ಸರಿ ಸುಮಾರು 5 ವರ್ಷಗಳ ಕಾಲ ಕಣ್ಣುಚ್ಚಿ ಕುಳಿತಿದ್ದ ಸರ್ಕಾರಿ ಇಲಾಖೆಗಳು ಇದೀಗ ಹೈ ಕೋರ್ಟ್ ಮಧ್ಯಪ್ರವೇಶದಿಂದ ಇಕ್ಕಟ್ಟಿಗೆ ಸಿಲುಕಿವೆ. ರಾಜ ಕಾಲುವೆಯನ್ನು ಅತಿಕ್ರಮಿಸಿ ರಾಜಾರೋಷವಾಗಿ ಕ್ಲಬ್ ಹೌಸ್ ಮತ್ತು ಮಾಲ್ ಕಟ್ಟುತ್ತಿದ್ದ ಮಂತ್ರಿ ಡೆವಲಪರ್ಸ್ ಹಾಗೂ ಭೂಮಿಯ ಮಾಲಕ ಇಸ್ಕಾನ್ (International Society for Krishna Consciousness –ISKCON) ಈ ಬಾರಿಯೂ ತಪ್ಪಿಸಿಕೊಳ್ಳಲು ಸಾಧ್ಯವೇ ಎಂಬುದು ಈಗಿರುವ ಕುತೂಹಲ. ಕರ್ನಾಟಕ ಹ್ಯೂಮನ್ ರೈಟ್ಸ್ ಪ್ಯಾನೆಲ್ ಎಂಬ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (3854/2018) ಆಲಿಸಿದ ಹೈ ಕೋರ್ಟ್ ಸರ್ಕಾರಕ್ಕೆ ಹಾಗೂ ಇತರ ಪ್ರತಿವಾದಿಗಳಿಗೆ ನೊಟೀಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಆಗಸ್ಟ್ 6ಕ್ಕೆ ನಿಗದಿಗೊಳಿಸಿದೆ. ಅಷ್ಟೇ ಅಲ್ಲ. ರಾಜ ಕಾಲುವೆ ಒತ್ತುವರಿಯಾಗಿರುವುದು ನಿಜವಾಗಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಹೈ ಕೋರ್ಟ್ ಪೀಠ ನಿರ್ದೇಶನ ನೀಡಿದೆ.
ಈ ಪ್ರಕರಣ ಬೆಂಗಳೂರು ನಗರ ಕಂಡ ರಾಜಾರೋಷ ರಾಜಕಾಲುವೆ ಅತಿಕ್ರಮಗಳಲ್ಲೊಂದು. ಬೆಂಗಳೂರು ದಕ್ಷಿಣದ ಉತ್ತರಹಳ್ಳಿ ಹೋಬಳಿಯ ದೊಡ್ಡಕಲ್ಲಸಂದ್ರ ಗ್ರಾಮದ ಸರ್ವೆ ನಂಬರ್ 55, 56, 57, 58, 59 ಹಾಗೂ 60 ರಲ್ಲಿ ರಾಜ ಕಾಲುವೆ ಹಾದು ಹೋಗುತ್ತದೆ ಎಂಬುದು ಗ್ರಾಮ ನಕ್ಷೆಯಲ್ಲಿ ನಮೂದಾಗಿರುವ ಸಾರ್ವಕಾಲಿಕ ಸತ್ಯ. ಇದು ಗೂಗಲ್ ಮ್ಯಾಪ್ ನಲ್ಲಿಯೂ ಸ್ಪಷ್ಟವಾಗಿ ನಮೂದಾಗಿತ್ತು. ಮೇಲೆ ಹೇಳಲಾದ ಸರ್ವೆ ನಂಬರ್ ಸೇರಿದಂತೆ ಇತರ ಸರ್ವೆ ನಂಬರ್ ಗಳ ಭೂಮಿಯಲ್ಲಿ ಏನಿಲ್ಲವೆಂದರೂ 4,000 ಮನೆಗಳ (apartment) ನಿರ್ಮಾಣ ಕಾರ್ಯ ನಡೆಯುತ್ತಿದೆ.
ಅರ್ಜಿದಾರರ ಪ್ರಕಾರ ಈ ರಾಜ ಕಾಲುವೆಯಿಂದ ಹರಿವ ಮಳೆ ನೀರು ಕೊನೆಗೆ ಸುಬ್ರಹ್ಮಣ್ಯಪುರ ಕೆರೆ ಸೇರುತ್ತದೆ. ಈಗಾಗಲೇ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣದಿಂದಾಗಿ ಮಳೆ ನೀರು ಹರಿಯುವಿಕೆಗೆ ಸಂಪೂರ್ಣ ತಡೆ ಉಂಟಾಗಿದೆ. ಇದರಿಂದ ಕನಕಪುರ ರಸ್ತೆಯ ಕೆಲವು ವಸತಿ ಬಡಾವಣೆಗಳು, ಗುಬ್ಬಲಾಳ ಮುಖ್ಯ ರಸ್ತೆ, ಸಿಂಗಪೂರ ಗಾರ್ಡನ್ಸ್, ಸಿದ್ದಣ್ಣ ಬಡಾವಣೆ, ವಲ್ಲಭಾಯ್ ಬಡಾವಣೆ, ಮುನಿರೆಡ್ಡಿ ಬಡಾವಣೆ, ಶಾರದಾ ನಗರ, ಸಿಲ್ವರ್ ಓಕ್ ಬಡಾವಣೆ, ವಸಂತ ವಲ್ಲಭನಗರ, ಬೃಂದಾವನ್ ಗಾರ್ಡನ್ಸ್ ನಿಂದ ಹರಿಯುವ ಮಳೆ ನೀರಿಗೆ ತಡೆಯುಂಟಾಗಿದೆ. ಇದರಿಂದ ಅಕ್ಕ ಪಕ್ಕದ ಬಡಾವಣೆಗಳ ಮನೆಗಳಿಗೆ ಮಳೆ ನೀರು ಹರಿಯುವ ಸಾಧ್ಯತೆ ಹೆಚ್ಚಲಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ರಾಜ ಕಾಲುವೆ ಅತಿಕ್ರಮಿಸಿ ಮಂತ್ರಿ ಡೆವಲಪರ್ಸ್ ನಿರ್ಮಿಸುತ್ತಿರುವುದು ಮಂತ್ರಿ ಸೆರಿನಿಟಿ ಎಂಬ ಹೆಸರಿನ ಕ್ಲಬ್ ಹೌಸ್ ಮತ್ತೊಂದು ಶಾಪಿಂಗ್ ಮಾಲ್.


ಅರ್ಜಿದಾರರ ಪ್ರಕಾರ ಒತ್ತುವರಿ ಬಗ್ಗೆ ಹಲವಾರು ಇಲಾಖೆಗಳಿಗೆ ದೂರುಗಳನ್ನು (31-07-2015, 12-08-2015, 26-02-2016, 27-03-2016) ನೀಡಲಾಗಿತ್ತು. 18-11-2015ರಂದು ಬೆಂಗಳೂರು ದಕ್ಷಿಣ ತಹಸಿಲ್ದಾರ್ ರಾಜಕಾಲುವೆ ತೆರವು ಮಾಡುವಂತೆ ಮಂತ್ರಿ ಡೆವಲಪರ್ಸ್ ಗೆ ನೊಟೀಸ್ ಕೂಡ ಜಾರಿಗೊಳಿಸಿತ್ತು. ಸರಿ ಸುಮಾರು 2015ರಿಂದ ಇದುವರೆಗೂ ಕನಿಷ್ಟ ನಾಲ್ಕು ಬಾರಿಯಾದರೂ ಈ ಬಗ್ಗೆ ಕಂದಾಯ ಇಲಾಖೆಗೆ ದೂರು ದಾಖಲಾಗಿತ್ತು. ಪ್ರತಿ ಬಾರಿಯೂ ತಹಸಿಲ್ದಾರ್ ಕಡೆಯಿಂದ ನೊಟೀಸ್ ಆದರೂ, ಮಂತ್ರಿ ಡೆವೆಲಪರ್ಸ್ ಅಥವಾ ಇಸ್ಕಾನ್ ಕಡೆಯಿಂದ ಸಮಜಾಯಿಷಿ ಪತ್ರ ಪಡೆದು ದೂರು ಪತ್ರ ಮುಕ್ತಾಯಗೊಳಿಸಲಾಗುತ್ತಿತ್ತು.
ಯಾರೆಲ್ಲಾ ಹೊಣೆ?
ಅರ್ಜಿಯ ಪ್ರಕಾರ, ಇಸ್ಕಾನ್-ಮಂತ್ರಿ ಡೆವಲಪರ್ಸ್ ನ ಈ ಯೋಜನೆಗೆ ಕೆಐಡಿಬಿ, ಬಿಡಿಎ, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರವಾಸೋದ್ಯಮ ಇಲಾಖೆ ಹೀಗೆ ಎಲ್ಲಾ ಇಲಾಖೆಗಳೂ ಒಂದಿಲ್ಲೊಂದು ಅನುಮತಿ, ಪರವಾನಿಗಿ ನೀಡಿವೆ. ಅರ್ಜಿಯ ಪ್ರಕಾರ ಇಸ್ಕಾನ್ ಚಾರಿಟಿಸ್ ಸಂಸ್ಥೆ ಕೆಐಡಿಬಿ ವಶದಲ್ಲಿದ್ದ ಭೂಮಿಯನ್ನು ಬಿಡ್ ಮೂಲಕ ಖರೀದಿಸುವಾಗ ಅಲ್ಲಿ ಹೆರಿಟೇಜ್ ಪಾರ್ಕ್ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿತ್ತು. ನಂತರ, ಅನೇಕ ಇಲಾಖೆಗಳಿಂದ ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರ ಪಡೆಯುವಾಗಲೂ ಹೆರಿಟೇಜ್ ಪಾರ್ಕ್ ಎಂಬ ಉದ್ದೇಶವನ್ನು ವಿನೂತನ `ಕೈಗಾರಿಕಾ ಉದ್ದೇಶ’ ಎಂದೇ ಬಿಂಬಿಸಿತ್ತು. ಆದರೆ, ಯಾವಾಗ ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರ ಕೈ ತಲುಪಿತೋ ಅಲ್ಲಿಂದ ವರಸೆ ಬದಲಾಯಿಸಿದ ಇಸ್ಕಾನ್ ತನ್ನ ವಶದಲ್ಲಿದ್ದ ಕೈಗಾರಿಕಾ ಉದ್ದೇಶದ ಭೂಮಿಯನ್ನು ವಸತಿ ಉದ್ದೇಶಕ್ಕೆ ಬಳಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿತು. ಹಾಗೂ ಮಂತ್ರಿ ಡೆವಲಪರ್ಸ್ ಜೊತೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿತು.
ಏನಾಯ್ತು ರಾಜಕಾಲುವೆ ತೆರವು ಡ್ರೈವ್ ?
2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ರಾಜ ಕಾಲುವೆಗಳ ಮೇಲೆ ನಿರ್ಮಾಣಗೊಂಡಿರುವ ಕಟ್ಟಡಗಳ ತೆರವು ಸಂಬಂಧ ವಿಶೇಷ ಕಾರ್ಯಾಚರಣೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತ್ತು. ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ, ಹರಲೂರು ಮುಂತಾದ ಭಾಗಗಳಲ್ಲಿ ಅಬ್ಬರಿಸಿದ ಜೆಸಿಬಿ ಆಮೇಲೆ ತಣ್ಣಗಾಯಿತು. ಅದಕ್ಕೆ ಮುಖ್ಯ ಕಾರಣ ಪ್ರಭಾವಿಗಳಿಗೆ ಸೇರಿದ ಮನೆ, ಕಟ್ಟಡ, ಆಸ್ಪತ್ರೆಗಳೂ ರಾಜ ಕಾಲುವೆ ಮೇಲೆಯೇ ಇದ್ದಿದ್ದು ಬಿಬಿಎಂಪಿಗೆ ನಂತರವಷ್ಟೇ ಅರಿವಿಗೆ ಬಂದಿತ್ತು. ಆಗಲೇ ಮನೆ ಕಳೆದುಕೊಂಡ ಹಲವರು ಬಿಬಿಎಂಪಿಯ ಇಬ್ಬಗೆಯ ನೀತಿಯ ವಿರುದ್ಧ ದೂರಲಾರಂಭಿಸಿದರು. ಆಗ ಬಿಬಿಎಂಪಿ `ಮರು ಸರ್ವೆ’ ಅಗತ್ಯವಿದೆ ಎಂಬ ಹೊಸ ವರಸೆ ಆರಂಭಿಸಿತು. ಮಳೆಗಾಲದ ಸಮಯದಲ್ಲಿ ಮಾತ್ರ ರಾಜ ಕಾಲುವೆ ಒತ್ತುವರಿ ಬಗ್ಗೆ ಕೇಳಿಬರುವ ಕಾಳಜಿ, ಹೇಳಿಕೆ ಆ ನಂತರದ ದಿನಗಳಲ್ಲಿ ಮಾಯವಾಗುತ್ತದೆ, ರಾಜ ಕಾಲುವೆ ಮಾಯವಾದಂತೆ.