‘ರೈತಸಿರಿ’ ಅಂದ್ರೆ , ಪ್ರಚಾರಕ್ಕೆ 31 ಕೋಟಿ, ಪ್ರೋತ್ಸಾಹ ಧನಕ್ಕೆ 10 ಕೋಟಿ.

ರಾಜ್ಯ ಸರ್ಕಾರವು 2019-20ನೇ ಸಾಲಿನ ಬಜೆಟ್ ನಲ್ಲಿ ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ಮತ್ತಷ್ಟು ಉತ್ತೇಜನ ನೀಡಲು ‘ರೈತಸಿರಿ’ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಮುಖ 6 ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಧಾನ್ಯಗಳಿಗೆ ಉತ್ತೇಜನ ನೀಡುವುದಕ್ಕೆ ಈ ಯೋಜನೆಯನ್ನು ಪರಿಚಯಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಚಿತ್ರದುರ್ಗ, ಬಳ್ಳಾರಿ, ತುಮಕೂರು, ಕೊಪ್ಪಳ, ಬೆಳಗಾವಿ, ಬಿಜಾಪುರ ಬಾಗಲಕೋಟೆ ಕಲಬುರಗಿ ಹಾಸನ ಮತ್ತು ಹಾವೇರಿ ಜಿಲ್ಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ.

ಇದಲ್ಲದೆ,  ರೈತಸಿರಿ ಯೋಜನೆಯಲ್ಲಿ ಎಲ್ಲಾ ವರ್ಗದವರಿಗೂ ಸಿರಿಧಾನ್ಯ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವುದರ ಸಲುವಾಗಿ ಕೃಷಿ ಇಲಾಖೆ ಒಟ್ಟು 10,000 ಹೆಕ್ಟೇರ್ ಭೂಮಿಯಲ್ಲಿ, ಸಾಮಾನ್ಯ ವರ್ಗದವರಿಗೆ 8,120 ಹೆಕ್ಟೇರ್ ಭೂಮಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ (ವಿಶೇಷ ಘಟಕ ಯೋಜನೆಯಡಿಯಲ್ಲಿ) 1130 ಹೆಕ್ಟೇರ್, ಗಿರಿಜನರಿಗೆ 750 ಹೆಕ್ಟೇರ್ ಭೂಮಿಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಬೇಕು ಎಂದು ಮೀಸಲಾತಿಯನ್ನು ಕಲ್ಪಿಸಿಕೊಡುತ್ತಿದೆ. “ಪ್ರತಿ ಹೆಕ್ಟೇರಿಗೆ ರೂ 10,000 ನಗದು ಮತ್ತು ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನವನ್ನು ನೀಡುತ್ತೇವೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ 10.08.2019ರ ಒಳಗೆ ಸಿರಿಧಾನ್ಯ ಬೆಳೆಗಾರರು ಅರ್ಜಿಯನ್ನು ಸಲ್ಲಿಸಬೇಕು” ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಳೆದ 7 ವರ್ಷದಲ್ಲಿ ಸಿರಿಧಾನ್ಯದ ಬಗ್ಗೆ ರೈತರಲ್ಲಿ ಯಾವುದೇ ಜಾಗೃತಿಯನ್ನು ಮೂಡಿಸದೆ, ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಳಗಳಿಗೆಂದು ಸರ್ಕಾರ ರೂ 31ಕೋಟಿ ಹಣ ಖರ್ಚು ಮಾಡಿದೆ. ಆದರೆ, ಈ ಮೇಳಗಳಿಂದ ರೈತರಿಗೆ ಯಾವುದೇ ಉಪಯೋಗವಾದಂತೆ ಕಾಣಲಿಲ್ಲ. ಅಲ್ಲದೇ, ಇದೂವರೆಗೂ ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡದೆ ಇರುವುದರಿಂದ, ‘ರೈತಸಿರಿ’ ಯೋಜನೆಯಿಂದ ತನ್ನೆಲ್ಲಾ ವೈಫಲ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ಸ್ಪಷ್ಟ.

ಕಳೆದ ಸರ್ಕಾರ ಪ್ರತಿ ಸಿರಿಧಾನ್ಯ ಬೆಳೆಗಾರರಿಗೆ ರೂ 5,000 ಪ್ರೋತ್ಸಾಹ ಧನ ಘೋಷಿಸಿದ್ದರೂ ಅದು ತಲುಪಿರಲಿಲ್ಲ. ಇದೀಗ, ಸರ್ಕಾರ ರೈತಸಿರಿ ಯೋಜನೆಯಲ್ಲಿ ಪ್ರೋತ್ಸಾಹಧನಕ್ಕೆಂದು ರೂ 10 ಕೋಟಿ ಹಣ ಮೀಸಲಿಟ್ಟಿದೆ., ಆದರೆ, ನಿಜಕ್ಕೂ ಈ ಪ್ರೋತ್ಸಾಹಧನ ರೈತರ ಖಾತೆ ಸೇರುವುದೇ ಎಂಬುದು ಪ್ರಶ್ನೆ.

Also Read: ಸಿರಿಧಾನ್ಯ: ರೈತರಿಗೆ ಪ್ರೋತ್ಸಾಹ ಧನವಿಲ್ಲ, ಪ್ರಚಾರಕ್ಕೆ ರೂ 31 ಕೋಟಿ!

“ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಘೋಷಿಸಿದ ಪ್ರೋತ್ಸಾಹಧನ ಇನ್ನೂ ಜಮಾ ಆಗಿಲ್ಲ. ನಮ್ಮ ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಎಕರೆಯಲ್ಲಿ ಸಿರಿಧಾನ್ಯ ಬೆಳೆಯುವ ರೈತರು ಕಳೆದ ಮೂರು ವರ್ಷಗಳಿಂದ ಪ್ರೋತ್ಸಾಹಧನಕ್ಕಾಗಿ ನಾಲ್ಕೈದು ಬಾರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಬರೀ ಕಣ್ಣೊರೆಸುವ ಮಾತುಗಳನ್ನು ಮಾತ್ರ ಹೇಳುತ್ತಿದ್ದಾರೆ” -ಯಲ್ಲಪ್ಪ, ರೈತ, ಕುಂದಗೋಳ ತಾಲ್ಲೂಕು

“ನಾನು ಎಂಟು ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದೇನೆ. ನಮ್ಮ ತಾಲ್ಲೂಕಿನಲ್ಲಿ ಸಂಸ್ಕರಣ ಘಟಕಗಳೇ ಇಲ್ಲ. ಅಲ್ಲದೆ, ಸರ್ಕಾರದಿಂದ ಇದುವರೆಗೂ ಸಾರ್ವಜನಿಕವಾಗಿ ಯಾವುದೇ ಕೃಷಿ ಕಾರ್ಯಕ್ರಮ ನಡೆಸಿಲ್ಲ. ದುಡ್ಡು ಇರುವವರು ಮಾತ್ರ ಅಧಿಕಾರಿಗಳ ಸಂಪರ್ಕ ಇಟ್ಟುಕೊಂಡು, ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ನಮ್ಮಂತಹ ಬಡ ರೈತರನ್ನು ಯಾವ ಅಧಿಕಾರಿಗಳು ಗಮನಿಸುವುದೇ ಇಲ್ಲ. ಇನ್ನು ಪ್ರೋತ್ಸಾಹಧನ ನಮಗೆ ಸಿಗುವುದು ಕನಸಿನ ಮಾತಷ್ಟೇ” –ಚಂದ್ರಶೇಖರ ಪಾಟೀಲ, ರೈತ, ರಾಣಿಬೆನ್ನೂರು ತಾಲ್ಲೂಕು

ಉತ್ತರ ಕರ್ನಾಟಕದ ಸಾಕಷ್ಟು ರೈತರಿಗೆ ಈ ಯೋಜನೆಯ ಮಾಹಿತಿಯೇ ಇಲ್ಲವೆಂದು ಹೇಳುತ್ತಿದ್ದಾರೆ. ರಾಜಕೀಯ ಹೈ ಡ್ರಾಮದ ನಡುವೆ ಜುಲೈ 11ರಂದು ಸರ್ಕಾರದಿಂದ ಪ್ರೋತ್ಸಾಹ ಧನಕ್ಕೆ ಅನುಮೋದನೆ ಸಿಕ್ಕಿದರೂ, ಸಿದ್ದರಾಮಯ್ಯ ಸರ್ಕಾರದಲ್ಲಾದಂತೆಯೇ ಮೈತ್ರಿ ಸರ್ಕಾರದಲ್ಲಿ ಆಗುವುದು ಎಂದು ರೈತರು ಮೌನವಹಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ, ಕೊಟ್ಟ ಭರವಸೆ ಈಡೇರಿದರೆ ಸಿರಿಧಾನ್ಯ ಬೆಳೆಗಾರರು ನಿಜಕ್ಕೂ ಉತ್ತೇಜನಗೊಳ್ಳುತ್ತಾರೆ.

ಮುಖ್ಯವಾಗಿ, ರೈತರ ಪರ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಹ ನಿಗದಿಪಡಿಸಬೇಕು. ಆರಂಭದಿಂದಲೂ ಸಿರಿಧಾನ್ಯ ಬೆಳೆಗಳಿಗೆ ಯಾವುದೇ ಬೆಂಬಲ ಬೆಲೆಯನ್ನು ಇದೂವರೆಗೂ ನಿಗದಿಪಡಿಸದಿರುವುದು ವಿಷಾದನೀಯ. ಹೀಗಿರುವಾಗ ರೈತರು ಬೆಳೆದ ಬೆಳೆಯನ್ನು ಯಾರಿಗೆ ಮಾರಾಟ ಮಾಡಬೇಕು? ಮೂಲಭೂತವಾಗಿ, ಕನಿಷ್ಠ ಸೌಲಭ್ಯವನ್ನೂ ಒದಗಿಸದಿದ್ದಲ್ಲಿ, ಯೋಜನೆಗಳು ಅನುಮೋದನೆಗೊಂಡರೂ, ಪೂರ್ಣ ಪ್ರಮಾಣದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ.

ಸಿರಿಧಾನ್ಯವನ್ನು ಬೆಳೆಯುವವರು ಯಾರು?

ನೂರಾರು ವರ್ಷಗಳ ಹಿಂದೆ ನೀರಾವರಿ ಇಲ್ಲದ ತೀರಾ ಬಡ ರೈತರು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಹಾಗೂ ಈ ಸಿರಿಧಾನ್ಯಗಳೇ ಇವರ ಮನೆಯ ಆಹಾರವಾಗಿದ್ದವು. ಸಿರಿಧಾನ್ಯ ಎಲ್ಲೆಡೆ ಹೆಚ್ಚಿನ ಮಹತ್ವ ಪಡೆತುಕೊಂಡಿದ್ದು 15-20 ವರ್ಷದಿಂದ ಈಚೆಗೆ. ಇದರಲ್ಲಿ ನಾರಿನ ಅಂಶ ಹೆಚ್ಚಿರುವುದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ ಆಹಾರವೆಂದು ಪರಿಗಣಿಸಿದ್ದರೂ,ಸರ್ಕಾರ, ಬೆಳೆಗಾರರನ್ನು ಕಡೆಗಣಿಸುತ್ತಲೇ ಇದೆ.

ಸಿರಿಧಾನ್ಯಗಳನ್ನು ಬೆಳೆಯಬೇಕಾದರೆ, ಕಡಿಮೆ ತೇವಾಂಶ ಇದ್ದರೆ ಸಾಕು. 1 ಕೆ.ಜಿ ಭತ್ತವನ್ನು ಬೆಳೆಯಬೇಕಾದರೆ 3-6 ಸಾವಿರ ಲೀಟರ್ ನೀರು ಮತ್ತು ರಾಗಿ ಬೆಳೆಗೆ 1.5-3ಸಾವಿರ ಲೀಟರ್ ನೀರು ಬೇಕಾಗುತ್ತದೆ. ಆದರೆ 1 ಕೆ.ಜಿ ಸಿರಿಧಾನ್ಯಕ್ಕೆ 800 ರಿಂದ 1000 ಲೀಟರ್ ನೀರಿದ್ದರೆ ಸಾಕು. ಹೀಗಾಗಿ, ಬರ ಪೀಡಿತ ಜಿಲ್ಲೆಗಳಲ್ಲಿ ಹಾಗೂ ಮಣ್ಣಿನ ಫಲವತ್ತತೆ ಕಡಿಮೆ ಇರುವ ಪ್ರದೇಶಗಳಲ್ಲಿ ಸಿರಿಧಾನ್ಯ ಬೆಳೆಯನ್ನು ಬೆಳೆಯುತ್ತಾರೆ.

ಸಂಸ್ಕರಣ ಘಟಕಗಳನ್ನು ಹೆಚ್ಚಿಸಬೇಕು.

ಸಿರಿಧಾನ್ಯ ಕ್ಷೇತ್ರದಲ್ಲಿ ಹೆಚ್ಚು ಸಮಸ್ಯೆ ಇರುವುದು ಸಂಸ್ಕರಣೆ. ಹೀಗಾಗಿ ಕೃಷಿ ಇಲಾಖೆ ರೈತಸಿರಿ ಯೋಜನೆಯಡಿಯಲ್ಲಿಯೇ ಪ್ರಾಥಮಿಕ ಸಂಸ್ಕರಣ ಘಟಕಗಳ ಸ್ಥಾಪನೆಗಾಗಿ ಪ್ರೋತ್ಸಾಹ ಪಡೆಯಲು ನವೋದ್ಯಮಿಗಳು, ರೈತ ಸಂಘಗಳು, ನೋಂದಾಯಿತ ಸ್ವ-ಸಹಾಯ ಗುಂಪುಗಳು ಹಾಗೂ ಆಧುನಿಕ ಉದ್ದಿಮೆಯಲ್ಲಿ ಕಾರ್ಯನಿರತರಾಗಿರುವವರಿಗೆ ಪ್ರತಿ ಸಂಸ್ಕರಣ ಘಟಕಕ್ಕೆ ಶೇಕಡ. 50ರಷ್ಟು ಸಹಾಯಧನ ಹಾಗೂ ಗರಿಷ್ಠ ರೂ. 10 ಲಕ್ಷದಂತೆ 2 ಕಂತುಗಳಲ್ಲಿ ಸಹಾಯಧನ ನೀಡುವುದಾಗಿ ಪ್ರಸ್ತಾಪಿಸಿದೆ. ಆದರೆ ಇದರ ಅನುಮೋದನೆಗೆ ಸರ್ಕಾರ ಎಷ್ಟು ವರ್ಷ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ.

“ಸದ್ಯಕ್ಕೆ ಕರ್ನಾಟಕದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಸಂಸ್ಕರಣ ಘಟಕಗಳು ಇರುವುದರಿಂದ ರೈತರು ತಮ್ಮ ಬೆಳೆಗಳನ್ನು ಹೊರ ರಾಜ್ಯಗಳಿಗೆ ಕಳುಹಿಸಿ ಸಂಸ್ಕರಣ ಮಾಡಿಸುತ್ತಿದ್ದಾರೆ. ಹುಬ್ಬಳ್ಳಿ ಮತ್ತು ಹಿರಿಯೂರಿನ ಎರಡು ಘಟಕಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಯಾವೊಂದು ಸರ್ಕಾರಿ ಘಟಕಗಳೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ,ಕಾಳುಗಳು ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ” ಎಂದು ರೈತ ಪರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲೆಡೆ ಜಾಗೃತಿ ಮೂಡಿಸುವ ಸಲುವಾಗಿ ವರ್ಷಕೊಮ್ಮೆ ಜಿಲ್ಲಾ ಮಟ್ಟದಲ್ಲಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಮೇಳಕ್ಕೆಂದು ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡುತ್ತಿರುವ ಸರ್ಕಾರ, ಸಾರ್ವಜನಿಕವಾಗಿ ರೈತ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕೆ ಹಿಂಜರಿಯುವುದೇಕೆ?

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...