ಸಂವಿಧಾನದ ಜೀವನದ ಹಕ್ಕು – ಅನುಚ್ಚೇಧ 21ರ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಜೀವಿಸುವ ಹಕ್ಕಿದೆ. ಮತ್ತು ಪ್ರತಿಯೊಬ್ಬ ವ್ಯಕ್ತಿಯು ಸತ್ತ ನಂತರ ಅವನನ್ನು ಗೌರವಾನ್ವಿತವಾಗಿ ಅಂತ್ಯಕ್ರಿಯೆ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಆದರೆ ರಾಜ್ಯದಲ್ಲಿ ಸಾಕಷ್ಟು ಹಳ್ಳಿಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಶವಸಂಸ್ಕಾರ ಮಾಡುವುದಕ್ಕೆ ರುದ್ರಭೂಮಿಯೇ ಇಲ್ಲದಂತಾಗಿದೆ. ಅನೇಕ ಹಳ್ಳಿಗಳಲ್ಲಿ ಶವವನ್ನು ದೂರದ ಊರಿಗೆ ಹೊತ್ತುಕೊಂಡು ಹೋಗಿ ಶವ ಸಂಸ್ಕಾರದ ಕಾರ್ಯ ನಡೆಸಲಾಗುತ್ತಿದೆ.
ಹೆಚ್ಚು ಓದಿದ ಸ್ಟೋರಿಗಳು
ಈ ಬಗ್ಗೆ ಕಂದಾಯ ಇಲಾಖೆಯ ಅಂಕಿ ಅಂಶ ವಿಶಾದಕರವಾಗಿದೆ. ಇಲಾಖೆಯ ಪ್ರಕಾರ “ರಾಜ್ಯದಲ್ಲಿ 6053 ಹಳ್ಳಿಗಳಲ್ಲಿ ಮತ್ತು 281 ಪಟ್ಟಣಗಳಲ್ಲಿ ಸ್ಮಶಾನ ಭೂಮಿ ಇಲ್ಲ”. ಇನ್ನೊಂದೆಡೆ, ಒತ್ತುವರಿಯಾಗಿರುವ 11,77,930 ಎಕರೆ ಸರ್ಕಾರಿ ಭೂಮಿಯ ಬಗ್ಗೆಯೂ ತೃಪ್ತಿದಾಯಕ ನಿರ್ಣಯಗಳು ಆಗಿಲ್ಲ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕರಾದ ಮಹಮ್ಮದ್ ಇಕ್ಬಾಲ್ ರವರು ಕಂದಾಯ ಇಲಾಖೆಯ ಮಾಹಿತಿಯನ್ನು ಗಮನಿಸಿ, ಅಧ್ಯಯನ ಮಾಡಿ “ರಾಜ್ಯದಲ್ಲಿರುವ ಎಲ್ಲಾ ಧರ್ಮೀಯರು ಒಳಗೊಂಡಂತೆ ಒಟ್ಟು 6053 ಹಳ್ಳಿಗಳಲ್ಲಿ ಹಾಗೂ 281 ಪಟ್ಟಣಗಳಲ್ಲಿ ಶವ ಸಂಸ್ಕಾರ ಮಾಡುವುದಕ್ಕೆ ಸ್ಥಳವಿಲ್ಲ, ಹೀಗಾಗಿ ಶೀಘ್ರವಾಗಿ ಸ್ಥಳವಕಾಶ ಕಲ್ಪಿಸಿಕೊಡಬೇಕು” ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಸರ್ಕಾರ “ರಾಜ್ಯದಲ್ಲಿ ಸಾಕಷ್ಟು ಸರ್ಕಾರದ ಜಮೀನುಗಳಿಲ್ಲ, ಖರೀದಿ ಮಾಡಿದ ನಂತರ ಶವ ಸಂಸ್ಕಾರಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ” ಎಂದು ಪ್ರತಿಕ್ರಿಯಿಸಿತು.
ಈ ಕಾರಣದಿಂದಾಗಿ ಇಕ್ಬಾಲ್ ರವರು ನ್ಯಾಯಲಯದಲ್ಲಿ 27.05.2019ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. “ಕಂದಾಯ ಇಲಾಖೆಯೇ ಹೇಳಿರುವ ಹಾಗೆ 30.04.2019ರವರೆಗೆ ರಾಜ್ಯದಲ್ಲಿ ಸರ್ಕಾರದ 11,77,930 ಎಕರೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಿದರೆ, ರಾಜ್ಯದೆಲ್ಲೆಡೆ ಇರುವ ಸ್ಮಶಾನ ಭೂಮಿ ಸಮಸ್ಯೆಯನ್ನು ಬಗೆಹರಿಸಬಹುದು. ಹಾಗೂ ಇದರಿಂದ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿ ಅಡಚಣೆ ಉಂಟಾಗುವುದಿಲ್ಲ” ಎಂದು ಮಹಮ್ಮದ್ ಇಕ್ಬಾಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ (02.07.2019) ವಿಚಾರಣೆ ನಡೆಸಿತು. “ಅಂತ್ಯಕ್ರಿಯೆಗೆ ಸರ್ಕಾರದಿಂದ ಸ್ಥಳವಕಾಶ ಕಲ್ಪಿಸಕೊಡದಿರುವುದು ಗಂಭೀರ ವಿಷಯ. ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸೌಲಭ್ಯ ಕಲ್ಪಿಸಿ ಕೊಡುವುದು ಸರ್ಕಾರದ ಜವಾಬ್ದಾರಿ. ಸ್ಮಶಾನಗಳಿಗೆ ಜಮೀನು ಒದಗಿಸುವುದರ ಬಗ್ಗೆ ಯಾವ ಯಾವ ಕ್ರಮವನ್ನು ತೆಗೆದುಕೊಳ್ಳುತ್ತೀರಿ? ಅದರ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಮತ್ತು ಸರ್ಕಾರಕ್ಕೆ ಸೇರಿರುವ 11,77,930 ಎಕರೆ ಜಮೀನಿನ ಒತ್ತುವರಿಯನ್ನು ತೆರವುಗೊಳಿಸುವುದಕ್ಕೆ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ವಿಷಾದನೀಯ. ಆದ್ದರಿಂದ ಒತ್ತುವರಿಯಾದ ಜಮೀನನ್ನು ತೆರವುಗೊಳಿಸುವುದಕ್ಕೆ ಎಷ್ಟು ದಿನಗಳ ಕಾಲಾವಕಾಶ ಬೇಕು ಎಂಬುದರ ಕಾಲಮಿತಿಗೆ ಬದ್ಧವಾದ ಕ್ರಿಯಾ ಯೋಜನೆ ರೂಪಿಸಿ (Time Bound Action Plan) ನ್ಯಾಯಾಲಯಕ್ಕೆ ಸಲ್ಲಿಸಿ” ಎಂದು ಹೈಕೋರ್ಟ್, ಸರ್ಕಾರಕ್ಕೆ 3ವಾರಗಳ ಗಡುವು ನೀಡಿದೆ. ಆದರೆ ಸರ್ಕಾರ 5 ವಾರಗಳ ಕಾಲಾವಕಾಶ ಬೇಕು ಎಂದಾಗ, ಹೈಕೋರ್ಟ್ 5 ವಾರಗಳ ಒಳಗೆ ಕ್ರಿಯಾ ಯೋಜನೆ ಸಲ್ಲಿಸಿ ಎಂದು ನಿರ್ದೇಶಿಸಿದೆ.

ಶವಸಂಸ್ಕಾರಕ್ಕೆ ಭೂಮಿ ಕೊಡದ ಸರ್ಕಾರ, ಖಾಸಗಿ ಸಂಸ್ಥೆಗಳಿಗೆ ಸಾವಿರಾರು ಎಕರೆ ಭೂಮಿಯನ್ನು ನೀಡುತ್ತಿರುವುದು ದೊಡ್ಡ ದುರಂತ. ಆಂಧ್ರ ಪ್ರದೇಶದ ಹಳ್ಳಿ ಮತ್ತು ಪಟ್ಟಣಗಳಲ್ಲಿ ಕೂಡ ಅಂತ್ಯಕ್ರಿಯೆಗೆ ಭೂಮಿ ಇಲ್ಲದಿದ್ದಾಗ, ಅಲ್ಲಿನ ಸರ್ಕಾರ, ಭೂಮಿಯನ್ನು ಕೊಡಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಿತು. ರಾಜ್ಯದಲ್ಲಿಯೂ ಸಹ ಇದೇ ರೀತಿ ಕ್ರಮವನ್ನು ತೆಗೆದುಕೊಂಡರೆ ಇಂತಹ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬಹುದು. ಆದರೆ ಸರ್ಕಾರದ ಯೋಜನೆಗಳಿಂದಲೇ ಪ್ರತಿಯೊಂದು ನಿರ್ವಹಿಸಬೇಕು ಎಂದು ಸುಮ್ಮನೆ ಕುಳಿತರೆ ಒಳಿತಲ್ಲ. ಸತ್ತ ವ್ಯಕ್ತಿಯನ್ನು 24 ಗಂಟೆಯೊಳಗೆ ಅಂತ್ಯಕ್ರಿಯೆ ಮಾಡಬೇಕಲ್ಲವೇ?. ಸರ್ಕಾರದ ಯೋಜನೆಗಳಿಗೆ ಕಾದು ಕೂತು, ಸ್ಥಳಾವಕಾಶ ಮಾಡಿಕೊಡುವವರೆಗೆ ಶವವನ್ನುಇಟ್ಟುಕೊಳ್ಳುವುದು ಸಾಧ್ಯವೇ? ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಯ ಕಾಮಗಾರಿಗಳಿಗೆ, ಕಟ್ಟಡ ನಿರ್ಮಾಣಕ್ಕೆ, ಖಾಸಗಿ ಕಾರ್ಖಾನೆಗಳಿಗೆ ಇದೂವರೆಗೆ ಲಕ್ಷಾಂತರ ಎಕರೆ ಭೂಮಿಗಳನ್ನು ನೀಡಲಾಗಿದೆ. ಇದರ ಲಾಭವನ್ನು ಖಾಸಗಿ ಸಂಸ್ಥೆಗಳೇ ಅನುಭವಿಸುತ್ತಿವೆ. ಬಡವರು ಎಲ್ಲದರಲ್ಲಿಯೂ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ.
ರಾಜ್ಯದಲ್ಲಿ ಬಡವರಿಗೆ ಸಿಗಬೇಕಾದ ಸಾಕಷ್ಟು ಜಮೀನುಗಳನ್ನು ಸಚಿವರು, ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಬಡಜನರ ಶವಸಂಸ್ಕಾರಕ್ಕೆಹಳ್ಳಿಗಳಲ್ಲಿ ಭೂಮಿಯೇ ಇಲ್ಲದಂತಾಗಿದೆ. ನಗರದಲ್ಲಿ ಕೂತು ಅಧಿಕಾರ ಚಲಾವಣೆ ಮಾಡುವ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಹಳ್ಳಿಗಳ ವಾಸ್ತವತೆ ನಿಜಕ್ಕೂತಿಳಿದಿದೆಯೇ? ಎಂಬುದು ಸಂಶಯ. ಹಳ್ಳಿಗಳಲ್ಲಿ ಬಡಜನರು ಸತ್ತಾಗ ಕೆಲವೊಮ್ಮೆ ಅಂತ್ಯಕ್ರಿಯೆಗೆ ಭೂಮಿಯೇ ಇಲ್ಲದಿದ್ದಾಗ, ಊರಿನ ರಸ್ತೆಗಳ ಪಕ್ಕದಲ್ಲಿ, ಹಳ್ಳಕೊಳ್ಳಗಳಲ್ಲಿ, ಚರಂಡಿಗಳ ಪಕ್ಕದಲ್ಲಿ ಶವಸಂಸ್ಕಾರ ಮಾಡಿರುವ ಉದಾಹರಣೆ ಸಾಕಷ್ಟಿವೆ. ಸತ್ತ ವ್ಯಕ್ತಿಯ ಬಂಧು ಬಳಗದವರು ಶವ ಸಂಸ್ಕಾರಕ್ಕೆ ಜಾಗವಿಲ್ಲ ಎಂದಾಗ, ಇದೆಂತಾ ಶಾಪ ಒದಗಿ ಬಂತು ಎಂದು ಗೋಳಾಡುತ್ತಾರೆ. ಆದರೆ ವಾಸ್ತವ ಸ್ಥಿತಿಯನ್ನು ನೋಡುತ್ತಿದ್ದರೆ, ಸರ್ಕಾರವೇ ಇದಕ್ಕೆ ಶಾಪ ಹಾಕಿದಂತಿದೆ. ಸಾಕಷ್ಟು ಹಳ್ಳಿಗಳು ಇಂತಹ ಶೋಚನೀಯ ಸ್ಥಿತಿಗೆ ತಲುಪಿದೆ. ದೇಶವು ನಾಗರೀಕರ ಬದುಕಿನಲ್ಲಿ ಅಭಿವೃದ್ಧಿ, ಯಶಸ್ಸು ಕಾಣುತ್ತಿಲ್ಲ. ಬದಲಾಗಿ, ಭ್ರಷ್ಟತೆ ಹಗರಣಗಳಲ್ಲಿ ಮುಂದೆ ಸಾಗುತ್ತಿದೆ.