ್ನು ಸಮರ್ಥಿಸಿ ಅವರು(ಮರಿಯಾ) ನೀಡಿರುವ ಮಾಹಿತಿಗೆ ವಿರುದ್ಧವಾಗಿರುವ ಮತ್ತು ಆ ಹೇಳಿಕೆ ಸುಳ್ಳು ಎಂಬುದನ್ನು ಸಾಬೀತುಮಾಡುವ ಹಲವು ಅಧ್ಯಯನಗಳು ಇವೆ” ಎಂದಿದ್ದಾರೆ. ಜಾಗತಿಕ ಪ್ರಭಾವಿ ಮಾಧ್ಯಮ ‘ಟೈಮ್’ ಈ ಹೇಳಿಕೆ ಉಲ್ಲೇಖಿಸಿದ್ದು, ಟ್ವಿಟರ್ ನ ಈ ಪ್ರತಿಕ್ರಿಯೆ ಮರಿಯಾ ಅವರ ಹೇಳಿಕೆ ಎಷ್ಟು ನಿರಾಧಾರ ಮತ್ತು ಕರೋನಾ ನಿಯಂತ್ರಣದ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮುನ್ನೆಚ್ಚರಿಕೆಯ ವಿಷಯದಲ್ಲಿ ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ನಿದರ್ಶನ.
ಕರೋನಾ ವೈರಸ್ ತಗುಲಿದ ಬಳಿಕ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಕನಿಷ್ಟ 5 ದಿನಗಳು ಬೇಕಾಗುತ್ತದೆ. ಆ ಬಳಿಕವೂ ಕೆಲವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದೇ ಇಲ್ಲ. ಮತ್ತೆ ಕೆಲವರಲ್ಲಿ ಕೆಲವೇ ಕೆಲವು ಲಕ್ಷಣಗಳು ತೀರಾ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಯಾರನ್ನು ರೋಗಲಕ್ಷಣರಹಿತರು ಮತ್ತು ಯಾರು ರೋಗಲಕ್ಷಣಸಹಿತರು ಎಂಬುದನ್ನು ನಿರ್ಧರಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದಿರುವ ವಾಷಿಂಗ್ಟನ್ ವಿವಿ ಬಯೋಲಜಿಸ್ಟ್ ಕಾರ್ಲ್ ಬರ್ಗ್ ಸ್ಟಾರ್ಮ್, ತೀರಾ ನಗಣ್ಯವೆನ್ನಬಹುದಾದ ಸಾಕ್ಷ್ಯದ ಆಧಾರದ ಮೇಲೆ ಡಬ್ಲ್ಯು ಎಚ್ ಒ ಇಂತಹ ಹೇಳಿಕೆ ನೀಡಿರುವುದು ದುರಾದೃಷ್ಟಕರ ಎಂದೂ ಟೀಕಿಸಿದ್ದಾರೆ.
ತಮ್ಮ ಹೇಳಿಕೆಯ ಬಗ್ಗೆ ಜಗತ್ತಿನಾದ್ಯಂತ ಟೀಕೆಗಳು ಬಿರುಸಾದ ಹಿನ್ನೆಲೆಯಲ್ಲಿ ಯೂ ಟರ್ನ್ ಹೊಡೆದಿರುವ ಮರಿಯಾ, ತಾವು ರೋಗಲಕ್ಷಣರಹಿತರಿಂದ ಸೋಂಕು ಹರಡುವುದೇ ಇಲ್ಲ ಎಂಬರ್ಥದಲ್ಲಿ ಮಾತನಾಡಿಲ್ಲ. ಹರಡುತ್ತದೆ. ಆದರೆ, ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ವೇಗದಲ್ಲಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಜನರು ಈಗಲೂ ಮಾಸ್ಕ್ ಧರಿಸುವುದು ಮತ್ತು ಭೌತಿಕ ಅಂತರದಂತಹ ವಿಷಯದಲ್ಲಿ ಉದಾಸೀನ ಮಾಡಕೂಡದು ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಡಬ್ಲ್ಯೂಎಚ್ ಒ ಕೂಡ ಸ್ಪಷ್ಟನೆ ನೀಡಿದ್ದು, ಆ ಹೇಳಿಕೆ ವಾಸ್ತವಿಕ ಮಾಹಿತಿ ಆಧರಿಸಿಲ್ಲ. ಆ ಬಗ್ಗೆ ಸ್ಪಷ್ಟನೆ ನೀಡಲಾಗಿದೆ ಎಂದಿದೆ.
ವ್ಯಾಪಕ ಪರೀಕ್ಷೆಯನ್ನು ಮಾಡಲಾಗದ ಸ್ಥಿತಿಯಲ್ಲಿ ಕೈಚೆಲ್ಲಿರುವ ಭಾರತದ ಸದ್ಯದ ಆಘಾತಕಾರಿ ಪರಿಸ್ಥಿತಿಯಲ್ಲಿ ರೋಗಲಕ್ಷಣರಹಿತರು ಕೂಡ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಾರೆ ಎಂಬ ಕುರಿತ ಈ ಜಾಗತಿಕ ಚರ್ಚೆ ಸಾಕಷ್ಟು ಸಕಾಲಿಕ. ರ್ಯಾಪಿಡ್ ಟೆಸ್ಟ್, ಸೋಂಕಿತರ ಸಂಪರ್ಕ ಪತ್ತೆ, ಆಸ್ಪತ್ರೆಗಳ ವೈದ್ಯಕೀಯ ಸೌಲಭ್ಯ ಹೆಚ್ಚಳ ಮುಂತಾದ ವಿಷಯದಲ್ಲಿ ಬಹುತೇಕ ಕೈಚೆಲ್ಲಿರುವ ಆಡಳಿತಗಳು, ಕರೋನಾ ನಮ್ಮ ನಡುವೆಯೇ ಇರಲಿದೆ. ಅದರೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳುವುದು ಅನಿವಾರ್ಯ ಎಂಬ ಹೇಳಿಕೆ ನೀಡಿ ಹೊಣೆಗಾರಿಕೆಯಿಂದ ನುಣುಚಿಕೊಂಡು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳತ್ತ ವಾಲಿರುವ ನಾಯಕರನ್ನು ಪಡೆದ ದೇಶದ ಜನಸಾಮಾನ್ಯರ ಬದುಕು ಎಂಥ ಅಪಾಯದಲ್ಲಿದೆ ಎಂಬುದಕ್ಕೆ ಕೂಡ ಸೋಂಕು ಹರಡುವಿಕೆ ಕುರಿತ ಈ ವಾಗ್ವಾದ ಬೆಳಕು ಚೆಲ್ಲದೇ ಇರದು!