ಗಣೇಶನ ಹಬ್ಬಕ್ಕೂ ಬೆಳಗಾವಿ ಮಹಾನಗರಕ್ಕೂ ಅವಿನಾಭವ ಸಂಬಂಧ. ನೂರು ವರ್ಷಗಳ ಇತಿಹಾಸವನ್ನೇ ಹೊಂದಿರುವ ವಿಘ್ನೇಶ್ವರನ ವೈಭವವನ್ನು ನೋಡಬೇಕೆಂದರೆ ನೀವು ಕರ್ನಾಟಕ ಮತ್ತು ಮಹಾರಾಷ್ಟ್ರದ ಕೊಂಡಿಯಂತಿರುವ ಬೆಳಗಾವಿಗೇ ಬರಬೇಕು. ಇಲ್ಲಿಯ ವೈಭವ, ಗಣನಾಯಕನ ಆರಾಧನೆ ಕರ್ನಾಟಕದ ಯಾವ ನಗರದಲ್ಲೂ ಕಾಣಸಿಗುವದಿಲ್ಲ.
ಹೆಚ್ಚು ಓದಿದ ಸ್ಟೋರಿಗಳು
1956 ರವರೆಗೂ ಮುಂಬಯಿ ಪ್ರಾಂತದಲ್ಲಿದ್ದ ಬೆಳಗಾವಿಯ ಮೇಲೆ ಮಹಾರಾಷ್ಟ್ರದ ಸಂಪ್ರದಾಯ, ಪದ್ಧತಿಗಳು, ಆಚರಣೆಗಳು ಪ್ರಭಾವ ಬೀರಿದ್ದು ಅತ್ಯಂತ ಸಹಜವಾದ ಸಂಗತಿ. ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದು ಬೆಳಗಾವಿಯು ಮೈಸೂರು (ಕರ್ನಾಟಕವೆಂದು ನಾಮಕರಣವಾಗಿದ್ದು 1973 ರ ನವೆಂಬರ್ ಒಂದರಂದು) ರಾಜ್ಯದ ಅವಿಭಾಜ್ಯವೆಂದು ಘೋಷಣೆಯಾದ ನಂತರದ 63 ವರ್ಷಗಳ ನಂತರವೂ ಬೆಳಗಾವಿಯ ಮೇಲೆ ಮಹಾರಾಷ್ಟ್ರದ ಹಬ್ಬಹರಿದಿನಗಳು, ಸಂಪ್ರದಾಯಗಳು ತಮ್ಮ ಛಾಪನ್ನು ಹಾಗೇ ಉಳಿಸಿಕೊಂಡಿವೆಯೆಂದರೆ ಅತಿಶಯೋಕ್ತಿಯೇನಲ್ಲ.
ಬೆಳಗಾವಿಯಲ್ಲಿ ನಡೆಯುವ ಗಣಪತಿ ಹಬ್ಬದ ವೈಭವವನ್ನು,ವಿಶೇಷವಾಗಿ ಸಾರ್ವಜನಿಕ ಗಣಪತಿ ಉತ್ಸವವನ್ನು ವೀಕ್ಷಿಸಲು ಕರ್ನಾಟಕದ ವಿವಿಧ ಕಡೆಗಳಿಂದ ಲಕ್ಷಾಂತರ ಭಾವುಕರು ಬೆಳಗಾವಿಗೆ ಬರುತ್ತಾರೆ. ಗಣೇಶ ವಿಸರ್ಜನೆಯ ಮೆರವಣಿಗೆಯು ಮಧ್ಯಾಹ್ನ 3 ಗಂಟೆಗೆ ಆರಂಭವಾಗಿ ಮರುದಿನ ಮಧ್ಯಾಹ್ನ ಅಂತ್ಯಗೊಳ್ಳುತ್ತದೆ. ರಾತ್ರಿಯಿಡೀ ಮಹಿಳೆಯರು, ಮಕ್ಕಳು ಸಹಿತ ಲಕ್ಷಾಂತರ ಜನರು ನಿದ್ದೆ, ನೀರಡಿಕೆಯನ್ನದೇ ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ಕುಳಿತು, ತಿರುಗಾಡಿ ನೋಡುವುದು ಇಲ್ಲಿ ಸಾಮಾನ್ಯ ಸಂಗತಿ.
ನಗರದ ವಿವಿಧ ಪ್ರದೇಶಗಳಲ್ಲಿ,ಬಡಾವಣೆಗಳಲ್ಲಿ, ಉಪನಗರಗಳಲ್ಲಿ ಸುಮಾರು 400 ಕ್ಕಿಂತಲೂ ಅಧಿಕ ಸಾರ್ವಜನಿಕ ಗಣಪತಿ ಮಂಟಪಗಳನ್ನು ಹಾಕಲಾಗುತ್ತದೆ. ಗಣಪತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯ ದಿನದವರೆಗಿನ 11 ದಿನಗಳ ಕಾಲ ನಗರದಲ್ಲಿ ಕಾಲಿಡಲು ಜಾಗ ಸಿಗುವುದಿಲ್ಲ. ಹೃದಯಭಾಗವಾದ ಖಡೇಬಜಾರ, ಗಣಪತಿಗಲ್ಲಿ, ಮಾರುತಿಗಲ್ಲಿ, ರಾಮದೇವಗಲ್ಲಿ, ಕಾಕತಿವೇಸ್, ಶನಿವಾರ ಖೂಟ, ಕಾಲೇಜು ರಸ್ತೆಗಳಲ್ಲಿ ಬೈಕ್ ಪಾರ್ಕ್ ಮಾಡಲು ಸವಾರರ ಮಧ್ಯೆ ಪೈಪೋಟಿ ನಡೆಯುತ್ತಿರುತ್ತದೆ. ಇನ್ನು ಕಾರ್ ಪಾರ್ಕಿಂಗ್ ದೂರವೇ ಉಳಿಯಿತು. ಕ್ಲಬ್ ರಸ್ತೆ, ಸಿವಿಲ್ ಆಸ್ಪತ್ರೆ ರಸ್ತೆ, ಕೋರ್ಟ್ ಆವರಣ, ಭಡಕಲ ಬೀದಿಗಳಲ್ಲೇ ಕಾರ್ ಪಾರ್ಕ್ ಮಾಡಿ ನಗರ ಮಧ್ಯೆ ನಡೆಯುತ್ತ ಬರುವ ಅನಿವಾರ್ಯ ಪರಿಸ್ಥಿತಿ ಈ ಹಬ್ಬದಲ್ಲಿ ಉಂಟಾಗುತ್ತದೆ.

ಬೆಳಗಾವಿಯಲ್ಲೇ ಗಣಪತಿ ಹಬ್ಬಕ್ಕೆ ಇಷ್ಟೊಂದು ಮಹತ್ವ ಬರಲು ಕಾರಣವೇನು?
ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಗಳಿಂದ ಬಿಡಿಸುವ ಆಂದೋಲನ ತೀವ್ರಗೊಂಡಿದ್ದು 19 ನೇ ಶತಮಾನದ ಆದಿ ಭಾಗದಲ್ಲಿ.ಆಗ ರಾಜ್ಯಗಳ ಕಲ್ಪನೆಯೂ ಇರಲಿಲ್ಲ. ಅಂದಿನ ಮುಂಬಯಿ ಪ್ರಾಂತದಲ್ಲಿ ಬೆಳಗಾವಿಯ ನಾಲ್ಕು ಜಿಲ್ಲೆಗಳೂ ಸೇರಿದ್ದವು (ಸದ್ಯ 7 ಜಿಲ್ಲೆಗಳು). ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಆಂದೋಲನದ ಮುಂಚೂಣಿಯಲ್ಲಿ ಇದ್ದ ನಾಯಕರು. ಸ್ವಾತಂತ್ರ್ಯ ಆಂದೋಲದಲ್ಲಿ ಯುವಕರನ್ನು ತೊಡಗಿಸುವ ವಿಚಾರ ಮತ್ತು ಸ್ವಾತಂತ್ರ್ಯದ ಅವಶ್ಯಕತೆಯ ವಿಚಾರಗಳನ್ನು ಯುವಕರಲ್ಲಿ ತುಂಬಲು ತಿಲಕರಿಗೆ ಒಂದು ವೇದಿಕೆಯು ಬೇಕಾಗಿತ್ತು. ಅವರ ಪ್ರತಿಯೊಂದು ಚಲನವಲನಗಳ ಮೇಲೆ ಬ್ರಿಟಿಷರ ಹದ್ದಿನ ಕಣ್ಣಿತ್ತು. ಅವರು ಒಂದು ಸಭೆ ಕರೆಯುತ್ತಾರೆಂದರೂ ಬ್ರಿಟಿಷರು ಮೈತುಂಬ ಕಣ್ಣು, ಕಿವಿ ತುಂಬಿಕೊಳ್ಳುತ್ತಿದ್ದರು. ಇದರಿಂದ ತಿಲಕರಿಗೆ ದೊಡ್ಡ ಸವಾಲು ಎದುರಾಯಿತು. ಆಗ ಅವರ ತಲೆಯಲ್ಲಿ ಹೊಳೆದಿದ್ದೇ ಸಾರ್ವಜನಿಕ ಗಣಪತಿ ಉತ್ಸವ!

ಮೊದಲು ಮನೆಮನೆಗಳಲ್ಲಿ ಗಣಪತಿ ಕೂಡಿಸುವ, ಹಬ್ಬ ಆಚರಿಸುವ ಸಂಪ್ರದಾಯ ಇತ್ತು. ತಿಲಕರ ವಿಚಾರ ಪ್ರಚೋದಕ ಮಾತುಗಳಿಂದಾಗಿ ಮುಂಬಯಿ ಪ್ರಾಂತದ ಅನೇಕ ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಉತ್ಸವಗಳು ಆರಂಭವಾದವು. ಅದೇ ಕಾಲಕ್ಕೆ ಬೆಳಗಾವಿಯಲ್ಲೂ ಸಹ 1905 ರಲ್ಲಿ ಮೊಟ್ಟ ಮೊದಲು ಸದ್ಯದ ಮಾರ್ಕೆಟ್ (ರವಿವಾರ ಪೇಠ) ದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣಪತಿ ಉತ್ಸವವನ್ನು ಆರಂಭಿಸಲಾಯಿತು. ತಿಲಕರು ಬೆಳಗಾವಿಗೆ ಬಂದು ಈ ಶುಭಾರಂಭ ಮಾಡಿದಾಗ ಕರ್ನಾಟಕದ ಸಿಂಹ ಗಂಗಾಧರರಾವ ದೇಶಪಾಂಡೆ ಹಾಗೂ ಗೋವಿಂದರಾವ ಯಾಳಗಿ ಅವರು ಈ ಭಾಗದ ಸ್ವಾತಂತ್ರ್ಯ ಆಂದೋಲನದ ರೂವಾರಿಯಾಗಿದ್ದರು. ಸಾರ್ವಜನಿಕವಾಗಿ ಗಣಪತಿ ಉತ್ಸವ ಆರಂಭಿಸುವ ಮೊದಲು ಯಾಳಗಿಯವರ ನಿವಾಸದಲ್ಲೇ ಸಾರ್ವಜನಿಕ ಗಣಪತಿ ಕೂಡಿಸಲಾಗುತ್ತಿತ್ತು.
1905 ರಲ್ಲಿ ಮಾರ್ಕೆಟ್ ಪ್ರದೇಶದಲ್ಲಿ ಮೊದಲ ಸಾರ್ವಜನಿಕ ಗಣಪತಿ ಕೂಡಿಸಿದ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳು ಹಾಜರಿದ್ದು ತಿಲಕರನ್ನು ಗಮನಿಸುತ್ತಿದ್ದರು. ಆದರೆ ತಿಲಕರು ಗಣಪತಿ ಕೂಡಿಸಿದ ಕೂಡಲೇ ಅಲ್ಲಿಂದ ತೆರಳಿಬಿಟ್ಟರು. ಆನಂತರದ ಅವಧಿಯಲ್ಲಿ ಬೆಳಗಾವಿಯ ನೂರಾರು ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಮಂಟಪಗಳನ್ನು ಹಾಕಲಾಯಿತು. ಎಷ್ಟೋ ಗಣಪತಿ ಮಂಡಳಿಗಳು ಈಗ ಐವತ್ತು ವರ್ಷಾಚರಣೆ ಮಾಡುತ್ತಿವೆ. ಇವು ಬರೀ ಮಂಟಪಗಳಲ್ಲ. ಇಲ್ಲಿ ಜನತೆಯ ಆಕರ್ಷಣೆಗಾಗಿ ವಿವಿಧ ರೂಪಕಗಳನ್ನು, ಧಾರ್ಮಿಕ ಕೇಂದ್ರಗಳ ಪ್ರತಿಕೃತಿಗಳನ್ನು, ಯಾಂತ್ರಿಕೃತ ನೃತ್ಯ ರೂಪಕಗಳನ್ನು, ಕೃತ್ರಿಮ ಜಲಪಾತಗಳು, ಗೊಂಬೆ ಕುಣಿತಗಳನ್ನು,ಕೋಟೆ ಕೊತ್ತಲಗಳನ್ನು ಸೃಷ್ಟಿಸಿ ಇಡಲಾಗುತ್ತದೆ. ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರಗಳನ್ನು ಮಾಡುವ ಮೂಲಕ ಲಕ್ಷಾಂತರ ಜನರನ್ನು ಸೆಳೆಯಲಾಗುತ್ತದೆ.

ಹಬ್ಬದ ಹನ್ನೊಂದು ದಿನಗಳ ಕಾಲ ಹಗಲು ಯಾವುದೊ, ರಾತ್ರಿ ಯಾವುದೊ ತಿಳಿಯದಷ್ಟು ಜನರು ನಗರದಲ್ಲಿ ಸುತ್ತುತ್ತ ಗಣಪತಿಯ ದರ್ಶನ ಪಡೆಯುತ್ತಿರುತ್ತಾರೆ. ಸಣ್ಣಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ವ್ಯಾಪಾರಿ ಮಳಿಗೆಗಳು ಭರ್ಜರಿ ವ್ಯವಹಾರ ನಡೆಸುತ್ತವೆ.
ಮಹಾರಾಷ್ಟ್ರದ ಪುಣೆಯ ನಂತರ ಕರ್ನಾಟಕದ ಬೆಳಗಾವಿಯೇ ದೇಶದಲ್ಲಿ ಗಣಪತಿ ಹಬ್ಬಕ್ಕೆ ಪ್ರಸಿದ್ಧಿ ಪಡೆದಿದೆ. ಬೆಳಗಾವಿ ಮೂಲದ, ರಾಜ್ಯದ ಹೊರಗಿರುವ ಸಾವಿರಾರು ಜನರು ಹಬ್ಬಕ್ಕೆಂದೇ ಬೆಳಗಾವಿಗೆ ಬರುತ್ತಾರೆ. ಇಲ್ಲಿಯ ಗಣೇಶ ವಿಸರ್ಜನೆಯ ಭವ್ಯ ಮೆರವಣಿಗೆಯ ಲೈವ್ ಪ್ರಸಾರವನ್ನು ದೇಶ ವಿದೇಶಗಳಲ್ಲಿ ಕುಳಿತು ವೀಕ್ಷಿಸುವವರ ಸಂಖ್ಯೆಗೂ ಕಮ್ಮಿಯಿಲ್ಲ.
ಬೆಳಗಾವಿಯ ಗಣೇಶ ಹಬ್ಬವು ಹತ್ತಾರು ಬಾರಿ ಕೋಮು ಗಲಭೆಗೂ ಸಾಕ್ಷಿಯಾಗಿದೆ. ಗಣಪತಿ ಹಬ್ಬ ಬಂತೆಂದರೆ ಜಿಲ್ಲಾಡಳಿತ, ಪೋಲೀಸ್ ಇಲಾಖೆ ಎಲ್ಲಾ ಪ್ರಕಾರದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಬೆಳಗಾವಿಯಲ್ಲಿ ಕೋಮು ಸಂಘರ್ಷವು ಯಾವಾಗ ಬೇಕಾದರೂ ಉಂಟಾಗುವ ಸಾಧ್ಯತೆ ಇದ್ದೇ ಇರುತ್ತದೆ. ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ಗಣಪತಿ ಹಬ್ಬದ ಸಂದರ್ಭಗಳಲ್ಲಿ ಉಂಟಾದ ಕೋಮು ಗಲಭೆಗಳಲ್ಲಿ ಅನೇಕ ಸಾವು ನೋವು ಸಂಭವಿಸಿವೆ. ಅಂದಿನ ಪರಿಸ್ಥಿತಿಯನ್ನು ನೋಡಿದರೆ ಇಂದು ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಇವೆಲ್ಲ ಗೌಣ.
ಬೆಳಗಾವಿ ಗಣಪತಿ ಉತ್ಸವ ಭಾಷೆಯ ಲಕ್ಷ್ಮಣ ರೇಖೆಯನ್ನು ಮೀರಿದ್ದು. ಕನ್ನಡಿಗರು ಮತ್ತು ಮರಾಠಿಗರು ಸೇರಿಯೇ ಉತ್ಸವ ಸಮಿತಿಗಳನ್ನು ರಚಿಸಿಕೊಂಡಿದ್ದಾರೆ. ನೂರಾರು ಉತ್ಸವ ಮಂಡಳಗಳು ಸೇರಿರುವ “ಗಣಪತಿ ಮಹಾಮಂಡಳ” ದಲ್ಲೂ ಸಹ ಮರಾಠಿಗರ ಜೊತೆಗೆ ಕನ್ನಡಿಗರೂ ಇದ್ದಾರೆ. ಗಣಪತಿ ಮಂಟಪಗಳಲ್ಲೂ ಸಹ ಕನ್ನಡ ಮತ್ತು ಮರಾಠಿ ಹಾಡುಗಳು, ಪ್ರಕಟಣೆಗಳು ಕೇಳುತ್ತಲೇ ಇರುತ್ತವೆ.