ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL) ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಜ್ಯ ಹಾಗೂ ದೇಶದೆಲ್ಲಡೆ ಸುಲಭ ರಸ್ತೆ-ಮಾರ್ಗ ಸಂಪರ್ಕ ಕಲ್ಪಿಸುವುದಕ್ಕಾಗಿ ಅತಿದೂರದ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿದೆ. ಹಾಗೂ ಇದು ಪ್ರಾಧಿಕಾರ ಮತ್ತು ಗುತ್ತಿಗೆದಾರರ ಪಾಲುದಾರಿಕೆಯಲ್ಲಿ ನಿರ್ವಹಿಸಲ್ಪಡುತ್ತಿವೆ. ದೇಶಾದ್ಯಂತ ಹೆದ್ದಾರಿ ಸಂಪರ್ಕದಿಂದ, ಸಾರಿಗೆ ವ್ಯವಸ್ಥೆಗೆ ನಿಜಕ್ಕೂ ಸಾಕಷ್ಟು ಅನುಕೂಲವಾಗಿದೆ. ಆದರೆ ಅನುಕೂಲವಿದೆ ಎಂದ ಮಾತ್ರಕ್ಕೆ ಜೀವನವಿಡಿ ಟೋಲ್ ಶುಲ್ಕ ಪಾವತಿಸುವುದು ಸಾಧ್ಯವೇ?
ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಬರೆ
ರಾಜ್ಯದಲ್ಲಿ ಟೋಲ್ ಸಂಗ್ರಹದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದರೂ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL) ಟೋಲ್ ಸಂಗ್ರಹಣೆ ಮಾಡುವುದರಿಂದ ಹಿಂದೆ ಸರಿಯುವಂತೆಕಾಣುತ್ತಿಲ್ಲ. ಮುಧೋಳ್- ಮಹಾಲಿಂಗಪುರ-ಕಬ್ಬೂರು-ಚಿಕ್ಕೋಡಿ-ನಿಪ್ಪಾಣಿ (NH)-ಮಹಾರಾಷ್ಟ್ರದ ಗಡಿ (107 ಕಿ.ಮೀ); ಮಾಗಡಿ-ಡಾಬಸ್ ಪೇಟೆ-ಪಾವಗಡ-ಆಂಧ್ರ ಪ್ರದೇಶದ ಗಡಿ- (149.25 ಕಿ.ಮೀ) ಮತ್ತು ಮಳವಳ್ಳಿ-ಮದ್ದೂರು-ಕೊರಟಗೆರೆ ರಸ್ತೆ (135 ಕಿ.ಮೀ) ಸೇರಿದಂತೆ ರಾಜ್ಯದ 9 ಹೆದ್ದಾರಿಗಳ ನಿರ್ಮಾಣಕ್ಕೆ ಒಪ್ಪಂದ ಆಗಿದೆ. “ಶೀಘ್ರದಲ್ಲೇ ಒಂಭತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪ್ರಾರಂಭವಾಗಲಿದೆ”ಎಂದು ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 2017ರ ಸಿದ್ದರಾಮಯ್ಯ ಸರ್ಕಾರ, 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಅನುಮೋದನೆ ನೀಡಿತ್ತು. ಆದರೆ ಕೇವಲ ಮೂರು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. ಸಾರ್ವಜನಿಕರ ವಿರೋಧದಿಂದಾಗಿ ಹಾನಗಲ್-ತಡಾಸ್ ಮತ್ತು ಶಿವಮೊಗ್ಗ-ಶಿಕಾರಿಪುರ-ಅನವಟ್ಟಿ-ಹಾನಗಲ್ ಎರಡು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ ಟೋಲ್ ಸಂಗ್ರಹವನ್ನು ನಿಲ್ಲಿಸಲಾಗಿದೆ. ಅಲ್ಲದೆ, ಪ್ರಸ್ತುತ ಪ್ರವಾಹದಿಂದಾಗಿ ಧಾರವಾಡ-ಕರಡಿಗುಡ್ಡ-ಸವದತ್ತಿ ರಸ್ತೆಯ ಸೇತುವೆ ಕುಸಿದಿರುವುದರಿಂದ ತಾತ್ಕಲಿಕವಾಗಿ ಟೋಲ್ ಸಂಗ್ರಹ ನಿಲ್ಲಿಸಲಾಗಿದೆ. ಎರಡು ವಾರಗಳ ನಂತರ ಟೋಲ್ ಸಂಗ್ರಹ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಟೋಲ್ ಸಂಗ್ರಹದ ಕುರಿತು ಹೀಗೆ ಹೇಳಿದ್ದಾರೆ “ ಹೆದ್ದಾರಿಗಳ ವೆಚ್ಚ ಸಂಗ್ರಹವಾಗಿದ್ದರೂ, ದಶಕಗಳಿಂದ ಟೋಲ್ ಸಂಗ್ರಹಿಸುತ್ತಿರುವುದನ್ನು ನಾನು ನೋಡಿದ್ದೇನೆ. ಟೋಲ್ ಸಂಗ್ರಹದಲ್ಲಿ ಸರ್ಕಾರ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಎಷ್ಟು ಟೋಲ್ ಸಂಗ್ರಹವಾಗುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಸಲು ಏಜೆನ್ಸಿಗಳು ಹೆದ್ದಾರಿಗಳಲ್ಲಿ ಬೋರ್ಡ್ ಗಳನ್ನು ಹಾಕಬೇಕು”
ರಾಷ್ಟ್ರೀಯ ಹೆದ್ದಾರಿಗಳದ್ದು ಮುಗಿಯದ ಕತೆ
15 ವರ್ಷಗಳಿಂದ ಕರ್ನಾಟಕದಲ್ಲಿ 7335 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸ ನಡೆಯುತ್ತಿದೆ. ಕೆಲವು ಕಡೆ ಕಾಮಗಾರಿ ಪೂರ್ಣಗೊಂಡಿವೆ. ಇನ್ನೂ ಹಲವು ಕಡೆ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ,ಜೊತೆಗೆ ಇದಕ್ಕೆ ವಾಹನ ಸವಾರರು ಟೋಲ್ ಶುಲ್ಕವನ್ನು ಪಾವತಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕರ್ನಾಟಕದಲ್ಲಿ ಇದುವರೆಗೂ 7 ಹಂತಗಳಲ್ಲಿ 74 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇದರ ಪೈಕಿ 42 ಕಾಮಗಾರಿಗೆ ರೂ. 51,476 ಕೋಟಿ ವೆಚ್ಚವನ್ನು ಭರಿಸುತ್ತಿದೆ. ಉಳಿದ32 ಕಾಮಗಾರಿಗಳಿಗೆ ಭರಿಸುವ ವೆಚ್ಚದ ಮಾಹಿತಿ ಮಾತ್ರ ಅಸ್ಪಷ್ಟ. ಅಲ್ಲದೆ, ಗುತ್ತಿಗೆದಾರರ ಪಾಲುದಾರಿಕೆಯಲ್ಲಿ (ಬಿಲ್ಡ್ ಆಪರೇಟ್ ಟ್ರಾನ್ಸ್ ಫರ್ (BOT-Build Operate Transfer)), ದಿನಕ್ಕೆ ಎಷ್ಟು ವಾಹನಗಳು ಓಡಾಡುತ್ತಿವೆ, ಓಡಾಡುತ್ತಿರುವ ವಾಹನದಿಂದ ವಸೂಲಾಗುತ್ತಿರುವ ಟೋಲ್ ಸಂಗ್ರಹದ ವಿವರ ಕೂಡ ಸ್ಪಷ್ಟವಾಗಿಲ್ಲ. ಹೀಗಾಗಿ ಹೆದ್ದಾರಿಗಳಲ್ಲಿ ಪ್ರಯಾಣ ಮಾಡಬೇಕಾದರೆ ಎಷ್ಟು ವರ್ಷಗಳ ಕಾಲ ಟೋಲ್ ಪಾವತಿಸಬೇಕೆಂಬುದು ಪಾವತಿಸುವ ವಾಹನ ಸವಾರರಿಗೆ ಮಾತ್ರ ತಿಳಿಯದಂತಾಗಿದೆ.
ಕರ್ನಾಟಕದಲ್ಲಿ 7 ಹಂತಗಳಲ್ಲಿ 7335 ಕಿ.ಮೀ ಹೆದ್ದಾರಿಗಳನ್ನು 40ಕ್ಕೂ ಹೆಚ್ಚು ಖಾಸಗಿ ಗುತ್ತಿಗೆದಾರರು ನಿರ್ಮಾಣ ಮಾಡುತ್ತಿದ್ದಾರೆ. ಅದರಲ್ಲಿ 15ಕ್ಕೂ ಹೆಚ್ಚು ಗುತ್ತಿಗೆದಾರರು (BOT) ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಯೋಜನೆಗೆ ಹೂಡಿಕೆ ಮಾಡಿರುವ ವೆಚ್ಚವನ್ನು ಸಂಪೂರ್ಣವಾಗಿ ವಸೂಲಾದ ನಂತರ ಗುತ್ತಿಗೆದಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟು ಕೊಡುತ್ತಾರೆ. ಆದರೆ ವಾಹನ ಸವಾರರಿಗೆ ಎಷ್ಟು ವರ್ಷ ಟೋಲ್ ಶುಲ್ಕವನ್ನು ಪಾವತಿಸಬೇಕು ಎಂಬ ಗೊಂದಲ ಇರುವುದು ಸ್ಪಷ್ಟ. ಇವತ್ತಿನವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆದ್ದಾರಿಗಳ ಟೋಲ್ ವಸೂಲಾತಿ ಮುಗಿದು, ಸಾರ್ವಜನಿಕರಿಗೆ ಉಚಿತವಾಗಿ,ಮುಕ್ತವಾಗಿ ಟೋಲ್ ಪಾವತಿಸದೆ ಓಡಾಡುತ್ತಿರುವ ಯಾವುದೇ ಹೆದ್ದಾರಿಗಳು ಕಾಣುತ್ತಿಲ್ಲ.
ಹೆದ್ದಾರಿ ಕಾಮಗಾರಿ ಶೇಕಡ 75ರಷ್ಟು ಪೂರ್ಣಗೊಂಡ ನಂತರವೇ ಟೋಲ್ ಶುಲ್ಕವನ್ನು ವಸೂಲಿ ಮಾಡಬೇಕು ಎಂಬ ನಿಯಮವಿದೆ. ಆದರೆ ಅನೇಕ ಹೆದ್ದಾರಿ ಕಾಮಗಾರಿಗಳು ಶೇಕಡ 25ರಷ್ಟು ಮುಗಿಯುವ ಮುನ್ನವೇ ಟೋಲ್ ವಸೂಲಾತಿ ಪ್ರಾರಂಭಿಸಿವೆ. ಉದಾಹರಣೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿಯಿಂದ ಸಾಸ್ತಾನ ಬಳಿಯ ಗುಂಡ್ಮಿಯವರೆಗೆ 95 ಕಿ.ಮೀ ಅಂತರವಿದ್ದು, ಅಲ್ಲಿ ಒಟ್ಟು ನಾಲ್ಕು ಟೋಲ್ ಗಳಿವೆ. ಇದರ ಬಗ್ಗೆ ಸಾಕಷ್ಟು ಹೋರಾಟಗಳು ನಡೆದರೂ ಕರಾವಳಿಯ ಇಬ್ಬರು ಸಂಸದರು ಮೌನ ವಹಿಸಿರುವುದು ದುರಂತ. ಈ ಕಾಮಗಾರಿಯ ಜವಾಬ್ದಾರಿಯನ್ನು ನವಯುಗ ಇಂಜಿನಿಯರಿಂಗ್ ಲಿಮಿಟಿಡ್ ಹೊತ್ತುಕೊಂಡಿದೆ. ರೂ 898 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿ 2010 ರಲ್ಲಿ ಪ್ರಾರಂಭಗೊಂಡಿತ್ತು. 2013ರ ಒಳಗೆ ಯೋಜನೆಯನ್ನು ಮುಗಿಸಿಕೊಡುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಜೊತೆ,ಈ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ದಶಕ ಕಳೆದರೂ ಕಾಮಗಾರಿ ಇನ್ನೂ ಅಪೂರ್ಣ.
ರಾಜ್ಯದಲ್ಲಿ ಒಟ್ಟು 7335 ಕಿ.ಮೀ ರಾಷ್ಟ್ರೀ ಹೆದ್ದಾರಿ ಕಾಮಗಾರಿಯಲ್ಲಿ ಪ್ರಾಧಿಕಾರ, ಸ್ವತಃ ಟೋಲ್ ಸಂಗ್ರಹ ಮಾಡುತ್ತಿರುವುದು 521 ಕಿಲೋ ಮೀಟರ್ ಗೆ ಮಾತ್ರ. ಉಳಿದ 6814 ಕಿ.ಮೀಗೆ ಗುತ್ತಿಗೆದಾರರೇ ಸಂಗ್ರಹ ಮಾಡುತ್ತಿದ್ದಾರೆ. ಆದರೆ ಶೇಕಡ 50ರಷ್ಟು ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ವಸೂಲಾತಿ ಮಾಡುತ್ತಿರುವುದರಿಂದ ಪ್ರಾಧಿಕಾರವಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ದುರಂತ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಗುತ್ತಿಗೆದಾರರು (BOT) ರಾಜ್ಯದಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವ ವಿವರ

ಹತ್ತು ವರ್ಷಗಳಿಂದ ರಾಜ್ಯದಲ್ಲಿ ರೂ. 8422.71 ಕೋಟಿ ಟೋಲ್ ಸಂಗ್ರಹವಾಗಿದೆ. ಆದರೆ 74 ಹೆದ್ದಾರಿ ಕಾಮಗಾರಿಗಳ ಪೈಕಿ 42 ಕಾಮಗಾರಿಗಳಿಗೆಂದು 51,476 ಕೋಟಿ ಹಾಗೂ ಸ್ಪಷ್ಟವಿಲ್ಲದ 32ಕಾಮಗಾರಿಗಳು ಸೇರಿದಂತೆ ಒಟ್ಟು ಅಂದಾಜಿನ ವೆಚ್ಚ ರೂ. 80,000 ಕೋಟಿ ದಾಟಬಹುದು. ಆದರೆ ಇಷ್ಟೆಲ್ಲಾ ಹಣಸಂಗ್ರಹವಾಗಿ ಸಾರ್ವಜನಿಕರು ಉಚಿತವಾಗಿ, ಮುಕ್ತವಾಗಿ ಓಡಾಡುವುದು ಯಾವಾಗ? ಬಹುಶಃ ಇನ್ನೂ 6-7 ದಶಕಗಳೇ ಕಳೆಯಬೇಕು ಎನಿಸುತ್ತದೆ. ಜೀವನ ಪರ್ಯಂತ ಬರೀ ಟೋಲ್ ಗಳಿಗೆ ಶುಲ್ಕವನ್ನು ಕೊಟ್ಟು ಪ್ರಯಾಣ ಮಾಡುವುದು ಅಸಾಧ್ಯ. ಸರ್ಕಾರ ಎಚ್ಚೆತ್ತುಕೊಂಡು ಗುತ್ತಿಗೆದಾರರು ಸಂಗ್ರಹ ಮಾಡುತ್ತಿರುವ ಟೋಲ್ ಹಣದ ಲೆಕ್ಕವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದರೆ ಶತಮಾನ ಕಳೆದರೂ ಸಾರ್ವಜನಿಕರು ಟೋಲ್ ಶುಲ್ಕವನ್ನು ಕಟ್ಟುತ್ತಲೇ ಇರಬೇಕಾಗುತ್ತದೆ.