ತನ್ನ ಮನೆ ಅಥವಾ ವೈಯಕ್ತಿಕ ಪ್ರಗತಿ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ವ್ಯಕ್ತಿಯೊಬ್ಬ ಮತ್ತೊಬ್ಬರ ಉದ್ಧಾರ ಮಾಡಲು ಮುಂದಾದಾಗ, ನಮ್ಮ ಹಳ್ಳಿಗಳ ಕಡೆ; “ನಿನ್ನದನ್ನು ನೀನು ಮೊದಲು ತೊಳ್ಕೊಳಪ್ಪ” ಎಂಬ ಬುದ್ಧಿ ಮಾತು ಹೇಳುತ್ತಾರೆ.
ನಮ್ಮ ಕರ್ನಾಟಕ ರಾಜ್ಯದ್ದೂ ಈಗ ಅದೇ ಪರಿಸ್ಥಿತಿ ಆಗಿದೆ. ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಳ್ಳುವ ಜಿಲ್ಲೆಗಳಲ್ಲಿ ಒಂದಾದ ಚಿಕ್ಕಮಗಳೂರಿನ ಶಾಸಕ ಸಿ. ಟಿ. ರವಿ ಅವರು ಈಗ ಕರ್ನಾಟಕ ಬಿಜೆಪಿ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿದ್ದಾರೆ. ಅವರು ಭಾರತದ ಕಿರೀಟವೆನಿಸಿರುವ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಡುವ ಚಿಂತನೆ ನಡೆಸುತ್ತಿದ್ದಾರಂತೆ. ಹಾಗಂತ ಅವರೇ ಟ್ವೀಟ್ ಮಾಡಿದ್ದಾರೆ.
ಒಳ್ಳೆಯದೇ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಕಾರಣವಾಗಿದ್ದ ಕಲಂ 370 ರದ್ದುಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ನಂತರ, ತಿಂಗಳು ಕಳೆಯುತ್ತಾ ಬಂದರೂ ಕಣಿವೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬ ವಾಸ್ತವಾಂಶಗಳು ಇಂದಿಗೂ ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳು ಮಾತ್ರ ಕೇಂದ್ರ ಸರ್ಕಾರವನ್ನು ಮೆಚ್ಚಿಸಲೋ ಅಥವಾ ಅದರ ನಡೆಯನ್ನು ಸಮರ್ಥಿಸುವ ಪ್ರಯತ್ನವೋ ಎಂಬಂತೆ, ನಾ ಮುಂದು, ತಾ ಮುಂದು ಎಂದು ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮಾತುಗಳನ್ನಾಡುತ್ತಿವೆ.

ಸಿ ಟಿ ರವಿ ಸ್ಪೂರ್ತಿ ಮಹಾರಾಷ್ಟ್ರದಿಂದ:
ಇದಕ್ಕೆ ಮುನ್ನುಡಿ ಬರೆದವರು ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್. “ಕಾಶ್ಮೀರ ಮತ್ತು ಲೇಹ್ ನಲ್ಲಿ ರೆಸಾರ್ಟ್ ಗಳನ್ನು ಸ್ಥಾಪಿಸಲು ಸೂಕ್ತ ಸ್ಥಳದ ಹುಡುಕಾಟಕ್ಕಾಗಿ ತಂಡವೊಂದನ್ನು ನಿಯೋಜಿಸಲಾಗಿದೆ’ ಎಂಬುದಾಗಿ ರಾವಲ್ ಹೇಳಿದ್ದಾರೆ. ತಲಾ ಒಂದು ಕೋಟಿ ರೂ.ಗ ವೆಚ್ಚದಲ್ಲಿ ಸ್ಥಾಪಿಸಲಾಗುವ ಈ ರೆಸಾರ್ಟ್ ಗಳ ಸ್ಥಳ ಪರಿಶೀಲನೆಗಾಗಿ ಶೀಘ್ರದಲ್ಲೇ ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪರಿಣತರ ತಂಡವನ್ನು ಕಳುಹಿಸಲಾಗುವುದಂತೆ. ರೆಸಾರ್ಟ್ ಗಳ ಸ್ಥಾಪನೆ ಪ್ರಕ್ರಿಯೆಗೆ ಒಂದರಿಂದ ಎರಡು ವರ್ಷಗಳು ಹಿಡಿಯಲಿದ್ದು, ಕಲಂ 370 ರದ್ದಾದ ನಂತರ ಕಣಿವೆ ರಾಜ್ಯದಲ್ಲಿ ಭೂಮಿ ಖರೀದಿಸಲು ಪ್ರಯತ್ನಿಸುತ್ತಿರುವ ಪ್ರಪಥಮ ರಾಜ್ಯ ಮಹಾರಾಷ್ಟ್ರ ಎಂಬ ಹೆಮ್ಮೆಯೂ ತಮ್ಮದಾಗಲಿದೆ ಎಂದು ಸಚಿವ ರಾವತ್ ಹೇಳಿಕೊಂಡಿದ್ದಾರೆ.
“ರೆಸಾರ್ಟ್ ಸ್ಥಾಪನೆಗೆ ಭೂಮಿ ಖರೀದಿಸಲು ಕಾನೂನು ಕ್ರಮಗಳ ಕುರಿತು ಚರ್ಚೆ ನಡೆಸಲು ಮಹಾರಾಷ್ಟ್ರ ಸರ್ಕಾರವು ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್ ಅವರನ್ನೂ ಭೇಟಿ ಮಾಡಲಿದೆ. ಕಣಿವೆ ರಾಜ್ಯ ಪ್ರವಾಸ ಕೈಗೊಳ್ಳುವ ಮಹಾರಾಷ್ಟ್ರದ ಪ್ರವಾಸಿಗರಿಗೆ ಈ ರೆಸಾರ್ಟ್ ಗಳಿಂದ ಅನುಕೂಲವಾಗಲಿದೆ. ಅಲ್ಲದೆ ರೆಸಾರ್ಟ್ ಗಳಲ್ಲಿ ಉದ್ಯೋಗಕ್ಕೆ ಸ್ಥಳೀಯರನ್ನು ಮಾತ್ರ ನೇಮಿಸಿಕೊಳ್ಳಲಾಗುವುದು” ಎಂಬುದಾಗಿಯೂ ರಾವಲ್ ತಿಳಿಸಿದ್ದಾರೆ.
ರಾವಲ್ ಅವರ ನಡೆಯಿಂದ ಪ್ರೇರಣೆ ಪಡೆದವರಂತೆ ಕಾಣುವ ನಮ್ಮ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಸಹ ಜಮ್ಮು-ಕಾಶ್ಮೀರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಡುವ ಮಾತುಗಳನ್ನಾಡಿದ್ದಾರೆ. ಕಣಿವೆ ರಾಜ್ಯದಲ್ಲಿ ಕರ್ನಾಟಕದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಕೆಲಸ ಮಾಡುವುದಾಗಿ ಸಚಿವರು ಟ್ವೀಟ್ ಮಾಡಿದ್ದಾರೆ.
While we are focused on improving Tourism Industry in Karnataka, we are also contemplating about making an entry into Jammu & Kashmir Tourism.
Karnataka's Art, Architecture, Culture & Traditions can be showcased in India's Crown, resulting in a win-win situation for both States.
— C T Ravi ಸಿ ಟಿ ರವಿ (@CTRavi_BJP) September 3, 2019
ರೆಸಾರ್ಟ್ ಸ್ಥಾಪಿಸುವುದರಿಂದ, ಪ್ರದರ್ಶನ ಏರ್ಪಡಿಸುವುದರಿಂದ ಯಾವ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಬೇರೆಯ ಪ್ರಶ್ನೆ. ಆದರೆ ತಮ್ಮದೇ ರಾಜ್ಯದಲ್ಲಿರುವ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯ ವಹಿಸಿರುವ ಸರ್ಕಾರಗಳು ದೂರದ, ಸದ್ಯಕ್ಕೆ ಪ್ರಕ್ಷುಬ್ಧ ಸ್ಥಿತಿಯಲ್ಲಿರುವ ಕಣಿವೆ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಯ ಮಾತುಗಳನ್ನಾಡುತ್ತಿರುವುದಂತೂ ರಾಜಕೀಯ ಪ್ರೇರಿತ ಎಂಬ ಅನುಮಾನವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ನಮ್ಮ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಅವರ ವಿಷಯವನ್ನೇ ತೆಗೆದುಕೊಳ್ಳೋಣ. ಸಮೃದ್ಧ ಮಲೆನಾಡು, ಗಿರಿಶ್ರೇಣಿಗಳು, ಜಲಪಾತಗಳು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆ ಚಿಕ್ಕಮಗಳೂರು ಕ್ಷೇತ್ರದಿಂದ ಅವರು 2004 ರಿಂದ ಸತತವಾಗಿ ವಿಧಾನಸಭೆ ಚುನಾಯಿತರಾಗುತ್ತಾ ಬಂದಿದ್ದಾರೆ. ಹಿಂದೆ ಒಮ್ಮೆ ಮಂತ್ರಿಯೂ ಆಗಿದ್ದರು. ಈಗ ಮತ್ತೊಮ್ಮೆ ಮಂತ್ರಿಯಾಗಿದ್ದಾರೆ.
ಪ್ರತಿವರ್ಷ ಹತ್ತಿರ ಹತ್ತಿರ ಒಂದು ಕೋಟಿ ಪ್ರವಾಸಿಗರು (ವಿದೇಶಿಯರು ಸೇರಿ) ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಆದರೆ ಈ ಜಿಲ್ಲೆಯ ಪ್ರವಾಸಿ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗಿರುವ ಸಂಪರ್ಕ ವ್ಯವಸ್ಥೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಮಾತ್ರ ಯಾವುದೇ ಪ್ರಗತಿ ಕಂಡಿಲ್ಲ. ಸಿ. ಟಿ. ರವಿ ಇದುವರೆಗಿನ ತಮ್ಮ ಅಧಿಕಾರದ ಅವಧಿಯಲ್ಲಿ ಕನಿಷ್ಠ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿದ್ದರೂ, ಜಮ್ಮು-ಕಾಶ್ಮೀರ ಪ್ರವಾಸೋದ್ಯಮ ಕ್ಷೇತ್ರ ಪ್ರವೇಶಿಸುವ ಅವರ ಟ್ವೀಟ್ ಗೆ ಒಂದು ತೂಕವಾದರೂ ಬರಲು ಸಾಧ್ಯವಿತ್ತು.
ಕರ್ನಾಟಕದ ಉಳಿದ ಪ್ರವಾಸಿ ಸ್ಥಳಗಳದ್ದೂ ಇದೇ ಕಥೆ-ವ್ಯಥೆ. ನಮ್ಮ ಪ್ರವಾಸೋದ್ಯಮ ಸಚಿವರು ಮೊದಲು ರಾಜ್ಯದ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮಕೈಗೊಂಡರೆ ಸಾಕು ಎಂಬುದು ನಿರುದ್ಯೋಗಿ ಯುವಜನರ ಅಭಿಲಾಷೆಯಾಗಿದೆ.